ಕೊಲ್ಲುವುದು ನಮ್ಮ ಧರ್ಮವಲ್ಲ; ಬದುಕಿಸುವುದೇ ನಮ್ಮ ಧರ್ಮ: ಜಾತಿ-ಮತ ನೋಡದೆ ಮನುಷ್ಯತ್ವದ ಪಾಠ ಹೇಳಿಕೊಡುತ್ತಿರುವ ಪಾಣೆಮಂಗಳೂರಿನ ಮುಸ್ಲಿಮರು

ಕರಾವಳಿ

ನೇತ್ರಾವತಿ ನದಿಗೆ ಹಾರಿದಾತನನ್ನು ರಕ್ಷಿಸಲು ಸತತ ಐದು ಗಂಟೆ ಪ್ರಯತ್ನಪಟ್ಟರು. ವಿಧಿಯಾಟವೇ ಬೇರೆಯಾಗಿತ್ತು. ಮೃತದೇಹವನ್ನು ಮೇಲಕ್ಕೆತ್ತಿದರು

ಅದು ಪಾಣೆಮಂಗಳೂರಿನ ಮುಸ್ಲಿಮರು. ಕೊಲ್ಲುವುದು ನಮ್ಮ ಧರ್ಮವಲ್ಲ, ಬದುಕಿಸುವುದೇ ನಮ್ಮ ಧರ್ಮ ಎಂದು ಸಾರಿದವರು. ಆತ್ಮಹತ್ಯೆಗೈಯಲು ನೇತ್ರಾವತಿ ನದಿಗೆ ಹಾರಿದರೇ ಕ್ಷಣಾರ್ಧದಲ್ಲೇ ಅವರನ್ನು ಬದುಕಿಸಲು ಇಲ್ಲೊಂದು ಮುಸ್ಲಿಮರ ತಂಡವಿದೆ. ಕೊನೆಗೂ ಬದುಕಿಸಲಾಗದಿದ್ದರೂ ಮೃತದೇಹವನ್ನು ಮೇಲಕ್ಕೆತ್ತಿ ಅದಕ್ಕೊಂದು ಗೌರವಯುತ ಸಂಸ್ಕಾರಕ್ಕೆ ಇಲ್ಲಿನ ಮುಸ್ಲಿಮರು ಕಾರಣರಾಗುತ್ತಿದ್ದಾರೆ. ಸಾಯಲು ಹೋದ ನೂರಾರು ಮಂದಿಯನ್ನು ಬದುಕಿಸಿದ್ದಾರೆ. ಅದೇ ರೀತಿ ಜೀವದ ಹಂಗು ತೊರೆದು ನೂರಾರು ಮೃತದೇಹಗಳನ್ನು ಮೇಲಕ್ಕೆತ್ತಿದ್ದಾರೆ. ಆತ ಯಾವ ಧರ್ಮದವನೆಂದೂ ಇವರಿಗೆ ಮುಖ್ಯವಲ್ಲ. ಬದುಕಿಸುವ ಇವರಿಗೆ ಮನುಷ್ಯತ್ವವೇ ಧರ್ಮವೆಂದು ತಿಳಿದವರು. ರಕ್ತ ಕೊಟ್ಟವರನ್ನೇ ಕಡಿಯಲು ಪ್ರೇರೇಪಿಸುವವರೇ ಇವರ ಬದುಕಿಸುವ ಧರ್ಮವನ್ನು ಒಮ್ಮೆ ನೋಡಿ.

ಹಿಂದೂ ಬಾಹುಳ್ಯ ಪ್ರದೇಶಕ್ಕೆ ಮುಸಲ್ಮಾನರಿಗೆ ಪ್ರವೇಶವಿಲ್ಲ ಅನ್ನುವ ಪ್ಲೆಕ್ಸ್ ಪ್ರತ್ಯಕ್ಷವಾಗಿದ್ದ ಜಿಲ್ಲೆಯಿದು. ಜಾತ್ರೆ, ಇನ್ನಿತರ ಕಾರ್ಯಕ್ರಮಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡಬಾರದು ಅನ್ನುತ್ತಾ ಬಡ ವ್ಯಾಪಾರಿಗಳ ಹೊಟ್ಟೆಗೆ ಕಲ್ಲು ಹಾಕಿದ ಜಿಲ್ಲೆಯಿದು. ಸ್ನೇಹಿತನ ತಂದೆ ಆಸ್ಪತ್ರೆಯಲ್ಲಿದ್ದಾಗ ರಕ್ತ ಕೊಟ್ಟು ಜೀವ ಉಳಿಸಲು ಪ್ರಯತ್ನಿಸಿದವನನ್ನೆ ಮತೀಯ ಅಫೀಮು ತಲೆಗೇರಿಸಿ ಮಚ್ಚಿನಿಂದ ಕೊಂದ ಜಿಲ್ಲೆಯಿದು. ಇಂತಹ ಜಿಲ್ಲೆಯಲ್ಲಿ ನೀರಿಗೆ ಹಾರಿದ ಬಿಜೆಪಿಯ ಮುಖಂಡನನ್ನು ಬದುಕಿಸಲು ಸತತ ಐದು ಗಂಟೆ ಪ್ರಾಣದ ಹಂಗು ತೊರೆದು ಪ್ರಯತ್ನಿಸಿದವರು ಇದೇ ಜಿಲ್ಲೆಯ ಮುಸ್ಲಿಮರು. ಆತ ನಮ್ಮ ಧರ್ಮದವನಲ್ಲ, ಬಿಜೆಪಿಯವ ಎಂದು ಹೇಳಿ ಸುಮ್ಮನೆ ಕುಳಿತುಕೊಳ್ಳಲಿಲ್ಲ. ಬದುಕಿಸಲು ಪ್ರಯತ್ನಪಟ್ಟರು. ಆದರೂ ವಿಧಿಯಾಟ ಬೇರೇನೇ ಇತ್ತು. ಐದು ಗಂಟೆಗಳ ಕಾರ್ಯಾಚರಣೆ ನಂತರ ಆತನ ಮೃತದೇಹವನ್ನು ಮೇಲಕ್ಕೆತ್ತಿದ್ದರು. ಇದೇ ಪಾಣೆಮಂಗಳೂರಿನ ಮುಸ್ಲಿಂ ಬಾಂಧವರು. ನೇತ್ರಾವತಿ ನದಿಗೆ ಹಾರಿದ ಹಲವಾರು ಮಂದಿಯ ಪ್ರಾಣ ಉಳಿಸಿದ್ದರು. ಆತ ಹಿಂದೂ ಎಂದೂ ನೋಡಲಿಲ್ಲ. ಮನುಷ್ಯ ಜೀವಿ ಅನ್ನುವ ಕಾರಣಕ್ಕೆ ತಮ್ಮ ಪ್ರಾಣದ ಹಂಗು ತೊರೆದು ಬದುಕಿಸಿದ ಉದಾಹರಣೆಗಳಿವೆ. ನೂರಾರು ಮೃತದೇಹಗಳನ್ನು ಹಿಂದೂ -ಮುಸ್ಲಿಂ ಎಂದು ನೋಡದೆ ಮೇಲಕ್ಕೆತ್ತಿ ಮೃತದೇಹಕ್ಕೆ ಗೌರವ ನೀಡಿದ್ದೂ ಇದೆ. ಆದರೆ ಮೈಕ್ ಸಿಕ್ಕಾಗ ಧರ್ಮ ಜಾಗೃತಗೊಳ್ಳುವ ವಿಷಜಂತುಗಳು ಮುಸ್ಲಿಮರನ್ನು ಜಿಹಾದಿಗಳೆಂದು ಕರೆಯುತ್ತಾರೆ. ಒಂದು ಹೆಣಕ್ಕೆ ಮೂರು ಹೆಣ ಬಿದ್ದರಷ್ಟೇ ಬಲಿದಾನ ಸಾರ್ಥಕ ಅನ್ನುತ್ತಾರೆ. ಧರ್ಮ ಧರ್ಮಗಳ ನಡುವೆ ಬೆಂಕಿ ಹಚ್ಚುತ್ತಾರೆ.

ಆದರೆ ಪಾಣೆಮಂಗಳೂರಿನ (ಬ್ಯಾರಿ) ಮುಸ್ಲಿಮರು ಆತ ಬಿಜೆಪಿ, ಹಿಂದೂ ಅನ್ನುವ ಭೇದಭಾವ, ಜಾತಿ-ಧರ್ಮ ತೋರದೆ ತಮ್ಮ ಮಾನವೀಯ ಕಾಳಜಿಯನ್ನು ಪ್ರದರ್ಶಿಸುತ್ತಿದ್ದಾರೆ. ರಕ್ತ ಕೊಟ್ಟವನನ್ನೇ ಕಡಿಯುವುದು ನಮ್ಮ ಸಂಸ್ಕೃತಿಯಲ್ಲ. ನೀರಿಗೆ ಬಿದ್ದ ಹಿಂದುವೋ ಮುಸ್ಲಿಮನೋ ಆತನನ್ನು ಬದುಕಿಸುವುದೇ ನಮ್ಮ ಧರ್ಮ ಅನ್ನುವ ಉದಾತ್ತ ಸಂದೇಶವನ್ನು ಕೋಮು ಕಿಚ್ಚು ಕರಾವಳಿಯಲ್ಲಿ ಪಾಣೆಮಂಗಳೂರಿನ ಮುಸ್ಲಿಮರು ಸಾರಿದ್ದಾರೆ. ಇನ್ನಾದರೂ ಮೈಕ್ ಮುಂದೆ ಬ್ಯಾರಿಗಳು ಬ್ಯಾರಿಗಳು ಎಂದು ವಿಷಕಾರುವ ಜಂತುಗಳು ಇವರ ಬದುಕಿಸುವ ಧರ್ಮವನ್ನಾದರೂ ಒಮ್ಮೆ ನೋಡಲಿ.

ಬಿಜೆಪಿ ಮುಖಂಡ, ಪುತ್ತೂರು ನಗರಸಭೆ ಸದಸ್ಯ ರಮೇಶ್ ರೈ ನೆಲ್ಲಿಕಟ್ಟೆ ಇಂದು ಪಾಣೆಮಂಗಳೂರು ಹಳೆ ಸೇತುವೆಯಲ್ಲಿ ಬೈಕ್, ಚಪ್ಪಲಿ, ಮೊಬೈಲ್ ಫೋನ್ ಬಿಟ್ಟು ನದಿಗೆ ಹಾರಿದ್ದರು. ಐದು ಗಂಟೆಗಳ ಸತತ ಕಾರ್ಯಾಚರಣೆ ನಡೆಸಿದ ಪಾಣೆಮಂಗಳೂರಿನ ಮುಸ್ಲಿಂ ಈಜುಪಟು ತಂಡ ರಮೇಶ್ ರೈ ಮೃತದೇಹಕ್ಕಾಗಿ ಹುಡುಕಾಡಿದ್ದರು. ಕೊನೆಗೂ ಇವರ ಕಾರ್ಯಾಚರಣೆ ಫಲ ಕೊಟ್ಟಿತು. ನದಿಯ ಟ್ಯಾಂಕ್ ಒಳಗೆ ರಮೇಶ್ ರೈ ಮೃತದೇಹ ಪತ್ತೆಯಾಗಿದ್ದು, ಮೃತದೇಹವನ್ನು ಮೇಲಕ್ಕೆತ್ತಿ ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ.