ಮಂಗಳೂರು ಪಾಲಿಕೆಗೆ 60 ದಿನಗಳ ಗಡುವು ವಿಧಿಸಿದ ಹೈಕೋರ್ಟ್
ಮಂಗಳೂರು ಮಹಾನಗರ ಪಾಲಿಕೆಯ ನೀರು ಸರಬರಾಜು ವಿಭಾಗದಲ್ಲಿ ಕರ್ತವ್ಯದಲ್ಲಿದ್ದ ಭಗವಾನ್ ದಾಸ್ ಮತ್ತು ಇತರ ಹದಿನಾರು ಮಂದಿ ಗುತ್ತಿಗೆ ನೌಕರರು ಸಲ್ಲಿಸಿದ್ದ ವಿಚಾರಣಾ ಅರ್ಜಿಯನ್ನು ಕೈಗೆತ್ತಿಕೊಂಡ ರಾಜ್ಯ ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ. ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದ 16 ಮಂದಿ ನೌಕರರನ್ನು ಖಾಯಂ ಗೊಳಿಸುವಂತೆ ಕರ್ನಾಟಕ ಹೈಕೋರ್ಟ್ ಆದೇಶ ನೀಡಿದ್ದು, ಮಹಾನಗರ ಪಾಲಿಕೆಗೆ 60 ದಿನಗಳ ಗಡುವು ನೀಡಿದೆ. ಹೈಕೋರ್ಟ್ ನ್ಯಾಯಮೂರ್ತಿ ಎಸ್ ಸುನೀಲ್ ದತ್ ಯಾದವ್ ಅವರಿದ್ದ ಪೀಠ ಈ ಆದೇಶ ನೀಡಿದೆ.
ನೇರ ನೇಮಕಾತಿಯನ್ನು ತಪ್ಪಿಸುವುದಕ್ಕಾಗಿ ಹೊರಗುತ್ತಿಗೆ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂಬ ಸುಪ್ರೀಂಕೋರ್ಟ್ ನೀಡಿರುವ ವಿವಿಧ ಆದೇಶಗಳನ್ನು ಉಲ್ಲೇಖಿಸಿದ ನ್ಯಾಯಪೀಠ, ಅರ್ಜಿದಾರರಾದ ಗುತ್ತಿಗೆ ನೌಕರರನ್ನು ಖಾಯಂಗೊಳಿಸುವ ಮನವಿಯನ್ನು ತಿರಸ್ಕರಿಸಿ 2025 ರ ಜನವರಿ 31 ರಂದು ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿದೆ. ಹತ್ತು ವರ್ಷಗಳ ಪೂರ್ಣಗೊಂಡ ದಿನಾಂಕದಿಂದ ಖಾಯಂಗೊಳಿಸಿ ಆದೇಶ ಹೊರಡಿಸುವಂತೆ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದೆ.

ಪಾಲಿಕೆಯಲ್ಲಿ ಖಾಲಿ ಹುದ್ದೆಗಳಿದ್ದರೂ ಗುತ್ತಿಗೆ ಆಧಾರದಲ್ಲಿ ಸೇವೆ ಮುಂದುವರಿಸಲಾಗಿತ್ತು. ಗುತ್ತಿಗೆ ಕಾರ್ಮಿಕರ ( ನಿಯಂತ್ರಣ ಮತ್ತು ರದ್ಧತಿ) ಕಾಯಿದೆ ಸೆಕ್ಷನ್ 10 ರ ಅಡಿಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ನೀರು ಸರಬರಾಜು ವಿಭಾಗದಲ್ಲಿ ಗುತ್ತಿಗೆ ಕಾರ್ಮಿಕರ ಸೇವೆ ರದ್ದುಗೊಳಿಸಿರುವುದಾಗಿ ರಾಜ್ಯ ಸರಕಾರ ಆದೇಶಿಸಿತ್ತು. ಆದರೂ ಅರ್ಜಿದಾರರು 2006 ರ ಬಳಿಕವೂ ಗುತ್ತಿಗೆ ನೌಕರರಾಗಿ ಸೇವೆ ಮುಂದುವರಿಸಿದ್ದಾರೆ. 2006 ರ ಬಳಿಕ ಗುತ್ತಿಗೆ ಸೇವೆಯಿಂದ ಗುತ್ತಿಗೆ ನೌಕರರ ಸೇವೆಯನ್ನು 2016 ರ ರದ್ದುಪಡಿಸಿದ ಹೊರತಾಗಿಯೂ ಪಾಲಿಕೆಯಲ್ಲಿ ಅರ್ಜಿದಾರರು ಗುತ್ತಿಗೆ ಕಾರ್ಮಿಕರಾಗಿ ನಿರಂತರ ಸೇವೆ ಸಲ್ಲಿಸುತ್ತಿದ್ದು, ಖಾಯಂಗೊಳಿಸಬೇಕು ಎಂದು ಮನವಿ ಮಾಡಿದ್ದರು.
