ಬೆಳ್ತಂಗಡಿ ತಹಶೀಲ್ದಾರ್ ರವರ ಅಧ್ಯಕ್ಷತೆಯಲ್ಲಿ ನಡೆದ ಪ.ಜಾತಿ /ಪಂಗಡಗಳ ಕುಂದುಕೊರತೆಗಳ ಸಭೆ

ಕರಾವಳಿ

ಕೊರಗ ಕಾಲನಿಗೆ ಕೇಂದ್ರ ಸರ್ಕಾರದ ವಿಶೇಷ ಅನುದಾನದಲ್ಲಿ ಮಂಜೂರಾದ 9 ಕೋಟಿ ಹಣದಲ್ಲಿ ದುರುಪಯೋಗ, ಉನ್ನತ ಮಟ್ಟದ ತನಿಖೆಗೆ ಒತ್ತಾಯ: ಶೇಖರ್ ಲಾಯಿಲ

ಬೆಳ್ತಂಗಡಿ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ತಹಶೀಲ್ದಾರ್ ಪೃಥ್ವಿ ಸಾನಿಕಂ ರವರ ಅಧ್ಯಕ್ಷತೆಯಲ್ಲಿ ನಡೆದ ಪ.ಜಾತಿ /ಪಂಗಡಗಳ ಕುಂದುಕೊರತೆಗಳ ಸಭೆ ನಡೆಯಿತು. ಸುಲ್ಕೇರಿ ಗ್ರಾಮದ ಅಟ್ರಿಂಜೆ ಕೊರಗ ಕಾಲನಿಗೆ ಕೇಂದ್ರ ಸರ್ಕಾರದ ವಿಶೇಷ ಅನುದಾನದಲ್ಲಿ ರಸ್ತೆ ಮತ್ತು ಸೇತುವೆ ನಿರ್ಮಾಣಕ್ಕೆ ಮಂಜೂರಾದ 9 ಕೋಟಿ ರೂಪಾಯಿಗಳಲ್ಲಿ ಕೋಟ್ಯಂತರ ರೂಪಾಯಿ ದುರುಪಯೋಗ ಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲು ಒತ್ತಾಯಿಸಲಾಯಿತು.

ಈ ಸಭೆಯಲ್ಲಿ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಸಂಚಾಲಕ ಶೇಖರ್ ಲಾಯಿಲ ಮಾತನಾಡಿ ಕೊರಗ ಸಮುದಾಯದ ಹೆಸರಿನಲ್ಲಿ ಮಂಜೂರುಗೊಂಡ ಸೇತುವೆಯನ್ನು ಕಾಲನಿಯಿಂದ ಒಂದು ಕಿಮೀ ದೂರದಲ್ಲಿ ನಿರ್ಮಾಣ ಮಾಡಲಾಗಿದೆ. ಕೊರಗ ಸಮುದಾಯ ಇಂದಿಗೂ ಅಪಾಯಕಾರಿಯಾದ ಮರದ ಕಾಲುಸೇತುವೆಯನ್ನೇ ಉಪಯೋಗಿಸುವಂತಾಗಿದೆ. ಈ ರೀತಿಯಲ್ಲಿ ಕೊರಗ ಸಮುದಾಯಕ್ಕೆ ಮೀಸಲಿಟ್ಟ ಅನುದಾನವನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ. ಈ ಬೃಹತ್ ಪ್ರಮಾಣದ ಅನುದಾನ ದುರುಪಯೋಗ ಮಾಡಿಕೊಂಡಿರುವ ಸಂಬಂಧಪಟ್ಟ ಅಧಿಕಾರಿಗಳು , ಇಂಜಿನಿಯರ್ ಗಳು , ಗುತ್ತಿಗೆದಾರರ ವಿರುದ್ಧ ಪ.ಜಾತಿ/ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯನ್ವಯ ಕ್ರಿಮಿನಲ್ ಕೇಸ್ ದಾಖಲಿಸುವ ಜೊತೆಗೆ ಸಮಗ್ರ ತನಿಖೆಗಾಗಿ ಪ್ರಕರಣವನ್ನು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಧ್ವನಿಗೂಡಿಸಿದ ಕೊರಗ ಸಮುದಾಯದ ನಾಯಕಿ ಸವಿತಾ ಕೊರಗ ಅಟ್ರಿಂಜೆ ಮಾತನಾಡಿ ನಮ್ಮ ಮನೆಯ ಮಕ್ಕಳು , ವೃದ್ಧರು ಸೇರಿದಂತೆ ಕಾಯಿಲೆ ಪೀಡಿತರು ಅಪಾಯಕಾರಿ ಮರದ ಕಾಲುಸೇತುವೆಯನ್ನು ಜೀವದ ಹಂಗು ತೊರೆದು ಯಾತ್ರೆ ಮಾಡುತ್ತೇವೆ. ನಮ್ಮ ಜೀವಕ್ಕೆ ಅಪಾಯ ಉಂಟಾದರೆ ಯಾರು ಹೊಣೆ ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಮಾಹಿತಿ ನೀಡಿದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಧನಂಜಯರವರು ಸಂಬಂಧಿಸಿದ ಇಂಜಿನಿಯರ್ ಗಳು ಇಲ್ಲಿ ಎರಡು ಸೇತುವೆಗಳಿಗೆ ಅಂದಾಜುಪಟ್ಟಿ ತಯಾರಿಸಿ ಕಳುಹಿಸಿದ್ದರು. ಕೇಂದ್ರ ಸರ್ಕಾರ ಈ ಯೋಜನೆಯಡಿಯಲ್ಲಿ ಕೇವಲ ಒಂದು ಸೇತುವೆ ನಿರ್ಮಾಣಕ್ಕೆ ಅವಕಾಶವಿದೆ ಎಂದು ಕೇವಲ ಒಂದು ಸೇತುವೆಗೆ ಅನುಮತಿ ನೀಡಿತು. ಈಗಾಗಲೇ ಕೊರಗ ಸಮುದಾಯದ ಕಾಲನಿಯಿಂದ ಬೇರೆಡೆ ಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂಬ ಮಾಹಿತಿಯಿದ್ದು, ಈ ಬಗ್ಗೆ ಪರಿಶೀಲನೆ ನಡೆಸುತ್ತೇವೆ ಮತ್ತು ಕಾಲನಿಗೆ ಮುಂದಿನ ಮಳೆಗಾಲದೊಳಗೆ ಪ್ರತ್ಯೇಕ ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುತ್ತೇವೆ ಎಂದರು.

ಬೆಳ್ತಂಗಡಿ ಕಸಬಾ ರೆಂಕೆದಗುತ್ತು ಎಂಬಲ್ಲಿ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡು ಅಕ್ರಮ ಮನೆಗಳನ್ನು ಇನ್ನೂ ತೆರವು ಮಾಡದ ಬಗ್ಗೆ ದಸಂಸ ಮೈಸೂರು ವಿಭಾಗ ಸಂ.ಸಂಚಾಲಕ ಬಿ.ಕೆ ವಸಂತ್ ಅಸಮಾಧಾನ ವ್ಯಕ್ತಪಡಿಸಿದರು. ಈ ಅಕ್ರಮ ಮನೆಗಳಿಗೆ ನಗರ ಪಂಚಾಯತ್ ನಿಂದ ವಿದ್ಯುತ್ ಗೆ ಎನ್ಒಸಿ ನೀಡಲಾಗಿದೆ ಮತ್ತು ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಅದೇ ಪರಿಸರದಲ್ಲಿ ಓರ್ವ ದಲಿತ ವಿಶೇಷ ಚೇತನ ಮಹಿಳೆಯ ಮನೆಯನ್ನು ಮಳೆಗಾಲದಲ್ಲಿ ತೆರವು ಮಾಡಲಾಗಿದೆ ಇದು ಯಾವ ನ್ಯಾಯ? ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಎಂಬ ನೀತಿ ಸರಿಯಲ್ಲ ಎಂದರು. ಈ ಸಂದರ್ಭದಲ್ಲಿ ಸಂಜೀವ ಆರ್, ರಮೇಶ್ ಆರ್ ಧ್ವನಿಗೂಡಿಸಿದರು. ಈ ಬಗ್ಗೆ ಪರಿಶೀಲನೆ ಮಾಡಿ, ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ತಹಶೀಲ್ದಾರ್ ಹೇಳಿದರು. ತಾಲೂಕಿನ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಮೀಸಲಾತಿಯನ್ನು ಪಾಲಿಸುತ್ತಿಲ್ಲ. ಪ.ಜಾತಿ/ಪಂಗಡಗಳ ವಿದ್ಯಾವಂತ ಯುವಜನರಿಗೆ ಉದ್ಯೋಗ ಸಿಗುತ್ತಿಲ್ಲ ಎಂದು ಮಾಜಿ ಜಿ.ಪಂ ಸದಸ್ಯ ಶೇಖರ್ ಕುಕ್ಕೇಡಿ ದೂರಿದರು.

ಈ ಸಂದರ್ಭದಲ್ಲಿ ಸಹಕಾರ ಇಲಾಖೆಯ ಮೇಲ್ವಿಚಾರಕಿ ಪ್ರತಿಮಾ ಮಾತನಾಡಿ ತಾಲೂಕಿನ ಕೃಷಿ ಪತ್ತಿನಲ್ಲಿರುವ ಪ.ಜಾತಿ/ಪಂಗಡಗಳ ಸಿಬ್ಬಂದಿಗಳ ಮಾಹಿತಿ ನೀಡಿದಾಗ ಆಕ್ಷೇಪಿಸಿದ ಶೇಖರ್ ಕುಕ್ಕೇಡಿ ತಾಲೂಕಿನ ಹೆಚ್ಚಿನ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಪರಿಶಿಷ್ಟ ಜಾತಿ ಜನಸಂಖ್ಯೆಗನುಗುಣವಾಗಿ ಮೀಸಲಾತಿ ನೀಡುವ ಬದಲಾಗಿ ಪರಿಶಿಷ್ಟ ಪಂಗಡಗಳ ಸಿಬ್ಬಂದಿಗಳ ಸಂಖ್ಯೆ ಹೆಚ್ಚಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಧರ್ಮಸ್ಥಳ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 9 ಪರಿಶಿಷ್ಟ ಪಂಗಡಗಳ ಸಿಬ್ಬಂದಿಗಳಿದ್ದು, ಒಂದೇ ಒಂದು ಪ.ಜಾತಿ ಸಿಬ್ಬಂದಿಗಳನ್ನು ನೇಮಕ ಮಾಡದ ಬಗ್ಗೆ ಕಾರ್ಯನಿರ್ವಾಹಕ ಅಧಿಕಾರಿ ವಿರುದ್ಧ ತನಿಖೆಗೆ ಒತ್ತಾಯಿಸಿದರು. ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಮಾತನಾಡಿ ತಾಲೂಕಿನ ಕೃಷಿ ಪತ್ತಿನ ಸಹಕಾರ ಸಂಘಗಳು ಸೇರಿದಂತೆ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಸಂವಿಧಾನಬದ್ಧ ಮೀಸಲಾತಿ ಜಾರಿ ಮಾಡುವ ಬಗ್ಗೆ ತನಿಖೆಗೆ ಸಹಕಾರ ಇಲಾಖೆಯ RC ಗೆ ಬರೆಯಲು ಸೂಚಿಸಿದರು.

ತಾಲೂಕಿನ ಅಂಬೇಡ್ಕರ್ ಭವನಗಳ ಮೇಲ್ವಿಚಾರಣೆ ಹಾಗೂ ನಿರ್ವಹಣೆಗಾಗಿ ಸಮಿತಿ ರಚಿಸುವಂತೆ ಶೇಖರ್ ಕುಕ್ಕೇಡಿ ಒತ್ತಾಯಿಸಿದರು. ಈ ಬಗ್ಗೆ ತಹಶೀಲ್ದಾರ್ ಮಾತನಾಡಿ ಈ ಬಗ್ಗೆ ಎರಡೂ ಬಾರಿ ಪಟ್ಟಣ, ಗ್ರಾಮ ಪಂಚಾಯತ್ ಗಳಿಗೆ ಪತ್ರ ಬರೆಯಲಾಗಿದೆ. ಆದರೆ ಈ ತನಕವೂ ಕೈಗೊಂಡ ಕ್ರಮಗಳ ಬಗ್ಗೆ ಸಂಬಂಧಪಟ್ಟವರು ಮಾಹಿತಿ ನೀಡಿಲ್ಲ ಎಂದರು. ಮಧ್ಯ ಪ್ರವೇಶಿಸಿದ ದಲಿತ ಮುಖಂಡರು ಗ್ರಾಮ ಪಂಚಾಯತ್ ಸೇರಿದಂತೆ ಪಟ್ಟಣ ಪಂಚಾಯತ್ ಅಧಿಕಾರಿಗಳು ಯಾರಿಗೂ ಈ ತನಕ ಮಾಹಿತಿ ನೀಡಿಲ್ಲ. ಮತ್ತೊಮ್ಮೆ ಪತ್ರ ಬರೆಯಲು ಒತ್ತಾಯಿಸಿದರು.

ಸವಣಾಲು ಗ್ರಾಮದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಹಿತ್ತಿಲಪೇಲ ಪ್ರದೇಶದಲ್ಲಿ ಹರಿಯುತ್ತಿರುವ ನದಿಯಲ್ಲಿ ಇತ್ತೀಚಿಗೆ ಸ್ಕೂಟರ್ ಸಮೇತ ಯುವಕರಿಬ್ಬರು ನೀರಿನ ರಭಸಕ್ಕೆ ಸಿಲುಕಿ ಕೊಚ್ಚಿ ಹೋಗಿ, ಪವಾಡ ಸದೃಶವಾಗಿ ಬದುಕುಳಿದ ಬಗ್ಗೆ ಶೇಖರ್ ಲಾಯಿಲ ಮಾತನಾಡಿದಾಗ ತಹಶೀಲ್ದಾರ್ ರವರು ಆ ಇಬ್ಬರು ಯುವಕರ ಮೇಲೆ ಕ್ರಿಮಿನಲ್ ಕೇಸ್ ಹಾಕಬೇಕಿತ್ತು ಎಂದರು. ಆಗ ಶೇಖರ್ ಲಾಯಿಲ ಮಾತನಾಡಿ ಆ ಪ್ರದೇಶದಲ್ಲಿ ಸುಮಾರು 10-15 ಆದಿವಾಸಿ ಸಮುದಾಯದ ಮನೆಗಳಿದ್ದು, ಆ ಮನೆಯವರು ದಿನನಿತ್ಯದ ಅಗತ್ಯಗಳಿಗೆ ಈ ನದಿಯನ್ನು ದಾಟಿ ಬರುವುದು ಅನಿವಾರ್ಯವಾಗಿದೆ. ಅಲ್ಲಿ ಸೇತುವೆ ನಿರ್ಮಾಣದ ಬಗ್ಗೆ ಯೋಚಿಸದೆ ಅವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸುವುದು ಯಾವ ನ್ಯಾಯ ? ಮಳೆಗಾಲದಲ್ಲಿ ಆದಿವಾಸಿಗಳು ದಿಗ್ಭಂದನಕ್ಕೆ ಒಳಗಾಗಬೇಕೇ ? ಎಂದಾಗ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ಉಪ ವಿಭಾಗದ ಅಧಿಕಾರಿಗಳ ಮೂಲಕ ಅಂದಾಜು ಪಟ್ಟಿ ತಯಾರಿಸಲು ಸೂಚಿಸಿದರು.

ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿರುವ ಹೊರ ಗುತ್ತಿಗೆ ಸಿಬ್ಬಂದಿಗಳಿಗೆ ಪ್ರತಿ ತಿಂಗಳು ವೇತನ ನೀಡಲು ಮತ್ತು ರಜೆ ನೀಡಲು ಶೇಖರ್ ಲಾಯಿಲ ಒತ್ತಾಯಿಸಿದರು. ಸುಲ್ಕೇರಿಮೊಗ್ರು ಗ್ರಾಮದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ವಿದ್ಯುತ್ ಸಂಪರ್ಕಕ್ಕಾಗಿ ನಿರಂತರವಾಗಿ ನಡೆಸಿದ ಹೋರಾಟಕ್ಕೆ ಅಂತಿಮ ಜಯ ಸಿಕ್ಕಿದ್ದು, ಮುಂದಿನ ದೀಪಾವಳಿ ಮೊದಲು ಈ ಪ್ರದೇಶಕ್ಕೆ ವಿದ್ಯುತ್ ಸಂಪರ್ಕ ಮಾಡಲು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮೆಸ್ಕಾಂ ಎಇಇ ಬೆಂಜಮಿನ್ ಬ್ರಾಕ್ಸ್ ಮಾತನಾಡಿ ಈಗಾಗಲೇ ವಿದ್ಯುತ್ ಸಂಪರ್ಕಕ್ಕಾಗಿ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ವಿದ್ಯುತ್ ಕಂಬಗಳನ್ನು ಅಳವಡಿಸುವ ಕಾರ್ಯ ನಡೆದಿದೆ. ವಿದ್ಯುತ್ ತಂತಿಯ ಬದಲಾಗಿ ವಿದ್ಯುತ್ ಕೇಬಲ್ ಅಳವಡಿಸುವ ನಿಟ್ಟಿನಲ್ಲಿ ಕೇಬಲ್ ಗಾಗಿ ಮುಂಬಯಿನ ಕಂಪನಿಯೊಂದಕ್ಕೆ ಅನುದಾನ ಪಾವತಿಸಿದ್ದು, ಆಗಸ್ಟ್ ಕೊನೆಯೊಳಗೆ ಕೇಬಲ್ ಪೂರೈಕೆಯಾಗಿ, ಸಪ್ಟೆಂಬರ್ ತಿಂಗಳಲ್ಲಿ ಕೇಬಲ್ ಅಳವಡಿಸಿ , ಮುಂದಿನ ಅಕ್ಟೋಬರ್ ಒಳಗೆ ಅಂದರೆ ದೀಪಾವಳಿ ಮೊದಲು ವಿದ್ಯುತ್ ಸಂಪರ್ಕ ಕಲ್ಪಿಸುತ್ತೇವೆ ಎಂದರು.

ಸ್ಮಶಾನಕ್ಕಾಗಿ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲೂ ದಲಿತರಿಗೆ ಪ್ರತ್ಯೇಕ ಸ್ಥಳ ಗುರುತಿಸಬೇಕು. ದಲಿತರು ಶವಗಳನ್ನು ಧಪನ ಮಾಡಿದರೆ, ಇತರರು ದಹನ ಕ್ರಿಯೆ ನಡೆಸುತ್ತಾರೆ ಎಂದು ಹಿರಿಯ ದಲಿತ ನಾಯಕ ವೆಂಕಣ್ಣ ಕೊಯ್ಯೂರು ಹೇಳಿದರು.
ಇನ್ನುಳಿದಂತೆ ಡಿಸಿ ಮನ್ನಾ ಜಮೀನು, ಅಂಬೇಡ್ಕರ್ ಭವನಕ್ಕೆ ಜಮೀನು ಮಂಜೂರು, ಸರ್ಕಾರಿ ಜಮೀನು ಅತಿಕ್ರಮಣ, ಕಾಮಗಾರಿಗಳಲ್ಲಿ ಪ.ಜಾತಿ/ಪಂಗಡಗಳ ಗುತ್ತಿಗೆದಾರರಿಗೆ ಮೀಸಲಾತಿ, ಹೆಚ್ಚುವರಿ ಸರ್ಕಾರಿ ಬಸ್, ಹಾಸ್ಟೆಲ್ ನಲ್ಲಿ ಬಿಗಿ ಕ್ರಮ ಕೈಗೊಳ್ಳುವುದು ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು. ವೇದಿಕೆಯಲ್ಲಿ ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಭವಾನಿಶಂಕರ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಧನಂಜಯ ಉಪಸ್ಥಿತರಿದ್ದರು.
ಐಟಿಡಿಪಿ ವಿಸ್ತಾರಣಾಧಿಕಾರಿ ಹೇಮಲತಾ ವಂದಿಸಿದರು.