ಕೈ ಕಮಾಂಡ್ ಗೆ ಅಕ್ಟೋಬರ್ 31 ಡೆಡ್ ಲೈನ್.. ಡಿಕೆಶಿ ಕೊಟ್ರು ಬಿಗ್ ಟಾಸ್ಕ್..ಇತ್ತ ಮೊಯ್ಲಿ ಅಭಯ.!

ರಾಜ್ಯ

ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸುನಾಮಿಯ ಮುನ್ಸೂಚನೆ ಕಾಣಿಸುತ್ತಿದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕಾಂಗ್ರೆಸ್ ಹೈಕಮಾಂಡ್ ಗೆ ಅಕ್ಟೋಬರ್ 31 ಡೆಡ್ ಲೈನ್ ನೀಡಿರುವ ಮಾಹಿತಿಯೊಂದು ಹೊರಬಿದ್ದಿದೆ. ಅಕ್ಟೋಬರ್ 31 ರೊಳಗೆ ಮುಖ್ಯಮಂತ್ರಿ ಆಗಬೇಕು ಎಂದು ಡಿಕೆಶಿ ಖಡಕ್ ಡೆಡ್ ಲೈನ್ ಜೊತೆ ವಾರ್ನಿಂಗ್ ನೀಡಿದ್ದಾರೆ ಅನ್ನುವ ಸುದ್ದಿಯಿದೆ. ಈವರೆಗೂ ಡಿಕೆಶಿ ವಿರುದ್ಧ ಸಿದ್ದರಾಮಯ್ಯ ಬಣದ ಕೆಲವು ಶಾಸಕರು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದರೆ, ಇದೀಗ ಕಾಂಗ್ರೆಸ್ ನಲ್ಲೂ ಡಿಕೆಶಿ ಪರ ಬಹಿರಂಗವಾಗಿ ಅವರ ಬೆಂಬಲಿಗರು ಬ್ಯಾಟಿಂಗ್ ನಡೆಸಲು ಆರಂಭಿಸಿದ್ದಾರೆ. ಇದೀಗ ಇಡೀ ಕಾಂಗ್ರೆಸ್ ಒಳಗಡೆ ಸಣ್ಣ ಪಿಸು ಪಿಸು ಆರಂಭವಾಗಿದೆ. ಇದರ ಮುಂದುವರಿದ ಭಾಗವಾಗಿ ಕಾರ್ಕಳ ಕಾಂಗ್ರೆಸ್ ಕುಟುಂಬೋತ್ಸವ ಕಾರ್ಯಕ್ರಮದಲ್ಲಿ ಡಿಕೆಶಿ ಪರ ಸಾರ್ವಜನಿಕ ವೇದಿಕೆಯಲ್ಲೇ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಹೈಕಮಾಂಡ್ ನ ಅತ್ಯಂತ ನಿಷ್ಠ ಬಳಗದಲ್ಲಿ ಗುರುತಿಸಿಕೊಂಡಿರುವ ವೀರಪ್ಪ ಮೊಯ್ಲಿ ಡಿಕೆಶಿ ಮುಖ್ಯಮಂತ್ರಿ ಆಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಅನ್ನುವ ಹೇಳಿಕೆ ನೀಡಿದ್ದಾರೆ. ಇದರ ಜೊತೆಗೆ ಡಿಕೆಶಿ ತನ್ನ ಆಪ್ತರಾಗಿರುವ ಬಿಕೆ ಹರಿಪ್ರಸಾದ್ ಜೊತೆಗೂ ಗುಪ್ತವಾಗಿ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಈ ಎಲ್ಲ ಬೆಳವಣಿಗೆಗಳು ರಾಜ್ಯ ಕಾಂಗ್ರೆಸ್ ಸರಕಾರದಲ್ಲಿ ಮಿಂಚಿನ ಸಂಚಾರಕ್ಕೆ ಕಾರಣವಾಗಿದೆ.

ಸಿದ್ದರಾಮಯ್ಯ ಜತೆಗೆ ಹೈಕಮಾಂಡ್ ಇದೆ ಎಂಬ ಕಾರಣಕ್ಕೆ ಡಿಕೆಶಿ ಬಣದ ಶಾಸಕರು ಬಹಿರಂಗ ಹೇಳಿಕೆಗೆ ವಿಳಂಬ ತೋರಿಸುತ್ತಿದ್ದರು. ಕಾದು ನೋಡುವ ತಂತ್ರಕ್ಕೆ ಜಾರಿದ್ದರು. ಹೈಕಮಾಂಡ್ ಗೆ ಅರಿವು ಮೂಡಿಸಲು ಕಾಂಗ್ರೆಸ್ ನೊಳಗಡೆಯೇ ತಂಡವು ಸಿದ್ಧವಾಗಿತ್ತು. ಆದರೆ ಡಿಕೆಶಿ ಹಿಂದುತ್ವ ನಾಯಕರಾಗಿ ಪ್ರಬಲವಾಗಿ ತೋರ್ಪಡಿಸಿಕೊಳ್ಳುವತ್ತ ಸಾಗಿರುವುದರಿಂದ ಹೈಕಮಾಂಡ್ ಗೆ ಇರಿಸು ಮುರಿಸು ಉಂಟಾಗಿದೆ. ಕಾಂಗ್ರೆಸ್ ನಾಯಕ ಶಶಿ ತರೂರ್ ಕಾಂಗ್ರೆಸ್ ನಿಂದ ಕಾಲು ಹಿಂದಕ್ಕೆ ಚಾಚಿ ಬಿಜೆಪಿಯತ್ತ ಮುಖ ಮಾಡುತ್ತಿರುವುದು, ಹೈಕಮಾಂಡ್ ಅಷ್ಟೇನೂ ದೊಡ್ಡ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಆದರೆ ಡಿಕೆಶಿ ನಡೆಯಿಂದ ಕೈ ಕಮಾಂಡ್ ಅಕ್ಷರಶಃ ದಂಗಾಗಿದೆ. ಇಡೀ ರಾಷ್ಟ್ರದಲ್ಲಿ ಕಾಂಗ್ರೆಸ್ ಗೆ ದೊಡ್ಡ ಆಸರೆ ಇರುವುದು ಕರ್ನಾಟಕ. ಇಲ್ಲಿ ಡಿಕೆಶಿ, ಸಿದ್ದರಾಮಯ್ಯ ಇಬ್ಬರು ನಾಯಕರ ಶ್ರಮದಿಂದ ಕಾಂಗ್ರೆಸ್ ಇನ್ನು ಜೀವಂತವಾಗಿದೆ. ಡಿಕೆಶಿ ಒಕ್ಕಲಿಗ ಸಮುದಾಯದ ಪ್ರಬಲ ನಾಯಕರು ಆಗಿರುವುದರಿಂದ ಆ ಸಮುದಾಯ ಬಹುತೇಕ ಡಿಕೆಶಿ ಹಿಂದೆನೇ ನಿಲ್ಲುತ್ತದೆ. ಸ್ವಲ್ಪವೂ ತಪ್ಪು ಹೆಜ್ಜೆ ಇಟ್ಟರೆ ಇಲ್ಲಿ ಕಾಂಗ್ರೆಸ್ ನಿರ್ನಾಮವಾಗುವುದು ಖಂಡಿತ. ಈ ಕಾರಣದಿಂದ ಕರ್ನಾಟಕದ ಬೆಳವಣಿಗೆ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಚಿಂತಿತವಾಗಿದೆ.

ಇತ್ತ ಪ್ರಬಲ ನಾಯಕರು ಡಿಕೆಶಿ ಪರ ಬ್ಯಾಟಿಂಗ್ ಗೆ ಇಳಿದಿರುವುದು ಕೈ ಕಮಾಂಡ್ ಅನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಅಕ್ಟೋಬರ್ 31 ಕ್ಕೆ ಸೂತ್ರದಂತೆ ಅಧಿಕಾರ ಹಂಚಿಕೆ ನಡೆದರೆ ಸಿದ್ದರಾಮಯ್ಯ ಬಣದ ರಿಯಾಕ್ಷನ್ ಹೇಗಿರಬಹುದು ಅನ್ನುವ ಚಿಂತೆಯೂ ಒಂದು ಕಡೆ, ಅದರ ಜೊತೆಗೆ ಸೂತ್ರದ ಪ್ರಕಾರ ಅಧಿಕಾರ ಹಂಚಿಕೆಯಾಗದ ರಾಜಸ್ಥಾನ, ಛತ್ತೀಸ್ ಗಢ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರಕಾರವೇ ಉರುಳಿತ್ತು. ಈ ಕುರಿತು ಡಿಕೆ ಶಿವಕುಮಾರ್ ಕಾಂಗ್ರೆಸ್ ಹೈಕಮಾಂಡ್ ಗೆ ಸೂಚನೆ ನೀಡಿದ್ದಾರೆ ಅನ್ನುವ ಮಾಹಿತಿ ಹೊರಬಿದ್ದಿದೆ. ಒಟ್ಟಾರೆ ಬೆಳವಣಿಗೆ ಕಾಂಗ್ರೆಸ್ ಹೈಕಮಾಂಡ್ ಗೆ ದೊಡ್ಡ ತಲೆಬಿಸಿಯನ್ನೇ ತಂದುಬಿಟ್ಟಿದೆ.