ಮೋದಿ -ಶಾ ಕೊಟ್ಟ ಟಾಸ್ಕ್ ಏನಿದು.?
ರಾಜ್ಯದಲ್ಲಿ ಬಿಜೆಪಿ ಮೂರು ಹೋಳಾಗಿದೆ. ಮನೆಯೊಂದು ಮೂರು ಬಾಗಿಲು ಅನ್ನುವಂತೆ ಬಿಜೆಪಿ ನಾಯಕರೊಳಗೆ ನಡೆಯುತ್ತಿರುವ ಹಗ್ಗಜಗ್ಗಾಟ ಕೇಂದ್ರದ ಬಿಜೆಪಿ ಹೈಕಮಾಂಡ್ ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. 2028 ರಲ್ಲಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಏರಬೇಕಾದರೆ ಬಿಜೆಪಿಯೊಳಗೆ ನಡೆಯುತ್ತಿರುವ ಬಣ ರಾಜಕಾರಣಕ್ಕೆ ಅಂತ್ಯ ಹಾಡಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರ ಬಿಜೆಪಿ ಹೈಕಮಾಂಡ್ ಕಸರತ್ತು ಆರಂಭಿಸಿದೆ.

ಕಾಂಗ್ರೆಸ್ ಪಕ್ಷದೊಳಗೆ ನಡೆಯುತ್ತಿರುವ ಆಂತರಿಕ ಕಚ್ಚಾಟದ ಲಾಭ ಪಡೆಯಲು ಬಿಜೆಪಿ ಯಶಸ್ವಿಯಾಗುತ್ತಿಲ್ಲ ಅನ್ನುವುದು ಕೇಂದ್ರದ ಬಿಜೆಪಿ ಹೈಕಮಾಂಡ್ ಗೆ ಇರಿಸು ಮುರಿಸಿಗೆ ಕಾರಣವಾಗಿದೆ. ಬಿಜೆಪಿಯಲ್ಲೇ ಬುಸುಗುಡುತ್ತಿರುವ ಬಣ ರಾಜಕಾರಣ ಇದಕ್ಕೆಲ್ಲ ಕಾರಣ. ಧರ್ಮಸ್ಥಳ ಯಾತ್ರೆ, ದಸರಾ ವಿವಾದವನ್ನು ಬಿಜೆಪಿ ರಾಜಕೀಯವಾಗಿ ಬಳಸಿಕೊಂಡಿತ್ತಾದರೂ ನಿರೀಕ್ಷಿತ ಲಾಭ ಪಡೆಯಲು ವಿಫಲವಾಗಿದೆ. ಮದ್ದೂರು ಗಣೇಶೋತ್ಸವ ಗಲಾಟೆ ಪ್ರಕರಣದ ರಾಜಕೀಯ ಲಾಭವನ್ನು ಬಿಜೆಪಿಗಿಂತ ಯತ್ನಾಳ್ ಹೆಚ್ಚಿನ ಪ್ರಮಾಣದಲ್ಲಿ ಪಡೆದುಕೊಂಡಿರುವುದು ಕೇಂದ್ರದ ಬಿಜೆಪಿ ನಾಯಕರನ್ನು ಗಲಿಬಿಲಿಗೊಳಿಸಿದೆ. ಯತ್ನಾಳ್ ಹೊಸ ಪಕ್ಷ ಸ್ಥಾಪನೆ ವಿಚಾರ ಕೂಡ ಬಿಜೆಪಿಗೆ ಇರುವೆ ಬಿಟ್ಟಂಗಾಗಿದೆ. ಯತ್ನಾಳ್ ನನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡಿರುವುದು ದೊಡ್ಡ ಪ್ರಮಾದವಾಯಿತು ಅನ್ನುವ ನಿಲುವಿಗೆ ಮೋದಿ ಶಾ ಬಂದಿರುವುದಾಗಿ ಮಾಹಿತಿ ಹರಿದಾಡುತ್ತಿದೆ. ಯತ್ನಾಳ್ ನನ್ನು ಮರಳಿ ಬಿಜೆಪಿ ಗೂಡಿಗೆ ಕರೆತರಲು ಬಿಜೆಪಿಯೊಳಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ ಅನ್ನುವ ಮಾಹಿತಿಗಳು ಇವೆ. ಕೇಂದ್ರದ ನಾಯಕರೇ ಯತ್ನಾಳ್ ಮನವೊಲಿಸಿ ಬಿಜೆಪಿಗೆ ಕರೆತರುವಂತೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಅನ್ನುವ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿದೆ.

ಬಿಜೆಪಿಯೊಳಗೆ ನಡೆಯುತ್ತಿರುವ ಮುಸುಕಿನ ಗುದ್ದಾಟ ಮುಂಬರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗಳಲ್ಲಿ ದೊಡ್ಡ ಹಿನ್ನಡೆಗೆ ಕಾರಣವಾಗುವ ಭೀತಿ ಇದೆ.

ಭವಿಷ್ಯದಲ್ಲಿ ಬಿಜೆಪಿಯು ಸಂಘಟಿತವಾಗಿ ಹೋರಾಡಬೇಕು. ಬಿಡಿಬಿಡಿಯಾಗಿ ಹೋರಾಟ ಮಾಡಿದರೆ ಯಾವುದೇ ಲಾಭವಿಲ್ಲ ಅನ್ನುವ ನಿರ್ಧಾರಕ್ಕೆ ಬಿಜೆಪಿ ಹೈಕಮಾಂಡ್ ಬಂದಂತೆ ಕಾಣುತ್ತಿದೆ. ಈಗಿನ ಮೂರು ತುಕಡಿಗಳ ನಾಯಕರು ಅಂದುಕೊಂಡಿರುವಷ್ಟು ಸುಲಭವಾಗಿ ಕಾಂಗ್ರೆಸ್ ಶಕ್ತಿಯನ್ನು ಕುಂದಿಸಿ ಅಧಿಕಾರ ಹಿಡಿಯುವುದು ಕಷ್ಟಸಾಧ್ಯ. ಈ ಹಿನ್ನೆಲೆಯಲ್ಲಿ ಬಿಜೆಪಿಯೊಳಗೆ ನಡೆಯುತ್ತಿರುವ ಶೀತಲ ಸಮರಕ್ಕೆ ಬ್ರೇಕ್ ಹಾಕಲು ಮೋದಿ -ಶಾ ಜೋಡಿ ಎಂಟ್ರಿಯಾಗಿದೆ ಅನ್ನುವ ಮಾತುಗಳು ಕೇಳಿಬರುತ್ತಿವೆ.
