ಕೃತ್ಯ ಭೇದಿಸಿದ ಪೊಲೀಸರು; ಐವರು ಅಂದರ್
ಆಗಸ್ಟ್ 13 ರಂದು ಮಂಗಳೂರಿನಲ್ಲಿ ನಡೆದಿದ್ದ ಆಭರಣ ವ್ಯಾಪಾರಿಯ ಅಪಹರಣ ಮತ್ತು ದರೋಡೆ ಪ್ರಕರಣ ಭೇದಿಸುವಲ್ಲಿ ಕೊನೆಗೂ ಪೊಲೀಸರು ಯಶಸ್ವಿಯಾಗಿದ್ದಾರೆ.
ಪೊಲೀಸರ ಪ್ರಕಾರ, ಆಗಸ್ಟ್ 13 ರಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ, ದೂರುದಾರ ಹರಿ ಭಾನುದಾಸ್ ಥೋರಟ್, ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದ ಬಳಿಯ ಕೈರಾಲಿ ಹೋಟೆಲ್ ಬಳಿ ಆಟೋಗಾಗಿ ಕಾಯುತ್ತಿದ್ದರು. ಆ ಸಮಯದಲ್ಲಿ, ಆರು ಅಪರಿಚಿತ ವ್ಯಕ್ತಿಗಳು ಬಿಳಿ ಇನ್ನೋವಾ ಕಾರಿನಲ್ಲಿ ಆಗಮಿಸಿ, ತಮ್ಮನ್ನು ಕಸ್ಟಮ್ಸ್ ಅಧಿಕಾರಿಗಳೆಂದು ಪರಿಚಯಿಸಿಕೊಂಡು, ನಿಮ್ಮ ವಿರುದ್ಧ ಮಾಹಿತಿ ಇದೆ, ವಿಚಾರಣೆ ಮಾಡಬೇಕು ಎಂದು ಹೇಳಿದ್ದರು. ಉಡುಪಿ ಹೆದ್ದಾರಿಯ ಮೂಲಕ ಥೋರಟ್ ಅವರನ್ನು ಬಲವಂತವಾಗಿ ತಮ್ಮ ವಾಹನದಲ್ಲಿ ಕರೆದೊಯ್ದಿದ್ದರು.
ಆ ತಂಡವು ಅವರನ್ನು ಉತ್ತರ ಕನ್ನಡ ಜಿಲ್ಲೆಯ ಕುಮಟಾಕ್ಕೆ ಕರೆದೊಯ್ದು, ಅವರನ್ನು ಬೆದರಿಸಿ ಸುಮಾರು 35,00,000 ರೂ. ಮೌಲ್ಯದ 350 ಗ್ರಾಂ ತೂಕದ ಚಿನ್ನದ ಗಟ್ಟಿಯನ್ನು ಕಸಿದುಕೊಂಡಿತ್ತು. ನಂತರ, ಅವರನ್ನು ಶಿರಸಿ ತಾಲ್ಲೂಕಿನ ಅಂತರವಳ್ಳಿ ಬಳಿ ಬಿಟ್ಟು ಪರಾರಿಯಾಗಿದ್ದರು.

ಥೋರಟ್ ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಝೀರೋ ಎಫ್.ಐ.ಆರ್ ರಡಿಯಲ್ಲಿ ಪ್ರಕರಣ ದಾಖಲಿಸಿ ಸರಹದ್ದಿನ ಆಧಾರದ ಮೇಲೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿತ್ತು. ಅಲ್ಲಿ ಅಪರಾಧ ಸಂಖ್ಯೆ 171/2025 ರಲ್ಲಿ ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ನ ಐಪಿಸಿ ಸೆಕ್ಷನ್ 310(2), 137(2), ಮತ್ತು 204 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣವನ್ನು ಭೇದಿಸಲು, ಪೊಲೀಸ್ ಆಯುಕ್ತರು ಸಿಸಿಬಿ ಅಧಿಕಾರಿಗಳು ಮತ್ತು ಕೇಂದ್ರ ಉಪವಿಭಾಗದ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತಂಡಗಳನ್ನು ರಚಿಸಿತ್ತು. ತಾಂತ್ರಿಕ ಪುರಾವೆಗಳು ಮತ್ತು ಇತರ ಸುಳಿವುಗಳ ಆಧಾರದ ಮೇಲೆ, ಪೊಲೀಸರು ಐದು ಆರೋಪಿಗಳನ್ನು ಮಹಾರಾಷ್ಟ್ರದ ಪುಣೆಯಲ್ಲಿ ಪತ್ತೆಹಚ್ಚಿ ಆಗಸ್ಟ್ 18 ರಂದು ಬಂಧಿಸಿದರು.
ವಿಚಾರಣೆಯ ಸಮಯದಲ್ಲಿ, ಆರೋಪಿಗಳು ಅಪರಾಧವನ್ನು ಒಪ್ಪಿಕೊಂಡಿದ್ದು ಮತ್ತು ಕದ್ದ ಚಿನ್ನವನ್ನು ಮಾರಾಟ ಮಾಡಲಾಗಿದೆ ಎಂದು ಹೇಳಿಕೊಂಡಿದ್ದಾರೆ. ಶಂಕಿತರನ್ನು ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಹೆಚ್ಚಿನ ತನಿಖೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದರೋಡೆ ಮಾಡಿದ ಚಿನ್ನವನ್ನು ಮರುಪಡೆಯಲು ಮತ್ತು ಅಪರಾಧಕ್ಕೆ ಬಳಸಲಾದ ವಾಹನವನ್ನು ವಶಪಡಿಸಿಕೊಳ್ಳಲು ಪ್ರಯತ್ನಗಳು ನಡೆಯುತ್ತಿವೆ.
