ಮಿತ್ರ ದ್ರೋಹಿ ದೀಪು.. ಆಪ್ತ ಸ್ನೇಹಿತ ರಘುರಾಮ್.!

ಕರಾವಳಿ

ಕರಾವಳಿಯ ಕೋಮು ರಕ್ಕಸರ ಕಣ್ಣು ತೆರೆಸಲಿ.! ಕರಾವಳಿಯ ಕೋಮು ಕ್ರಿಮಿಗಳಿಗೆ ಸ್ನೇಹದ ಹೊಸ ಭಾಷ್ಯ ಬರೆದು ಹೊರಟು ಹೋಗಿದ್ದಾನೆ.

ಸ್ನೇಹಕ್ಕೆ ಜಾತಿ -ಧರ್ಮದ ಅಡ್ಡ ಗೋಡೆ ಎಂಬುದೇ ಇಲ್ಲ. ಕುಟುಂಬಿಕರು, ಸಂಬಂಧಿಕರಿಗಿಂತ ಹೆಚ್ಚಾಗಿ ಮನುಷ್ಯನಿಗೆ ನೆರವಿಗೆ ಬರುವುದು ಆಪ್ತ ಸ್ನೇಹಿತರು. ಮನುಷ್ಯನ ಸುಖ ದು:ಖಗಳಲ್ಲಿ ಸಮಾನವಾಗಿ ಭಾಗಿಯಾಗುವವನೇ ನಿಜವಾದ ದೋಸ್ತ್. ಇಂತಹ ಸ್ನೇಹಕ್ಕೆ ಹೊಸ ಅರ್ಥ ಕಲ್ಪಿಸಿ ಕರಾವಳಿಯಲ್ಲಿ ಮಾನವೀಯತೆಯ ಸಂದೇಶ ಸಾರಿದವನೇ ಬೆಂಗಳೂರಿನ ರಘುರಾಮ್.

ಎರಡು ವಾರಗಳ ಹಿಂದೆ ಮಂಗಳೂರಿನಲ್ಲಿ ನಡೆದ ಘಟನೆ ಎಲ್ಲರನ್ನೂ ನಿಬ್ಬೆರಗಾಗಿಸಿದ್ದು ಗೊತ್ತೇ ಇದೆ. ಪರಸ್ಪರರು ವಿಶ್ವಾಸ ಕಳೆದುಕೊಳ್ಳುವಂತೆ ಮಿತ್ರದ್ರೋಹ ಎಸಗಿದವ ಕೊಳತ್ತಮಜಲಿನ ದೀಪಕ್ ಯಾನೆ ದೀಪು ಎಂಬಾತ. ತನ್ನ ಮುಸ್ಲಿಂ ಗೆಳೆಯ ಅಬ್ದುಲ್ ರಹಿಮಾನ್, ಖಲಂದರ್ ಶಾಫಿ ಎಂಬವರನ್ನು ಮರಳು ಬೇಕೆಂದು ಕರೆಸಿಕೊಂಡು ಬೆನ್ನಿಗೆ ಚೂರಿ ಹಾಕಿ ರಕ್ಕಸತನ ಮೆರೆದಿದ್ದ. ಒಂದೇ ತಟ್ಟೆಯಲ್ಲಿ ಊಟ ಮಾಡುತ್ತಾ, ಒಂದೇ ವಾಹನದಲ್ಲಿ ಹೋಗುತ್ತಿದ್ದ, ಒಟ್ಟಿಗೆ ಗಾರೆ ಕೆಲಸ, ಇನ್ನಿತರ ಕೆಲಸ ಮಾಡಿಕೊಂಡು ಆಪ್ತ ಸ್ನೇಹಿತನಾಗಿದ್ದ ದೀಪು ಮತಾಂಧತೆಯ ಅಮಲು ತಲೆಗೇರಿಸಿಕೊಂಡು ಅಬ್ದುಲ್ ರಹಿಮಾನ್ ಎಂಬಾತನ ರಕ್ತವನ್ನು ಕುಡಿದು ಕೇಕೆ ಹಾಕಿ ರಕ್ಕಸತನ ಮೆರೆದ ವರ್ತನೆಗೆ ಇಡೀ ಕರಾವಳಿಯ ಜನತೆ ಛೀ..ಥೂ ಅಂತ ಉಗುಳಿತ್ತು. ಮುಸ್ಲಿಂ ಅನ್ನುವ ಏಕೈಕ ಕಾರಣಕ್ಕೆ ಅಬ್ದುಲ್ ರಹಿಮಾನ್ ಅನ್ನುವ ಅಮಾಯಕ ಯುವಕನನ್ನು ಕೊಲ್ಲಿಸಿದ್ದ. ದೀಪಕ್ ನ ಮನೆ ನಿರ್ಮಾಣಕ್ಕೆ ಎರಡು ಲೋಡ್ ಉಚಿತ ಮರಳು, ತನ್ನ ತಂದೆ ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿದ್ದಾಗ ರಹಿಮಾನ್ ರಕ್ತ ಕೊಟ್ಟು ಬದುಕಿಸಲು ಪ್ರಯತ್ನಿಸಿದ್ದ. ಇಂತಹ ಮಿತ್ರನನ್ನೇ ಮತೀಯ ಕಾರಣಕ್ಕೆ ಕೊಂದು ಮಿತ್ರ ದ್ರೋಹಿ ಅನ್ನಿಸಿಕೊಂಡಿದ್ದ. ಈ ಭೀಭತ್ಸ ಘಟನೆಯ ನಂತರ ಕರಾವಳಿಯಲ್ಲಿ ಹಿಂದೂ- ಮುಸ್ಲಿಂ ಕೋಮಿನ ಆಪ್ತ ಸ್ನೇಹಿತರು ಪರಸ್ಪರ ಅನುಮಾನದ ದೃಷ್ಟಿಯಿಂದ ನೋಡುವಂತಹ ವಾತಾವರಣ ರೂಪುಗೊಂಡಿತ್ತು.

ಆದರೆ ಇದೀಗ ಉಭಯ ಕೋಮಿನ ಸ್ನೇಹಿತರ ಮಧ್ಯೆ ಕೋಮು ವಿಷ ಬೀಜ ಬಿತ್ತಿರುವ ರಕ್ಕಸರು ಕಣ್ಣು ತೆರೆಸುವ ಘಟನೆಯೊಂದು ನಡೆದಿದೆ. ದೂರದ ಬೆಂಗಳೂರಿನಿಂದ ಮಂಗಳೂರಿಗೆ ಬಂದಿದ್ದ ರಘುರಾಮ್ ಅನ್ನುವ ಹಿಂದೂ ಯುವಕ ತನ್ನ ಆಪ್ತ ಸ್ನೇಹಿತನ ಅಗಲಿಕೆಯ ನೋವು ತಾಳಲಾರದೆ ಆತನ ಊರಾದ ಕಾವಲಕಟ್ಟೆಯ ಮಸೀದಿಯ ಸ್ಮಶಾನ (ಖಬರ್ ಸ್ತಾನ) ಕ್ಕೆ ಬಂದು ಮಡಿದ ಸ್ನೇಹಿತನಿಗೆ ಕಂಬನಿ ಮಿಡಿದಿದ್ದಾನೆ. ಮೃತ ಸ್ನೇಹಿತನ ಅಂತ್ಯಸಂಸ್ಕಾರ ನಡೆದ ಸ್ಥಳಕ್ಕೆ ಬಂದು ಕಣ್ಣೀರು ಹಾಕಿದ್ದಾನೆ. ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದ್ದು, ನೋಡುಗರ ಹೃದಯ ಭಾರವಾಗುವಂತೆ ಮಾಡಿದೆ. ತನ್ನ ಆಪ್ತ ಸ್ನೇಹಿತ ಅಫ್ಜಲ್ ರಸ್ತೆ ಅಪಘಾತದಲ್ಲಿ ಮೃತನಾಗಿದ್ದು, ಆತನ ಅಂತ್ಯ ಸಂಸ್ಕಾರ ನಡೆದ ಸ್ಥಳಕ್ಕೆ ಬಂದು ಕಂಬನಿ ಮಿಡಿದ ರಘುರಾಮ್ ಸ್ನೇಹದ ಬೆಲೆ ಏನು ಎಂಬುದನ್ನು ಕರಾವಳಿಗೆ ತೋರಿಸಿಕೊಟ್ಟಿದ್ದಾನೆ.

ಜೂನ್ 3, ಮಂಗಳವಾರದಂದು ಬೆಂಗಳೂರು ಸಿಟಿ ಮಾರ್ಕೆಟ್ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಬಿಜೆಎಸ್ ಪ್ಲೈ ಓವರ್ ನಲ್ಲಿ ಬೈಕ್ -ಸ್ಕೂಟರ್ ನಡುವೆ ನಡೆದ ಭೀಕರ ಅಪಘಾತಕ್ಕೆ ಬಂಟ್ವಾಳ ಕಾವಲಕಟ್ಟೆ ಮೂಲದ ಅಫ್ಜಲ್ ಮೃತನಾಗಿದ್ದ. 26 ವರ್ಷದ ಅಫ್ಜಲ್ ಜೊತೆಗೆ ಆಕಾಶ್ ಕೂಡ ದುರ್ಮರಣಕ್ಕೀಡಾಗಿದ್ದ. ಆಕಾಶ್ ಎಲೆಕ್ಟ್ರೀಶಿಯನ್ ಕೆಲಸ ಮಾಡಿಕೊಂಡಿದ್ದರೆ, ಅಫ್ಜಲ್ ಪುಟ್ ಪಾತ್ ವ್ಯಾಪಾರ ಮಾಡಿಕೊಂಡಿದ್ದ. ಇಬ್ಬರು ಹಿಂಬದಿ ಸವಾರರಾಗಿದ್ದರು. ಮಣಿ ಎಂಬಾತ ಬೈಕ್ ಚಲಾಯಿಸಿದರೆ ಆಕಾಶ್ ಸಹಸವಾರನಾಗಿದ್ದ . ಕಾಸೀಂ ಸ್ಕೂಟರ್ ಚಲಾಯಿಸುತ್ತಿದ್ದರೆ, ಅಫ್ಜಲ್ ಹಿಂಬದಿ ಸವಾರನಾಗಿದ್ದ. ಇವರಿಬ್ಬರ ಮಧ್ಯೆ ನಡೆದ ಅಪಘಾತದಲ್ಲಿ ಆಕಾಶ್, ಅಫ್ಜಲ್ ಉಸಿರು ಚೆಲ್ಲಿದ್ದರು. ಆಕಾಶ್ ಮಳವಳ್ಳಿ ನಿವಾಸಿಯಾದರೆ, ಅಫ್ಜಲ್ ಬಂಟ್ವಾಳ ಕಾವಲಕಟ್ಟೆ ನಿವಾಸಿ. ಅಪಘಾತದಲ್ಲಿ ಮಣಿ ಹಾಗೂ ಖಾಸಿಂ ಎಂಬಿಬ್ಬರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೃತ ಅಫ್ಜಲ್ ನೆನೆದು ಆತನ ಆಪ್ತ ಸ್ನೇಹಿತ ರಘುರಾಮ್ ಕಾವಲಕಟ್ಟೆಗೆ ಬಂದು ಕಂಬನಿ ಮಿಡಿದಿದ್ದಾನೆ. ಸ್ನೇಹದ ಹೊಸ ಅರ್ಥವನ್ನು ಸಾರಿದ್ದಾನೆ. ಕರಾವಳಿಯ ಜನತೆಗೆ ಸ್ನೇಹದ ಹೊಸ ಭಾಷ್ಯ ಬರೆದು ಹೊರಟು ಹೋಗಿದ್ದಾನೆ. ಇಲ್ಲಿನ ಮಿತ್ರ ದ್ರೋಹಿ, ಅಲ್ಲಿನ ಆಪ್ತ ಸ್ನೇಹಿತ.. ಇನ್ನಾದರೂ ಕರಾವಳಿಯ ಕೋಮು ರಕ್ಕಸರ ಕಣ್ಣು ತೆರೆಸಿತೇ.