ಪ್ರತಿ ಭಾರತೀಯನ ಮೇಲೆ 4.8 ಲಕ್ಷ ಸಾಲ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವರದಿ

ರಾಷ್ಟ್ರೀಯ

ಕಳೆದೆರಡು ವರ್ಷಗಳಲ್ಲಿ ಭಾರತದ ಪ್ರತಿ ವ್ಯಕ್ತಿ ಮೇಲಿನ ಋಣಭಾರ 4.8 ಲಕ್ಷ ರೂಪಾಯಿ ಗೆ ಬಂದಿದೆ. 2023 ರ ಮಾರ್ಚ್ ನಲ್ಲಿ ಪ್ರತಿ ವ್ಯಕ್ತಿ ಮೇಲೆ ತಲಾ 3.5 ಲಕ್ಷ ರೂಪಾಯಿ ನಷ್ಟು ಸಾಲವಿತ್ತು. 2 ವರ್ಷ ಅಂದರೆ ಮಾರ್ಚ್ 2025 ರ ವೇಳೆಗೆ ಇದು ಶೇಕಡಾ 23 ರಷ್ಟು ಹೆಚ್ಚಳ ಕಂಡಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಿಡುಗಡೆ ಮಾಡಿದ ವಿತ್ತೀಯ ಸ್ಥಿರತೆ ವರದಿ ಹೇಳಿದೆ.

ವರದಿ ಪ್ರಕಾರ ಪ್ರತಿ ಭಾರತೀಯನ ಮೇಲಿನ ಸಾಲದ ಹೊರೆ ಕಳೆದ 2 ವರ್ಷದಲ್ಲಿ 90 ಸಾವಿರ ರೂಪಾಯಿ ನಷ್ಟು ಹೆಚ್ಚಾಗಿದೆ. ಹೋಮ್ ಲೋನ್, ಪರ್ಸನಲ್ ಲೋನ್, ಕ್ರೆಡಿಟ್ ಕಾರ್ಡ್ ವೆಚ್ಚ ಮತ್ತು ಇತರೆ ರಿಟೇಲ್ ಲೋನ್ ನಿಂದಾಗಿ ಸಾಲದ ಹೊರೆ ಏರಿಕೆ ಕಂಡಿದೆ. ಗೃಹೇತರ ರಿಟೇಲ್ ಲೋನ್ ನಂಥ ಪರ್ಸನಲ್ ಲೋನ್ ಮತ್ತು ಕ್ರೆಡಿಟ್ ಕಾರ್ಡ್ ಲೋನ್ ನಲ್ಲೂ ಭಾರೀ ಏರಿಕೆ ಆಗಿದೆ. ಈ ಸಾಲ ಒಟ್ಟಾರೆ ದೇಶೀಯ ಸಾಲದ ಶೇಕಡಾ 54.9 ರಷ್ಟಿದೆ. ಇನ್ನು ಗೃಹಸಾಲದ ಪ್ರಮಾಣ ಶೇಕಡ 29 ರಷ್ಟಿದೆ. ವರದಿಯು ಲೋನ್ ಟ್ಯು ವ್ಯಾಲ್ಯೂ ಪ್ರಮಾಣದಲ್ಲಿನ ಹೆಚ್ಚಳ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ್ದು, ಇದು ಶೇಕಡಾ 70 ಕ್ಕಿಂತ ಹೆಚ್ಚಾಗಿದೆ ಎಂದು ಹೇಳಿದೆ.

ಇತ್ತೀಚಿನ ವರ್ಷಗಳಲ್ಲಿ ಭಾರತದ ಮನೆ ಮಂದಿಯ ಸಾಲದ ಪ್ರಮಾಣ ಏರುಗತಿಯಲ್ಲಿದ್ದರೂ, 2024 ರ ಅಂತ್ಯಕ್ಕೆ ಇದು ಜಿಡಿಪಿಯ ಶೇಕಡಾ 41.9 ರಷ್ಟಿತ್ತು. ಇದು ಇತರ ಬೆಳೆಯುತ್ತಿರುವ ಆರ್ಥಿಕತೆಗಿಂತ ಕಮ್ಮಿ.