ಪಿಲಿಕುಳ ಪ್ರಾಣಿ ಸಂಗ್ರಾಲಯಕ್ಕೆ ಬೀಗ: ಹೈಕೋರ್ಟ್ ಮಹತ್ವದ ಆದೇಶ

ಕರಾವಳಿ

ಕರಾವಳಿಯ ಏಕೈಕ ನಿಸರ್ಗಧಾಮ ಆಗಿದ್ದ ಪಿಲಿಕುಳ ಪ್ರಾಣಿ ಸಂಗ್ರಾಲಯ ಇನ್ನು ನೆನಪು ಮಾತ್ರ: ಇಲ್ಲಿನ ಪ್ರಾಣಿಗಳ ತೆರವಿಗೆ ನಡೆಯುತ್ತಿದೆ ಕೆಲಸ ಕಾರ್ಯ.!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏಕೈಕ ಪ್ರಾಣಿಗಳ ಸಂಗ್ರಾಲಯ ಆಗಿದ್ದ ಪಿಲಿಕುಳ ZOO ಇನ್ನೂ ನೆನಪು ಮಾತ್ರ.‌ ಮಕ್ಕಳಿಗೂ ಕುಟುಂಬಗಳಿಗೂ ಜನಪ್ರಿಯವಾದ ಪ್ರವಾಸಿ ತಾಣವಾದ ಪಿಲಿಕುಳ ನಿಸರ್ಗಧಾಮ, ಆಡಳಿತದ ನಿರ್ಲಕ್ಷ್ಯ ಹಾಗೂ ಜವಾಬ್ದಾರಿಹೀನತೆಯ ಆರೋಪಗಳ ಹಿನ್ನೆಲೆಯಲ್ಲಿ ಹೈಕೋರ್ಟ್‌ನ ತೀವ್ರ ಟೀಕೆಗೆ ಗುರಿಯಾಗಿದೆ. ಕರಾವಳಿಯ ಪ್ರಸಿದ್ಧ ZOO ನಲ್ಲಿ ನಡೆದಿರುವ ದುರುಪಯೋಗವನ್ನು ಕಂಡು ಆಘಾತಗೊಂಡ ಹೈಕೋರ್ಟ್ ನ್ಯಾಯಮೂರ್ತಿಗಳು, ಜೂ ಅನ್ನು ತಕ್ಷಣ ಮುಚ್ಚುವಂತೆ ಆದೇಶಿಸಿದ್ದಾರೆ.

ಆಡಳಿತಾತ್ಮಕ ನಿರ್ಲಕ್ಷ್ಯದ ಕಾರಣದಿಂದ ಪಿಲಿಕುಳ ಪ್ರಾಣಿ ಸಂಗ್ರಾಲಾಯದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ ಎಂದು ವರದಿಯಾಗಿದೆ. ಪ್ರಾಣಿಗಳ ಫೋಟೋಗಳನ್ನು ಪರಿಶೀಲಿಸಿದ ಹೈಕೋರ್ಟ್, ಅವುಗಳ ದುಸ್ಥಿತಿಯನ್ನು ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. “ಪ್ರಾಣಿಗಳು ಈ ರೀತಿಯ ಸ್ಥಿತಿಯಲ್ಲಿ ಇದ್ದರೆ, ಉದ್ಯಾನವನ್ನು ತಕ್ಷಣವೇ ಬಂದ್ ಮಾಡಬೇಕು,” ಎಂದು ಸರ್ಕಾರಕ್ಕೆ ಕಠಿಣ ಎಚ್ಚರಿಕೆ ನೀಡಿದೆ. ಇಲ್ಲಿನ ಪ್ರಾಣಿಗಳು ಹಲವು ವಿಧದ ಕಾಯಿಲೆಗಳಿಗೆ ತುತ್ತಾಗುತ್ತಿದೆ.

ವನ್ಯಜೀವಿ ಸಂರಕ್ಷಣಾವಾದಿ ಭುವನ್ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯ ವೇಳೆ, ನ್ಯಾಯಪೀಠವು ಪ್ರಾಣಿಗಳ ಫೋಟೋಗಳನ್ನು ಪರಿಶೀಲಿಸಿ ಗಂಭೀರ ಕಳವಳ ವ್ಯಕ್ತಪಡಿಸಿತು. ಜಂಗಾದ ಪಂಜರಗಳು, ಅಸ್ವಚ್ಛ ಪರಿಸರ, ಹಾಗೂ ಪ್ರಾಣಿಗಳಿಗೆ ಅಗತ್ಯವಾದ ಸುರಕ್ಷತೆ ಮತ್ತು ಆರೈಕೆಯ ಕೊರತೆ ಬಗ್ಗೆ ನ್ಯಾಯಾಲಯ ಕಠಿಣ ನಿರ್ದೇಶನಗಳನ್ನು ನೀಡಿದೆ.

ಪಿಲಿಕುಳ ಪ್ರಾಣಿ ಸಂಗ್ರಾಲಯ ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸುತ್ತಿದೆಯೇ ಎಂಬುದರ ಮೇಲೂ ನ್ಯಾಯಾಲಯ ಸಂಶಯ ವ್ಯಕ್ತಪಡಿಸಿದೆ. ಏಕೆಂದರೆ ಅದರ ಪರವಾನಗಿ ಡಿಸೆಂಬರ್ 2025ರಲ್ಲಿ ಅವಧಿ ಮುಗಿದಿದೆ ಎಂದು ವರದಿಯಾಗಿದೆ. ಸೂಕ್ತ ವೈದ್ಯಕೀಯ ಚಿಕಿತ್ಸೆ ಕೊರತೆಯಿಂದ ಪ್ರಾಣಿಗಳು ದುರ್ಬಲಗೊಳ್ಳುತ್ತಿದ್ದು, ಕಲುಷಿತ ನೀರನ್ನು ಸೇವಿಸುವುದರಿಂದ ಅನಾರೋಗ್ಯಕ್ಕೆ ಒಳಗಾಗುತ್ತಿವೆ ಎಂದು ಗಮನಿಸಲಾಗಿದೆ. ಕೇಂದ್ರ ಜೂ ಪ್ರಾಧಿಕಾರವು ಕಾರಣ ಕೇಳುವ ನೋಟಿಸ್ ನೀಡಿದ್ದರೂ, ಜೂ ಆಡಳಿತ ಅದನ್ನು ನಿರ್ಲಕ್ಷಿಸಿದೆ ಎನ್ನಲಾಗಿದೆ. ಕರಾವಳಿಯ ಪ್ರಮುಖ ಪ್ರವಾಸಿ ಆಕರ್ಷಣೆಯೊಂದರ ದುಸ್ಥಿತಿ ಪ್ರಾಣಿಪ್ರೇಮಿಗಳಲ್ಲಿ ತೀವ್ರ ಕಳವಳ ಉಂಟುಮಾಡಿದೆ.

ಕರಾವಳಿಯನ್ನು ಕೋಮು ಪ್ರಯೋಗಶಾಲೆಯನ್ನಾಗಿ ಮಾಡಿಕೊಂಡಿರುವ ರಾಜಕಾರಣಿಗಳು ಜಿಲ್ಲೆಯ ಏಕೈಕ ನಿಸರ್ಗಧಾಮ ವಾಗಿರುವ ಪಿಲಿಕುಳ ಜೂ ಅನ್ನು ಉಳಿಸಲು ಸಾಧ್ಯವಾಗದಿರುವುದು ಇಲ್ಲಿನ ಜನಪ್ರತಿನಿಧಿಗಳ ಇಚ್ಛಾಶಕ್ತಿ ಹೇಗಿದೆ ಅನ್ನುವುದನ್ನು ತೋರಿಸುತ್ತದೆ. ಮಾತ್ರವಲ್ಲ ಕರಾವಳಿ ಭಾಗದಲ್ಲಿ ಸಿಲಿಕಾನ್ ಸಿಟಿ ತರುವ ಬಗ್ಗೆ ಉದ್ದುದ್ದ ಭಾಷಣ ಬಿಗಿಯುತ್ತಿದ್ದಾರೆ. ಇಲ್ಲಿನ ಪ್ರವಾಸೋದ್ಯಮದ ಒಂದು ಭಾಗವಾಗಿರುವ ಪಿಲಿಕುಳ ಜೂ ಮುಚ್ಚುಗಡೆಯ ಹಂತಕ್ಕೆ ತಲುಪಿರುವುದು ಜಿಲ್ಲೆಯ ಜನಪ್ರತಿನಿಧಿಗಳ ಅಧೋಗತಿಗೆ ಒಂದು ಒಳ್ಳೆಯ ಉದಾಹರಣೆ ಅಷ್ಟೇ.