ಪಕ್ಕದಲ್ಲೇ ಆರೋಗ್ಯ ಕೇಂದ್ರ ಇದ್ದರೂ ಗಡದ್ದಾಗಿ ನಿದ್ರೆಗೆ ಜಾರಿದೆ.. ಸಾಂಕ್ರಾಮಿಕ ರೋಗ ಹರಡಿದರೆ ಯಾರು ಹೊಣೆ.?
ಆಟಕ್ಕುಂಟು ಲೆಕ್ಕಕ್ಕಿಲ್ಲ ಪಂ. ಅಧ್ಯಕ್ಷೆ.!
ಇದು ಮಲ್ಲೂರು ಗ್ರಾಮ ಪಂಚಾಯತ್ ಕಥೆಯೋ.. ಕರ್ಮಕಥೆಯೋ ಒಂದೂ ತಿಳಿಯುತ್ತಿಲ್ಲ. ಯಾರ ಶಾಪವೋ ಗೊತ್ತಿಲ್ಲ. ಉಳಾಯಿಬೆಟ್ಟು -ಮಲ್ಲೂರು ಜಂಟಿಯಾಗಿ ಇದ್ದಾಗ ಅಭಿವೃದ್ಧಿಯ ದಾಪುಗಾಲಿಗೆ ತೆರೆದಿದ್ದ ಗ್ರಾಮ ಪಂಚಾಯತ್, ಮಲ್ಲೂರಿಗೆ ಪ್ರತ್ಯೇಕ ಗ್ರಾಮ ಪಂಚಾಯತ್ ಆದ ನಂತರವಂತೂ ಅಭಿವೃದ್ಧಿಗೆ ಮಂಕು ಕವಿದಿದೆ. ಜನಪ್ರತಿನಿಧಿಗಳೆನಿಸಿಕೊಂಡವರ ನಿರ್ಲಕ್ಷ್ಯದ ಪರಮಾವಧಿ ಅಭಿವೃದ್ಧಿಗೆ ಗ್ರಹಣ ಬಡಿದಿದೆ. ಜನಸಾಮಾನ್ಯರು ಹೈರಣಾಗಿದ್ದಾರೆ. ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸುವವರೇ ಇಲ್ಲವಾಗಿದೆ.. ಸಮಸ್ಯೆಗಳ ಆಗರವಾಗಿ ಬಿಟ್ಟಿದೆ. ಯಾರಿಗೇಳೋಣ ನಮ್ಮ ಪ್ರಾಬ್ಲಂ.
ಮಂಗಳೂರಿನಿಂದ ಹದಿನೆಂಟು ಕಿಲೋ ಮೀಟರ್ ದೂರದಲ್ಲಿರುವ ಮಲ್ಲೂರು ಅನ್ನುವ ಗ್ರಾಮದ ವ್ಯಥೆಯ ಕಥೆಯಿದು. ಈ ಪಂಚಾಯತ್ ಜನಸಾಮಾನ್ಯರ ಸಮಸ್ಯೆಗೆ ಕಿಂಚಿತ್ತೂ ಸ್ಪಂದಿಸುತ್ತಿಲ್ಲ ಅನ್ನುವ ಆರೋಪ ನಾಗರೀಕರಿಂದ ಕೇಳಿ ಬರುತ್ತಿದೆ. ಈ ಹಿಂದಿನ ಜನಪ್ರತಿನಿಧಿಗಳೆನಿಸಿಕೊಂಡವರು ಭ್ರಷ್ಟಾಚಾರದಲ್ಲಿ ಮುಳುಗಿದ್ದರು ಅನ್ನುವ ಆರೋಪಕ್ಕೆ ಗುರಿಯಾದ ಕಾರಣ ಹೊಸಬರನ್ನು ಅಧಿಕಾರಕ್ಕೆ ತಂದಿದ್ದರು ಇಲ್ಲಿನ ನಾಗರೀಕರು. ಆದರೆ ಇವರು ಇಲ್ಲಿನ ಸಮಸ್ಯೆಗಳಿಗೂ ನಮಗೂ ಸಂಬಂಧವೇ ಇಲ್ಲವೆಂಬಂತೆ ವರ್ತಿಸುತ್ತಿದ್ದಾರಂತೆ. ಹೊಸಬರಿಗೂ ಸುಮ್ಮನೆ ಕೂರಲು ಸೈಟ್, ಗಿಫ್ಟ್ ಗಳು ಸಿಕ್ಕಿದ್ದು ಗುಟ್ಠಾಗಿಯೇನೂ ಇಲ್ಲ. ಕೋಟಿ ಕೋಟಿ ಅನುದಾನ ಸಿಗುತ್ತದೆ ಅಂತ ಚುನಾವಣಾ ಸಮಯದಲ್ಲಿ ಅಂಗೈಯಲ್ಲಿ ಅರಮನೆ ತೋರಿಸಿ ಇಲ್ಲಿನ ನಾಗರೀಕರನ್ನು ಯಾಮಾರಿಸಿಬಿಟ್ಟಿದ್ದಾರೆ ಇಲ್ಲಿನ ಜನಪ್ರತಿನಿಧಿಗಳು.

ಮಲ್ಲೂರು ಬದ್ರಿಯಾನಗರದ ಚರ್ಚ್ ಬಳಿಯ ಜನವಸತಿ ಪ್ರದೇಶದಲ್ಲಿ ಕಾಣುತ್ತಿರುವ ರಾಶಿ ರಾಶಿ ತ್ಯಾಜ್ಯ ಗ್ರಾಮ ಪಂಚಾಯತ್ ಅಭಿವೃದ್ಧಿಗೆ ಹಿಡಿದ ಕೈಗನ್ನಡಿ ಅಂದರೂ ತಪ್ಪಲ್ಲ. ಕಸ ವಿಲೇವಾರಿಗೆ ಪಂಚಾಯತ್ ಯಾವುದೇ ಕಾರ್ಯಕ್ರಮ ಯೋಜಿಸದ ಪರಿಣಾಮ ಇಂದು ಕಸದ ರಾಶಿ ಎಲ್ಲರನ್ನೂ ಕೈ ಬೀಸಿ ಕರೆಯುವಂತಿದೆ. ಜನವಸತಿ ಪ್ರದೇಶ, ಮೇಲಾಗಿ ಗೋಮಾಳ ಜಾಗದಲ್ಲಿ ಈ ರೀತಿ ಕಸದ ರಾಶಿ ಹಲವಾರು ಸಾಂಕ್ರಾಮಿಕ ರೋಗಕ್ಕೆ ಕಾರಣವಾಗುವ ಸಾಧ್ಯತೆಯಿದೆ. ದನ ಕರುಗಳು, ಪ್ರಾಣಿ ಪಕ್ಷಿಗಳ ಹೊಟ್ಟೆಗೆ ಈ ತ್ಯಾಜ್ಯ ಸೇರುತ್ತಿದೆ. ಮಳೆಯ ರಭಸಕ್ಕೆ ಇಲ್ಲಿನ ತ್ಯಾಜ್ಯಗಳು ಕುಡಿಯುವ ನೀರಿಗೂ ಸೇರಿಕೊಳ್ಳುತ್ತಿದೆ. ಮಕ್ಕಳ ಪಾಂಪರ್ಸ್ ಸಹಿತ ಅನೇಕ ಹಸಿ ಕಸಗಳು ಗುಡ್ಡೆಯಾಗಿರುವ ಕಾರಣ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಪಕ್ಕದಲ್ಲೇ ಆರೋಗ್ಯ ಕೇಂದ್ರ ಇದ್ದರೂ ಈ ಬಗ್ಗೆ ಮೇಲಾಧಿಕಾರಿಗಳಿಗೆ ಯಾವುದೇ ದೂರು ನೀಡದೆ ಗಡದ್ದಾಗಿ ನಿದ್ರೆಗೆ ಜಾರಿದೆ. ಪಂಚಾಯತ್ ಅಂತೂ ನಿದ್ರಾವಸ್ಥೆಯಲ್ಲಿದೆ.

ಈ ಹಿಂದೆ ಉದ್ದಬೆಟ್ಟು ಕ್ರಾಸ್ ಬಳಿ ದಡ್ಡಲಗುರಿ ಎಂಬ ಜಾಗದಲ್ಲಿ ಈ ಕಸಗಳು ಒಡಲು ಸೇರುತ್ತಿದ್ದವು. ಈಗ ಖಾಸಗಿಯವರು ಈ ಜಾಗದಲ್ಲಿ ಕಾಮಗಾರಿ ಆರಂಭಿಸಿ ತಡೆ ಬೇಲಿ ನಿರ್ಮಿಸಿದ್ದರಿಂದ ಕಸದ ರಾಶಿಗಳು ಜನವಸತಿ ಪ್ರದೇಶಕ್ಕೆ ಶಿಫ್ಟಾಗಿದೆ. ಪಂಚಾಯತ್ ಒಣ ಕಸ ಶೇಖರಿಸಲು ಕಂಜಿಲಗುಡ್ಡೆ ಬಳಿ ಕೇಂದ್ರ ತೆರೆದಿದೆ. ವಿಪರ್ಯಾಸವೆಂದರೆ ಘನ ತ್ಯಾಜ್ಯ ಘಟಕದ ಆರಂಭದ ಮುನ್ನವೇ ಇಲ್ಲಿನ ಪಂಚಾಯತ್ ವಾಹನ ಖರೀದಿಸಿತ್ತು. ಇದೀಗ ವಾಹನ ತುಕ್ಕು ಹಿಡಿದಂತಿದೆ. ಪಂಚಾಯತ್ ಬೇಜವಾಬ್ದಾರಿತನಕ್ಕೆ ಇದೊಂದು ಅತ್ಯುತ್ತಮ ಉದಾಹರಣೆ. ಆದರೆ ಹಸಿ ಕಸಕ್ಕೆ ಯಾವುದೇ ಕಾರ್ಯಕ್ರಮ ರೂಪಿಸದ ಪರಿಣಾಮ ಇಲ್ಲಿನ ನಾಗರಿಕರು ಹೈರಣಾಗಿದ್ದಾರೆ. ಪಕ್ಕದ ನೀರುಮಾರ್ಗ, ಉಳಾಯಿಬೆಟ್ಟು ಪಂಚಾಯತ್ ಹಸಿ ಕಸವನ್ನು ಪಚ್ಚನಾಡಿಗೆ ಶಿಫ್ಟ್ ಮಾಡುತ್ತಿದೆ. ಮಲ್ಲೂರಿನಿಂದ ಕೆಲವೇ ಕಿಲೋಮೀಟರ್ ದೂರದಲ್ಲಿರುವ ಪಚ್ಚನಾಡಿಗೆ ಇಲ್ಲಿನ ಹಸಿ ಕಸವನ್ನು ಶಿಫ್ಟ್ ಮಾಡುವುದು ದೊಡ್ಡ ಕೆಲಸವಲ್ಲ. ಆದರೆ ಇಲ್ಲಿನ ಜನಪ್ರತಿನಿಧಿಗಳಿಗೆ ಅದು ಬೇಕಾಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಪೋಸು ಕೊಡಲಷ್ಟೇ ಸೀಮಿತ ರಾಗಿದ್ದಾರೆ. ಯಾರಿಗೇಳೋಣ ನಮ್ಮ ಪ್ರಾಬ್ಲಂ ಎಂದು ಇಲ್ಲಿನ ನಾಗರಿಕರು ಪಂಚಾಯತ್ ಗೆ ಹಿಡಿಶಾಪ ಹಾಕುತ್ತಿದ್ದಾರೆ. ಕಸದ ಸಮಸ್ಯೆ ಬಗ್ಗೆ ಇಲ್ಲಿನ ನಾಗರಿಕರು ಕೆಲವು ತಿಂಗಳ ಹಿಂದೆ ಪಂಚಾಯತ್ ಗೆ ಮನವಿ ಪತ್ರ ನೀಡಿದರೂ ಈವರೆಗೂ ರೆಸ್ಪಾನ್ಸ್ ಇಲ್ಲ.
ಇಲ್ಲಿನ ಪಂಚಾಯತ್ ಅಧ್ಯಕ್ಷೆ ಉಪ್ಪಿನಂಗಡಿ ಮೂಲದವರು. ವಾರಕ್ಕೆ ಒಂದು ಬಾರಿ ಮಾತ್ರ ಪಂಚಾಯತ್ ಗೆ ಬರುತ್ತಿದ್ದಾರೆ. ಇನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಬೇರೆ ಕಡೆ ಪರ್ಮನೆಂಟ್ ಚಾರ್ಜ್ ಇರುವುದರಿಂದ ಇಲ್ಲಿಗೆ ವಾರಕ್ಕೆ ಎರಡು ದಿನ ಬಂದರೂ ಪುಣ್ಯ. ಇಲ್ಲಿ ಯಾವುದೇ ಸಮಸ್ಯೆ ಬಗ್ಗೆ ನಾಗರೀಕರು ಧ್ವನಿ ಎತ್ತಿದ್ದರೆ ಪಂಚಾಯತ್ ಗೆ ಮನವಿ ನೀಡಿ ಎಂದು ಸದಸ್ಯರು ಹೇಳುತ್ತಾರಂತೆ. ಆದರೆ ಪಂಚಾಯತ್ ನಲ್ಲಿ ಯಾರೂ ಕೈಗೆ ಸಿಗಲ್ಲ. ಒಂದು ರೀತಿ ಯಾರ ಸಮಸ್ಯೆಗೂ ಸ್ಪಂದನೆ ಸಿಗುತ್ತಿಲ್ಲ. ಪಂಚಾಯತ್ ಅಧ್ಯಕ್ಷೆ ಆಟಕ್ಕುಂಟು ಲೆಕ್ಕಕ್ಕಿಲ್ಲ. ಎಲ್ಲಾ ಸಮಸ್ಯೆಗಳಿಗೂ ಅಧಿಕಾರಿಗಳನ್ನೇ ದೂರಿ ಪ್ರಯೋಜನವಿಲ್ಲ. ಜನಪ್ರತಿನಿಧಿಗಳಿಗೂ ಗ್ರಾಮದ ಸೇವೆ ಮಾಡುವ ಕಿಂಚಿತ್ತೂ ಮನಸ್ಸಿರಬೇಕು. ಇಲ್ಲಿನ ಪಿಡಬ್ಲ್ಯೂಡಿ ರಸ್ತೆ ಎರಡು ವರ್ಷಗಳಿಂದ ಹೊಂಡ ಗುಂಡಿಗಳಿಂದ ಇಲ್ಲಿನ ಜನ ಹೈರಣಾಗಿದ್ದರೆ ಪಂಚಾಯತ್ ಸದಸ್ಯರು, ನಮಗೂ ಇದಕ್ಕೂ ಸಂಬಂಧ ಇಲ್ಲ ಅನ್ನುವ ರೀತಿ ವರ್ತಿಸಿದ್ದರು. ಕನಿಷ್ಠ ಪಕ್ಷ ಪಂಚಾಯತ್ ಜನಪ್ರತಿನಿಧಿಗಳ ನಿಯೋಗ ಶಾಸಕರನ್ನು ಭೇಟಿಯಾಗಿ ಮನವಿ ನೀಡಲು ಇವರಿಂದ ಸಾಧ್ಯವಾಗಿಲ್ಲ. ಇದೀಗ ರಸ್ತೆಗೆ ಅನುದಾನ ಮೀಸಲಿಟ್ಟರೂ, ಅದರ ಶ್ರೇಯ ನಾಗರೀಕರಿಗೆ ಮಾತ್ರ. ಇಲ್ಲಿನ ಜನಪ್ರತಿನಿಧಿಗಲ್ಲ. ಜಲಜೀವನ್ , ಸಾರ್ವಜನಿಕ ಆಟದ ಮೈದಾನದ ಬಗೆಗಿನ ಸಮಸ್ಯೆ ಬಗ್ಗೆ ಕನಿಷ್ಠ ಪಕ್ಷ ಮೇಲಾಧಿಕಾರಿಗಳಿಗೂ ಪತ್ರ ಬರೆಯಲು ಈ ಪಂಚಾಯತ್ ನಿಂದ ಸಾಧ್ಯವಾಗಿಲ್ಲ ಅನ್ನುವುದು ದುರದೃಷ್ಟಕರ. ಅಭಿವೃದ್ಧಿಯಂತೂ ಮರೀಚಿಕೆ. ಕನಿಷ್ಠ ಪಕ್ಷ ಇಲ್ಲಿನ ಬಸ್ ನಿಲ್ದಾಣಕ್ಕೆ ಪೈಂಟ್ ಮಾಡಲು ಪಂಚಾಯತ್ ಗೆ ಸಾಧ್ಯವಾಗಿಲ್ಲ. ಗ್ರಾಮಸಭೆಯಲ್ಲಿ ಜನರು ಬೊಬ್ಬೆ ಹಾಕಿದ್ದೇ ಬಂತು, ಪಂಚಾಯತ್ ನವರು ಮಾತ್ರ ಗಡದ್ದಾಗಿ ನಿದ್ರೆಗೆ ಜಾರುವುದು. ಆಡಳಿತ ಪಕ್ಷದ ಜೊತೆಗೆ ಇಲ್ಲಿನ ವಿರೋಧ ಪಕ್ಷದ ಸದಸ್ಯರು ಕೂಡ ನಮ್ಮನ್ನು ಯಾಕೆ ಜನರು ಆರಿಸಿದ್ದಾರೆ ಅನ್ನುವ ಪರಿಕಲ್ಪನೆ ಇಲ್ಲದೆ ನಿದ್ರಾವಸ್ತೆಯಲ್ಲಿದ್ದಾರೆ.

ಇನ್ನಾದರೂ ಗ್ರಾಮ ಪಂಚಾಯತ್ ನಿದ್ರೆಯಿಂದ ಎದ್ದೇಳಲಿ. ನಾಲ್ಕೈದು ತಿಂಗಳು ಮಾತ್ರ ಅಧಿಕಾರವಿದೆ. ಅಧಿಕಾರದ ಕೊನೆಯ ಸಮಯದಲ್ಲಾದರೂ ಜನರ ಸಮಸ್ಯೆಗಳಿಗೆ ಸ್ಪಂದಿಸಲಿ. ಇಲ್ಲಿನ ಕಸದ ರಾಶಿಗೆ ಶಾಶ್ವತ ಮುಕ್ತಿ ನೀಡಲಿ. ಜಂಕ್ಷನ್ ಗಳಲ್ಲಿ ಕಸದ ತೊಟ್ಟಿ ನಿರ್ಮಿಸಿ ವಿಲೇವಾರಿ ಮಾಡುವ ಕೆಲಸ ಮಾಡಲಿ. ಕನಿಷ್ಠ ಪಕ್ಷ ಈ ಕೆಲಸ ಮಾಡಿದರೆ ನೀವು ಜನಪ್ರತಿನಿಧಿಯಾದುದಕ್ಕಾದರೂ ಸಾರ್ಥಕ.
