ಮುಚ್ಚಿ ಹೋಗಿರುವ ಕನ್ಯಾನ ಪೊಲೀಸ್ ಹೊರಠಾಣೆ ಆರಂಭಿಸಬೇಕು. ಗಡಿಭಾಗದ ಬೆರಿಪದವುನಲ್ಲಿ ಪೊಲೀಸ್ ಚೆಕ್ ಪೋಸ್ಟ್ ತೆರೆಯಬೇಕು.

ಕರಾವಳಿ

ಸರ್ಕಾರಕ್ಕೆ, ಗೃಹ ಇಲಾಖೆಗೆ, ನಾಗರಿಕರ ಒತ್ತಾಯ .

ವಿಟ್ಲ : ಅಂತರಾಜ್ಯಗಡಿ ಭಾಗದ ಕನ್ಯಾನದಲ್ಲಿ ಐದು ವರ್ಷಗಳ ಹಿಂದೆ ಆರಂಭವಾಗಿದ್ದ ಪೊಲೀಸ್ ಹೊರಠಾಣೆ ಒಂದು ವರ್ಷದಲ್ಲೇ ಕೋಮಾ ಸ್ಥಿತಿಗೆ ತಲುಪಿ ನಿರ್ಜೀವಗೊಂಡಿದೆ. 30/01/2021ರಂದು ಲೋಕಾರ್ಪಣೆ ಆಗಿದ್ದ ಕನ್ಯಾನ ಪೊಲೀಸ್ ಹೊರಠಾಣೆ ಒಂದು ವರ್ಷದಲ್ಲೇ ಮುಚ್ಚಿ ಹೋಗಿತ್ತು.

ಬೆರಿಪದವು ಗಡಿಭಾಗದಲ್ಲಿ ಚೆಕ್ ಪೋಸ್ಟ್ ಒತ್ತಾಯ.
ಕೇರಳ ಗಡಿ ಭಾಗದ ಪೆರುವಾಯಿ ಗ್ರಾಮದಲ್ಲೂ ದೋ ನಂಬರ್ ದಂಧೆಯ ಖದೀಮರು ತಮ್ಮ ಸಾಮ್ರಾಜ್ಯ ಸ್ಥಾಪಿಸಲು ಹೆಣಗಾಡುತ್ತಿದ್ದಾರೆ.
ಕೇರಳದಿಂದ ಬೆರಿಪದವು ಮೂಲಕ ಪೆರುವಾಯಿ ಗ್ರಾಮವನ್ನು ಸಂಪರ್ಕಿಸಿ ಕನ್ಯಾನ ಮೂಲಕ ದೋ ನಂಬರ್ ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ. ಈ ಕಾರಣಕ್ಕಾಗಿ ಗಡಿಭಾಗದ ಬೆರಿಪದವುನಲ್ಲಿ ಪೊಲೀಸ್ ಚೆಕ್ ಪೋಸ್ಟ್ ಹಾಗೂ ಕನ್ಯಾನದಲ್ಲಿ ಮಚ್ಚಿಹೋಗಿರುವ ಹೊರಠಾಣೆಯನ್ನು ತಕ್ಷಣವೇ ಆರಂಭಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.

ಅಂತರ್ ರಾಜ್ಯದ ಗಡಿಭಾಗದಲ್ಲಿರುವ ವಿಟ್ಲ ಠಾಣಾ ವ್ಯಾಪ್ತಿಯ ಕನ್ಯಾನ ಮತ್ತು ಕರೋಪಾಡಿ ಗ್ರಾಮಗಳಲ್ಲಿ ಸರಣಿ ಕೊಲೆ ಪ್ರಕರಣಗಳು, ಕೊಲೆಯತ್ನ ಪ್ರಕರಣಗಳು, ಗಾಂಜಾ ಸಹಿತ ಇನ್ನಿತರ ಮಾದಕ ವಸ್ತುಗಳ ಮಾರಾಟ ಪ್ರಕರಣಗಳು, ಅತ್ಯಾಚಾರ, ದರೋಡೆ, ಟಿಂಬರ್ ಮಾಫಿಯಾ, ಮಟ್ಕಾ ದಂಧೆ, ಕಳ್ಳತನ ಪ್ರಕರಣಗಳು, ಗಣಿ ಮಾಫಿಯಾ , ಬಾಕ್ಸೈಟ್ ಮಾಫಿಯಾ ಸೇರಿದಂತೆ ಇನ್ನಿತರ ಅಪರಾಧ ಕೃತ್ಯಗಳು ಎಗ್ಗಿಲ್ಲದೇ ನಡೆಯುತ್ತಿತ್ತು. ಅಲ್ಲದೇ ಕರೋಪಾಡಿ ಗ್ರಾಮ ಪಂಚಾಯತ್ ಕಛೇರಿಯಲ್ಲಿ ಹಾಡಹಗಲೇ ಅಧ್ಯಕ್ಷ ಜಲೀಲ್ ಕರೋಪಾಡಿಯವರನ್ನು ತಂಡವೊಂದು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ನಡೆಸಿತ್ತು.

ಕನ್ಯಾನ-ಕರೋಪಾಡಿ ಗ್ರಾಮಗಳಲ್ಲಿ ಯಾವುದೇ ಅಪರಾಧ ಕೃತ್ಯಗಳು ನಡೆದರೂ ಹದಿನಾಲ್ಕು ಕಿಲೋ ಮೀಟರ್ ದೂರದ ವಿಟ್ಲದಿಂದ ಪೊಲೀಸರು ಬರುವಷ್ಟರಲ್ಲಿ ಸಾಕಷ್ಟು ಸಮಯ ಕಳೆಯುತ್ತಿತ್ತು. ಇದಕ್ಕಾಗಿ ಕನ್ಯಾನ ಪೇಟೆಯಲ್ಲಿ
ಒಬ್ಬರು ಸಹಾಯಕ ಉಪ ನಿರೀಕ್ಷಕರು ಮತ್ತು ಇಬ್ಬರು ಸಿಬ್ಬಂದಿಗಳು ದಿನದ ಇಪ್ಪತ್ನಾಲ್ಕು ಗಂಟೆಯೂ ಕಾರ್ಯನಿರ್ವಹಿಸುವ ಹೊರಠಾಣೆಯನ್ನು ತೆರೆಯಲಾಗಿತ್ತು.
ಸ್ಥಳೀಯ ಗ್ರಾಮ ಪಂಚಾಯತ್ ಕೂಡಾ ಉತ್ತಮ ವ್ಯವಸ್ಥೆಯುಳ್ಳ ಕಟ್ಟಡವನ್ನು ನಿರ್ಮಿಸಿಕೊಟ್ಟಿತ್ತು. ಆದರೆ ಅದ್ಯಾಕೋ ಒಂದೇ ವರ್ಷದಲ್ಲಿ ಹೊರಠಾಣೆಯ ವಿದ್ಯುತ್ ಸಂಪರ್ಕವೂ ಕಡಿತವಾಯ್ತು. ಕಛೇರಿಯೂ ಸಿಬ್ಬಂದಿಗಳಿಲ್ಲದೇ ನಿರ್ಜೀವಗೊಂಡಿತ್ತು.

ಇದೀಗ ಹೊರಠಾಣೆ ಇಲ್ಲದ ಕಾರಣ ಕೇರಳ ಗಡಿ ಭಾಗದ ಕನ್ಯಾನ-ಕರೋಪಾಡಿ ಗ್ರಾಮಗಳಲ್ಲಿ ಮತ್ತೆ ಅಪರಾಧ ಕೃತ್ಯಗಳು ನಡೆಯುವ ಮುನ್ಸೂಚನೆ ಕಂಡುಬರುತ್ತಿದೆ. ಇದರಿಂದಾಗಿ ತಕ್ಷಣವೇ ಹೊರಠಾಣೆಯನ್ನು ಆರಂಭಿಸುವ ಮೂಲಕ ನಾಗರಿಕರ ನೆಮ್ಮದಿಯ ಬದುಕಿಗೆ ಪೊಲೀಸ್ ಇಲಾಖೆ ಕೈಜೋಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.