ಪೈಸಲ್ ವಿರುದ್ದ ದರೋಡೆ, ಢಕಾಯಿತಿ, ಕಳ್ಳತನ, ಕೊಲೆ ಸೇರಿದಂತೆ ಬರೋಬ್ಬರಿ 42 ಪ್ರಕರಣಗಳು
ಡಿಸೆಂಬರ್ 12 ರಂದು ಯೆಯ್ಯಾಡಿಯ ಶ್ರೀ ಹರಿ ಕಾಂಪ್ಲೆಕ್ಸ್ ನ ಪಾರ್ಕಿಂಗ್ ಬಳಿ ನಿಲ್ಲಿಸಿದ್ದ ಯಮಹಾ KA-19-ER-7755 ಮೋಟಾರ್ ಸೈಕಲ್ ನ್ನು ಕಳವುಗೈದ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ಕದ್ರಿ ಕ್ರೃೆಂ ಪೊಲೀಸರಿಗೆ ದೊರೆತ ಖಚಿತ ಮಾಹಿತಿಯಂತೆ ದಿನಾಂಕ: 16-12-2025 ರಂದು ಪ್ರಕರಣದ ಪ್ರಮುಖ ಆರೋಪಿ ಪೈಸಲ್ @ ತೋಟ ಪೈಸಲ್ ಮತ್ತು ನಿತೀನ್ ಕುಮಾರ್, ಮೈಸೂರು ಎಂಬವರನ್ನು ವಶಕ್ಕೆ ಪಡೆದು ಕೂಲಂಕುಷವಾಗಿ ವಿಚಾರಣೆ ನಡೆಸಿದಾಗ ಆರೋಪಿಗಳು ದಿನಾಂಕ: 13-12-2025 ರಂದು ಭಟ್ಕಳ ಗ್ರಾಮಿಣ ಪೊಲೀಸ್ ಠಾಣಾ ಸರಹದ್ದಿನ ಗರ್ಡಿ ಹಿತ್ಲು ಬೆಳಕೆ ಭಟ್ಕಳ ತಾಲೂಕಿನಲ್ಲಿ ವಯೋವೃದ್ದೆ ಶ್ರೀಮತಿ ಹೊನ್ನಮ್ಮ ಮಹಾದೇವ ನಾಯ್ಕ್ ರವರ ಕುತ್ತಿಗೆಯಿಂದ ಚಿನ್ನದ ಚೈನ್ ನ್ನು ಕಸಿದುಕೊಂಡು ಪರಾರಿಯಾದ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಬಾಯಿ ಬಿಟ್ಟಿದ್ದು, ಆರೋಪಿಗಳಿಂದ 1,20,000 ಸಾವಿರ ರೂ. ಮೌಲ್ಯದ ಒಂದು ಚಿನ್ನದ ಸರ, ಮತ್ತು ಕೃತ್ಯಕ್ಕೆ ಉಪಯೋಗಿಸಿದ ಒಂದು ದ್ವಿಚಕ್ರವಾಹನವನ್ನು ಆರೋಪಿಗಳಿಂದ ಪೊಲೀಸರು ವಶಪಡಿಸಿಕೊಂಡಿರುತ್ತಾರೆ.

ಆರೋಪಿ ಪೈಸಲ್ @ ತೋಟ ಪೈಸಲ್ ವಿರುದ್ದ ಉಡುಪಿ, ಕಾರ್ಕಳ, ಮಣಿಪಾಲ, ಮಂಗಳೂರು, ಬೆಳ್ತಂಗಡಿ, ವಿಟ್ಲ, ಕಂಕನಾಡಿ ನಗರ ಪೊಲೀಸ್ ಠಾಣೆ, ಪುತ್ತೂರು, ಶಿರ್ವ, ಸುರತ್ಕಲ್, ಕಡಬ, ಕೊಣಾಜೆ, ಮಡಿಕೇರಿಯ ಕುಶಾಲ ನಗರ, ಹಾಗೂ ಕೇರಳ ರಾಜ್ಯಗಳಲ್ಲಿ ರಾಬರಿ, ದರೋಡೆ, ಕಳ್ಳತನದ ಮತ್ತು ಕೊಲೆ ಪ್ರಕರಣ ಸೇರಿದಂತೆ ಸರಿ ಸುಮಾರು 42 ಪ್ರಕರಣಗಳು ದಾಖಲಾಗಿರುತ್ತದೆ. ಈತನ ವಿರುದ್ದ ವಿವಿಧ ನ್ಯಾಯಾಲಯಗಳಲ್ಲಿ 10 ಕ್ಕಿಂತಲೂ ಹೆಚ್ಚು ಜಾಮೀನು ರಹಿತ ವಾರೆಂಟ್ ಇದ್ದು, ನ್ಯಾಯಾಲಯಕ್ಕೆ ಹಾಜರಾಗದೇ ತಲೆ ತಪ್ಪಿಸಿಕೊಂಡಿರುತ್ತಾನೆ.

ಮಂಗಳೂರು ಪೂರ್ವ ಪೊಲೀಸ್ ಠಾಣೆಯ ನಿರೀಕ್ಷಕರಾದ ಅನಂತ ಪದ್ಮನಾಭ, ಪಿಎಸ್ಐ ಮನೋಹರ್ ಪ್ರಸಾದ್, ಎ.ಎಸ್.ಐ.ಗಳಾದ ಚಂದ್ರಶೇಖರ್, ಸುಧಾಕರ್ ರಾವ್, ರಾಜಶೇಖರ್, ಸಿಬಂಧಿಗಳಾದ ಲೋಕೆಶ್, ಸಂತೋಷ್ ಡಿ.ಕೆ, ಸುರೇಶ್, ದಿಲೀಪ್, ಮೋಹನ್, ಮಲ್ಲಪ್ಪ ಬಿ., ಸುನೀಲ್, ಮಣಿಕಂಠ, ಮೌಲಾ ಅಹಮ್ಮದ್ ಮತ್ತು ಮಂಜುನಾಥ ವಡ್ಡರ ಹಾಗೂ ಕದ್ರಿ ಠಾಣೆಯ ಸಿಬ್ಬಂದಿ ವರ್ಗ ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
