ಕುಪ್ಪೆಪದವು ನಿವೇಶನ ವಂಚಿತರ ಹೋರಾಟ: ಗುರುತು ಪಡಿಸಿದ ಜಮೀನಿನ ದಾಖಲೆಗಳನ್ನು ಮಾರ್ಚ್ 16 ರ ಒಳಗಡೆ ಸಿದ್ದಪಡಿಸಿ ಸಹಾಯಕ ಆಯುಕ್ತರ ಕಚೇರಿಗೆ ತಲುಪಿಸುವ ಭರವಸೆ ನೀಡಿದ ತಹಶೀಲ್ದಾರ್

ಕರಾವಳಿ

ಕುಪ್ಪೆಪದವು: 2018 ನೇ ಇಸವಿಯಲ್ಲಿ ಹಕ್ಕು ಪತ್ರ ಪಡೆದು ಈವರೆಗೂ ನಿವೇಶನ ಪಡೆಯದ ಕುಪ್ಪೆಪದವು ಗ್ರಾಮದ 80 ಕುಟುಂಬಗಳಿಗೆ ತಕ್ಷಣ ನಿವೇಶನ ವಿತರಿಸಬೇಕು ಎಂದು ಒತ್ತಾಯಿಸಿ ಇಂದು ಕುಪ್ಪೆಪದವು ಗ್ರಾಮಪಂಚಾಯತ್ ಮುಂಭಾಗ ನಿವೇಶನ ವಂಚಿತರು ಸಾಂಕೇತಿಕವಾಗಿ ಗುಡಿಸಲು ನಿರ್ಮಿಸಿ ಪ್ರತಿಭಟನೆ ನಡೆಸಿದರು.

ಕಳೆದ ಒಂದು ವರ್ಷದ ಅವಧಿಯಲ್ಲಿ ಹಲವು ಸುತ್ತಿನ ಪ್ರತಿಭಟನೆ, ಅನಿರ್ದಿಷ್ಟಾವಧಿ ಧರಣಿಗಳನ್ನು ನಡೆಸಿದರೂ ನಿವೇಶನ ಗುರುತಿಸಲು, ವಿತರಿಸಲು ಗ್ರಾಮಪಂಚಾಯತ್ ಹಾಗು ತಾಲೂಕು ಆಡಳಿತ ನಿರ್ಲಕ್ಷ್ಯ ವಹಿಸಿತ್ತು. ಇದರಿಂದ ಆಕ್ರೋಶಿತರಾದ ನಿವೇಶನ ವಂಚಿತರು ಇಂದು ಹೋರಾಟ ಸಮಿತಿಯ ನೇತೃತ್ವದಲ್ಲಿ ಸಾಂಕೇತಿಕ ಗುಡಿಸಲನ್ನು ಕುಪ್ಪೆಪದವು ಗ್ರಾಪಂ ಕಚೇರಿ ಮುಂಭಾಗ ನಿರ್ಮಿಸಿ ಧರಣಿ ನಡೆಸಿದರು.

ಆಡಳಿತದ ಭರವಸೆಗಳಿಗೆ ಮಣಿಯದೆ ಧರಣಿ ಮುಂದುವರಿಸಿದಾಗ, ಮಂಗಳೂರು ತಹಶೀಲ್ದಾರ್ ಅನಿವಾರ್ಯವಾಗಿ ಧರಣಿ ಸ್ಥಳಕ್ಕೆ ಆಗಮಿಸಿ ಮನವೊಲಿಸಲು ಯತ್ನಿಸಿದರು. ಪ್ರತಿಭಟನಾಕಾರರು ಜಗ್ಗದೆ ಇದ್ದಾಗ, ತಹಶೀಲ್ದಾರ್ ಅವರು ನಿರ್ದಿಷ್ಟವಾದ ಭರವಸೆಯನ್ನು ನೀಡಿ, ಇದೇ ತಿಂಗಳ 23 ಸೋಮವಾರದಂದು ಗುರುತಿಸಲಾಗಿರುವ ಜಮೀನಿನಲ್ಲಿ ಸರ್ವೆ ನಡೆಸಿ, ಮಾರ್ಚ್ 16 ರ ಒಳಗಡೆ ವಿತರಿಸಬೇಕಾದ ನಿವೇಶನದ ದಾಖಲೆಗಳನ್ನು ಸಿದ್ದಪಡಿಸಿ ಮುಂದಿನ ಕ್ರಮಕ್ಕಾಗಿ ಮಂಗಳೂರು ಸಹಾಯಕ ಆಯುಕ್ತರಿಗೆ ಸಲ್ಲಿಸುವುದಾಗಿ ಘೋಷಿಸಿದರು. ಈ ಭರವಸೆಯ ಹಿನ್ನಲೆಯಲ್ಲಿ ಪ್ರತಿಭಟನಾಕಾರರು ಧರಣಿಯನ್ನು ಅಂತಿಮಗೊಳಿಸಿದರು.

ಧರಣಿಯ ನೇತೃತ್ವವನ್ನು ನಿವೇಶನ ರಹಿತರ ಹೋರಾಟ ಸಮಿತಿಯ ಸಂಚಾಲಕಿ ವಸಂತಿ ಕುಪ್ಪೆಪದವು, ಸಿಪಿಐಎಂ ವಲಯ ಕಾರ್ಯದರ್ಶಿ ಸದಾಶಿವ ದಾಸ್, ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಕೆ ಯಾದವ ಶೆಟ್ಟಿ, ಕಾರ್ಮಿಕ ನಾಯಕರಾದ ಹೊನ್ನಯ್ಯ ಅಮೀನ್, ನೋಣಯ್ಯ ಗೌಡ, ಭವಾನಿ ಕುಪ್ಪೆಪದವು,, ವಾರಿಜಾ, ಸಾಲಿ ಪಾವೂರು, ಮಜೀದ್ ಕಲ್ಲಾಡಿ, ಜಮೀಳಾ ಮಣಿಪಲ್ಲ, ಸುಂದರ ನಾಯ್ಕ, ನೆಬಿಸಾ ಮಂಗ್ಲುಚಾರ್ ಮತ್ತಿತರರು ವಹಿಸಿದ್ದರು.