ಹುಬ್ಬಳ್ಳಿ: ಮೂವರು ಅಪ್ರಾಪ್ತರು ಸೇರಿ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಅಷ್ಟೇ ಅಲ್ಲದೆ ವಿಡಿಯೋ ಕೂಡ ಮಾಡಿಟ್ಟಿಕೊಂಡು ತಮ್ಮ ವಿಕೃತಿ ಮೆರೆದಿದ್ದಾರೆ. 13 ವರ್ಷ ವಯಸ್ಸಿನ ಬಾಲಕಿಯ ಮೇಲೆ 14 ರಿಂದ 15 ವರ್ಷ ವಯಸ್ಸಿನ ಮೂವರು ಬಾಲಕರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಬಾಲಕಿಯ ಪೋಷಕರು ಇಲ್ಲದಿದ್ದಾಗ ಅದೇ ಪ್ರದೇಶದಲ್ಲಿ ವಾಸಿಸುತ್ತಿದ್ದ ಹುಡುಗರು ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಸದ್ಯ ಬಾಲಕಿಯನ್ನು ರಕ್ಷಿಸಲಾಗಿದ್ದು, ಮೂವರು ಬಾಲಕರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಒಂದೇ ಏರಿಯಾದಲ್ಲಿ ವಾಸವಾಗಿರುವ ಬಾಲಕಿ ಮತ್ತು ಮೂವರು ಅಪ್ರಾಪ್ತ ಬಾಲಕರು ಪರಿಚಿತರೇ ಆಗಿದ್ದು, ಓರ್ವ ಬಾಲಕನ ಮನೆಯಲ್ಲಿ ಯಾರು ಇಲ್ಲದೇ ಇದ್ದಾಗ, ಬಾಲಕಿಯನ್ನು ಕರೆದುಕೊಂಡು ಹೋಗಿ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದ. ನಂತರ ಅದನ್ನು ವಿಡಿಯೋ ಮಾಡಿಟ್ಟುಕೊಂಡಿದ್ದ. ನಂತರ ಆತ ತನ್ನ ಇನ್ನೊಬ್ಬ ಸ್ನೇಹಿತನಿಗೆ ಹೇಳಿದ್ದ. ಆತ ಮಾರನೇ ದಿನ ಬಾಲಕಿಯನ್ನು ಕರೆದುಕೊಂಡು ಹೋಗಿ ಬೆದರಿಕೆ ಹಾಕಿ ಅತ್ಯಾಚಾರ ಮಾಡಿದ್ದಾನೆ. ಜೊತೆಗೆ ತನ್ನ ಮತ್ತೊಬ್ಬ ಸ್ನೇಹಿತನಿಗೆ ಹೇಳಿದ್ದಾನೆ. ಆತ ಕೂಡ ಬಾಲಕಿಗೆ ಬೆದರಿಕೆ ಹಾಕಿ ಮತ್ತೊಂದು ದಿನ ಬಾಲಕಿಯನ್ನು ಕರೆದುಕೊಂಡು ಹೋಗಿ ಅಚ್ಯಾಚಾರ ಮಾಡಿದ್ದಾನೆ ಎನ್ನಲಾಗಿದೆ.
ಮೂವರು ಕೂಡಾ ಕೃತ್ಯದ ವಿಡಿಯೋ ಇಟ್ಟುಕೊಂಡು ಬಾಲಕಿಗೆ ಹೆದರಿಸಿದ್ದಾರೆ. ಹೀಗಾಗಿ ಬಾಲಕಿ ವಿಚಾರವನ್ನು ತನ್ನ ಪೋಷಕರಿಗೆ ತಿಳಿಸಿರಲಿಲ್ಲ. ಆದರೆ ಬಾಲಕಿಗೆ ಹೊಟ್ಟೆ ನೋವು ಸೇರಿದಂತೆ ಕೆಲ ಭಾಗಗಳಲ್ಲಿ ನೋವು ಕಾಣಿಸಿಕೊಂಡಾಗ ತಾಯಿ ವಿಚಾರಿಸಿದ್ದಾರೆ. ಆಗ ಬಾಲಕಿ ತನ್ನ ಮೇಲೆ ಅತ್ಯಾಚಾರ ಆಗಿರುವ ವಿಚಾರವನ್ನು ತಿಳಿಸಿದ್ದಾಳೆ. ನಂತರ ಬಾಲಕಿ ಹಾಗೂ ಆಕೆಯ ತಾಯಿ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರು ಅಪ್ರಾಪ್ತ ಬಾಲಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
