ಖಡಕ್ ಐಪಿಎಸ್ ಇದ್ದರೆ ಸಾಕಾ.. ದಕ್ಷ ಐಎಎಸ್ ಕೂಡ ಬೇಡವೇ.?
ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಗಲಾಟೆ ಜಾಸ್ತಿಯಾಗಿದೆ, ಮತೀಯ ಹತ್ಯೆಗಳು ತಾಂಡವವಾಡುತ್ತಿದೆ. ಅಲ್ಲಿಗೆ ಹೋಗಿ ಒಮ್ಮೆ ನೋಡಿ ಬಾ ಮಹರಾಯ.. ಎಂದು ಬಿ ಕೆ ಹರಿಪ್ರಸಾದ್ ಅವರನ್ನು ಮುಖ್ಯಮಂತ್ರಿಯವರು ಕೇಳಿಕೊಂಡದಕ್ಕೆ ಶಾಂತಿ ಬಿತ್ತುವ ರಾಯಭಾರಿ ರೀತಿಯಲ್ಲಿ ಮಂಗಳೂರಿಗೆ ಬಿ ಕೆ ಹರಿಪ್ರಸಾದ್ ಬಂದು ಹೋಗಿದ್ದಾರೆ. ವಿವಿಧ ಪ್ರಜ್ಞಾವಂತ ಸಂಘಸಂಸ್ಥೆಗಳ ಮುಖಂಡರು, ಧಾರ್ಮಿಕ ನಾಯಕರ ಜೊತೆ ಮೀಟಿಂಗ್ ಮೇಲೆ ಮೀಟಿಂಗ್ ಮಾಡಿ ಹೋಗಿದ್ದಾರೆ. ಆದರೆ ಇಷ್ಟಕ್ಕೆ ಮಂಗಳೂರು ಶಾಂತಿಯ ತವರೂರು ಆಗುತ್ತಾ ಅನ್ನುವ ಮಿಲಿಯನ್ ಡಾಲರ್ ಪ್ರಶ್ನೆ ಇದೀಗ ಎದುರಾಗಿದೆ.

ಮಂಗಳೂರಿನ ಮತೀಯ ಹಿಂಸೆಗೆ ಅಡ್ಡ ಕಸುಬುಗಳೇ ಮೂಲ ಕಾರಣ. ರಾಜಕಾರಣಿಗಳ ಆಪ್ತರು, ಮತೀಯ ಸಂಘಟನೆಗಳಲ್ಲಿ ಗುರುತಿಸಿಕೊಂಡವರು ಬಂಧುತ್ವ ರೀತಿಯಲ್ಲಿ ಅಡ್ಡ ಕಸುಬಿನಲ್ಲಿ ಭಾಗಿಯಾಗಿರುವುದು, ಅಡ್ಡ ಕಸುಬಿನ ಮಂದಿ ಬಿಜೆಪಿ -ಕಾಂಗ್ರೆಸ್ ಅನ್ನುವ ಭೇದಭಾವವಿಲ್ಲದೆ ಭಾಯಿ -ಭಾಯಿ ರೀತಿ ತಮ್ಮ ಕಸುಬನ್ನು ಸರಾಗವಾಗಿ ನಡೆಸುತ್ತಿರುವುದು ಈವರೆಗೂ ನಡೆದುಕೊಂಡು ಬಂದ ಸಂಗತಿ. ಆದರೆ ಈ ನಾಯಕರು ಹೊರಗಡೆ ಹಿಂದೂ -ಮುಸ್ಲಿಂ ಧರ್ಮದ ಅಮಲನ್ನು ಸೃಷ್ಟಿಸಿ ರಾಜಕಾರಣಿಗಳಿಗೆ ಅಧಿಕಾರ ಭಾಗ್ಯ ನೀಡುತ್ತಿದ್ದರು. ಮರಳು ಮಾಫಿಯಾ, ಕಲ್ಲು ಮಾಫಿಯಾ, ಮಣ್ಣು ಮಾಫಿಯಾ, ಬೈರಾಸ್, ಮಟ್ಕಾ, ಮಸಾಜ್, ವೇಶ್ಯಾವಾಟಿಕೆ ಹೀಗೆ ಅಡ್ಡ ಕಸುಬಿನಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಮತೀಯ ಸಂಘಟನೆಗಳ ನಾಯಕರದ್ದೇ ಕಾರುಬಾರು. ಕೆಲವರದ್ದಂತೂ ವ್ಯವಹಾರ ಮಾತ್ರ ಅಡ್ಡ ಕಸುಬು, ಹೊರ ಜಗತ್ತಿಗೆ ಧರ್ಮದ ಮುಖವಾಡ ತೊಟ್ಟು ಮಿಂಚುತ್ತಿದ್ದರು. ಬಂಟ್ವಾಳದಂತಹ ಮತೀಯ ಸೂಕ್ಷ್ಮ ತಾಲೂಕಿನಲ್ಲಿ ನಾಲ್ಕೈದು ಮತೀಯ ಹತ್ಯೆಯ ಹಿಂದೆ ಮರಳಿನದ್ದೇ ಪಾತ್ರ ಸದ್ದು ಮಾಡಿತ್ತು. ರಾಜಕಾರಣಿಗಳ ಆಪ್ತತೆ, ಸಮಾಜದಲ್ಲಿ ಸುಬಗ ಮುಖವಾಡ ಹೊಂದಿದ್ದರಿಂದ ಯಾವ ಐಪಿಎಸ್ ಅವರ ಮೂಲ ಬೇರಿಗೆ ಕೈ ಹಾಕುವ ಪ್ರಯತ್ನ ಮಾಡಿಲ್ಲ. ಕೈ ಹಾಕಿದರಂತೂ ಜಿಲ್ಲೆಯಲ್ಲಿ ಎತ್ತಂಗಡಿ ಖಚಿತ. ಮತೀಯ ಹತ್ಯೆಯಲ್ಲಿ ಸುಪಾರಿ ಪಡೆದು ನಾಲ್ಕೈದು ಮಂದಿ ತಲವಾರು ಹಿಡಿದು ಕೊಚ್ಚಿ ಕೊಂದವರನ್ನು ಆರೋಪಿಗಳೆಂದು ಜೈಲಿಗೆ ಹಾಕುತ್ತಿದ್ದರು. ಫಂಡಿಂಗ್ ಕೊಟ್ಟವರು, ಪ್ರಚೋದಿಸಿದವರೆಲ್ಲ ಹಾಯಾಗಿ ರಾಜಕಾರಣಿಗಳು, ಪೊಲೀಸ್ ಅಧಿಕಾರಿಗಳ ಹಿಂದೆ ಮುಂದೆ ಸುತ್ತಾಡುತ್ತಾ ‘ರಿಪಬ್ಲಿಕ್’ ರೀತಿಯ ಹವಾ ಮೆಂಟೈನ್ ಮಾಡುತ್ತಿದ್ದರು. ಇವರನ್ನು ಮುಟ್ಟಲು ಹೋದರೆ ಅರ್ಧ ಗಂಟೆಯಲ್ಲೇ ಐಪಿಎಸ್ ಗಂಟು ಮೂಟೆ ಕಟ್ಟಿ ಹೊರಡಬೇಕಿತ್ತು. ನಮಗ್ಯಾಕೆ ಈ ಉಸಾಬರಿ ಅಂತ ಸೈಲೆಂಟ್ ಆದ ಐಪಿಎಸ್ ಗಳೇ ಹೆಚ್ಚು. ಆದರೆ ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಗೆ ಲಗ್ಗೆ ಇಟ್ಟ ಐಪಿಎಸ್ ಗಳು ದಕ್ಷರು, ಯಾರ ಪ್ರಭಾವಕ್ಕೂ ಮಣಿಯದವರು. ಬೆಂಗಳೂರಿನ ದೊಡ್ಡವರಿಂದಲೇ ಗ್ರೀನ್ ಸಿಗ್ನಲ್ ಪಡೆದುಕೊಂಡು ಬಂದ ಇವರು ಮತೀಯ ಹತ್ಯೆ, ದ್ವೇಷ ಕೊಲೆಗಳಿಗೆ ಅಡ್ಡ ಕಸುಬುಗಳು ಕೂಡ ಪ್ರಮುಖ ಕಾರಣ, ಫಂಡಿಂಗ್ ಮಾಡುವವರನ್ನೇ ಮಟ್ಟ ಹಾಕಿದರೆ ತಲ್ವಾರ್ ಹಿಡಿಯುವ ಕೈಗಳೇ ಇರಲ್ಲ ಎಂದೇಳಿ ಮಣ್ಣು, ಮರಳು, ಮುರಕಲ್ಲು, ಕ್ಲಬ್ಬ್, ಮಸಾಜ್, ವೇಶ್ಯಾವಾಟಿಕೆ ಮುಂತಾದ ಅಡ್ಡ ಕಸುಬುಗಳಿಗೆ ಪೂರ್ತಿ ಬೀಗ ಜಡಿಡಿದ್ದಾರೆ. ನೂತನ ಐಪಿಎಸ್ ಗೆ ಪ್ರಭಾವ ಬೀರಿ ಅಡ್ಡ ಕಸುಬು ಆರಂಭಿಸಲು ಇಲ್ಲಿನ ಯಾವುದೇ ರಾಜಕಾರಣಿಗಳು ಧೈರ್ಯ ತೋರಿಸುತ್ತಿಲ್ಲ . ಈಗೆಲ್ಲರೂ ಪ್ಲೈಟ್ ಹತ್ತಿದ ರಾಜಕಾರಣಿಗಳ ಬರುವಿಕೆಗಾಗಿ ಕಾಯುತ್ತಿದ್ದಾರೆ!

ಇನ್ನು ಲವ್ ಜಿಹಾದ್, ಅಕ್ರಮ ಜಾನುವಾರು ಸಾಗಾಟ ಪೂರ್ತಿ ನಿಂತರೆ ಮಂಗಳೂರು ಮತೀಯ ಹಿಂಸೆಗೆ ಪುಲಿಸ್ಟಾಪ್ ಬೀಳಲಿದೆ ಎಂದು ಕೆಲವು ಕೋಮುವಾದಿ ರಾಜಕಾರಣಿಗಳು ಉಸುರಲು ಆರಂಭಿಸಿದ್ದಾರೆ. ಮಂಗಳೂರಿನಲ್ಲಿ ಲವ್ ಜಿಹಾದ್ ನಡೆದಿದೆ ಅನ್ನುವುದಕ್ಕೆ ಇಲ್ಲಿಯವರೆಗೆ ನ್ಯಾಯಾಲಯದಿಂದ ಒಂದೇ ಒಂದು ಪುರಾವೆ ಸಿಕ್ಕಿಲ್ಲ. ಈ ಹಿಂದೆ ಇಪ್ಪತ್ತಕ್ಕೂ ಹೆಚ್ಚು ಹೆಣ್ಣು ಮಕ್ಕಳು ನಾಪತ್ತೆಯಾಗಿದ್ದರು, ಲವ್ ಜಿಹಾದ್ ಕಾರಣ ಎಂದು ಮತೀಯವಾದಿ ಸಂಘಟನೆಗಳು ಬೊಬ್ಬಿಟ್ಟಾಗ ಸಯನೈಡ್ ಮೋಹನನ ಹೆಸರು ರಿವೀಲ್ ಆಗಿತ್ತು. ಆತನ ಕರಾಳತೆಗೆ ಸಿಲುಕಿ ಜೀವ ಕಳೆದುಕೊಂಡದ್ದು ಬಹಿರಂಗವಾಗಿತ್ತು. ಇನ್ನು ಜಾನುವಾರು ಕದ್ದು ಮಾರಾಟ ಮಾಡಿರುವ ಜಗಳದಲ್ಲಿ ಈವರೆಗೂ ಯಾರು ಯಾರನ್ನೂ ಕೊಲೆ ಮಾಡಲಿಲ್ಲ ಅನ್ನುವುದು ಕರಾವಳಿಯ ಕ್ರೈಂ ಇತಿಹಾಸದ ದಾಖಲೆ. ಯಾಕೆ ಕೊಲೆಯಾಗುವುದಿಲ್ಲ ಎಂದರೆ ಕೆಲವು ಹಿಂದೂ ನಾಯಕರೆಂದು ಗುರುತಿಸಿಕೊಂಡವರೆ ದನ ಕದಿಯುವವರಿಂದ ಮಾಮೂಲು ಪಡೆಯುತ್ತಾರೆ! ಹಳ್ಳಿಗಳಲ್ಲಿ ಹಿಂದೂಗಳೇ ಬ್ಯಾರಿಗಳೊಡನೆ ಜಾನುವಾರು ವ್ಯವಹಾರ ಕುದುರಿಸುತ್ತಾರೆ!
ಕರಾವಳಿಯಲ್ಲಿ ಐಪಿಎಸ್ ಗಳ ಖಡಕ್ ನಿರ್ಧಾರಗಳು ಮತೀಯ ಹತ್ಯೆಗಳನ್ನು ಪೂರ್ತಿ ನಿಲ್ಲಿಸಿಬಿಡುತ್ತದೆ ಎಂದು ಷರಾ ಬರೆಯಲು ಸಾಧ್ಯವಿಲ್ಲ. ಎರಡೂ ಸಮುದಾಯದ ನಡುವೆ ಶಾಂತಿ ಮಾತುಕತೆಗಳಿಗೆ ಪೂರಕ ವಾತಾವರಣ ನಿರ್ಮಿಸುವ ಕೆಲಸ ಕೂಡ ನಡೆಯಬೇಕು. ಆದರೆ ಬಗಲಲ್ಲಿ ಕ್ರಿಮಿನಲ್ ಗಳನ್ನು ಇಟ್ಟುಕೊಂಡು ಶಾಂತಿ ಮಾತುಕತೆ ನಡೆದರೆ ಅದರಿಂದ ಎಳ್ಳಷ್ಟೂ ಪ್ರಯೋಜನವಿಲ್ಲ. ಇದೇ ಕಾರಣಕ್ಕೆ ಅಡ್ಡ ಕಸುಬುಗಾರರು, ದ್ವೇಷ ಭಾಷಣಕಾರರ ಹೆಡೆ ಮುರಿ ಕಟ್ಟಲು ಮುಂದಾಗಿದ್ದಾರೆ. ಖಡಕ್ ಐಪಿಎಸ್ ಗಳು ಮೊದಲು ಕ್ರಿಮಿನಲ್ ಗಳ ಎದೆಯಲ್ಲಿ ಭಯದ ವಾತಾವರಣ ನಿರ್ಮಿಸುವ ಕೆಲಸಕ್ಕೆ ಮುಂದಾಗಿರುವುದು ಸ್ವಾಗತ. ಆ ನಂತರ ಎರಡೂ ಸಮುದಾಯದ ನಾಯಕರ ವಿಶ್ವಾಸವನ್ನು ಪಡೆದು ಶಾಂತಿಯ ಮಾತುಕತೆಗೆ ಪೂರಕ ವಾತಾವರಣ ಸೃಷ್ಟಿಸಬೇಕಿದೆ. ಅದು ಕೇವಲ ಐಪಿಎಸ್ ಗಳಿಂದ ಸಾಧ್ಯವಿಲ್ಲ. ಐಎಎಸ್ ಗಳು ಕೂಡ ದಕ್ಷ ರಿರಬೇಕು.

ಸಸಿಕಾಂತ್ ಸೆಂಥಿಲ್, ಇಬ್ರಾಹಿಂ ರಂತಹ ಐಎಎಸ್ ಗಳು ಜನಸ್ನೇಹಿಯಾಗಿದ್ದರು. ಜನಸಾಮಾನ್ಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ಪೊಲೀಸರು ಷರಾ ಬರೆದ 144 ಸೆಕ್ಷನ್ ಮತ್ತು ಹವಾಮಾನ ಇಲಾಖೆ ಹೇಳುವ ಭಾರೀ ಮಳೆಯ ವರದಿಗೆ ಸಹಿಹಾಕುವುದಷ್ಟೇ ಐಎಎಸ್ ಗಳ ಕೆಲಸವಲ್ಲ. ಜಿಲ್ಲೆಯಲ್ಲಿ ಶಾಂತಿ, ಸೌಹಾರ್ದತೆ ನೆಲೆಗೊಳ್ಳಲು ಪೂರಕ ವಾತಾವರಣ ಸೃಷ್ಟಿಸುವುದು ಕೂಡ ಐಎಎಸ್ ಗಳ ಜವಾಬ್ದಾರಿ. ಜಿಲ್ಲೆಗೊಬ್ಬರು ದಕ್ಷ ಐಎಎಸ್ ಬೇಕಾಗಿದ್ದಾರೆ.
