ಮುಕ್ಕ: ಒಂಟಿ ಮಹಿಳೆಯ ಮನೆಗೆ ನುಗ್ಗಿ, ಚಿನ್ನಾಭರಣ ದರೋಡೆ ಪ್ರಕರಣ, ಕುಖ್ಯಾತ ಆರೋಪಿಗಳ ಬಂಧನ, ಸ್ವತ್ತು ವಶ

ಕರಾವಳಿ

ತೀವ್ರ ಕುತೂಹಲ ಕೆರಳಿಸಿದ್ದ ಮುಕ್ಕ ಬಳಿ ಡಿಸೆಂಬರ್ 3ರಂದು ರಾತ್ರಿ ಸಮಯದಲ್ಲಿ ನಡೆದ ಶ್ರೀಮತಿ ಜಲಜ, ಪ್ರಾಯ 85 ವರ್ಷ, ಮಿತ್ರ ಪಟ್ಣ, ಸಸಿಹಿತ್ಲು ಮುಕ್ಕ, ಎಂಬ ಒಂಟಿ ಮಹಿಳೆಯ ಮನೆಗೆ ರಾತ್ರಿ ಸುಮಾರು 2:30 ಹೊತ್ತಿಗೆ ಯಾರೋ ಅಪರಿಚಿತರು ಮನೆಯ ಬಾಗಿಲು ಬಡಿದು ಕುಡಿಯಲು ನೀರು ಬೇಕು ಬಾಗಿಲು ತೆರೆಯಿರಿ ಎಂದು ಹೇಳಿದ್ದು, ಜಲಜ ಬಾಗಿಲು ತೆಗೆಯದೇ ಇದ್ದುದರಿಂದ ಆರೋಪಿತರು ಮನೆಯ ಹಂಚನ್ನು ತೆಗೆದು ಮನೆಯ ಒಳಗೆ ಪ್ರವೇಶಿಸಿ ಪಿರ್ಯಾದಿದಾರರನ್ನು “ಬಂಗಾರ್ ಒಲ್ಪ ಉಂಡು” (ಬಂಗಾರ ಎಲ್ಲಿದೆ) ಎಂದು ತುಳುವಿನಲ್ಲಿ ಜೋರಾಗಿ ಬೆದರಿಸಿ, ಬೈರಾಸನ್ನು ಪಿರ್ಯಾದಿದಾರರ ಕುತ್ತಿಗೆಗೆ ಬಿಗಿದು “ಬೊಬ್ಬೆ ಪಾಡುಂಡ ಕೆರ್ಪೆ ಬಂಗಾರ್ ಇಜ್ಜಾ ಉಂಡಾ ತೂಪ ಎಂಕುಲ್ ಏರೆನ್ಲಾ ಲೆತ್ತ್ಂಡ ನಾಲಿಡ್ ಪತ್ತ್ದ್ ಕೆರ್ಪೆ” (ಬೊಬ್ಬೆ ಹೊಡೆದರೆ ಸಾಯಿಸುತ್ತೇನೆ ಬಂಗಾರ ಇದೆಯೋ ಇಲ್ಲವೋ ನೋಡುತ್ತೇನೆ, ಯಾರನ್ನಾದರೂ ಕರೆದರೆ ಕುತ್ತಿಗೆ ಹಿಸುಕಿ ಸಾಯಿಸುತ್ತೇನೆ) ಎಂದು ತುಳುವಿನಲ್ಲಿ ಬೆದರಿಸಿ, ಗೋದ್ರೇಜ್ ನಲ್ಲಿದ್ದ ಸುಮಾರು 16 ಗ್ರಾಂ ತೂಕದ ಚಿನ್ನದ ಸರ, 20 ಗ್ರಾಂ ತೂಕದ 2 ಚಿನ್ನದ ಬಳೆ ಹಾಗೂ ಪರ್ಸ್ ನಲ್ಲಿ ಸುಮಾರು 14 ಸಾವಿರ ರೂಪಾಯಿ ನಗದು ಹಣವನ್ನು ದೋಚಿದ ಬಗ್ಗೆ ಠಾಣಾ ಅ.ಕ್ರ 158/25 ರಂತೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಬೆನ್ನುಹತ್ತಿದ ಪೊಲೀಸರು ಆರೋಪಿತರ ಪತ್ತೆಯ ಬಗ್ಗೆ ಠಾಣಾ ಪಿ.ಎಸ್.ಐ ರಘು ನಾಯಕ, ರಾಘವೇಂದ್ರ ನಾಯ್ಕ್ ಹಾಗೂ ಸಿಬ್ಬಂದಿಯವರ ತಂಡವನ್ನು ಮಾಡಿ ಕೃತ್ಯ ನಡೆದ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದಂತೆ ಶೈನ್ ಎಚ್. ಪುತ್ರನ್ @ ಶಯನ್ @ ಶೈನ್, ಪ್ರಾಯ 21 ವರ್ಷ, ನಂ 2-52/2, ಶ್ರೀ ಸನ್ನಿಧಿ, ನಿಯರ್ ಶ್ರೀ ರಾಮ ಭಜನಾ ಮಂದಿರ, ಗೊಡ್ಡೆ ಕೊಪ್ಲ, ಸುರತ್ಕಲ್ ಎಂಬಾತನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ, ಆತನ ಹೇಳಿಕೆಯಂತೆ ಸದ್ರಿ ಕೃತ್ಯವನ್ನು ಜೈಸನ್ @ ಲೆನ್ಸನ್ ಕಾರ್ಕಳ ನೊಂದಿಗೆ ಮಾಡಿರುವುದಾಗಿ, ಚಿನ್ನಾಭರಣವನ್ನು ಬೆಂಗಳೂರಿನ ಗಿರೀಶ್ ಎಸ್ ಮತ್ತು ವಿನೋದ್ ಕುಮಾರ್ ಎಂಬವರಿಗೆ ಮಾರಿದ ಬಗ್ಗೆ ತಿಳಿಸಿದಂತೆ, ಪೊಲೀಸರು ಬೆಂಗಳೂರಿಗೆ ತೆರಳಿ, ವಿನೋದ್ @ ಕೋತಿ @ ವಿನೋದ್ ಕುಮಾರ್, ಮನೆ ನಂಬ್ರ 214, 5ನೇ ಕ್ರಾಸ್, ಕಾಶಿನಗರ, ಎಲೆಚನಹಳ್ಳಿ, ಬೆಂಗಳೂರು ಹಾಗೂ ಗಿರೀಶ್ @ ಸೈಕಲ್ ಗಿರಿ, ವಾಸ: ನಂಬ್ರ 62, ಕನಕಪುರ, ಮೈನ್ ರಸ್ತೆ, ಉಡಿಪಾಳ್ಯ, ಬೆಂಗಳೂರು ದಕ್ಷಿಣ ರವರನ್ನು ದಿನಾಂಕ: 14.12.2025 ರಂದು ವಶಕ್ಕೆ ಪಡೆದು ಆರೋಪಿತರಿಂದ ಕಳವುಗೈದ 4,43,000 ರೂ ಬೆಲೆ ಬಾಳುವ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಮೋಟಾರ್ ಸೈಕಲ್, 3 ಮೊಬೈಲ್ ಹಾಗೂ 3,000 ನಗದನ್ನು ಮಹಜರು ಮುಖೇನ ವಶಕ್ಕೆ ಪಡೆದುಕೊಂಡಿರುತ್ತಾರೆ.

ಆರೋಪಿ ಜೈಸನ್ ಯಾನೆ ಲೆನ್ಸನ್ ಕಾರ್ಕಳ ಎಂಬಾತನು ತಲೆಮರೆಸಿಕೊಂಡಿರುತ್ತಾನೆ. ಶೈನ್ ಎಚ್. ಪುತ್ರನ್ @ ಶಯನ್ @ ಶೈನ್ ಎಂಬಾತನ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಗಾಂಜಾ ಸೇವನೆಯ ಒಂದು ಪ್ರಕರಣ ದಾಖಲಾಗಿರುತ್ತದೆ. ವಿನೋದ್ @ ಕೋತಿ @ ವಿನೋದ್ ಕುಮಾರ್ ಎಂಬಾತನ ಮೇಲೆ ಬೆಂಗಳೂರಿನ ಕೆ.ಎಸ್.ಲೇಔಟ್ ಠಾಣೆಯಲ್ಲಿ ರೌಡಿ ಶೀಟ್ ತೆರೆಯಲಾಗಿರುತ್ತದೆ. ಈತನ ವಿರುದ್ದ ಬೆಂಗಳೂರು ನಗರದ ವಿವಿಧ ಠಾಣೆಗಳಲ್ಲಿ 2 ಕೊಲೆ, 2 ಕೊಲೆಯತ್ನ, 4 ದರೋಡೆ, 1 ಬೆದರಿಕೆ, 1 ಗಾಂಜಾ ಮಾರಾಟ, 1 ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣ ಒಟ್ಟು 11 ಪ್ರಕರಣಗಳು ದಾಖಲಾಗಿರುತ್ತವೆ. ಗಿರೀಶ್ @ ಸೈಕಲ್ ಗಿರಿ ಎಂಬತನ ಮೇಲೆ ಬೆಂಗಳೂರಿನ ಕಗ್ಗಲಿಪುರ ಠಾಣೆಯಲ್ಲಿ ರೌಡಿ ತೆರೆಯಲಾಗಿರುತ್ತದೆ ಹಾಗೂ ಬೆಂಗಳೂರು ನಗರದ ವಿವಿಧ ಠಾಣೆಯಲ್ಲಿ 5 ಕೊಲೆಯತ್ನ, 1 ದರೋಡೆ, 3 ಹಲ್ಲೆ ಪ್ರಕರಣ ಸೇರಿ ಒಟ್ಟು 9 ಪ್ರಕರಣಗಳು ದಾಖಲಾಗಿರುತ್ತವೆ. ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿತರಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

ಆರೋಪಿ ಪತ್ತೆ ಕಾರ್ಯದಲ್ಲಿ ಉತ್ತರ ಉಪ ವಿಭಾಗದ ACP ಶ್ರೀಕಾಂತ್. ಕೆ ರವರ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕರಾದ ಪ್ರಮೋದ್ ಕುಮಾರ್ ಪಿ, ಪಿ.ಎಸ್.ಐ ರಘುನಾಯಕ್, ರಾಘವೇಂದ್ರ ನಾಯ್ಕ್, ಎ.ಎಸ್.ಐ ಗಳಾದ ರಾಧಾಕೃಷ್ಣ, ರಾಜೇಶ್ ಆಳ್ವ ಹಾಗೂ ಠಾಣಾ ಸಿಬ್ಬಂದಿಗಳಾದ ಅಣ್ಣಪ್ಪ, ಉಮೇಶ್, ಅಜಿತ್ ಮ್ಯಾಥ್ಯೂ, ತಿರುಪತಿ, ಕಾರ್ತಿಕ್, ವಿನೋದ್ ನಾಯ್ಕ್, ಸುನೀಲ್ ಕುಸನಾಳ, ಸತೀಶ ಸತ್ತಿಗೇರಿ, ಮಂಜುನಾಥ ಬೊಮ್ಮನಾಳ, ಹನುಮಂತ ಆಲೂರ ಮೊದಲಾದವರು ಭಾಗವಹಿಸಿದ್ದರು.