ಮಂಗಳೂರಿನ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕದ್ರವ್ಯ ಸರಬರಾಜು; ಸಿಸಿಬಿ ಪೊಲೀಸರ ಖೆಡ್ಡಾಕ್ಕೆ ಬಿದ್ದ ದೇರಳಕಟ್ಟೆಯ ಅರ್ಶದ್

ಕರಾವಳಿ

ನಿಷೇಧಿತ ಮಾದಕ ವಸ್ತುವಾದ ಎಂಡಿಎಂಎ ಅನ್ನು ಬೆಂಗಳೂರಿನಿಂದ ತರಿಸಿಕೊಂಡು ಮಂಗಳೂರು ನಗರದ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳಿಗೆ ಪೂರೈಸುತ್ತಿದ್ದ ವ್ಯಕ್ತಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ವ್ಯಕ್ತಿಯನ್ನು ಮೂಲತಃ ಕೇರಳದ ಕೊಚ್ಚಿ ನಿವಾಸಿ, ಪ್ರಸ್ತುತ ದೇರಳಕಟ್ಟೆಯಲ್ಲಿ ವಾಸಿಸುತ್ತಿರುವ ಮೊಹಮ್ಮದ್ ಅರ್ಶದ್ ಖಾನ್ ಎಂದು ತಿಳಿದು ಬಂದಿದೆ.

ಖಚಿತ ಮಾಹಿತಿ ಆಧರಿಸಿ ಮಂಗಳೂರು ಸಿಸಿಬಿ ಪೊಲೀಸರು ಆರೋಪಿಯನ್ನು ಬಂಧಿಸಿ ಆತನ ಬಳಿಯಿದ್ದ 53.29 ಗ್ರಾಂ ಎಂಡಿಎಂಎ, 2.33 ಗ್ರಾಂ ಹೈಡೋವೀಡ್ ಗಾಂಜಾ ಹಾಗೂ 0.45 ಗ್ರಾಂ ಎಂಡಿಎಂಎ ಪಿಲ್ಸ್ ವಶಪಡಿಸಿಕೊಂಡಿದ್ದಾರೆ.

ವಶಪಡಿಸಿಕೊಳ್ಳಲಾದ ವಸ್ತುಗಳ ಮೌಲ್ಯ 10.85 ಲಕ್ಷ ಆಗಿದ್ದು, ಡಿಜಿಟಲ್ ತೂಕ ಮಾಪನ ಯಂತ್ರ, ಮೊಬೈಲ್ ಫೋನ್ ಸೇರಿದಂತೆ ಒಟ್ಟು 11.05 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕೋಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಬಿ ಘಟಕದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಈ ಜಾಗದಲ್ಲಿ ಇನ್ನಷ್ಟು ಆರೋಪಿಗಳು ಭಾಗಿಯಾಗಿರುವ ಸಾಧ್ಯತೆ ಇದ್ದು, ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.