ಮಹಾರಾಷ್ಟ್ರದಲ್ಲಿ ರಸ್ತೆಗುಂಡಿಗಳು ಅಥವಾ ತೆರೆದ ಮ್ಯಾನ್ ಹೋಲ್ ಗಳಿಗೆ ಬಿದ್ದು ಪ್ರಾಣ ಕಳೆದುಕೊಳ್ಳುವವರ ಕುಟುಂಬಕ್ಕೆ 6 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಪಾಲಿಕೆ ಅಧಿಕಾರಿಗಳು ಮತ್ತು ರಾಜ್ಯ ಸರಕಾರಕ್ಕೆ ಬಾಂಬೆ ಹೈಕೋರ್ಟ್ ಆದೇಶಿಸಿದೆ.
ನ್ಯಾಯಮೂರ್ತಿ ರೇವತಿ ಮೋಹಿತೆ ದೇರೆ ಮತ್ತು ನ್ಯಾಯಮೂರ್ತಿ ಸಂದೇಶ್ ಪಾಟೀಲ್ ಅವರಿದ್ದ ನ್ಯಾಯಪೀಠವು ರಸ್ತೆ ಗುಂಡಿಗಳು ಅಥವಾ ತೆರೆದ ಮ್ಯಾನ್ ಹೋಲ್ ಗಳಿಂದ ಗಾಯಗೊಂಡವರಿಗೆ 50,000 ರೂಪಾಯಿಯಿಂದ 2.5 ಲಕ್ಷ ರೂಪಾಯಿ ವರೆಗೆ ಪರಿಹಾರ ನೀಡಬೇಕು ಎಂದು ಹೇಳಿದೆ. ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಉತ್ತಮ ಮತ್ತು ಸುರಕ್ಷಿತ ರಸ್ತೆಗಳು ಜನರ ಬದುಕುವ ಹಕ್ಕಿನ ಭಾಗವಾಗಿದೆ ಎಂದು ನ್ಯಾಯಾಲಯ ಹೇಳಿದೆ. ನಿವೃತ್ತ ನ್ಯಾಯಮೂರ್ತಿ ಜಿ ಎಸ್ ಪಟೇಲ್ ಅವರು ಮುಖ್ಯ ನ್ಯಾಯಮೂರ್ತಿಗೆ ಕಳುಹಿಸಿದ ಪತ್ರದ ಆಧಾರದ ಮೇಲೆ 2013 ರಲ್ಲಿ ದಾಖಲಾಗಿದ್ದ ಸ್ವಯಂ ಪ್ರೇರಿತ ಪ್ರಕರಣದ ಅಡಿಯಲ್ಲಿ ನ್ಯಾಯಾಲಯ ಆದೇಶವನ್ನು ನೀಡಿದೆ.
ಕೆಟ್ಟ ಮತ್ತು ಅಸುರಕ್ಷಿತ ರಸ್ತೆಗಳಿಗೆ ಯಾವುದೇ ಸಮರ್ಥನೆ ಇಲ್ಲ. ದೇಶದ ಆರ್ಥಿಕ ರಾಜಧಾನಿ ಎನಿಸಿರುವ ಮುಂಬಯಿ ನಗರವು ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಸಂಸ್ಥೆಗಳ ಆದಾಯಕ್ಕೆ ಹೆಚ್ಚಿನ ಕೊಡುಗೆ ನೀಡುತ್ತದೆ. ಕೆಟ್ಟ ರಸ್ತೆಗಳು ಮಾನವರ ಜೀವಗಳಿಗೆ ಅಪಾಯವನ್ನುಂಟು ಮಾಡುವುದಲ್ಲದೆ, ಕಂಪೆನಿಗಳ ಆರ್ಥಿಕ ಸ್ಥಿತಿಗತಿ ಮೇಲೆ ಕೂಡ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತವೆ ಎಂದು ಕೋರ್ಟ್ ಬೇಸರ ವ್ಯಕ್ತಪಡಿಸಿದೆ. ತೆರಿಗೆ ಪಾವತಿಸುವ ಸಾರ್ವಜನಿಕರಿಗೆ ಸುರಕ್ಷಿತ ರಸ್ತೆಗಳು ಸೇರಿದಂತೆ ಸರಿಯಾದ ನಾಗರಿಕ ಸೌಲಭ್ಯಗಳನ್ನು ಒದಗಿಸುವುದು ನಾಗರಿಕ ಅಧಿಕಾರಿಗಳು ಮತ್ತು ರಾಜ್ಯ ಸಂಸ್ಥೆಗಳ ಜವಬ್ದಾರಿಯಾಗಿದೆ ಎಂದು ಹೇಳಿದೆ.
ಗುತ್ತಿಗೆದಾರ ಹೊಣೆ: ನಾಗರಿಕರು ಸಂಚರಿಸುವ ರಸ್ತೆ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಗುತ್ತಿಗೆದಾರರನ್ನು ಅಪಘಾತಗಳು ಹಾಗೂ ಅದರಿಂದಾಗುವ ಸಾವುಗಳಿಗೆ ಹೊಣೆಗಾರರನ್ನಾಗಿ ಮಾಡುವ ಸಮಯ ಇದು. ಈ ದೀರ್ಘ ಕಾಲಿನ ಸಮಸ್ಯೆಯನ್ನು ಪರಿಹರಿಸುವಲ್ಲಿ ಅಧಿಕಾರಿಗಳ ಕಡೆಯಿಂದ ನಮಗೆ ಯಾವುದೇ ಗಂಭೀರ ಪ್ರಯತ್ನ ಕಂಡುಬರುವುದಿಲ್ಲ. ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡದ ಹೊರತು, ಈ ದುರಂತ ಸನ್ನಿವೇಶವು ಪ್ರತಿ ವರ್ಷವೂ ಪುನರಾವರ್ತನೆಯಾಗುತ್ತದೆ. ಗುತ್ತಿಗೆದಾರರ ಮೇಲೆ ಮಾತ್ರವಲ್ಲದೆ ಅಧಿಕಾರಿಗಳ ಮೇಲೂ ಹೊಣೆಗಾರಿಕೆಯನ್ನು ನಿಗದಿಪಡಿಸಬೇಕು ಎಂದು ಹೈಕೋರ್ಟ್ ಮಹತ್ವದ ಸೂಚನೆ ನೀಡಿದೆ.
ಅರ್ಹ ಕುಟುಂಬಸ್ಥರಿಗೆ ಪರಿಹಾರವನ್ನು ಹಕ್ಕು ಸ್ವೀಕರಿಸಿದ ದಿನಾಂಕದಿಂದ ಅದರಿಂದ ಎಂಟು ವಾರಗಳೊಳಗೆ ಪಾವತಿಸಬೇಕು ಮತ್ತು ಪಾವತಿ ವಿಳಂಬವಾದರೆ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಸಕಾಲದಲ್ಲಿ ಪರಿಹಾರ ಪಾವತಿಸಲು ವಿಫಲವಾದರೆ ಪುರಸಭೆ ಆಯುಕ್ತರು, ಮುಖ್ಯ ಅಧಿಕಾರಿ, ಜಿಲ್ಲಾಧಿಕಾರಿ, ಸಿಇಓ, ಅಧ್ಯಕ್ಷರು ಅಥವಾ ಪ್ರಧಾನ ಕಾರ್ಯದರ್ಶಿಯವರು ವಿಳಂಬಕ್ಕೆ ವೈಯುಕ್ತಿಕವಾಗಿ ಜವಾಬ್ದಾರರಾಗಿರುತ್ತಾರೆ. ಸಂತ್ರಸ್ತರಿಗೆ ಪರಿಹಾರವನ್ನು ನೀಡಿದ ನಂತರ ಪಾವತಿಸಿದ ಮೊತ್ತವನ್ನು ಗುಂಡಿ ಅಥವಾ ತೆರೆದ ಮ್ಯಾನ್ ಹೋಲ್ ಗಳಿಗೆ ಕಾರಣರಾದ ವ್ಯಕ್ತಿಗಳಿಂದ ವಸೂಲಿ ಮಾಡಬಹುದು. ಅದು ಅಧಿಕಾರಿಗಳು, ಎಂಜಿನಿಯರ್ ಗಳು ಅಥವಾ ಗುತ್ತಿಗೆದಾರರ ಕೂಡ ಆಗಿರಬಹುದು ಎಂದು ನ್ಯಾಯಾಲಯ ಮಹತ್ವದ ನಿರ್ದೇಶನ ನೀಡಿದೆ.
