ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ಮಮತಾ ಗಟ್ಟಿ, ಚಂದ್ರ ಪ್ರಕಾಶ್ ಶೆಟ್ಟಿ ಮುನ್ನೆಲೆಗೆ ತರಲು ಚಿಂತನೆ
ಮಹತ್ವದ ಬೆಳವಣಿಗೆಯೊಂದರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಹಾಲಿ ಅಧ್ಯಕ್ಷ ಹರೀಶ್ ಕುಮಾರ್ ಸ್ಥಾನಕ್ಕೆ ಕುತ್ತು ಬರಲಿದ್ದು, ಅವರ ಸ್ಥಾನಕ್ಕೆ ಜಿಲ್ಲೆಯ ಪ್ರಭಾವಿ ಕಾಂಗ್ರೆಸ್ ಮುಖಂಡ ರಮಾನಾಥ ರೈ ಯವರನ್ನು ಕೂರಿಸುವ ಪ್ರಯತ್ನ ಕೆಪಿಸಿಸಿ ಮಟ್ಟದಲ್ಲಿ ನಡೆಯುತ್ತಿದೆ ಅನ್ನುವ ಮಾಹಿತಿ ಲಭ್ಯವಾಗಿದೆ.
ವಿಧಾನಸಭಾ ಸದಸ್ಯರಾಗಿರುವ ಹರೀಶ್ ಕುಮಾರ್ ರವರಿಗೆ ಬಿಲ್ಲವ ಕೋಟಾದ ಹಿನ್ನೆಲೆಯಲ್ಲಿ ಜಿಲ್ಲಾಧ್ಯಕ್ಷ ಸ್ಥಾನವೂ ಅನಾಯಾಸವಾಗಿ ದೊರೆತಿತ್ತು. ಬಹುಸಂಖ್ಯಾತ ಬಿಲ್ಲವರು ಕಾಂಗ್ರೆಸ್ ಬೆಂಬಲಿಸಬಹುದು ಅನ್ನುವ ದೂರದೃಷ್ಟಿಯಿಂದಲೇ ಕಾಂಗ್ರೆಸ್ ಈ ತೀರ್ಮಾನ ಕೈಗೊಂಡಿತ್ತು. ಹರೀಶ್ ಕುಮಾರ್ ಅವಧಿ ಮುಗಿದರೂ ಚುನಾವಣೆ ಹಿನ್ನೆಲೆಯಲ್ಲಿ ಬದಲಾಯಿಸುವ ಗೋಜಿಗೂ ಹೋಗಲಿಲ್ಲ. ಆದರೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿದ್ದರಿಂದ ಜಿಲ್ಲಾಧ್ಯಕ್ಷ ಹಠಾವೋ ಸದ್ದು ಜೋರಾಗಿ ಕೇಳಿ ಬಂದ ಕಾರಣ ಹರೀಶ್ ಕುಮಾರ್ ತಲೆದಂಡ ಬಹುತೇಕ ಫೈನಲ್ ಎಂದೇ ಹೇಳಲಾಗುತ್ತಿದೆ.

ಹರೀಶ್ ಕುಮಾರ್ ಜಿಲ್ಲಾಧ್ಯಕ್ಷ ರಾದ ತರುವಾಯ ಕಾಂಗ್ರೆಸ್ ಜಿಲ್ಲೆಯಲ್ಲಿ ನೆಲೆ ಕಚ್ಚಿದೆ. 2018 ರ ವಿಧಾನಸಭೆಯಲ್ಲಿ 1 ಸ್ಥಾನ, 2023 ರಲ್ಲಿ 2 ಸ್ಥಾನ ಪಡೆದುಕೊಂಡಿತ್ತು. ಉಳ್ಳಾಲದಲ್ಲಿ ಯು.ಟಿ ಖಾದರ್ ಸ್ವಂತ ವರ್ಚಸ್ಸಿನಿಂದ ಗೆದ್ದರೆ, ಪುತ್ತೂರಿನಲ್ಲಿ ಪುತ್ತಿಲ ಸ್ಪರ್ಧೆಯಿಂದ ಕಾಂಗ್ರೆಸ್ ಗೆದ್ದಿದೆ. ಜಿಲ್ಲಾಧ್ಯಕ್ಷರ ಯಾವುದೇ ಪಾತ್ರ ಇದರಲ್ಲಿ ಇಲ್ಲ. ಬೆಳ್ತಂಗಡಿಯಲ್ಲಿ ತಮ್ಮದೇ ಸಮುದಾಯದ, ತಮ್ಮ ಕುಟುಂಬಿಕನಿಗೆ ಸೀಟು ನೀಡಿದರೂ ಗೆಲ್ಲಿಸಿಕೊಡಲು ಸಾಧ್ಯವಾಗಿಲ್ಲ. ಪಕ್ಷ ಸಂಘಟನೆ, ನಾಯಕರನ್ನು ಒಗ್ಗೂಡಿಸಿ ಪಕ್ಷ ಮುನ್ನೆಡೆಸಲು ಹರೀಶ್ ಕುಮಾರ್ ವಿಫಲರಾಗಿದ್ದಾರೆ.
ಹರೀಶ್ ಕುಮಾರ್ ತಲೆದಂಡವಾದರೆ ಆ ಸ್ಥಾನಕ್ಕೆ ಯಾರನ್ನು ಕೂರಿಸುವುದು ಅನ್ನುವ ಚರ್ಚೆಯಾಗುತ್ತಿದ್ದಂತೆ ಮಾಜಿ ಜಿಲ್ಲಾಧ್ಯಕ್ಷ ರಮಾನಾಥ ರೈ ಹೆಸರು ಮುಂಚೂಣಿಯಲ್ಲಿದೆ. ರೈ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಕಾಂಗ್ರೆಸ್ ಚೇತರಿಸಿಕೊಂಡಿತ್ತು. ಬಿಜೆಪಿಗೆ ಟಾಂಗ್ ಕೊಡಲು ಸಮರ್ಥರಿದ್ದಾರೆ ಅನ್ನುವ ಕಾರಣಕ್ಕೆ ಅಧ್ಯಕ್ಷ ಸ್ಥಾನ ಬಹುತೇಕ ಫಿಕ್ಸ್ ಅನ್ನಲಾಗುತ್ತಿದೆ.
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಕಡಿಮೆ ಅಂತರದಲ್ಲಿ ಸೋತಿದ್ದ ರೈ ಯವರನ್ನು ವಿಧಾನಪರಿಷತ್ ಸದಸ್ಯ ರನ್ನಾಗಿ ಮಾಡುವಂತೆ ಬೆಂಗಳೂರಿಗೆ ರೈ ಅಭಿಮಾನಿಗಳ ನಿಯೋಗ ತೆರಳಿ ರಾಜ್ಯ ನಾಯಕರನ್ನು ಭೇಟಿ ಮಾಡಿತ್ತು. ಆದರೆ ಲೋಕಸಭಾ ಚುನಾವಣೆಯವರೆಗೆ ಜಿಲ್ಲೆಯ ನಾಯಕರಿಗೆ ಯಾವುದೇ ಸ್ಥಾನಮಾನ ನೀಡಲು ರಾಜ್ಯ ನಾಯಕರು ಹಿಂದೇಟು ಹಾಕಿರುವುದರಿಂದ ಅಸಮರ್ಥ ಹರೀಶ್ ಕುಮಾರ್ ರವರನ್ನು ಬದಲಾಯಿಸಿ ರಮಾನಾಥ ರೈ ಯವರಿಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡಲು ಮುಂದಾಗಿದ್ದಾರೆ ಅನ್ನುವ ಮಾಹಿತಿ ಲಭ್ಯವಾಗಿದೆ.

ಇನ್ನು ಚುನಾವಣಾ ರಾಜಕೀಯಕ್ಕೆ ರಮಾನಾಥ ರೈ ನಿವೃತ್ತಿ ಘೋಷಿಸಿರುವುದರಿಂದ ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ಮುಂದೆ ಯಾರು? ಅನ್ನುವ ಚರ್ಚೆಗಳು ಗರಿಗೆದರಿದೆ. ರಮಾನಾಥ ರೈ ಅಪ್ಪಟ ಶಿಷ್ಯ ಚಂದ್ರ ಪ್ರಕಾಶ್ ಶೆಟ್ಟಿ ಯವರನ್ನು ಮುನ್ನೆಲೆಗೆ ತರಲು ಚಿಂತನೆ ನಡೆದಿದೆ. ಇದರ ಜೊತೆಗೆ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮಮತಾ ಗಟ್ಟಿಯವರಿಗೂ ಕ್ಷೇತ್ರದಲ್ಲಿ ಚುರುಕಿನಿಂದ ಓಡಾಡುವಂತೆ ರಾಜ್ಯ ನಾಯಕರಿಂದ ಮೌಖಿಕ ಆದೇಶ ಬಂದಿದೆಯಂತೆ. ಒಂದು ವೇಳೆ ಮಹಿಳಾ ಕೋಟಾ ಕ್ಕೆ ಒಂದು ಸ್ಥಾನ ನೀಡಬೇಕಾಗಿ ಬಂದರೆ ಆಗ ಮಮತಾ ಗಟ್ಟಿ ಹೆಸರು ಶಿಫಾರಸು ಆಗುವ ಸಾಧ್ಯತೆಯೂ ಹೆಚ್ಚಳವಾಗಿದೆ.