ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವಧರ್ಮಗಳಿಗೆ ಸಾಮಾಜಿಕ ನ್ಯಾಯ ಕೊಡುವ ಕೆಲಸ, ಸರಕಾರದಿಂದ ಆಗಬೇಕಾಗಿದೆ. ಹಿಂದಿನ ಬಿಜೆಪಿ ಸರಕಾರ ಅವಧಿಯಲ್ಲಿ ಬ್ಯಾನ್ ಮಾಡಿರುವ ಹಿಜಾಬ್ ಮತ್ತು 2ಬಿ ಮೀಸಲಾತಿಯನ್ನು ಕೂಡಲೇ ಜಾರಿಗೊಳಿಸಬೇಕು. ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮುಸ್ಲಿಮರಿಗೆ ನೀಡಿರುವ ಭರವಸೆಯಿಂದ ಈ ರಾಜ್ಯದ ಮುಸ್ಲಿಮರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ನಂಬಿಕೆ ಇಟ್ಟು, ಶೇಕಡ 88% ರಷ್ಟು ಜನ ಮುಸ್ಲಿಮರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಮತ ಚಲಾಯಿಸಿ ವಿಜಯದ ಪತಾಕೆ ಹಾರಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಳಿ ಈ ರಾಜ್ಯದ ಮುಸ್ಲಿಂ ಶಾಸಕರುಗಳ ನಿಯೋಗ ತೆರಳಿ, ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮುಸ್ಲಿಂ ಸಮುದಾಯಕ್ಕೆ ನೀಡಿರುವ ಭರವಸೆಯ ಬಗ್ಗೆ ಮನವರಿಕೆ ಮಾಡುವ ಕೆಲಸ ಆಗಬೇಕಾಗಿದೆ.

ಈ ಸಮುದಾಯ ಸಾಮಾಜಿಕ ನ್ಯಾಯ ಮಾತ್ರ ಕೇಳುತ್ತಿದೆ. ಅದನ್ನು ಜಾರಿಗೊಳಿಸುವಲ್ಲಿ ಪ್ರಯತ್ನಿಸುವ ಕೆಲಸ ಸಮುದಾಯದ ಶಾಸಕರುಗಳ ಜವಾಬ್ದಾರಿಯಾಗಿದೆ. ಈ ರಾಜ್ಯದ 13% ಲಿಂಗಾಯಿತ ಮತ್ತು ಒಕ್ಕಲಿಗ ಸಮುದಾಯದ ಮತ ಎಲ್ಲಾ ಪಕ್ಷಕ್ಕೂ ಹಂಚಿಕೊಂಡು ಅಧಿಕಾರ ಚಲಾಯಿಸಿ, ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತುವುದಾದರೆ, ಮುಸ್ಲಿಂ ಶಾಸಕರುಗಳಿಗೆ ಏಕೆ ಸಾಧ್ಯವಾಗುತ್ತಿಲ್ಲ.? ಅನ್ನುವ ಪ್ರಶ್ನೆ ಕಾಡುತ್ತಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಈ ರಾಜ್ಯದ ಅಲ್ಪಸಂಖ್ಯಾತರು ಅಪಾರ ನಂಬಿಕೆ, ಭರವಸೆಯನ್ನು ಇಟ್ಟುಕೊಂಡಿದ್ದಾರೆ. ಮುಖ್ಯಮಂತ್ರಿಗಳ ದೊತೆ ಹಿಜಾಬಿನ ಮಹತ್ವದ ಬಗ್ಗೆ ತಿಳಿಸುವ ಕೆಲಸ ನಮ್ಮ ಶಾಸಕರುಗಳ ಜವಾಬ್ದಾರಿಯಾಗಿದೆ .ಇತರ ನಾಯಕರುಗಳು ಸಮಾಜದ ಬಗ್ಗೆ ಎಷ್ಟು ಕಾಳಜಿ ವಹಿಸಿ ತಮ್ಮ ತಮ್ಮ ಸಮುದಾಯದ ಕೆಲಸ ಕಾರ್ಯಗಳನ್ನು ಮಾಡುತ್ತಾರೆ. ಮಾತ್ರವಲ್ಲದೆ ಅವರ ಸಮುದಾಯದ ಪರ ಗಟ್ಟಿಯಾಗಿ ಧ್ವನಿ ಎತ್ತುತ್ತಾರೆ. ಆದರೆ ನಮ್ಮ ಶಾಸಕರುಗಳು ಸಮುದಾಯದ ವಿಷಯ ಬಂದಾಗ ಕಣ್ಣಿದ್ದು ಕುರುಡರಂತೆ ವರ್ತಿಸುವುದು ಬಹಳ ಬೇಸರದ ಸಂಗತಿ.

ಅನ್ಯ ಸಮುದಾಯದ ಸಹೋದರರು ನಮ್ಮಲ್ಲಿ ಪ್ರಶ್ನೆ ಮಾಡುತ್ತಾರೆ. ನಿಮ್ಮ ನಾಯಕರುಗಳು ಯಾಕೆ ಮಾತನ್ನಾಡುತ್ತಿಲ್ಲ, ಯಾಕೆ ಧ್ವನಿ ಎತ್ತುವುದಿಲ್ಲ.? ಯಾಕಾಗಿ ಮೌನಿಗಳಾಗಿದ್ದಾರೆ ಎಂದು. ಸಮುದಾಯದ ಜನರಲ್ಲಿ ತಾಳ್ಮೆಯ ಕಟ್ಟೆ ಒಡೆಯುವ ಮುನ್ನ ಯೋಚಿಸಿ. ಸಮುದಾಯದ ಜನರು ಪ್ರಬುದ್ಧರಿದ್ದಾರೆ, ಇಂದಲ್ಲಾ ನಾಳೆ ಖಂಡಿತಾ ತಿರುಗಿ ಬೀಳುತ್ತಾರೆ ಅನ್ನುವುದನ್ನು ನಮ್ಮ ಸಮುದಾಯದ ಶಾಸಕರು ಮರೆಯಬಾರದು. ಎಂದು ದಕ್ಷಿಣ ಕನ್ನಡ ಮುಸ್ಲಿಂ ಜನಪ್ರಧಿನಿಧಿಗಳ ಒಕ್ಕೂಟದ ಅಧ್ಯಕ್ಷರು, ಬಜ್ಪೆ ಪಟ್ಟಣ ಪಂಚಾಯತ್ ನೂತನ ಸದಸ್ಯರಾದ ಸಿರಾಜ್ ಬಜ್ಪೆ ಎಚ್ಚರಿಸಿದ್ದಾರೆ.
