ಖಡಕ್ ಐಪಿಎಸ್ ಇದ್ದರೆ ಸಾಕಾ..ದಕ್ಷ ಐಎಎಸ್ ಬೇಡವೇ ಎಂಬ ಬಗ್ಗೆ ಮೊದಲ ಬಾರಿ ವರದಿ ಮಾಡಿದ್ದೆ ಸ್ಪೆಷಲ್ ನ್ಯೂಸ್
ಮಂಗಳೂರಿನಲ್ಲಿ ನಡೆಯುತ್ತಿದ್ದ ನಿರಂತರ ಕೋಮು ಹಿಂಸೆ, ದ್ವೇಷ ಭಾಷಣ ಮಟ್ಟ ಹಾಕಲು ರಾಜ್ಯ ಸರಕಾರ ಪೊಲೀಸ್ ಇಲಾಖೆಯಲ್ಲಿ ಖಡಕ್ ಆಫೀಸರ್ಸ್ ಗಳನ್ನು ತಂದು ಫೀಲ್ಡಿಗೆ ಇಳಿಸಿತ್ತು. ಆದರೆ ಜಿಲ್ಲಾಧಿಕಾರಿಗಳನ್ನು ಬದಲಾವಣೆ ಮಾಡದೆ ಹಾಗೆಯೇ ಉಳಿಸಿತ್ತು. ಸ್ಪೆಷಲ್ ನ್ಯೂಸ್ ವೆಬ್ ಮೀಡಿಯಾ ಈ ಬಗ್ಗೆ ಜೂನ್ 9 ರಂದು ಸಮಗ್ರ ವರದಿಯನ್ನು ಪ್ರಕಟಿಸಿತ್ತು. ಬಹುಶಃ ಜಿಲ್ಲೆಯಲ್ಲಿ ದಕ್ಷ ಐಎಎಸ್ ನೇಮಕಾತಿಗೆ ಮೊದಲ ಬಾರಿಗೆ ಧ್ವನಿ ಎತ್ತಿದ್ದೇ ಸ್ಪೆಷಲ್ ನ್ಯೂಸ್. ಈ ಬಗೆಗಿನ ವರದಿಯನ್ನು ನೀವು ಓದಿರಬಹುದು.

ಖಡಕ್ ಐಪಿಎಸ್ ಗಳು ಸಮಾಜ ಘಾತುಕರು, ಮತೀಯವಾದಿಗಳ ಬೆನ್ನು ಮೂಳೆ ಮುರಿಯುವ ಕೆಲಸ ಮಾಡಬಹುದಷ್ಟೆ. ಆದರೆ ಇದರಿಂದ ಪೂರ್ತಿ ಕರಾವಳಿಯಲ್ಲಿ ಶಾಂತಿ, ಸೌಹಾರ್ದತೆ ನೆಲೆ ನಿಲ್ಲಬಹುದು ಎಂದು ಅಂದಾಜಿಸುವುದು ಕಷ್ಟ. ಜಿಲ್ಲಾಡಳಿತದ ಪಾತ್ರವೂ ಬಹಳಷ್ಟಿದೆ. ಎರಡೂ ಸಮುದಾಯದ ಸಂಘ ಸಂಸ್ಥೆಗಳು, ಧಾರ್ಮಿಕ ನೇತಾರರು, ಸಾಮಾಜಿಕ ನೇತಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲೆಯಲ್ಲಿ ಶಾಂತಿಯುತ ಮಾತುಕತೆಗೆ ಪೂರಕ ವಾತಾವರಣ ನಿರ್ಮಿಸಬೇಕಾಗಿದೆ. ಆದರೆ ಜಿಲ್ಲಾಧಿಕಾರಿಯಾಗಿದ್ದ ಮುಲ್ಲೈ ಮುಗಿಲನ್ ಪೊಲೀಸರು ಷರಾ ಬರೆದ 144 ಸೆಕ್ಷನ್ ಮತ್ತು ಹವಾಮಾನ ಇಲಾಖೆ ಹೇಳುವ ಭಾರೀ ಮಳೆಗೆ ಸಹಿ ಹಾಕುವುದಷ್ಟೇ ಕೆಲಸ ಅಂದುಕೊಂಡಿದ್ದರು. ಜಿಲ್ಲೆಗೊಬ್ಬರು ದಕ್ಷ, ಜನಸ್ನೇಹಿ ಜಿಲ್ಲಾಧಿಕಾರಿಗಳ ಅಗತ್ಯವಿದೆ ಅನ್ನುವ ಆಗ್ರಹಗಳು ಇದ್ದವು.

ಇದೀಗ ಸರಕಾರ ರಾಜ್ಯದಾದ್ಯಂತ ಹಲವು ಐಎಎಸ್ ಅಧಿಕಾರಿಗಳನ್ನು ಬದಲಾಯಿಸುವ ಮೂಲಕ ಮೇಜರ್ ಸರ್ಜರಿ ಮಾಡಿದೆ. ಎರಡೂವರೆ ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಮುಲ್ಲೈ ಮುಗಿಲನ್ ಅವರನ್ನು ವರ್ಗಾಯಿಸಿ ಅವರ ಸ್ಥಾನಕ್ಕೆ 2016 ನೇ ಬ್ಯಾಚಿನ ಐಎಎಸ್ ಅಧಿಕಾರಿ ದರ್ಶನ್ ಎಚ್ ವಿ ಅವರನ್ನು ನೇಮಕ ಮಾಡಲಾಗಿದೆ. ಬೆಂಗಳೂರಿನಲ್ಲಿ ವಾಣಿಜ್ಯ ತೆರಿಗೆ ವಿಭಾಗದ ಎಡಿಷನ್ ಕಮೀಷನರ್ ಹುದ್ದೆಯಲ್ಲಿದ್ದರು. ಬೆಳಗಾವಿ ಸಿಇಓ, ಹಲವು ಕಡೆ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಅವಧಿಯಲ್ಲಿ ದಕ್ಷ, ಜನಪರ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದರು. ಇದೀಗ ದ.ಕ ಜಿಲ್ಲಾಧಿಕಾರಿ ಕೆಲಸ ಅವರಿಗೆ ಸವಾಲಾಗಿದೆ.
