ದೇಶವೇ ಬೆಚ್ಚಿಬೀಳಿಸುವ ಹಗರಣ.. ಸೃಷ್ಟಿ ಫರ್ಟಿಲಿಟಿ ವೈದ್ಯೆ ಸೇರಿ ಎಂಟು ಜನರ ಬಂಧನ
ನೈಸರ್ಗಿಕವಾಗಿ ಮಗು ಪಡೆಯಲಾಗದವರಿಗೆ ಮಗು ಪಡೆಯಲು ಹಲವು ದಾರಿಗಳಿವೆ. ಇದಕ್ಕಾಗಿಯೇ ಗಲ್ಲಿ ಗಲ್ಲಿಗಳಲ್ಲಿ ಐವಿಎಸ್ ಸೆಂಟರ್ಗಳು ತಲೆ ಎತ್ತಿವೆ. ಇದೀಗ ಹೈದರಾಬಾದ್ ನಲ್ಲಿ ಒಂದು ಐವಿಎಫ್ ಕೇಂದ್ರ ತನ್ನ ಗ್ರಾಹಕರಿಗೆ ಯಾಮಾರಿಸಿದೆ. ಒಂದು ದಂಪತಿಗಳು ತಮ್ಮ ಕನಸನ್ನು ನನಸಾಗಿಸಲು ಹೈದರಾಬಾದ್ನ ಸುಪ್ರಸಿದ್ಧ ಫಲವತ್ತತೆ ಕ್ಲಿನಿಕ್ಗೆ ಬೇಟಿ ತಮ್ಮ ಕನಸು ನನಸಾಗಿಸುವ ಬಗ್ಗೆ ಅವರಲ್ಲಿ ಮಾತುಕತೆ ನಡೆಸಿದ್ದಾರೆ. ಆದರೆ, ಅವರಿಗೆ ತಿಳಿದಿರಲಿಲ್ಲ, ಆ ಕ್ಲಿನಿಕ್ನ ವೈದ್ಯಕೀಯ ಕೋಟಿನ ಹಿಂದೆ ಒಂದು ಕ್ರೂರ ಕರಾಳತೆಯ ವಂಚನೆಯ ಜಾಲವೇ ಅಡಗಿದೆ ಎಂದು. ಅಲ್ಲಿನ ವೈದ್ಯರನ್ನು ನಂಬಿದ್ದ ಅ ದಂಪತಿಗಳಿಗೆ ಅತ್ಯಂತ ದೊಡ್ಡ ಆಘಾತಕ್ಕೆ ಕಾರಣವಾಯಿತು.
2024ರ ಆಗಸ್ಟ್ನಲ್ಲಿ, ರಾಜಸ್ಥಾನ ಮೂಲದ ದಂಪತಿ ಸಿಕಂದರಾಬಾದ್ನಲ್ಲಿರುವ ಯೂನಿವರ್ಸಲ್ ಸೃಷ್ಟಿ ಫರ್ಟಿಲಿಟಿ ಸೆಂಟರನ್ನು ಸಂಪರ್ಕಿಸಿ ತಮ್ಮ ಸಮಸ್ಯೆ ಬಗ್ಗೆ ಅವರಲ್ಲಿ ಹೇಳಿಕೊಂಡಿದ್ದರು. ಅಲ್ಲಿನ ವೈದ್ಯೆ ಅಥಲೂರಿ ನಮ್ರತಾ, ಈ ದಂಪತಿಗೆ ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯುವ ಸಲಹೆ ನೀಡಿದರು. ಜೈವಿಕವಾಗಿ ಮಗು ನಿಮ್ಮದೇ ಆಗಿರುತ್ತದೆ ಎಂದು ಭರವಸೆ ನೀಡಿ, ಈ ಪ್ರಕ್ರಿಯೆಗೆ ಮೂವತೈದು ಲಕ್ಷ ರೂಪಾಯಿ ಖರ್ಚುವೆಚ್ಚವಾಗುತ್ತದೆ ಎಂದು ತಿಳಿಸಿದರು. ಇವರನ್ನು ನಂಬಿದ ದಂಪತಿಗಳು ಹಣವನ್ನು ಪಾವತಿಸಿದರು.

ಒಂಬತ್ತು ತಿಂಗಳ ಕಾಲ, ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ ಎಂದು ಕ್ಲಿನಿಕ್ ದಂಪತಿಗೆ ನಂಬಿಸುತ್ತಲೇ ಬಂತು. 2025ರ ಜೂನ್ನಲ್ಲಿ, ಬಾಡಿಗೆ ತಾಯಿಗೆ ವಿಶಾಖಪಟ್ಟಣಂನಲ್ಲಿ ಹೆರಿಗೆ ಆಗಿದ್ದು, ಗಂಡು ಮಗು ಜನಿಸಿದೆ ಎಂದು ತಿಳಿಸಲಾಯಿತು. ಅಷ್ಟೇ ಅಲ್ಲ ಹೆರಿಗೆಯ ಖರ್ಚಿಗಾಗಿ ಹೆಚ್ಚುವರಿಯಾಗಿ ರೂಪಾಯಿ ಎರಡು ಲಕ್ಷ ಪಾವತಿಸಲು ಹೇಳಿ, ಮಗುವಿನ ನಕಲಿ ಜನನ ಪ್ರಮಾಣಪತ್ರದೊಂದಿಗೆ ದಂಪತಿಗೆ ಮಗುವನ್ನು ಹಸ್ತಾಂತರಿಸಲಾಯಿತು. ದಂಪತಿ ತಮ್ಮದೇ ಕಂದಮ್ಮ ಎಂದು ಖುಷಿಯಲ್ಲಿದ್ದರು. ಆದರೆ, ಒಂದು ಸಣ್ಣ ಅನುಮಾನದಿಂದ ಸ್ವತಂತ್ರವಾಗಿ ಡಿಎನ್ಎ ಪರೀಕ್ಷೆ ನಡೆಸಿದ್ದರು. ಪರೀಕ್ಷೆಯ ವರದಿಯಲ್ಲಿ ಆ ಮಗುವಿಗೂ ತಂದೆಗೂ ಜೈವಿಕವಾಗಿ ಯಾವುದೇ ಸಂಬಂಧ ಹೊಂದಿಲ್ಲ ಎಂಬ ಆಘಾತಕಾರಿ ಸತ್ಯ ಹೊರಬಂತು. ಸತ್ಯ ಅರಿವಾದಾಗ ದಂಪತಿ ಬೆಚ್ಚಿಬಿದ್ದರು. ಇದೀಗ ಇಡೀ ದೇಶವನ್ನೇ ಬೆಚ್ಚಿಬೀಳಿಸುವ ಹಗರಣವಾಗಿ ಇದು ಮಾರ್ಪಟ್ಟಿದೆ.
ಇದರಿಂದ ಕಂಗಾಲಾದ ದಂಪತಿ ಜುಲೈ 26ರಂದು ಪೊಲೀಸರಿಗೆ ಈ ಸಂಬಂಧ ದೂರು ನೀಡಿದರು. ತನಿಖೆಗೆ ಇಳಿದ ಪೊಲೀಸರು ನಿಜ ಸತ್ಯ ಕೇಳಿ ಬೆಚ್ಚಿಬಿದ್ದರು. ಇದು ಬಾಡಿಗೆ ತಾಯ್ತನದ ಪ್ರಕರಣವೇ ಅಲ್ಲ, ಬದಲಿಗೆ ಶಿಶು ಮಾರಾಟದ ವ್ಯವಸ್ಥಿತ ಜಾಲ ಎಂದು ಪೊಲೀಸರಿಗೆ ತಿಳಿದು ಬಂತು. ಡಾ. ನಮ್ರತಾ ಮತ್ತು ಅವರ ಸಹಚರರು ಹೈದರಾಬಾದ್ನಲ್ಲಿ ವಾಸಿಸುತ್ತಿದ್ದ ಅಸ್ಸಾಂ ಮೂಲದ ಬಡ ದಂಪತಿಯಿಂದ ಕೇವಲ 90,000 ರೂಪಾಯಿ ನೀಡಿ ಮಗುವನ್ನು ಖರೀದಿಸಿದ್ದರು. ಆ ಮಗುವನ್ನೇ, ಐವಿಎಫ್ ಮೂಲಕ ಹುಟ್ಟಿದ್ದು ಎಂದು ನಂಬಿಸಿ, ದೂರುದಾರ ದಂಪತಿಗೆ ಬರೋಬ್ಬರಿ 35 ಲಕ್ಷ ರೂ.ಗೆ ಮಾರಾಟ ಮಾಡಿದ್ದರು.

ಈ ಜಾಲದ ಹಿಂದಿರುವ ಡಾ. ಅಥಲೂರಿ ನಮ್ರತಾ ಇವರ ಕ್ಲಿನಿಕ್ನ ಪರವಾನಗಿಯನ್ನು 2021ರಲ್ಲೇ ರದ್ದುಗೊಳಿಸಲಾಗಿತ್ತು. ಹೀಗಿದ್ದರೂ ಹೈದರಾಬಾದ್, ವಿಜಯವಾಡ ಮತ್ತು ವಿಶಾಖಪಟ್ಟಣಂಗಳಲ್ಲಿ ಅಕ್ರಮವಾಗಿ ಐವಿಎಫ್ ಕೇಂದ್ರಗಳನ್ನು ನಡೆಸುತ್ತಿದ್ದರು. 2016ರಲ್ಲಿ ಎನ್ಆರ್ಐ ದಂಪತಿಗೆ ಇದೇ ರೀತಿ ವಂಚಿಸಿದ್ದಕ್ಕಾಗಿ ಅವರ ಪರವಾನಗಿಯನ್ನು ಐದು ವರ್ಷಗಳ ಕಾಲ ಅಮಾನತು ಮಾಡಲಾಗಿತ್ತು. 2020ರಲ್ಲಿ ಮತ್ತೆ ಶಿಶು ಕಳ್ಳಸಾಗಣೆ ಪ್ರಕರಣದಲ್ಲಿ ಅವರು ಜೈಲು ಪಾಲಾಗಿದ್ದರು. ಮತ್ತೆ ಹೊರಬಂದವರೇ ಮತ್ತೆ ಇದೇ ಕೃತ್ಯಕ್ಕೆ ಕೈ ಹಾಕಿದ್ದರು. ಇದೀಗ ಮಗದೊಮ್ಮೆ ಪೊಲೀಸರು ಡಾ. ಅಥಲೂರಿ ನಮ್ರತಾ, ಅವರ ಮಗ ಪಿ. ಜಯಂತ್ ಕೃಷ್ಣ, ಗಾಂಧಿ ಆಸ್ಪತ್ರೆಯ ಅರಿವಳಿಕೆ ತಜ್ಞ ಡಾ. ನರ್ಗುಲಾ ಸದಾನಂದಮ್, ಏಜೆಂಟರು ಮತ್ತು ಮಗುವನ್ನು ಮಾರಾಟ ಮಾಡಿದ ಜೈವಿಕ ಪೋಷಕರು ಸೇರಿದಂತೆ ಎಂಟು ಜನರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
