ಕೂಲಿ ಕಾರ್ಮಿಕರ, ಬಡವರ ಮಕ್ಕಳೇ ಹೆಚ್ಚಾಗಿ ಈ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ
ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ 11 ಮಕ್ಕಳ ಸಾವು ಮೂಡಿಸಿದ ಕೋಲ್ಡ್ರಿಫ್ ಕಾಫ್ ಸಿರಪ್ ದೇಶಾದ್ಯಂತ ನಿಷೇಧಗೊಂಡಿತ್ತು. ಅದರ ಬಳಿಕ ಕರ್ನಾಟಕದಲ್ಲಿ ಸಿರಪ್‌ಗಳ ಮೇಲೆ ಕಠಿಣ ನಿಗಾ ಇಡಲಾಗಿದೆ. ಇದನ್ನೇ ಪರಿಗಣಿಸಿ, ದಾವಣಗೆರೆ ನಗರದಲ್ಲಿ ಅಮಲು ಬರುವ ಸಿರಪ್‌ಗಳನ್ನು ಅಕ್ರಮ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ಬಸವನಗರ ಪೊಲೀಸರು ಬಂಧಿಸಿದ್ದಾರೆ. ದೇವರಾಜ ಅರಸ್ ಬಡಾವಣೆಯ ಫ್ಲೈಓವರ್ ಪಕ್ಕದ ಸರ್ವಿಸ್ ರಸ್ತೆಯಲ್ಲಿ ವೈದ್ಯರ ಅನುಮತಿ ಪತ್ರ ಇಲ್ಲದೆ, ಯುವಕರು ಮತ್ತು ವ್ಯಸನಿಗಳು ಈ ಸಿರಪ್‌ಗಳನ್ನು ಖರೀದಿಸುತ್ತಿದ್ದರು. ದಾವಣಗೆರೆ ಎಸ್ಪಿ ಕಚೇರಿಯ ಮಾದಕ ದ್ರವ್ಯ ನಿಗ್ರಹ ಪಡೆ ತಂಡ ಈ ಕಾರ್ಯಾಚರಣೆಯಲ್ಲಿ ಸಿರಪ್‌ಗಳ ದೊಡ್ಡ ಪ್ರಮಾಣವನ್ನು ವಶಪಡಿಸಿಕೊಂಡಿದೆ.
ವಿದ್ಯಾವಂತರ ನಗರ ಎಂದು ಖ್ಯಾತಿ ಪಡೆದಿರೋ ದಾವಣಗೆರೆಯಲ್ಲಿ ಇಂತಹ ಘಟನೆ ನಡೆದಿರುವ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ನಗರದ ದೇವರಾಜ ಅರಸ್ ಬಡಾವಣೆ ಫ್ಲೈಓವರ್ ಪಕ್ಕದ ಸರ್ವೀಸ್ ರಸ್ತೆಯಲ್ಲಿ ಅಮಲು ಬರುವ ಸಿರಪ್ ಬಾಟಲ್ ಗಳನ್ನು ಆರೋಪಿಗಳು ಮಾರಾಟ ಮಾಡುತ್ತಿದ್ದರು. ಯುವಕರನ್ನು ಟಾರ್ಗೆಟ್ ಮಾಡಿ, ವೈದ್ಯರ ಸಲಹೆ ಇಲ್ಲದೆ ಹೆಚ್ಚಿನ ಬೆಲೆಗೆ ಸಿರಪ್ ಮಾರುತ್ತಿದ್ದ ತಂಡವನ್ನು ಎಸ್ಪಿ ಉಮಾ ಪ್ರಶಾಂತ್ ನೇತೃತ್ವದ ಮಾದಕ ದ್ರವ್ಯ ನಿಗ್ರಹ ಪಡೆ ಕಾರ್ಯಾಚರಣೆ ನಡೆಸಿ ಬಂಧಿಸಿದೆ. ಬಂಧಿತರನ್ನು ನಗರದ ಎಸ್ಪಿಎಸ್ ನಗರದ ನಿವಾಸಿ ಶಿವಕುಮಾರ್, ಮಹಬೂಬ್ ನಗರದ ನಿವಾಸಿ ಅಜಿಮುದ್ದೀನ್, ದೇವರಾಜ ಅರಸ್ ಬಡಾವಣೆಯ ಮಹಮದ್ ಶಾರೀಕ್, ಚನ್ನಗಿರಿ ತಾಲೂಕಿನ ಹೊನ್ನೆಬಾಗಿ ಗ್ರಾಮದ ಸೈಯದ್ ಬಾಬು ಅಲಿಯಾಸ್ ಯೂನೂಸ್ ಹಾಗೂ ಚನ್ನಗಿರಿ ಟೌನ್ ನಿವಾಸಿ ಅಬ್ದುಲ್ ಗಫರ್ ಎಂದು ಗುರುತಿಸಲಾಗಿದೆ.
ಆರೋಪಿಗಳು ಬಹು ದಿನಗಳಿಂದ ಈ ಕೃತ್ಯ ನಡೆಸಿಕೊಂಡು ಬಂದಿರೋದು ತನಿಖೆ ವೇಳೆ ಗೊತ್ತಾಗಿದೆ. ಬಂಧಿತರಿಂದ 100 ಎಂ.ಎಲ್.ನ ಒಟ್ಟು 340 Broncof-C cough Syrup ಬಾಟಲ್, Edex Cd Syrupನ 15 ಬಾಟಲ್, 20 ಸಣ್ಣ ಬಾಕ್ಸ್ಗಳಲ್ಲಿದ್ದ Aceclofenac + paracetamol + serratiopeptidase ಮಾತ್ರೆಗಳು ಸೇರಿ 1200 ನಗದನ್ನು ವಶ ಪಡಿಸಿಕೊಳ್ಳಲಾಗಿದೆ. ಕೂಲಿ ಕಾರ್ಮಿಕರು ಮತ್ತು ಬಡವರ ಮಕ್ಕಳೇ ಹೆಚ್ಚಾಗಿ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ವೈದ್ಯರ ಸಲಹೆ ಇಲ್ಲದೆ ಇಂತಹ ಸಿರಪ್‌ಗಳ ಮಾರಾಟ ಮೆಡಿಕಲ್ಗಳಲ್ಲಿಯೂ ಅವ್ಯಾಹತವಾಗಿ ನಡೆಯುತ್ತಿದ್ದು, ಅವರ ವಿರುದ್ಧವೂ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
