ಬಿಎಂಆರ್ ಲಕ್ಕಿ ಸ್ಕೀಂ: ಲಬೋ ಲಬೋ ಗ್ರಾಹಕರು. ಬಡ-ಮಧ್ಯಮ ವರ್ಗದವರಿಗೆ ಆಮಿಷ ತೋರಿಸಿ ಪಂಗನಾಮ.!

ಕರಾವಳಿ

ಪ್ರಭಾವಿ ನಾಯಕರೊಂದಿಗೂ ಸಖ್ಯ. ಗಡುವು ಮುಗಿದು ಗ್ರಾಹಕರಿಗೆ ಉಂಡೆನಾಮ.!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಅಣಬೆಗಳಂತೆ ಹುಟ್ಟಿಕೊಂಡ ಲಕ್ಕಿ ಸ್ಕೀಂ ಗಳು ಬಾಗಿಲು ಮುಚ್ಚಿ ಗ್ರಾಹಕರು ಲಬೋ ಲಬೋ ಅನ್ನುವಂತಾಗಿದೆ. ಈಗಾಗಲೇ ಹತ್ತಾರು ಲಕ್ಕಿ ಸ್ಕೀಂ ಗಳು ಗೋತಾ ಹೊಡೆದು ಕೋಟಿ ಕೋಟಿ ದುಡ್ಡು ಬಾಚಿ ಎಸ್ಕೇಪ್ ಆಗಿದೆ. ಕೆಲವರು ಜೈಲು ಕಂಬಿ ಎಣಿಸಿದ್ದು ಇದೆ. ಅದರಲ್ಲೂ ಸುರತ್ಕಲ್ ಭಾಗದ ಪ್ರಭಾವಿಯೊಬ್ಬನ ಬಿಎಂಆರ್ ಲಕ್ಕಿ ಸ್ಕೀಂ ಕೂಡ ಮುಳುಗಡೆಯಾಗಿದೆ.
ದುಡ್ಡು ಕಟ್ಟಿದ ಗ್ರಾಹಕರು ಬಿಎಂಆರ್ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಬಡವರ ದುಡ್ಡಿನಲ್ಲಿ ಐಷಾರಾಮಿ ಬದುಕು ಸಾಗಿಸುವ ಅದರ ಮಾಲಕ ದಾವೂದನನ್ನು ನಡುರಸ್ತೆಯಲ್ಲೇ ನಿಲ್ಲಿಸಿ ಪ್ರಶ್ನಿಸಿದ್ದಾರೆ. ಇನ್ನೇನು ನಮ್ಮ ಹಕೀಕತ್ತು ಬಟಾಬಯಲಾಯಿತು ಅಂದು ಕೊಂಡು ಹದಿನೈದು ದಿನಗಳ ಗಡುವು ಕೇಳಿ ಅಲ್ಲಿಂದ ಎಸ್ಕೇಪ್ ಆಗಿದ್ದ. ಡಿಸೆಂಬರ್ 25 ರ ಮುನ್ನ ಗ್ರಾಹಕರಿಗೆ ಬಾಕಿ ಇರುವ ಐಟಂ ನೀಡುವುದಾಗಿ ಸಮಯ ಕೇಳಿಕೊಂಡಿದ್ದ ಬಿಎಂಆರ್ ಈವರೆಗೂ ಗ್ರಾಹಕರಿಗೆ ನಯಾ ಪೈಸೆಯ ವಸ್ತುಗಳನ್ನು ನೀಡಿಲ್ಲ. ಹಳೆಯ ವರ್ಷ ಮುಗಿದು ಹೊಸ ವರ್ಷಕ್ಕೆ ದಾಪುಗಾಲು ಇಡುತ್ತಿದ್ದರೂ ಗ್ರಾಹಕರಿಗೆ ಉಂಡೆನಾಮ ಹಾಕಿದ್ದಾರೆ. ತಿಂಗಳ ಹಿಂದೆ ಬಿಎಂಆರ್ ಕಚೇರಿಗೆ ನುಗ್ಗಿದ್ದ ಗ್ರಾಹಕರು ತಾವು ಕಟ್ಟಿದ ಹಣವನ್ನು ವಾಪಸ್ ನೀಡುವಂತೆ ಕೇಳಿದ್ದರು. ಅದಕ್ಕೆ ಸಮಯಾವಕಾಶ ಕೇಳಿ ಗ್ರಾಹಕರನ್ನು ಅಲ್ಲಿಂದ ಕಳಿಸಿದ್ದರು. ಇದೀಗ ಕೊಟ್ಟ ಮಾತು ತಪ್ಪಿದ ಬಿಎಂಆರ್ ಗ್ರಾಹಕರಿಗೆ ಮಕ್ಮಲ್ ಟೋಪಿ ಹಾಕಿದೆ.

ಬಿಎಂಆರ್ ಲಕ್ಕಿ ಸ್ಕೀಂ ಗೋಲ್ ಮಾಲ್ ಬಟಾಬಯಲಾಗಿದೆ. ಪ್ರಸಿದ್ಧ ಸತ್ಯವಂತ ಸಂಸ್ಥೆ ನಮ್ಮದು ಎಂದು ಬಡಾಯಿಕೊಚ್ಚಿಕೊಳ್ಳುತ್ತಿದ್ದ ಬಿಎಂಆರ್ ಲಕ್ಕಿ ಸ್ಕೀಂ ಉಂಡೆನಾಮ ಪುರಾಣ ಹೊರಬಂದಿದೆ. ಬಡವರು, ಕೂಲಿಕಾರ್ಮಿಕರು ದುಡಿದ ದುಡ್ಡಿನಲ್ಲಿ ಶೋಕಿ ಜೀವನ ನಡೆಸುವ ಬಿಎಂಆರ್ ಮಾಲಕನ ವಿಐಪಿ ಲೈಪ್ ಸ್ಟೈಲ್ ಪುರಾಣದ ಕಥೆಯಿದು. ಅಮಾಯಕರಿಗೆ ಮಕ್ಮಲ್ ಟೋಪಿ ಇಟ್ಟು ದಿನ ದಿನ ಹೈ ಫೈ ಕಾರಿನಲ್ಲಿ ಸುತ್ತಾಡುತ್ತಾ ಪೋಶ್ ಕೊಡುವ ಬಿ ಎಂ ಆರ್ ನ ತಲೆ ಹೊಡೆದ ಕಥೆಯಿದು.

ಸುರತ್ಕಲ್, ಕೃಷ್ಣಾಪುರ, ಕಾಟಿಪಳ್ಳ ಪರಿಸರದಲ್ಲಿ ಮುಸ್ಲಿಂ ಸಮಾಜದವರನ್ನೇ ಗುರಿಯಾಗಿಟ್ಟು ತಲೆ ಎತ್ತಿರುವ ಬಿಎಂಆರ್ ಲಕ್ಕಿ ಸ್ಕೀಂ ಪೂರ್ತಿ ಮುಂಡಾಮೋಚಿದೆ. ತಿಂಗಳಿಗೆ ಒಂದು ಸಾವಿರದಂತೆ 20 ಕಂತುಗಳಲ್ಲಿ ದುಡ್ಡು ಕಟ್ಟಿ ಸಾವಿರಾರು ಜನರಿಗೆ ಮೋಸ ಮಾಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಪ್ಲ್ಯಾಟ್, ಕಾರು, ಬೈಕ್, ಚಿನ್ನದ ಬಹುಮಾನದ ಆಮಿಷವನ್ನು ನೀಡಿ ಗ್ರಾಹಕರನ್ನು ಸೆಳೆಯುವ ಬೇನಾಮಿ ಸ್ಕೀಮ್ ಗಳು ತಲೆ ಎತ್ತಿದೆ. ಆರಂಭದಲ್ಲಿ ಗ್ರಾಹಕರಿಗೆ ಸಣ್ಣ ಪುಟ್ಟ ಉಡುಗೊರೆ ಕೊಟ್ಟು ಯಾಮಾರಿಸುತ್ತಾರೆ. ಜನ ಈ ಸ್ಕೀಂ ಗೆ ಜಾಯಿನ್ ಆಗುತ್ತಿದ್ದಂತೆ ನಖರಾ ತೋರಿಸುತ್ತಾರೆ. ಕೊನೆಗೆ ಬಾಗಿಲು ಎಳೆದುಕೊಂಡು ಪರಾರಿಯಾಗುತ್ತಾರೆ. ಆರ್ ಬಿಐ ನಿಯಮಗಳನ್ನೇ ಗಾಳಿಗೆ ತೂರಿ ಹುಟ್ಟಿ ಕೊಂಡಿರುವ ಬ್ಲೇಡ್ ಕಂಪನಿಗಳ ವಿರುದ್ಧ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ. ಸುಮಧುರ ಧ್ವನಿಯ ಯುವತಿಯರನ್ನು ಇಟ್ಟುಕೊಂಡು ಅವರಿಂದ ಪೋನ್ ಕರೆ ಮಾಡಿಸಿ ಸ್ಕೀಂ ಗೆ ಸೇರುವಂತೆ ಪ್ರೇರೇಪಿಸಲಾಗುತ್ತದೆ. ಮಧುರ ಕರೆ ನಂಬಿ ಗುಂಡಿಗೆ ಬಿದ್ದವರೂ ಇದ್ದಾರೆ.

BMR ಐಷಾರಾಮಿ ಬದುಕಿನ ಕಥೆ.!
ಸುರತ್ಕಲ್, ಕೃಷ್ಣಾಪುರ, ಕಾಟಿಪಳ್ಳ ಪರಿಸರದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಫ್ಲ್ಯಾಟ್, ಕಾರು ಆಸೆ ಹುಟ್ಟಿಸಿ ಗಡಡ್ಡಾಗಿ ಬೆಳೆದು ನಿಂತಿದ್ದೇ ಈ BMR ಲಕ್ಕಿ ಸ್ಕೀಂ. ಪ್ರಭಾವಿ ರಾಜಕೀಯ ನಾಯಕರೊಂದಿಗೆ ಸಖ್ಯ ಬೆಳೆಸಿರುವ ಈ ಸಂಸ್ಥೆಯ ಮಾಲಕನನ್ನು ನಂಬಿ ದುಡ್ಡು ಕಟ್ಟಿದವರವರೆಲ್ಲ ಈಗ ಲಬೋ ಲಬೋ ಎಂದು ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಒಂದು ಪಕ್ಷದ ಮುಖಂಡನಾಗಿರುವ ಈ ಮಾಲಕ, ಸುರತ್ಕಲ್ ಭಾಗದಲ್ಲಿ ಪಕ್ಷದ ಹಲವು ಕಾರ್ಯಕ್ರಮಗಳಿಗೆ ಫಂಡಿಂಗ್ ಮಾಡಿದ್ದೂ ಇದೆಯಂತೆ! ಪಕ್ಕಾ ಪ್ರಚಾರಪ್ರಿಯನಾಗಿರುವ ಸರದಾರ ವೇದಿಕೆಯಲ್ಲಿ ತನ್ನನ್ನು ಹೊಗಳಿ ಅಟ್ಟಕ್ಕೇರಿಸಲು ನಿರೂಪಕನನ್ನೇ ಬುಕ್ ಮಾಡುವ ಚಟದವನಂತೆ.! ಕ್ರಿಕೆಟ್ ಗ್ರೌಂಡಿಗೆ ಅತಿಥಿಯಾಗಿ ಬರುವ ಮುನ್ನ ಮುಂಗಡವಾಗಿ ಪೋನ್ ಕರೆ ಮಾಡಿ ಬರುವುದಾಗಿ ಹೇಳುವುದುಂತಂತೆ. ಬಿಎಂಆರ್ ಮಾಲಕ ಅತಿಥಿಯಾಗಿ ಬರುವುದೆಂದರೆ ಕೆಲವು ನಿರೂಪಕರಿಗೆ ಖುಷಿಯೋ ಖುಷಿ. ಮಾಲಕನನ್ನು ಉಘೇ.. ಉಘೇ.. ಶಬ್ದದ ಮೂಲಕ ಹೊಗಳಿ ಅಟ್ಟಕ್ಕೇರಿಸಲಾಗುತ್ತದೆ. ಮಾಲಕ ವೇದಿಕೆ ಬಿಟ್ಟು ನಿರ್ಗಮಿಸುವಾಗ ನಿರೂಪಕನಿಗೆ ಗೂಗಲ್ ಪೇ ಯಲ್ಲಿ 2 ರಿಂದ 3 ಸಾವಿರ ಸಂದಾಯವಾಗುತ್ತದೆಯಂತೆ.! ಬಡವರು ಲಕ್ಕಿ ಸ್ಕೀಂ ಗೆ ಕಟ್ಟಿದ ದುಡ್ಡನ್ನು ಆತ ತನ್ನ ಪ್ರಚಾರದ ತೆವಲಿಗೆ ಬಳಸಿಕೊಳ್ಳುವುದು ಈ ರೀತಿ.

ಇನ್ನು ಈಗಾಗಲೇ ಬಿಎಂಆರ್ ಗೋಲ್ಡ್ ಸ್ಕೀಂ ಆರಂಭಿಸಿ ಸಾವಿರಾರು ಗ್ರಾಹಕರು ತಿಂಗಳ ಕಂತಿನ ರೂಪದಲ್ಲಿ ದುಡ್ಡು ಪಾವತಿಸಿದ್ದು ಇದೆ. ಆದರೆ ದುಡ್ಡು ಪೀಕಿಸಿ 916 ಗೋಲ್ಡ್ ಬಂಗಾರ ನೀಡದೆ ವಂಚಿಸಲಾಗುತ್ತಿದೆ ಅನ್ನುವ ಆರೋಪಗಳಿವೆ. ಸರಕಾರಕ್ಕೆ ತೆರಿಗೆ ಕಟ್ಟದೆ ಇಂತಹ ವ್ಯವಹಾರ ನಡೆಸಲಾಗುತ್ತಿದೆಯಂತೆ.

ಇನ್ನು ಲಕ್ಕಿ ಸ್ಕೀಂ ನಲ್ಲಿ ಸಂಗ್ರಹಿಸಿರುವ ದುಡ್ಡಿನಲ್ಲಿ ತನ್ನ ಹಾಗೂ ಕುಟುಂಬಿಕರ ಹೆಸರಿನಲ್ಲಿ ಅಲ್ಲಲ್ಲಿ ಕೊಟ್ಯಾಂತರ ರೂಪಾಯಿ ಬೆಲೆ ಬಾಳುವ ಜಾಗ ಪರ್ಚೇಸ್ ಮಾಡಿದ್ದಾರೆ ಅನ್ನುವ ಮಾಹಿತಿಗಳಿವೆ. ಹೆಸರಿಗೆ ಮಾತ್ರ ಬಿಲ್ಡರ್ ಅನ್ನುವ ಪೋಸ್ ಅಷ್ಟೇ. ಆದರೆ ಸ್ಕೀಂ ಹೆಸರಿನಲ್ಲಿ ಸಂಗ್ರಹಿಸಿರುವ ದುಡ್ಡಿನಲ್ಲಿ ಐಷಾರಾಮಿ ಬದುಕು ಸಾಗಿಸಿ ಮಜಾ ಉಡಾಯಿಸುತ್ತಿದ್ದಾರೆ. ಅದರೆ ಬಡಪಾಯಿ ಗ್ರಾಹಕರು ಮಾತ್ರ ಹಗಲು ರಾತ್ರಿ ದುಡಿದು ಇವರ ಸ್ಕೀಮ್ ಗೆ ಹಣ ಕಟ್ಟಿ ಬೀದಿ ಪಾಲಾಗುತ್ತಿದ್ದಾರೆ. ಈತ ವಿದೇಶದಲ್ಲೂ ಹಲವಾರು ವಹಿವಾಟಿಗೆ ಹಣ ಸುರಿದಿದ್ದಾನೆ, ಸೌದಿ ಅರೇಬಿಯಾದ ಜುಬೈಲ್ ನಲ್ಲಿ ಪ್ರತಿಷ್ಠಿತ ರಾಜಕರಣಿಯೊಂದಿಗೆ ಸಖ್ಯಹೊಂದಿ ಪಾಲುದಾರಿಕೆಯಲ್ಲಿ ಬಿಸಿನೆಸ್ ಅರಂಭಿಸಿ, ಬಡವರ ಬೆವರಿನ ಹಣವನ್ನು ಅಲ್ಲೂ ಸುರಿದಿದ್ದಾರೆ, ಅನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.

ಇನ್ನಾದರೂ ಮಂಗಳೂರು ಪೊಲೀಸ್ ಆಯುಕ್ತರು, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮುರ್ತುವರ್ಜಿವಹಿಸಿ, ಸರಕಾಕ್ಕೆ ತೆರಿಗೆ ವಂಚನೆ ಮಾಡಿರುವ ಬಗ್ಗೆ, ಬಡ, ಮಧ್ಯಮ ವರ್ಗದ ಜನರಲ್ಲಿ ಆಮಿಷ ತೋರಿಸಿ, ಸರಕಾರಕ್ಕೆ ತೆರಿಗೆ ಪಾವತಿಸದೇ ಅಕ್ರಮವಾಗಿ ನಡೆಸುವ ಇಂತಹ ಲಕ್ಕಿ ಸ್ಕೀಂ ಗಳ ಮಾಲಕರಿಗೆ ಕಾನೂನಿನ ರುಚಿ ತೋರಿಸಬೇಕಿದೆ.