ಲೋಕಾಯುಕ್ತ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ದಕ್ಷಿಣ ಕನ್ನಡ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಕೃಷ್ಣವೇಣಿ ಅವರ ಅಮಾನತು ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಮನೆ ಕಟ್ಟುವ ಸಂಬಂಧ ದೃಢೀಕರಣ ನೀಡಲು ಲಂಚ ಪಡೆದಿದ್ದರು ಎಂದು ಆರೋಪಿಸಿ ಲೋಕಾಯುಕ್ತ ಅಧಿಕಾರಿಗಳೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಕೃಷ್ಣವೇಣಿ ಅವರನ್ನು ಮೇ 28 ರಂದು ಬಂಧಿಸಿದ್ದರು. ಇದರ ವಿರುದ್ಧ ಹೈಕೋರ್ಟ್ ಗೆ ಸೂಕ್ತ ದಾಖಲೆಗಳೊಂದಿಗೆ ಕೃಷ್ಣವೇಣಿ ರಿಟ್ ಅರ್ಜಿ ಸಲ್ಲಿಸಿದ್ದರು. ಇದನ್ನು ಪರಿಶೀಲಿಸಿದ ನ್ಯಾಯಾಲಯ ಕೃಷ್ಣವೇಣಿ ಅವರ ಅಮಾನತು ಆದೇಶಕ್ಕೆ ತಡೆ ನೀಡಿದೆ.
ಖಡಕ್ ಗಣಿ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದ ಕೃಷ್ಣವೇಣಿ ಅವರನ್ನು ಷಡ್ಯಂತ್ರ ಹೂಡಿ ಲೋಕಾಯುಕ್ತ ರೈಡ್ ಮಾಡಿಸಲಾಗಿತ್ತು ಅನ್ನುವ ಆರೋಪ ಕೇಳಿ ಬಂದಿತ್ತು. ಮರಳು ದಂಧೆಕೋರರು ಉಸ್ತುವಾರಿ ಸಚಿವರ ಮೂಲಕ ಅಮಾನತು ಮಾಡಿಸುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಹೈಕೋರ್ಟ್ ಅಮಾನತು ಆದೇಶಕ್ಕೆ ತಡೆಯಾಜ್ಞೆ ನೀಡುವ ಮೂಲಕ ಕೃಷ್ಣವೇಣಿ ಗೆ ಗೆಲುವು ಸಿಕ್ಕಿದಂತಾಗಿದೆ.
