ಆಪರೇಷನ್ ವೇಳೆ ಮಹಿಳೆ ಮೃತ್ಯು: ಕಾರ್ಕಳ ಖಾಸಗಿ ಆಸ್ಪತ್ರೆಯ ವೈದ್ಯರ ವಿರುದ್ಧ ಪ್ರಕರಣ ದಾಖಲು

ಕರಾವಳಿ

ವೈದ್ಯರ ನಿರ್ಲಕ್ಷ್ಯದಿಂದ ಶಸ್ತ್ರಚಿಕಿತ್ಸೆ ಸಂದರ್ಭದಲ್ಲೇ ವ್ಯಕ್ತಿಯೊಬ್ಬರು ಮೃತಪಟ್ಟ ಪ್ರಕರಣದ ಕುರಿತು ಕಾರ್ಕಳದ ಖಾಸಗಿ ಆಸ್ಪತ್ರೆಯ ವೈದ್ಯರಾದ ನಾಗರತ್ನ, ರಹಮತ್ತುಲ್ಲಾ ಮತ್ತು ತುಷಾರ್ ಎಂಬವರ ವಿರುದ್ಧ ಕರ್ತವ್ಯಲೋಪ ಆರೋಪದಲ್ಲಿ ಪ್ರಕರಣ ದಾಖಲಾಗಿದೆ.

ಸಾಣೂರು ಗ್ರಾಮದ ಝುಬೈದಾ ಎಂಬವರು 2025 ಮೇ 10 ರಂದು ಹೊಟ್ಟೆನೋವಿನ ಚಿಕಿತ್ಸೆಗೆಂದು ಕಾರ್ಕಳದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಮಧ್ಯಾಹ್ನ 1.30 ರ ಸುಮಾರಿಗೆ ಆಸ್ಪತ್ರೆಯ ವೈದ್ಯಾಧಿಕಾರಿ ನಾಗರತ್ನ ಅವರು ತಕ್ಷಣ ಆಪರೇಷನ್ ಆಗದಿದ್ದರೆ ಜೀವಕ್ಕೆ ಅಪಾಯವಿದೆ ಎಂದು ಹೇಳಿ ಆಪರೇಷನ್ ಥಿಯೇಟರ್ ಗೆ ಕರೆದೊಯ್ದಿದ್ದರು. ಬಳಿಕ ವೈದ್ಯರಾದ ತುಷಾರ್, ನಾಗರತ್ನ ಹಾಗೂ ರಹಮತ್ತುಲ್ಲಾ ಆಪರೇಷನ್ ಥಿಯೇಟರ್ ನೊಳಗೆ ಹೋಗಿದ್ದರು. ಸಂಜೆ 4 ಗಂಟೆಗೆ ವೈದ್ಯರಾದ ರಹಮತ್ತುಲ್ಲಾ ಅವರು ಝುಬೇದಾ ಅವರ ಪುತ್ರಿ ಮುಬೀನಾ ಬಳಿ ನಿಮ್ಮ ತಾಯಿಯ ಆರೋಗ್ಯ ತುಂಬಾ ಹದಗೆಟ್ಟಿದೆ. ತಕ್ಷಣವೇ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯುವಂತೆ ಹೇಳಿದ್ದರು. ನಂತರ ಸ್ವಲ್ಪ ಹೊತ್ತಿನಲ್ಲಿ ಮತ್ತೆ ಹೊರಬಂದ ವೈದ್ಯರು ನಿಮ್ಮ ತಾಯಿ ಮೃತಪಟ್ಟಿದ್ದಾರೆಂದು ತಿಳಿಸಿದ್ದರು.

ಇದರಿಂದ ಆಕ್ರೋಶಗೊಂಡ ಮೃತ ಝುಬೇದಾ ಸಂಬಂಧಿಕರು ಅವರ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿಯವರು, ಕೂಡಲೇ ಈ ಪ್ರಕರಣದ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಸರ್ಜನ್ ಗೆ ಸೂಚಿಸಿದ್ದರು.

ಈ ಕುರಿತು ಸಮಗ್ರ ತನಿಖೆ ನಡೆಸಿದ ಜಿಲ್ಲಾ ಸರ್ಜನ್ ಡಾ. ಎಚ್ .ಅಶೋಕ್ ವರದಿ ನೀಡಿದ್ದು, ಝುಬೇದಾ ಅವರು ಆಪರೇಷನ್ ಮಾಡುತ್ತಿದ್ದಾಗಲೇ ಮೃತಪಟ್ಟಿದ್ದು, ಇದಕ್ಕೆ ವೈದ್ಯಾದಿಕಾರಿಯ ನಿರ್ಲಕ್ಷ್ಯವೇ ಕಾರಣವೆಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಈ ವರದಿ ಆಧರಿಸಿ ಆಸ್ಪತ್ರೆಯ ಮೂವರು ವೈದ್ಯರ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.