ಬಂಟ್ವಾಳದ ಇರಾಕೋಡಿ ಎಂಬಲ್ಲಿ ಇತ್ತೀಚೆಗೆ ಕೋಮುವಾದಿಗಳ ದಾಳಿಯಿಂದ ಹತ್ಯೆಯಾದ ಅಬ್ದುಲ್ ರಹಿಮಾನ್ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಮತ್ತೊಬ್ಬ ಆರೋಪಿ ಶೃಂಗೇರಿ ಮೂಲದ ರವಿ ಸಂಜಯ್ (29) ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇದರೊಂದಿಗೆ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಎಂಟಕ್ಕೆ ಏರಿದೆ. ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣ ಸಂಬಂಧ ಬಂಟ್ವಾಳ ತಾಲ್ಲೂಕಿನ ಕುರಿಯಾಳ ಗ್ರಾಮದ ಮುಂಡರಕೋಡಿ ಮನೆಯ ದೀಪಕ್ (21), ಅಮ್ಮುಂಜೆ ಶಿವಾಜಿ ನಗರ ನಿವಾಸಿ ಪೃಥ್ವಿರಾಜ್ (21), ಬಂಟ್ವಾಳದ ನಿವಾಸಿ ಚಿಂತನ್ (19), ತೆಂಕಬೆಳ್ಳೂರು ಗ್ರಾಮದ ಸುಮಿತ್ ಆಚಾರ್ಯ (27), ಅಭಿನ್ ರೈ (32) ಹಾಗೂ ಬಡಗಬೆಳ್ಳೂರು ಗ್ರಾಮದ ತೇಜಾಕ್ಷ (24) ಮತ್ತು ರವಿರಾಜ್ (23) ಎಂಬುವರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.

ಕೊಳತ್ತಮಜಲು ನಿವಾಸಿ ಅಬ್ದುಲ್ ರಹಿಮಾನ್ ಅವರನ್ನು ಇರಾಕೋಡಿಯಲ್ಲಿ ಮೇ 27ರಂದು ಹತ್ಯೆ ಮಾಡಲಾಗಿತ್ತು. ಅವರ ಜೊತೆಗಿದ್ದ ಕಲಂದರ್ ಶಾಫಿ ಎಂಬವರ ಮೇಲೆ ಮಾರಕ ಹಲ್ಲೆ ನಡೆಸಲಾಗಿತ್ತು. ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪೈಕಿ ಅಭಿನ್ ರೈ ಈ ಹಿಂದ ರಿಕ್ಷಾ ಚಾಲಕ ಅಶ್ರಫ್ ಕಲಾಯಿ ಹತ್ಯಾ ಪ್ರಕರಣದಲ್ಲಿ ಆರೋಪಿಯಾಗಿದ್ದು, ಭರತ್ ಕುಮ್ಡೇಲು ಸಹಚರನಾಗಿದ್ದ, ಶಾಸಕರ ಅಪ್ತ ಸಹಾಯಕನ ಮಗಳನ್ನು ವರಿಸಿದ್ದ ಎನ್ನಲಾಗಿದೆ
