ಅಪರಾಧ ಕೃತ್ಯಗಳನ್ನು ಮಟ್ಟ ಹಾಕಲು ಕಾನೂನನ್ನು ಬಿಗಿಯಾಗಿ ಜಾರಿಗೊಳಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಶಸ್ವಿಯಾಗಿರುವ ಮಂಗಳೂರು ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ಹಾಗೂ ಜಿಲ್ಲಾ ಎಸ್ಪಿ ಡಾ. ಅರುಣ್ ಕೆ ಇದೀಗ ಮತ್ತೊಂದು ಮೈಲಿಗಲ್ಲು ಸೃಷ್ಟಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗದ ಲಾಭ ಪಡೆದು ಕ್ರಿಮಿನಲ್ ಗಳು ಬಚವಾಗಲು ಯತ್ನಿಸುತ್ತಿದ್ದರು. ಆದರೆ ಇದೀಗ ಅದಕ್ಕೆ ಅಂಕುಶ ಬಿದ್ದಿದೆ.
ನವೆಂಬರ್ 22 ರಂದು ಕೇರಳ ರಾಜ್ಯದ ಕಣ್ಣೂರು ವಲಯದ ಡಿಐಜಿಪಿ ಯತೀಶ್ಚಂದ್ರ ಜಿ.ಹೆಚ್, ಕಾಸರಗೋಡು ಎಸ್ ಪಿ ವಿಜಯ ಭರತ್ ರೆಡ್ಡಿ ಇವರುಗಳು ಮಂಗಳೂರು ನಗರ ಕಮೀಷನರೇಟ್ ಕಚೇರಿಯಲ್ಲಿ ಸುಧೀರ್ ಕುಮಾರ್ ರೆಡ್ಡಿ ಇವರ ಅಧ್ಯಕ್ಷತೆಯಲ್ಲಿ ಜರುಗಿದ ಬಾರ್ಡರ್ ಕ್ರೈಂ ಮೀಟಿಂಗ್ ನಲ್ಲಿ ಭಾಗವಹಿಸಿದ್ದರು. ಗಡಿ ಜಿಲ್ಲೆಯ ಲಾಭ ಪಡೆದು ಅಪರಾಧಿಗಳು ತಪ್ಪಿಸಿಕೊಳ್ಳುತ್ತಿದ್ದು, ಈ ನಡೆದ ಸಭೆಯಲ್ಲಿ ಉಭಯ ರಾಜ್ಯಗಳ ಗಡಿ ಜಿಲ್ಲೆಗಳಲ್ಲಿ ನಡೆಯುವ ಅಪರಾಧ ಪ್ರಕರಣಗಳ ಮಾಹಿತಿ ವಿನಿಮಯ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.

ಅಪರಾಧ ಪ್ರಕರಣಗಳಲ್ಲಿ ಭಾಗವಹಿಸಿ ತಲೆಮರೆಸಿಕೊಂಡಿರುವ ಆರೋಪಿಗಳು, ವಾರಂಟ್ ಆಸಾಮಿಗಳು, ಅಂತಾರಾಜ್ಯ ಅಪರಾಧ ಪ್ರಕರಣಗಳು, ಮಾದಕ ದ್ರವ್ಯ ಸಾಗಾಟ ಇತ್ಯಾದಿ ವಿಷಯಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಗಿದೆ. ಅಲ್ಲದೇ ಎರಡೂ ರಾಜ್ಯಗಳಲ್ಲಿ ದಾಖಲಾದ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ಗಡಿ ಜಿಲ್ಲೆಗಳಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳು ಮತ್ತು ವಾರಂಟ್ ಅಸಾಮಿಗಳ ಮಾಹಿತಿ ವಿನಿಮಯ ಮತ್ತು ಪತ್ತೆಯ ಬಗ್ಗೆ ಕಾರ್ಯಯೋಜನೆಗಳನ್ನು ರೂಪಿಸಲಾಗಿದ್ದು, ಅಪರಾಧ ಪ್ರಕರಣಗಳ ನಿಯಂತ್ರಣ ಮತ್ತು ಪತ್ತೆ ಕಾರ್ಯದಲ್ಲಿ ಪರಸ್ಪರ ಸಹಕಾರ, ಜಂಟಿ ಕಾರ್ಯಾಚರಣೆ ಬಗ್ಗೆ ಚರ್ಚಿಸಿ ವಿಚಾರ ವಿನಿಮಯ ನಡೆಸಲಾಗಿದೆ.
ಬಾರ್ಡರ್ ಕ್ರೈಂ ಮೀಟಿಂಗ್ ಉಭಯ ರಾಜ್ಯಗಳ ಗಡಿ ಜಿಲ್ಲೆಗಳಲ್ಲಿ ಅಪರಾಧ ಮಟ್ಟ ಹಾಕಲು ಒಳ್ಳೆಯ ನಿರ್ಧಾರವಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಡಕ್ ಆಫೀಸರ್ಸ್ ಎಂಟ್ರಿಯ ನಂತರ ಇಲ್ಲಿನ ಕೆಲವು ಕ್ರಿಮಿನಲ್ ಗಳು, ರೌಡಿಶೀಟರ್ ಗಳು ಕೇರಳ ಗಡಿ ಭಾಗದ ಪ್ರದೇಶಗಳಿಗೆ ತೆರಳಿ ಡ್ರಗ್ಸ್ ಮಾಫಿಯಾ, ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಇದರಿಂದ ಈ ಭಾಗದಲ್ಲಿ ಅಪರಾಧ ಪ್ರಕರಣಗಳಲ್ಲಿ ಭಾರೀ ಏರಿಕೆಯಾಗಿದೆ. ಇಂತಹ ಕ್ರಿಮಿನಲ್ ಚಟುವಟಿಕೆಗಳು ತಹಬಂದಿಗೆ ಬರಲು ಇದು ಸಹಕಾರಿಯಾಗಲಿದೆ.
