ಉಸ್ತುವಾರಿ ಮಂತ್ರಿಯನ್ನೆ ದಾರಿ ತಪ್ಪಿಸಿದರಾ ದೋ.. ನಂಬರ್ ದಂಧೆಕೋರರು.!
ಖಡಕ್ ಗಣಿ ಮೇಡಂ ಡಿಸಿ ಗೆ ಬರೆದ ಪತ್ರದಲ್ಲೇನಿದೆ.. ಕಂಪ್ಲೀಟ್ ಡೀಟೇಲ್ಸ್
ಚಿಕ್ಕಬಳ್ಳಾಪುರ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಮುಖ್ಯಸ್ಥೆಯಾಗಿದ್ದ ಕೃಷ್ಣವೇಣಿಯವರಿಗೆ ರಾಜಸ್ವ ಸಂಗ್ರಹದ ಗುರಿ ಇದ್ದಿದ್ದು ಅಂದಾಜು 45 ರಿಂದ 55 ಕೋಟಿ. ಆದರೆ ಕೃಷ್ಣವೇಣಿ ಮುಖ್ಯಸ್ಥರಾದ ನಂತರ ಅಕ್ರಮ ಗಣಿಗಾರಿಕೆ ವಿರುದ್ಧ ನಡೆಸಿದ ರಾಜಿ ರಹಿತ ಹೋರಾಟದ ಫಲವಾಗಿ ಸರಕಾರಕ್ಕೆ 115 ಕೋಟಿಗೂ ಮಿಕ್ಕಿ ರಾಜಸ್ವ ಸಂಗ್ರಹ ಆಗಿತ್ತು. ಆದರೆ ಪ್ರಾಮಾಣಿಕ, ದಕ್ಷ ಅಧಿಕಾರಿಗಳನ್ನು ತುಂಬಾ ಸಮಯ ಕೆಲಸ ಮಾಡಲು ಬಿಡುವುದಿಲ್ಲ. ಅಕ್ರಮ ದಂಧೆಕೋರರ ಮಾಫಿಯಾಕ್ಕೆ ಚಿಕ್ಕಬಳ್ಳಾಪುರದಿಂದ ಮಂಗಳೂರಿಗೆ ಕೃಷ್ಣವೇಣಿ ವರ್ಗಾವಣೆಯಾದರು. ಅಧಿಕಾರಿಗಳಿಗೆ ಯಾವುದೇ ಜಿಲ್ಲೆ ಶಾಶ್ವತವಲ್ಲ. ಸಿಕ್ಕ ಕಡೆ ತನ್ನ ದಕ್ಷ ಕೆಲಸದಿಂದ ಜನಾನುರಾಯಿಯಾಗುತ್ತಾರೆ. ಮಂಗಳೂರಿಗೆ ವರ್ಗಾವಣೆಯಾಗಿ ಬಂದ ಕೃಷ್ಣವೇಣಿ ಇಲಾಖೆಗೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತಾರೆ. ಸರಕಾರಕ್ಕೆ ಸಂಗ್ರಹವಾಗಬೇಕಿರುವ ರಾಜಸ್ವ ಗುರಿಯನ್ನು ತಲುಪಲು ಪ್ರಯತ್ನಿಸುತ್ತಾರೆ. ಆದರೆ ಮಂಗಳೂರಿನದ್ದು ವಿಚಿತ್ರ ಅನ್ನುವಂತಹ ಸಂಗತಿ. ಕಳೆದ 2-3 ವರ್ಷಗಳಿಂದ ಇಲಾಖೆಗೆ ಸಂಬಂಧಿಸಿದ ಮಹತ್ವದ ಸಭೆ ಕೂಡ ನಡೆದಿರುವುದಿಲ್ಲ. ಗಣಿ ಇಲಾಖೆ ಅನ್ನುವುದು ಸತ್ತು ಮಲಗಿತ್ತು. ಮಾಫಿಯಾ ಮಂದಿ ಇಲಾಖೆಯನ್ನೇ ನಿಯಂತ್ರಿಸುತ್ತಿದ್ದರು. ಇದಕ್ಕೆ ಕಡಿವಾಣ ಹಾಕಲು ಮುಂದಾದ ಕೃಷ್ಣವೇಣಿ ಕಳೆದ 2-3 ವರ್ಷಗಳಿಂದ ವಿಲೇವಾರಿ ಆಗದೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೊಳೆಯುತ್ತಿದ್ದ ಕಡತ ಶ್ರೀಘ್ರ ವಿಲೇವಾರಿಗೆ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಸ್ಪಂದಿಸುವಂತೆ ಕೇಳಿಕೊಂಡರು. ಆದರೆ ಜಿಲ್ಲಾಡಳಿತ ಕಡೆಯಿಂದ ಸಕಾರಾತ್ಮಕ ಸ್ಪಂದನೆ ದೊರಕಲೇ ಇಲ್ಲ. ಇಲಾಖೆಯನ್ನು ಮಾಫಿಯಾ ಕಪಿಮುಷ್ಟಿಯಿಂದ ಬಿಡಿಸಲು ಪ್ರಯತ್ನಪಟ್ಟ ಕೃಷ್ಣವೇಣಿಗೆ ಜಿಲ್ಲಾಡಳಿತ ಕಡೆಯಿಂದ ದಕ್ಕಿದ್ದು ಕೇವಲ ಬೈಗುಳ, ಅವಮಾನ ಮಾತ್ರ.

ಖಡಕ್ ಗಣಿ ಮೇಡಂ ಕೃಷ್ಣವೇಣಿಯವರನ್ನು ಕೊನೆಗೂ ಅಮಾನತುಗೊಳಿಸಲು ಧೋ ನಂಬರ್ ದಂಧೆಕೋರರು ಯಶಸ್ವಿಯಾಗಿದ್ದು, ಯಾರಿಗೂ ಜಗ್ಗದ ಬಗ್ಗದ ಮಹಿಳಾ ಅಧಿಕಾರಿಯನ್ನು ವಿವಿಧ ಬೃಹನ್ನಾಟಕದ ಸಂಕಷ್ಟಕ್ಕೆ ಸಿಲುಕಿಸಿ ಕೊನೆಗೂ ಉಸ್ತುವಾರಿ ಮಂತ್ರಿಯ ದಾರಿ ತಪ್ಪಿಸಿ ದಂಧೆಕೋರರು ಅಮಾನತು ಮಾಡಿಸುವಲ್ಲಿ ಯಶ ಕಂಡಿದ್ದಾರೆ. ಈಗ ಒಳ್ಳೆಯ, ದಕ್ಷ ಅಧಿಕಾರಿಗಳಿಗೆ ಕಾಲವಲ್ಲ ಬಿಡಿ. ತನ್ನ ಖಡಕ್ ನಿರ್ಧಾರಗಳು, ಮೇಲಾಧಿಕಾರಿಗಳಿಗೆ ಬಕೆಟ್ ಹಿಡಿಯದೆ ತನ್ನ ವ್ಯಾಪ್ತಿಯಲ್ಲಿ ಲೇಡಿ ಸಿಂಗಂ ರೀತಿ ಕಾರ್ಯನಿರ್ವಹಿಸಿದ ಅಧಿಕಾರಿ ಕೃಷ್ಣವೇಣಿಯನ್ನು ಜಿಲ್ಲೆಯ ಪುರುಷ ಪ್ರಧಾನ ದೊಡ್ಡ ದೊಡ್ಡ ಆಫೀಸರ್ಸ್ ಯಾವುದೇ ಸಹಕಾರ ನೀಡದೆ, ನಿರಂತರವಾಗಿ ಅವಮಾನಿಸುತ್ತಾ ಮಾನಸಿಕವಾಗಿ ಕುಗ್ಗುವಂತೆ ಮಾಡಿರುವುದೇ ಈವರೆಗಿನ ಸಾಧನೆ. ಈ ಹಿಂದಿನ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಕೂಡ ಗಣಿ ಮೇಡಂ ರನ್ನು ಸಿಕ್ಕ ಸಿಕ್ಕ ಸಭೆ ಸಮಾರಂಭಗಳಲ್ಲಿ ಅವಮಾನಿಸುವ ಕೆಲಸವನ್ನಷ್ಟೇ ಮಾಡಿರುವುದನ್ನು ಬಿಟ್ಟು, ನೈತಿಕ ಬೆಂಬಲ ಕೊಟ್ಟು ಇಲಾಖೆಗೆ ಜೀವ ತುಂಬುವ ಕೆಲಸ ಮಾಡಿಲ್ಲವೆಂಬ ಅಪವಾದವಿದೆ. ಈ ಬಗ್ಗೆ ಖುದ್ದು ಗಣಿ ಮೇಡಂ ಫೆಬ್ರವರಿ ತಿಂಗಳಲ್ಲಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ತನ್ನ ಅಸಹನೆಯನ್ನು ತೋರಿದ್ದು ಬೆಳಕಿಗೆ ಬಂದಿದೆ. ಈ ಪ್ರತಿ ಸ್ಪೆಷಲ್ ನ್ಯೂಸ್ ಮೀಡಿಯಾ ಕ್ಕೆ ಲಭ್ಯವಾಗಿದ್ದು, ಅದರ ಡೀಟೇಲ್ಸ್ ಪ್ರಕಟಿಸುತ್ತಿದ್ದೇವೆ.
ಜಿಲ್ಲಾಧಿಕಾರಿಗೆ ಬರೆದ ಪತ್ರದಲ್ಲೇನಿದೆ.?
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಬೆಂಗಳೂರು ರವರ ಕಚೇರಿ ಆದೇಶ ಸಂಖ್ಯೆ: ಗಭೂಇ/ಸಿಬ್ಬಂದಿ/ಅ1/ವರ್ಗಾವಣೆ/2024/9706 ದಿನಾಂಕ 20-08-2024 ರ ಆದೇಶದನ್ವಯ ಕೃಷ್ಣವೇಣಿಯವರನ್ನು ದಕ್ಷಿಣ ಕನ್ನಡ ಜಿಲ್ಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ಭೂ ವಿಜ್ಞಾನಿಯಾಗಿ ನೇಮಕ ಮಾಡಲಾಯಿತು. ದಿನಾಂಕ 26-08-2024 ರಂದು ಕರ್ತವ್ಯಕ್ಕೆ ಹಾಜರಾದ ಕೃಷ್ಣವೇಣಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವ್ಯಾಪ್ತಿಯ ಅನಧಿಕೃತ ಖನಿಜ/ಉಪಖನಿಜ ಗಣಿ ಚಟುವಟಿಕೆಗಳ ಸಂಬಂಧ ಹೆಚ್ಚಿನ ದೂರುಗಳು ಬಂದ ಹಿನ್ನೆಲೆಯಲ್ಲಿ ಅನಧಿಕೃತ ಖನಿಜ/ಉಪಖನಿಜ/ಗಣಿಗಾರಿಕೆ /ದಾಸ್ತಾನು ಚಟುವಟಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಲವು ಬಾರಿ ತಾಂತ್ರಿಕ ಅಧಿಕಾರಿಯ ಜೊತೆ ಸೇರಿ ದಾಳಿ ನಡೆಸಿ ಅನಧಿಕೃತ ಗಣಿ ಚಟುವಟಿಕೆಗಳ ವಿರುದ್ಧ ದೂರು ದಾಖಲಿಸಿ ಇಲ್ಲಿಯವರೆಗೆ 35 ಎಫ್ಐಆರ್ ದಾಖಲಾಗಿದ್ದು, ಒಟ್ಟು ರೂಪಾಯಿ 29,47,640 ದಂಡವನ್ನು ಸಂಗ್ರಹಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಗೆ 2024-25 ನೇ ಸಾಲಿಗೆ ರೂಪಾಯಿ 80 ಕೋಟಿಗಳಷ್ಟು ರಾಜಸ್ವ ಗುರಿಯನ್ನು ನಿಗಡಿಪಡಿಸಲಾಗಿದ್ದು, ಸದರಿ ರಾಜಸ್ವ ಗುರಿಯ ಸಾಧನೆ ಬಗ್ಗೆ ಕಲ್ಲು ಗಣಿ ಗುತ್ತಿಗೆ/ಲೈಸೆನ್ಸ್ ದಾರರಿಂದ ಸರಕಾರಕ್ಕೆ ರಾಜಧನ ಮತ್ತು ಇತರೆ ಶುಲ್ಕ ಸಂಗ್ರಹಣೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಿರುತ್ತೇನೆ.
ಆದರೆ ಜಿಲ್ಲಾ ವ್ಯಾಪ್ತಿಯಲ್ಲಿ ಅನಧಿಕೃತ ಮರಳು ಗಣಿಗಾರಿಕೆ/ಸಾಗಾಣಿಕೆ ಚಟುವಟಿಕೆಗಳ ಸಂಬಂಧ ನಿರಂತರ ದೂರುಗಳು ಬರುತ್ತಿದ್ದು ಆದರೆ ಕಚೇರಿಯಲ್ಲಿ ತಾಂತ್ರಿಕ ಅಧಿಕಾರಿ/ ಸಿಬ್ಬಂದಿಗಳ ಕೊರತೆ ಇದ್ದು ಹಾಗೂ ಗಸ್ತು ಕಾರ್ಯ ನಡೆಸಲು ವಾಹನಗಳ ಕೊರತೆ ಇರುವುದರಿಂದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕರು ಬೆಂಗಳೂರು ಇವರಿಗೆ ಪತ್ರವನ್ನು ಬರೆದಿರುತ್ತಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಪ ಖನಿಜ ಗಣಿ ಗುತ್ತಿಗೆ ಅರ್ಜಿಗಳು/ ಕ್ರಷರ್ ಘಟಕ ಅರ್ಜಿಗಳು/ ಸಾಮಾನ್ಯ ಮರಳು ಬ್ಲಾಕ್ ಗಳ ವಿಲೇವಾರಿ ಕುರಿತು ಈ ಹಿಂದೆ ಜಿಲ್ಲಾ ಟಾಸ್ಕ್ ಫೋರ್ಸ್ (ಗಣಿ) ಸಮಿತಿ ಸಭೆಯು ದಿನಾಂಕ 20-07-2023 ರಂದು, ಜಿಲ್ಲಾ ಮರಳು ಸಮಿತಿ ಸಭೆಯು ದಿನಾಂಕ 19-12-2023 ರಂದು ಹಾಗೂ ಜಿಲ್ಲಾ ಕಲ್ಲುಪುಡಿ ಮಾಡುವ ಘಟಕಗಳ ಲೈಸೆನ್ಸಿಂಗ್ ಮತ್ತು ನಿಯಂತ್ರಣ ಪ್ರಾಧಿಕಾರ ಸಭೆಯು ದಿನಾಂಕ 25-01-2024 ರಂದು ನಡೆದಿದ್ದು, ಆನಂತರ ಇಲ್ಲಿಯವರೆಗೂ ಉಪಖನಿಜ ಗಣಿ ಗುತ್ತಿಗೆ ಅರ್ಜಿಗಳು/ ಕ್ರಷರ್ ಘಟಕ ಅರ್ಜಿಗಳು/ ಸಾಮಾನ್ಯ ಮರಳು ಬ್ಲಾಕ್ ವಿಲೇವಾರಿ ಕುರಿತು ಯಾವುದೇ ಸಭೆ ನಡೆದಿರುವುದಿಲ್ಲ.
2024-25 ನೇ ಸಾಲಿನಲ್ಲಿ ನಿಗದಿಪಡಿಸಿರುವ ವಾರ್ಷಿಕ ರಾಜಸ್ವ ಗುರಿ ರೂಪಾಯಿ 80 ಕೋಟಿಗಳಲ್ಲಿ ರೂಪಾಯಿ 33.04 ಕೋಟಿಗಳಷ್ಟು ರಾಜಸ್ವ ಸಂಗ್ರಹವಾಗಿರುತ್ತದೆ. ಈ ಕಚೇರಿಗೆ ನೀಡಿರುವ ವಾರ್ಷಿಕ ಸಂಗ್ರಹಣೆ ರಾಜಸ್ವ ಗುರಿ ಸಾಧಿಸುವುದು ಇಲಾಖೆಯ ಮೊದಲ ಆದ್ಯತೆಯಾಗಿರುತ್ತದೆ ಹಾಗೂ ಅನಧಿಕೃತ ಉಪ ಖನಿಜ ಗಣಿಗಾರಿಕೆ/ಸಾಗಾಣಿಕೆ/ದಾಸ್ತಾನು ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸರಕಾರದ ಅಧಿಸೂಚನೆ ಸಂಖ್ಯೆ:C1 21MMN (2) 2014 Bangalore, Dated 21-01-2024 ರಂತೆ ಹಾಗೂ ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಾವಳಿ 1994 ಹಾಗೂ ತಿದ್ದುಪಡಿ ನಿಯಮಗಳು 2021 ರ ನಿಯಮ 31-ಆರ್ ರಂತೆ ರಚನೆಯಾಗಿರುವ ಜಿಲ್ಲಾ/ತಾಲೂಕು ಮರಳು ಸಮಿತಿಯ ಸದಸ್ಯ ಇಲಾಖೆಯ ಅಧಿಕಾರಿಗಳಿಗೆ ಅಧಿಕಾರವನ್ನು ಪ್ರತ್ಯಾಯೋಜಿಸಲಾಗಿರುತ್ತದೆ. ಅದರಂತೆ ಎಲ್ಲಾ ಅಧಿಕಾರಿಗಳು ಸಮನ್ವಯ ಸಾಧಿಸಿ ಅನಧಿಕೃತ ಉಪ ಖನಿಜ ಗಣಿಗಾರಿಕೆ/ ಸಾಗಾಣಿಕೆ/ ದಾಸ್ತಾನು ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಯಂತ್ರಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಸಮಿತಿಯ ಸದಸ್ಯ ಇಲಾಖೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ನಿರ್ದೇಶನ ನೀಡುವಂತೆ ಕೋರಿ ಟಾಸ್ಕ್ ಫೋರ್ಸ್ ಸಭೆ ನಡೆಸಲು ದಿನಾಂಕ ನಿಗದಿಪಡಿಸುವಂತೆ ವಿನಂತಿಸಿಕೊಳ್ಳುತ್ತೇನೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿ.ಆರ್.ಝಡ್/ ನಾನ್ ಸಿ.ಆರ್.ಝಡ್ ವ್ಯಾಪ್ತಿಯಲ್ಲಿನ ಅನಧಿಕೃತ ಮರಳು ಸಾಗಣೆ ಚಟುವಟಿಕೆಗಳನ್ನು ತಡೆಗಟ್ಟುವ ಕುರಿತು ದಿನಾಂಕ 07-10-2024 ರಂದು ಸಭೆಯನ್ನು
ಕರೆಯಲಾಗಿತ್ತು. ಆ ಸಭೆಯಲ್ಲಿ ಅಜೆಂಡವಾರು ವಿಷಯವನ್ನು ಚರ್ಚಿಸದೆ ವೈಯಕ್ತಿಕವಾಗಿ ನನ್ನನ್ನು ನಿಂದಿಸಿ ಸಭೆ ಮೊಟಕುಗೊಳಿಸಲಾಗಿದ್ದು, ಆ ನಂತರದ ಸಭೆಯಲ್ಲೂ ಕೇವಲ ಅಧಿಕಾರಿಗಳನ್ನು ಟಾರ್ಗೆಟ್ ಮಾಡಲಷ್ಟೇ ಸಭೆ ನಡೆದಿದ್ದು, ಒಟ್ಟಾರೆ ಉದ್ದೇಶವನ್ನು ಮರೆಮಾಚಿಡಲಾಗಿದೆ.
ಅನಧಿಕೃತ ಗಣಿಗಾರಿಕೆ ಹಾಗೂ ಸಾಗಾಣಿಕೆಗೆ ನಿಮ್ಮ ಇಲಾಖೆಯೆ ಕಾರಣ, ಸಿಸಿಟಿವಿ ಕ್ಯಾಮರಾ ಇನ್ಸ್ಟಾಲ್ ಮಾಡಿಸಲು ಆ ಹಣವನ್ನು ವೇಸ್ಟ್ ಮಾಡಿಸಿದ್ದೀರಿ. ನಿಮ್ಮ ಇಲಾಖೆಯ ಜವಾಬ್ದಾರಿಗಳನ್ನು ಬೇರೆ ಇಲಾಖೆಯು ಏತಕ್ಕೆ ಕಾಯಬೇಕು, ಟಾಸ್ಕ್ ಫೋರ್ಸ್ ಸಭೆಯ ಕಡತಗಳಿಗೆ ಸಂಬಂಧಿಸಿದಂತೆ ‘ಯೂ ಆರ್ ಟ್ರೋಯಿಂಗ್ 02-03 ಇಯರ್ಸ್ ಗಾರ್ಬೇಜ್ ಆನ್ ಮಿ’ ಎಂದು ಸಭೆಯ ಇತರ ಸದಸ್ಯರ ಮುಂದೆ ಪೂರ್ವಾಗೃಹಪೀಡಿತರಾಗಿ ಅವಮಾನಿಸಿರುವುದು.. ಸಭೆಯನ್ನು ಕೇವಲ ನಮ್ಮ ಇಲಾಖೆ ಹಾಗೂ ನನ್ನನ್ನು ತೇಜೋವಧೆ ಮಾಡಲಷ್ಟೇ ಸೀಮಿತವಾಗಿರುವುದು, ಒಬ್ಬ ಮಹಿಳಾ ಅಧಿಕಾರಿಯಾದ ಕಾರಣ ನನ್ನನ್ನೆ ಟಾರ್ಗೆಟ್ ಮಾಡುವುದು ಎಷ್ಟು ಸಮಂಜಸ.?
