EXCLUSIVE ಮಂಗಳೂರು: ಬ್ಲಡ್ ದಂಧೆ ಮಹಾಮೋಸ

ಕರಾವಳಿ

ಮಂತ್ರಿಗಳೇ ‘ರಕ್ತ’ದಲ್ಲೂ ವ್ಯಾಪಾರವೇ.?

ರಕ್ತದಾನ ಮಹಾದಾನ ಅನ್ನುತ್ತೇವೆ. ರಕ್ತದಾನಕ್ಕಿಂತ ಇನ್ನೊಂದು ದೊಡ್ಡ ಇಲ್ಲ. ರಕ್ತದಾನ ಅನ್ನುವುದು ಇನ್ನೊಂದು ಜೀವವನ್ನು ಉಳಿಸುವ ಮಹತ್ಕಾರ್ಯ. ಆದರೆ ನಾವು ಕೊಟ್ಟ ರಕ್ತವನ್ನೇ ದಂಧೆಯಾಗಿ ಪರಿವರ್ತಿಸುವ ಜಾಲ ಮಂಗಳೂರಿನಲ್ಲಿ ಬೃಹದಾಕಾರವಾಗಿ ಬೆಳೆದು ನಿಂತಿದೆ ಅನ್ನುವ ಸ್ಪೋಟಕ ವಿಚಾರಗಳು ಹೊರಬರುತ್ತಿದೆ. ಮೆಡಿಕಲ್ ಮಾಫಿಯಾ, ಎಜ್ಯುಕೇಶನ್ ಮಾಫಿಯಾ ರೀತಿ ಬ್ಲಡ್ ಮಾಫಿಯಾ ದಂಧೆ ನಗರದಲ್ಲಿ ಭರ್ಜರಿಯಾಗಿ ಕಾರ್ಯಾಚರಿಸುತ್ತಿದೆ. ಸ್ಪೆಷಲ್ ನ್ಯೂಸ್ ಮೀಡಿಯಾ ಈ ಬಗ್ಗೆ ತನಿಖಾ ವರದಿಗೆ ಇಳಿದಾಗ ಬೆಚ್ಚಿಬೀಳಿಸುವ ಸಂಗತಿ ಒಂದೊಂದಾಗಿ ಹೊರಬರುತ್ತಿದೆ. ಅಷ್ಟಕ್ಕೂ ಈ ದಂಧೆಯ ಕಿಂಗ್ ಪಿನ್ ಗಳು ಯಾರು? ನಾವು ಕೊಟ್ಟ ರಕ್ತವನ್ನು ದುಬಾರಿ ಬೆಲೆಗೆ ಮಾರೋರು, ವಿದೇಶಕ್ಕೂ ಎಕ್ಸ್ ಪೋರ್ಟ್ ಮಾಡಿ ಲಕ್ಷಾಂತರ ಸಂಪಾದಿಸುವವರು ಯಾರು? ಒಂದೊಂದು ಆಸ್ಪತ್ರೆಯ ರಕ್ತನಿಧಿಗಳಲ್ಲಿ ಪರಿಷ್ಕರಣ ಶುಲ್ಕ ವಿಭಿನ್ನವಾಗಿರಲು ಕಾರಣ ಏನು? ಬ್ಲಡ್ ಹೊರದೇಶಕ್ಕೆ ಮಾರಲು ಶಿಬಿರವನ್ನು ಆಯೋಜಿಸುವವರು ಯಾರು? ಖಾಸಗಿ ಆಸ್ಪತ್ರೆಗಳು, ಸರಕಾರದ ಪಾತ್ರ ಎಷ್ಟಿದೆ? ಈ ಬಗ್ಗೆ ಬೆಳಕು ಚೆಲ್ಲುವ ವರದಿ ನಿಮ್ಮ ಮುಂದೆ.

ರಕ್ತ ಎಂಬುದು ಮನುಷ್ಯ ಜೀವಕ್ಕೆ ಅತಿ ಪ್ರಾಮುಖ್ಯ ರೋಗಿಗಳಿಗೆ ರಕ್ತ ಬೇಕಾದರೆ ರಕ್ತಕ್ಕಾಗಿ ಪರಿತಪಿಸುವ ಕಾಲವೊಂದಿತ್ತು. ರಕ್ತದಾನದ ಮಹತ್ವವನ್ನು ಅರಿಯದ ಮಂದಿ ರಕ್ತ ನೀಡಲು ಮುಂದೆ ಬರದ ಕಾಲವದು. ಆದರೆ ಇಂದು ಹಾಗಿಲ್ಲ. ರಕ್ತದಾನದ ಮಹತ್ವವನ್ನು ಜನತೆ ಚೆನ್ನಾಗಿ ಅರಿತಿದ್ದಾರೆ. ರಕ್ತ ನೀಡಲು ತಾಮುಂದು ನಾಮುಂದು ಎಂದು ಜನ ಮುಂದೆ ಬರುತ್ತಿದ್ದಾರೆ. ರಕ್ತ ಸಿಗದೇ ರೋಗಿಗಳು ಪ್ರಾಣಬಿಟ್ಟ ಉದಾಹರಣೆಗಳು ಈಗಿಲ್ಲ. ದಾನಿಗಳು, ಡೋನರ್ಸ್ ಸಂಸ್ಥೆಗಳು ರಾತ್ರಿ ಹಗಲು ನಿರಂತರ ರಕ್ತ ಪೂರೈಕೆ ಮಾಡುವ ಸೇವೆ ಮಾಡುತ್ತಾರೆ. ಹಲವಾರು ಸಾಮಾಜಿಕ, ಧಾರ್ಮಿಕ ಸಂಘಟನೆಗಳು ಜನರಲ್ಲಿ ರಕ್ತದಾನದ ಅರಿವು ಮೂಡಿಸಿ, ಹಳ್ಳಿ ಗಲ್ಲಿಗಳಲ್ಲಿ ಸಂಘಸಂಸ್ಥೆಗಳ ವತಿಯಿಂದ ನಿರಂತರ ರಕ್ತದಾನ ಶಿಬಿರಗಳು ಜರುಗುತ್ತಿವೆ. ಜನಸಾಮಾನ್ಯರು ಕೂಡ ಯಾವುದೇ ಪ್ರತಿಫಲಾಪೇಕ್ಷೆ ಬಯಸದೆ ಜೀವ ಉಳಿಸುವ ಮಹತ್ಕಾರ್ಯ ಎಂದು ತಿಳಿದು ರಕ್ತದಾನ ಮಾಡಿ ಧನ್ಯರಾಗುತ್ತಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ
ಹಲವು ಸಂಘ ಸಂಸ್ಥೆಗಳು ರಕ್ತದಾನದ ಬಗ್ಗೆ ಜಾಗ್ರತಗೊಂಡು, ಶಿಬಿರಗಳನ್ನು ಆಯೋಜಿಸಿ ರಕ್ತ ಶೇಖರಿಸಿ ಆಸ್ಪತ್ರೆಗಳ ಬ್ಲಡ್ ಬ್ಯಾಂಕ್ ಗಳಿಗೆ ಪೂರೈಸಿ ರೋಗಿಗಳಿಗೆ ರಕ್ತದ ಕೊರತೆಯನ್ನು ನೀಗಿಸುತ್ತಾರೆ. ಬ್ಲಡ್ ಡೋನರ್ಸ್ ಮಂಗಳೂರು, ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ, ಎಮರ್ಜೆನ್ಸಿ ಬ್ಲಡ್ ಹೆಲ್ಪ್ ಲೈನ್, ಬ್ಲಡ್ ಹೆಲ್ತ್ ಕೇರ್, SKSSF, SSF, ಜಮಾಅತೆ ಇಸ್ಲಾಮಿ ಹಿಂದ್ ಮೊದಲಾದ ಸಂಘಸಂಸ್ಥೆಗಳು, ವಿವಿಧ ಸಾಮಾಜಿಕ ಸಂಘಟನೆಗಳು, ಕ್ರೀಡಾ ಸಂಘಟನೆಗಳು, ವಿವಿಧ ರಾಜಕೀಯ ಪಕ್ಷಗಳು ಯುವಕರಲ್ಲಿ ರಕ್ತದಾನದ ಅರಿವು ಮೂಡಿಸಿ ಗ್ರಾಮ ಮಟ್ಟದಲ್ಲಿ ರಕ್ತದಾನ ಶಿಬಿರಗಳನ್ನು ನಡೆಸಿ ರಕ್ತ ಸಂಗ್ರಹಿಸುವ ಕಾರ್ಯ ಮಾಡುತ್ತಿದೆ. ಜಾತಿ -ಧರ್ಮದ ಎಲ್ಲೆಗಳನ್ನು ಮೀರಿ ರಕ್ತದಾನ ಶಿಬಿರಗಳು ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ರಕ್ತದಾನ ಶಿಬಿರಗಳಲ್ಲಿ ಶೇಖರಣೆಗೊಂಡ ರಕ್ತಗಳನ್ನು ಫಾದರ್ ಮುಲ್ಲರ್ ಕಂಕನಾಡಿ, ವೆನ್ಲಾಕ್, ಕೆ.ಎಂ.ಸಿ ಅತ್ತಾವರ, ಕೆ.ಎಂ.ಸಿ ಜ್ಯೋತಿ, ಲೇಡಿಗೋಶನ್, ಯೆನಪೋಯ ದೇರಳಕಟ್ಟೆ, ಕೆ.ಎಸ್. ಹೆಗ್ಡೆ ದೇರಳಕಟ್ಟೆ ಮುಂತಾದ ಜಿಲ್ಲೆಯ ಪ್ರಮುಖ ಆಸ್ಪತ್ರೆಗಳ ಬ್ಲಡ್ ಬ್ಯಾಂಕುಗಳಲ್ಲಿ ಶೇಖರಿಸಿಡಲಾಗುತ್ತಿದೆ.

ಸುಲಿಗೆ ಆರಂಭವಾಗುವುದೇ ಇಲ್ಲಿಂದ

ರಕ್ತದಾನ ಶಿಬಿರಗಳಲ್ಲಿ ರಕ್ತ ಶೇಖರಣೆ ಮಾಡಿ ಇಲ್ಲಿನ ಮೆಡಿಕಲ್ ಕಾಲೇಜುಗಳಿಗೆ ನೀಡಿದರೆ ಆಸ್ಪತ್ರೆಯವರು ಇದನ್ನು ದಂಧೆಯಾಗಿ ಪರಿವರ್ತಿಸುವಲ್ಲಿ ಉಪಯೋಗಿಸುತ್ತಾರೆ ಎಂಬುದೇ ದುರಂತದ ವಿಷಯ. ಶೇಖರಿಸಿದ ರಕ್ತವನ್ನು ಶುಧ್ದೀಕರಿಸಲು ಬೇಕಾದ ಮೊತ್ತದಲ್ಲಿ ದಂಧೆ ನಡೆಸುತ್ತಿರುವ ಆಸ್ಪತ್ರೆಗಳು ಇಂದು ರೋಗಿಗಳನ್ನು ದೋಚುತ್ತಿದೆ. ರಕ್ತವನ್ನು ಮಾನವೀಯತೆಯಿಂದ ದಾನ ಮಾಡಿದರೂ ಅದು ರೋಗಿಗಳಿಗೆ ಈಗ ಸಿಗದಂತಹಾ ಪರಿಸ್ಥಿತಿ ಜಿಲ್ಲೆಯಲ್ಲಿದೆ. ದಾನವಾಗಿ ಕೊಟ್ಟ ರಕ್ತಕ್ಕೂ ಸಾವಿರಾರು ರುಪಾಯಿಗಳನ್ನು ಪಾವತಿಸುವಂತಹಾ ಪರಿಸ್ಥಿತಿ ಇದೆ. ಇದು ಒಂದು ರೀತಿಯಲ್ಲಿ ದರೋಡೆ ಅನ್ನದೇ ಬೇರೆ ವಿಧಿಯಿಲ್ಲ.

ವಿವಿಧ ಆಸ್ಪತ್ರೆಗಳಲ್ಲಿ ವಿವಿಧ ರೇಟ್

ಇಂದು ಮಂಗಳೂರಿನ ಯಾವುದೋ ಒಂದು ಹೋಟೆಲಿಗೆ ಹೋಗಿ ನೋಡಿ. ಒಂದೇ ತಿಂಡಿ ತಿನಿಸುಗಳಿಗೆ ಬೇರೆ ಬೇರೆ ಹೋಟೆಲುಗಳಲ್ಲಿ ಬೇರೆ ಬೇರೆ ದರವಿದೆ. ಅದೇ ರೀತಿ ನಾವು ಉಚಿತವಾಗಿ ಕೊಟ್ಟ ರಕ್ತ ಪಡೆಯಬೇಕಾದರೆ ವಿವಿಧ ಆಸ್ಪತ್ರೆಗಳ ಬ್ಲಡ್ ಬ್ಯಾಂಕುಗಳಲ್ಲಿ ಬೇರೆ ಬೇರೆ ತರಹದ ರೇಟುಗಳಿವೆ. ರಕ್ತ ಒಂದೇ. ಆದರೆ ಆಸ್ಪತ್ರೆಗಳಿಗೆ ಅನುಗುಣವಾಗಿ ರೇಟು ಫಿಕ್ಸ್. ಸರಕಾರಿ ವೆನ್ಲಾಕ್ ಆಸ್ಪತ್ರೆಯ ಬ್ಲಡ್ ಬ್ಯಾಂಕುಗಳಲ್ಲಿ ರಕ್ತದ ದರ 300 ರೂಪಾಯಿ ಆದರೆ, ಕೆಎಂಸಿ ಯಲ್ಲಿ 1200 ರೂಪಾಯಿ, ಕೆ.ಎಸ್. ಹೆಗ್ಡೆಯಲ್ಲಿ 950 ರೂಪಾಯಿ, ಯೆನಪೋಯದಲ್ಲಿ 1200 ರೂಪಾಯಿ ಇದ್ದರೆ, ರೆಡ್ ಕ್ರಾಸ್ ನಲ್ಲಿ 950 ರೂಪಾಯಿ, ಇನ್ನು ಫಾದರ್ ಮುಲ್ಲರ್ ಕಂಕನಾಡಿಯಲ್ಲಿ ಬರೋಬ್ಬರಿ 2000 ರೂಪಾಯಿ, ಜನಪ್ರಿಯ ಆಸ್ಪತ್ರೆಯಲ್ಲೂ ಅದೇ 2000 ರೂಪಾಯಿ ಇದೆ. ನಾವು ಉಚಿತವಾಗಿ ಕೊಟ್ಟ ರಕ್ತ ಮರಳಿ ಪಡೆಯಬೇಕಾದರೆ ಕೆಲವೊಂದು ಆಸ್ಪತ್ರೆಗಳ ಬ್ಲಡ್ ಬ್ಯಾಂಕ್ ದರವಿದು. ಇದು ಅನ್ಯಾಯವಲ್ಲವೇ?

ಕೆಲವೊಂದು ಮೂಲಗಳ ಪ್ರಕಾರ ಒಂದು ಯೂನಿಟ್ ರಕ್ತದ ಬೆಲೆ ಗರಿಷ್ಠ 1999 ರೂಪಾಯಿಗಳನ್ನು ಸರಕಾರವೇ ನಿಗದಿಪಡಿಸಿದೆಯಂತೆ. ಅದು ರಕ್ತದ ಕ್ಲೀನಿಂಗ್ ಮತ್ತು ಪರೀಕ್ಷೆ ಶೇಖರಣಾ ಶುಲ್ಕ ಒಳಗೊಂಡಿರುತ್ತದೆಯಂತೆ. ಪ್ರಶ್ನೆ ಇದಲ್ಲ. ಸರಕಾರವೇ 2000 ರೂಪಾಯಿ ನಿಗದಿಪಡಿಸಿದೆ ಅಂದಿಟ್ಟುಕೊಳ್ಳಿ. ವಿವಿಧ ಆಸ್ಪತ್ರೆಗಳಲ್ಲಿ ದರಗಳಲ್ಲಿ ಏರುಪೇರಾಗಲು ಕಾರಣವೇನು? ಎಲ್ಲಾ ಆಸ್ಪತ್ರೆಗಳಲ್ಲಿ ಏಕರೂಪದ ದರ ಏಕಿಲ್ಲ? ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಬ್ಲಡ್ ಬ್ಯಾಂಕು ರಕ್ತಕ್ಕೆ ಇಷ್ಟೊಂದು ಹೆಚ್ಚುವರಿ ದರ ಯಾಕೆ ವಸೂಲಿ ಮಾಡುತ್ತೀರಿ? ಬೇರೆ ಆಸ್ಪತ್ರೆಗಳಲ್ಲಿ ಕಡಿಮೆ ದರ ಇದೆಯಲ್ಲ ಎಂದು ರೋಗಿಗಳು ಪ್ರಶ್ನೆಗೈದರೆ, ನಮ್ಮದು ಶುದ್ಧ ರಕ್ತವಂತೆ! ಬೇರೆಯವರದ್ದು ಕಲಬೆರಕೆ ರಕ್ತವಂತೆ! ಅನ್ನುವ ಉತ್ತರ ಬರುತ್ತದೆ. ರಕ್ತದಲ್ಲೂ ಇಂತಹ ವಿಂಗಡನೆಗಳು ಇದೆಯಾ? ಅಯ್ಯೋ ದೇವಾ..!

ವಿದೇಶಕ್ಕೆ ದುಬಾರಿ ಬೆಲೆಗೆ ಮಾರಾಟ.!

ಅಬ್ಬಬ್ಬಾ.. ನಾವು ಫ್ರೀಯಾಗಿ ಕೊಟ್ಟ ರಕ್ತವನ್ನು ವಿದೇಶಕ್ಕೆ ದುಬಾರಿ ಬೆಲೆಗೆ ಮಾರಾಟ ಮಾಡುವ ಜಾಲವೂ ಇದೆ ಅನ್ನುವ ಭಯಾನಕ ಸತ್ಯಗಳು ಹೊರಬರುತ್ತಿದೆ. ಕೆಲವೊಂದು ಆಸ್ಪತ್ರೆಗಳು ಬ್ಲಡ್ ದಂಧೆಯ ಮೂಲಕ ತಿಂಗಳಿಗೆ ಕನಿಷ್ಠ 25 ಲಕ್ಷ ರೂಪಾಯಿ ಸಂಗ್ರಹಿಸಲಾಗುತ್ತದೆಯಂತೆ. ಮಂಗಳೂರಿನಲ್ಲಿ ಕಾರ್ಯಾಚರಿಸುವ ಪ್ರಮುಖ ಬ್ಲಡ್ ಬ್ಯಾಂಕು ಸಂಸ್ಥೆಯೊಂದು ರಕ್ತದಲ್ಲಿರುವ ಪ್ಲಾಸ್ಮಾ ಕಣಗಳನ್ನು ಶುದ್ದೀಕರಿಸಿ ಕಾಸ್ಮೋಟಿಕ್ ದಂಧೆಗೆ ಬಳಸುತ್ತಿದೆ ಅನ್ನುವ ಆರೋಪ ದೊಡ್ಡ ಪ್ರಮಾಣದಲ್ಲಿ ಕೇಳಿ ಬರುತ್ತಿದೆ. ವಿದೇಶಕ್ಕೆ ದುಬಾರಿ ಬೆಲೆಗೆ ಸಫ್ಲೈ ಮಾಡುತ್ತಾರೆ ಅನ್ನುವ ಮಾತುಗಳಿವೆ. ಈ ಸಂಸ್ಥೆಗೆ ದೀರ್ಘ ವರ್ಷದ ಇತಿಹಾಸವಿದೆ.

ರಕ್ತದಲ್ಲಿ ಅನೇಕ ವರ್ಗೀಕರಣ ಇದೆ. ಪ್ಲಾಸ್ಮ, ಪ್ಲೇಟೇಟ್, ಬಿ ಆರ್ ಎಂಸಿ ಹೀಗೆ ಅನೇಕ ವಿಧಗಳಿವೆ. ಅದರಲ್ಲಿ ಪ್ಲಾಸ್ಮ ರಕ್ತ ದೀರ್ಘ ಕಾಲದವರೆಗೆ ಬಾಳಿಕೆ ಬರುತ್ತಿದೆ. ಬ್ಲಡ್ ಬ್ಯಾಂಕಿನ ಸಂಸ್ಥೆಯೊಂದು ಪ್ಲಾಸ್ಮ ರಕ್ತವನ್ನು ವಿದೇಶಕ್ಕೆ ರಫ್ತು ಮಾಡಲು ಸಿಕ್ಕ ಸಿಕ್ಕ ಕಡೆ ರಕ್ತದಾನ ಶಿಬಿರ ನಡೆಸುತ್ತಿದೆಯಂತೆ. ಕನಿಷ್ಠವೆಂದರೂ ತಿಂಗಳಿಗೆ 25 ಲಕ್ಷ ರೂಪಾಯಿ ಕಮಾಯಿ ಮಾಡುತ್ತಾರಂತೆ. ಈ ಪ್ಲಾಸ್ಮ ರಕ್ತ ಒಂದು ವರ್ಷಗಳ ಕಾಲ ಶೇಖರಿಸಿಡಬಹುದು. ಈ ರಕ್ತದ ಅವಶ್ಯಕತೆ ಇರುವ ರೋಗಿಗಳು ಬಹಳ ಕಡಿಮೆ. ಕಾಸ್ಮೋಟಿಕ್ ಕಂಪೆನಿಗೆ ಈ ರಕ್ತವನ್ನು ಕೆಲವು ಬ್ಲಡ್ ಬ್ಯಾಂಕುಗಳು ದುಬಾರಿ ಬೆಲೆಗೆ ಮಾರಾಟ ಮಾಡುತ್ತದೆ.

ಇನ್ನು ಕೆಲವೊಂದು ಆಸ್ಪತ್ರೆಗಳು ರಕ್ತಕ್ಕಾಗಿ ವೆನ್ಲಾಕ್ ನಂತಹ ಕಡಿಮೆ ದರವಿರುವ ಬ್ಲಡ್ ಬ್ಯಾಂಕಿಗೆ ಶಿಫಾರಸ್ಸು ಮಾಡುವುದಿಲ್ಲ. ಹೆಚ್ಚಿನ ದರವಿರುವ ಬ್ಲಡ್ ಬ್ಯಾಂಕಿಗೆ ಶಿಫಾರಸು ಮಾಡುತ್ತದೆ. ಇದು ಖಾಸಗಿ ಆಸ್ಪತ್ರೆಗಳ ದಂಧೆಯ ಸ್ವರೂಪದ ಇನ್ನೊಂದು ಮುಖ.

ರಕ್ತದಾನ ಶಿಬಿರಗಳು ಯಾವ ಪುರುಷಾರ್ಥಕ್ಕೆ..?

ಇಂದು ಹಳ್ಳಿ ಗಲ್ಲಿಗಳಲ್ಲಿ ರಕ್ತದಾನ ಶಿಬಿರದ್ದೇ ಅಬ್ಬರ. ವಿವಿಧ ಸಂಘ ಸಂಸ್ಥೆಗಳು ವಾರ್ಷಿಕೋತ್ಸವ, ಇನ್ನಿತರ ಕಾರ್ಯಕ್ರಮದಲ್ಲಿ ರಕ್ತದಾನ ಶಿಬಿರವನ್ನು ತಪ್ಪದೇ ಆಯೋಜಿಸುತ್ತಾರೆ. ಮಸೀದಿ -ಮಂದಿರ-ಚರ್ಚುಗಳು, ಅದರ ಅಧೀನ ಸಂಸ್ಥೆಗಳು ರಕ್ತದಾನ ಶಿಬಿರಗಳನ್ನು ಆಯೋಜಿಸಿ ಧನ್ಯರಾಗುತ್ತಾರೆ. 50 ರಿಂದ 100 ಬಾಟ್ಲ್ ರಕ್ತ ಸಂಗ್ರಹಿಸಿ ವಿವಿಧ ಬ್ಲಡ್ ಬ್ಯಾಂಕುಗಳಲ್ಲಿ ಶೇಖರಣೆಯಾಗುತ್ತದೆ. ರಕ್ತದಾನ ಪುಣ್ಯ ಕಾರ್ಯ ಎಂದರಿತು ಕೆಲವೊಂದು ಮೃತರ ಹೆಸರಿನಲ್ಲೂ ರಕ್ತದಾನ ಶಿಬಿರಗಳು ನಡೆಯುತ್ತದೆ. ಹೀಗೆ ರಕ್ತ ಕೊಟ್ಟ ಮಂದಿ, ಶಿಬಿರ ಆಯೋಜಿಸಿದ ಸಂಘ ಸಂಸ್ಥೆಗಳು ತಮ್ಮ ಕಾರ್ಯಕರ್ತರಿಗೆ ರಕ್ತ ಬೇಕಾದರೆ ಉಚಿತವಾಗಿ ಸಿಗುವುದಿಲ್ಲ. ದುಬಾರಿ ಬೆಲೆ ಕೊಟ್ಟು ಖರೀದಿಸಬೇಕಾಗುತ್ತದೆ. ನಾವು ಫ್ರೀಯಾಗಿ ಕೊಟ್ಟ ರಕ್ತ ಕ್ಲೀನ್ ಪ್ರೊಸೆಸಿಂಗ್ ಹೆಸರಿನಲ್ಲಿ ಸರಕಾರ ವೆಚ್ಚ ಭರಿಸಿ ಮಾರಾಟ ಮಾಡುತ್ತದೆ! ಕೆಲವೊಂದು ಬ್ಲಡ್ ಬ್ಯಾಂಕು ಇದೇ ರಕ್ತವನ್ನು ದಂಧೆಯಾಗಿ ಪರಿವರ್ತಿಸಿ ವಿದೇಶಕ್ಕೆ ಮಾರಾಟ ಮಾಡುತ್ತದೆ. ಇದು ಹಗಲು-ದರೋಡೆಯಲ್ಲವೇ?

ಆರೋಗ್ಯ ಮಂತ್ರಿಗಳೇ ‘ರಕ್ತ’ ದಲ್ಲೂ ವ್ಯಾಪಾರವೇ?

ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ದಿನೇಶ್ ಗುಂಡೂರಾವ್ ಆರೋಗ್ಯ ಮಂತ್ರಿ ಕೂಡ ಹೌದು. ಸರಕಾರ ಹಲವು ಗ್ಯಾರಂಟಿಗಳನ್ನು ನೀಡಿದೆ. ಮನೆಯ ಯಜಮಾನಿಗೆ 2000 ರೂಪಾಯಿ, ಸರಕಾರಿ ಬಸ್ ಮಹಿಳೆಯರಿಗೆ ಫ್ರೀ, ನಿರುದ್ಯೋಗ ವಿದ್ಯಾರ್ಥಿಗಳಿಗೆ ಯುವನಿಧಿ, ಉಚಿತ ವಿದ್ಯುತ್, ಉಚಿತ ಅಕ್ಕಿ ಹೀಗೆ ಪಂಚ ಗ್ಯಾರಂಟಿಗಳ ಮೂಲಕ ತಮ್ಮ ಬೆನ್ನನ್ನು ತಾವೇ ತಟ್ಟುತ್ತಿದೆ. ಆರೋಗ್ಯ ಮಂತ್ರಿಗಳೇ ಉಚಿತ ರಕ್ತದ ಗ್ಯಾರಂಟಿ ಕೊಡಲು ನಿಮ್ಮಿಂದ ಯಾಕೆ ಸಾಧ್ಯವಾಗುತ್ತಿಲ್ಲ. ರಕ್ತವನ್ನು ಉಚಿತವಾಗಿ ಪಡೆಯುತ್ತೀರಿ, ರಕ್ತನಿಧಿಗಳಲ್ಲಿ ಪರಿಷ್ಕರಣ ಶುಲ್ಕ ವಿಧಿಸಿ ವಿವಿಧ ಖಾಸಗಿ ಆಸ್ಪತ್ರೆಗಳು ತಮಗೆ ಬೇಕಾದಂತೆ ದರ ವಿಧಿಸಿ ಮಾರಾಟ ಮಾಡುತ್ತಿದ್ದಾರೆ. ಪರಿಷ್ಕರಣ ಶುಲ್ಕವನ್ನು ಸರಕಾರವೇ ಭರಿಸಿ ರಕ್ತವನ್ನು ಉಚಿತವಾಗಿ ಕೊಡುವ ಕೆಲಸ ಸರಕಾರ ಯಾಕೆ ಮಾಡುತ್ತಿಲ್ಲ. ರಕ್ತ ಅನ್ನುವುದು ಜನರ ಅವಿಭಾಜ್ಯ ಅಂಗ. ಇಷ್ಟೆಲ್ಲಾ ಗ್ಯಾರಂಟಿ ಕೊಡುವ ಸರಕಾರಕ್ಕೆ ರಕ್ತ ಉಚಿತ ಕೊಡಲು ಸಾಧ್ಯವಿಲ್ಲವೇ.?

ಸಾಮಾಜಿಕ ಜಾಲತಾಣಗಳಲ್ಲಿ ಧ್ವನಿ ಎತ್ತಿದ ಮೂನೀಷ್ ಅಲಿ

ಎಸ್ ಡಿಪಿಐ ಮುಖಂಡ, ಬಂಟ್ವಾಳ ಪುರಸಭೆ ಉಪಾಧ್ಯಕ್ಷ ಮೂನೀಷ್ ಅಲಿ ಬ್ಲಡ್ ಬ್ಯಾಂಕ್ ದಂಧೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಧ್ವನಿ ಎತ್ತಿದ್ದಾರೆ. ಸಮಾಜಸೇವೆ, ಹೋರಾಟದ ಮೂಲಕ ಬಂಟ್ವಾಳದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಮೂನೀಷ್ ಅಲಿ ತನ್ನ ಫೇಸ್ಬುಕ್ ಪೇಜಿನಲ್ಲಿ ಬ್ಲಡ್ ಬ್ಯಾಂಕು ದಂಧೆಯ ಕರಾಳತೆಯ ಬಗ್ಗೆ ದೀರ್ಘ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಭಾರೀ ವೈರಲ್ ಆಗಿತ್ತು. ತನ್ನ ಪರಿಚಯಸ್ಥರೊಬ್ಬರಿಗೆ ರಕ್ತ ಅಗತ್ಯವಾಗಿ ಬೇಕಾದಾಗ 3 ಬಾಟ್ಲ್ ರಕ್ತ ಖರೀದಿಸಲು 6000 ರೂಪಾಯಿ ಕೊಡಬೇಕಾಯಿತು. ಇದರಿಂದ ನೊಂದ ಮೂನೀಷ್ ಅಲಿ ನಾವು ಉಚಿತವಾಗಿ ಕೊಡುವ ರಕ್ತವನ್ನೇ ಬ್ಲಡ್ ಬ್ಯಾಂಕು ಮಾರಾಟ ದರ ವಿಧಿಸಿರುವ ಬಗ್ಗೆ ಆಕ್ರೋಶಿತರಾಗಿ ಪೋಸ್ಟ್ ಮಾಡಿದ್ದರು. ಸರಕಾರ ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದರು.