ಒರಿಯರ್ದೊರಿ ಅಸಲ್..!
ತುಳು ಚಿತ್ರರಂಗ ಸಾಗಿ ಬಂದ ಹಾದಿ ಹೂವ ಹಾಸಿಗೆಯಲ್ಲ.
ಕನ್ನಡ ಚಿತ್ರರಂಗದ ಮಡಿಲಲ್ಲೇ ತುಳು ಚಿತ್ರರಂಗವೂ ಇದೆ. ಸೀಮಿತ ಮಾರುಕಟ್ಟೆ, ಸೀಮಿತ ಬಜೆಟ್ನಲ್ಲಿಯೇ ಜನರನ್ನು ರಂಜಿಸುತ್ತಾ, ಪ್ರಯೋಗಗಳನ್ನು ಮಾಡುತ್ತಾ ಬಹುದೂರ ಸಾಗಿ ಬಂದಿದೆ ತುಳು ಚಿತ್ರೋದ್ಯಮ. ಅರ್ಧ ಶತಕ ದಾಟಿರುವ ತುಳು ಚಿತ್ರೋದ್ಯಮ ಸಾಗಿ ಬಂದ ಹಾದಿ ಹೂವಿನದ್ದಾಗಿರಲಿಲ್ಲ. ಹಲವು ಕಲ್ಲು-ಮಳ್ಳುಗಳನ್ನು ದಾಟಿಯೇ ಐದು ದಶಕ ತನ್ನ ಅಸ್ಥಿತ್ವ ಉಳಿಸಿಕೊಂಡು ಬಂದಿದೆ. ಅಸ್ಥಿತ್ವ ಉಳಿಸಿಕೊಳ್ಳುವ ಹೋರಾಟ ಈಗಲೂ ಜಾರಿಯಲ್ಲಿದೆ. ತುಳು ಚಿತ್ರರಂಗದ ಇತಿಹಾಸ ಆರಂಭವಾಗುವುದು ‘ಎನ್ನ ತಂಗಡಿ’ ಹೆಸರಿನ ಸಿನಿಮಾದ ಮೂಲಕ. 1971 ರ ಫೆಬ್ರವರಿ 19 ರಂದು ಮಂಗಳೂರಿನ ಜ್ಯೋತಿ ಚಿತ್ರಮಂದಿರದಲ್ಲಿ ಈ ಸಿನಿಮಾ ಬಿಡುಗಡೆ ಆಗಿತ್ತು. ಅಲ್ಲಿಯವರೆಗೆ ತುಳು ನಾಟಕಗಳು, ಯಕ್ಷಗಾನಗಳನ್ನು ನೋಡಿದ್ದ, ಚಿತ್ರಮಂದಿರಗಳಲ್ಲಿ ಕನ್ನಡ ಸೇರಿದಂತೆ ಇತರ ಭಾಷೆಯ ಸಿನೆಮಾಗಳನ್ನು ನೋಡಿದ್ದ ಕಡಲ ತಡಿಯ ಜನತೆ ಮೊದಲ ಬಾರಿಗೆ ಬೆಳ್ಳಿತೆರೆಯಲ್ಲಿ ತುಳು ಚಿತ್ರವನ್ನು ನೋಡಿ ಪುಳಕಗೊಂಡಿದ್ದರು. ಜ್ಯೋತಿ ಚಿತ್ರಮಂದಿರದ ಹೊರತಾಗಿ ಇನ್ನಾವ ಚಿತ್ರಮಂದಿರವೂ ಈ ಸಿನಿಮಾಕ್ಕೆ ಸಿಕ್ಕಿರಲಿಲ್ಲವಾದ್ದರಿಂದ ಸಿನಿಮಾ ಸೋತು ಮೊದಲ ಪ್ರಯತ್ನವೇ ವಿಫಲವಾಯಿತು.
ಬೆಂಗಳೂರಿನಲ್ಲಿ ಕನ್ನಡ ಚಿತ್ರಗಳಿಗೆ ಕೆಲಸ ಮಾಡಿದ್ದ ಎಸ್ ಆರ್ ರಾಜನ್ ಚಿತ್ರವನ್ನು ನಿರ್ದೇಶಿಸಿದ್ದರು. ಕುದ್ರೋಳಿ ಪೈಲ್ವಾನ್ ಸುಂದರ ಕರ್ಕೇರಾ ಚಿತ್ರಕ್ಕೆ ಬಂಡವಾಳ ಹಾಕಿದ್ದರು. ಕೆ.ಬಿ ಭಂಡಾರಿ ಅವರ ‘ಮೆಗ್ದಿ ಪಲಯೇ ‘ ನಾಟಕ ಎನ್ನ ತಂಗಡಿ ಚಿತ್ರವಾಗಿ ಸೆಟ್ಟೇರಿತು. ಕನ್ನಡದ ಹೆಸರಾಂತ ನಟಿ ಪಂಡರಿಬಾಯಿ ನಟಿಸಿದ್ದರು. ಆದರೆ ಈ ಚಿತ್ರ ಹೇಳಿಕೊಳ್ಳುವಂತಹ ಯಶಸ್ಸು ಕಾಣಲಿಲ್ಲ. ದುಡ್ಡು ಹಾಕಿದವರು ಕೈ ಸುಟ್ಟು ಕೊಂಡರು.
ಎನ್ನ ತಂಗಡಿ ಚಿತ್ರ ಮೊದಲು ತೆರೆ ಕಂಡರೂ ಮೊದಲು ಶೂಟಿಂಗ್ ಆರಂಭಿಸಿದ್ದು ಆರೂರು ಪಟ್ಟಾಭಿ ನಿರ್ದೇಶನದ ‘ದಾರೆದ ಬುಡೆಡಿ’ ಚಿತ್ರ. ಎನ್ನ ತಂಗಡಿ ಚಿತ್ರ ಬಿಡುಗಡೆಯಾಗಿ ಐದು ವಾರಗಳ ಬಳಿಕ ದಾರೆದ ಬುಡೆಡಿ ತೆರೆ ಕಂಡಿತು. ಎಸ್ ಪಿ ಬಾಲಸುಬ್ರಹ್ಮಣ್ಯಂ ಮೊದಲ ಬಾರಿಗೆ ತುಳುವಿನಲ್ಲಿ ಹಾಡಿದ್ದು ಈ ಚಿತ್ರದಲ್ಲಿ.

ಮೂರನೇ ತುಳು ಚಿತ್ರ ಬಿಸತಿ ಬಾಬು ಸೂಪರ್ ಹಿಟ್ ಆಗಿತ್ತು. ಪೌರಾಣಿಕ ಕಥೆಯುಳ್ಳ ಕೋಟಿ ಚೆನ್ನಯ, 1993 ರಲ್ಲಿ ರಿಚರ್ಡ್ ಕ್ಯಾಸ್ಟಲಿನೋ ನಿರ್ದೇಶನದಲ್ಲಿ ಮೂಡಿ ಬಂದ ‘ಬಂಗಾರ್ ಪಟ್ಲೇರ್’ ಹಲವಾರು ರಾಷ್ಟ್ರೀಯ, ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿತ್ತು. ವಿಜಯ್ ಕುಮಾರ್ ಕೊಡಿಯಾಲ್ ನಿರ್ದೇಶನದಲ್ಲಿ ಮೂಡಿಬಂದ ‘ಒರಿಯರ್ದೊರಿ ಅಸಲ್’ ಸಿನಿಮಾ ಥಿಯೇಟರ್ ನಲ್ಲಿ 175 ದಿನ ಪ್ರದರ್ಶನ ಕಂಡು ಸೂಪರ್ ಹಿಟ್ ಆಗಿತ್ತು. ಚಾಲಿಪೋಲಿಲು, ಗಿರಿಗಿಟ್, ಸರ್ಕಸ್ ಹೊಸ ಜಮಾನದಲ್ಲಿ ಮೂಡಿಬಂದು ಸದ್ದು ಮಾಡಿತ್ತು.
ತುಳುವಿಗೆ ಮುಖ್ಯವಾಗಿ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಥಿಯೇಟರ್ ಹೊರತುಪಡಿಸಿದರೆ ,ಮೂಡಿಗೆರೆ , ಸಕಲೇಶಪುರ , ಬೆಂಗಳೂರಿನಲ್ಲಿ ಲಭ್ಯವಾಗುತ್ತದೆ..ಅದು ಬಿಟ್ಟರೆ ಮುಂಬಯಿ , ಪುಣೆ , ಚೆನ್ನೈ , ಅಹಮದಾಬಾದ್ ನಂತಹ ನಗರಗಳಲ್ಲೂ ಸಿಗುತ್ತದೆ.. ದುಬೈ , ದೋಹಾ , ಕತಾರ್ , ಲಾಗೋಸ್ , ಇಸ್ರೇಲ್ , ಆಸ್ಟ್ರೇಲಿಯಾ , ಇಂಗ್ಲೆಂಡ್ನಂತಹ ಪ್ರದೇಶಗಳಲ್ಲಿ ವಿಶೇಷ ಸ್ಕ್ರೀನಿಂಗ್ ಇರುತ್ತವೆ..ಅಲ್ಲಿಯ ತುಳುವರು ವಿಶೇಷ ಆಸಕ್ತಿ ತೋರಿಸುತ್ತಾರೆ..

ಇತ್ತೀಚಿನ ತುಳು ಚಿತ್ರಗಳಲ್ಲಿ ಹಾಸ್ಯವೇ ಮುಖ್ಯವಾಗಿರುವುದು ಸುಳ್ಳಲ್ಲ..ಜನರೂ ತುಳುವಿನ ಹಾಸ್ಯಕ್ಕೆ ಮನಸೋತವರೇ!ಇದಕ್ಕೆಲ್ಲಾ ಕಾರಣ ತುಳು ಹಾಸ್ಯ ನಾಟಕಗಳು.. ಇದೇ ವಿಚಾರ ಇಟ್ಟುಕೊಂಡು ಸಿನೆಮಾದಲ್ಲಿ ಕೂಡಾ ಅಳವಡಿಕೆ ಮಾಡಿದ ಕಾರಣ ಹಾಸ್ಯ ಇಲ್ಲಿ ಕೂಡಾ ಮುಖ್ಯ ಎಂದೆನಿಸಿಬಿಟ್ಟಿತ್ತು..
ಅದೇನೆ ಇದ್ದರೂ ತುಳು ಚಿತ್ರರಂಗ ಬೆಳೆಯುತ್ತಿದೆ.. ರೂಪೇಶ್ ಶೆಟ್ಟಿ, ಪೃಥ್ವಿ ಅಂಬರ್, ವಿಜೆ ವಿನೀತ್ ರಂತಹ ಸೀಮಿತ ನಾಯಕನಟರು ಸುದ್ದಿ ಮಾಡುತ್ತಿದ್ದಾರಷ್ಟೇ.
ಪ್ರಶ್ನೆ ಅದಲ್ಲ. ಕನ್ನಡ ಚಿತ್ರರಂಗದಲ್ಲಿ ಕರಾವಳಿಯ ಅನೇಕ ನಟರು ಮಾಸ್ ನಾಯಕನಟರಾಗಿ ಮಿಂಚುತ್ತಿದ್ದಾರೆ. ಅವರ್ಯಾರೂ ತುಳು ಚಿತ್ರರಂಗವನ್ನು ಉಳಿಸುವ ಕನಿಷ್ಠ ಕೆಲಸವನ್ನು ಮಾಡುತ್ತಿಲ್ಲ ಅನ್ನುವುದು ದುರ್ದೈವದ ಸಂಗತಿ. ಕಾಂತಾರ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ ನಾಯಕ ರಿಷಬ್ ಶೆಟ್ಟಿ. ಈತನ ಚಿತ್ರ ಗೆಲ್ಲಲು ಕರಾವಳಿಯ, ಅದರಲ್ಲೂ ತುಳುವರ ಪಾತ್ರ ಬಹಳ ದೊಡ್ಡದಿದೆ. ಕರಾವಳಿಯ ಸಾಕಷ್ಟು ಅಭಿಮಾನಿ ಸಂಖ್ಯೆಯನ್ನು ಹೊಂದಿದ್ದಾರೆ. ಇನ್ನು ‘ಒಂದು ಮೊಟ್ಟೆಯ ಕಥೆ’ ಮೂಲಕ ಪ್ರವರ್ಧಮಾನಕ್ಕೆ ಬಂದ ರಾಜ್ ಬಿ ಶೆಟ್ಟಿ, ರಕ್ಷಿತ್ ಶೆಟ್ಟಿ ಇವರೆಲ್ಲ ಕರಾವಳಿಯವರು. ಅಭಿಮಾನಿಗಳ ದೊಡ್ಡ ದಂಡೇ ಇರುವುದು ತುಳುವಿನಲ್ಲಿ.
ಬಾಲಿವುಡ್ ಸ್ಟಾರ್ ಸುನೀಲ್ ಶೆಟ್ಟಿ ತುಳು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕನ್ನಡದ ಗೋಲ್ಡನ್ ಸ್ಟಾರ್ ಗಣೇಶ್ ತುಳುವಿನಲ್ಲಿ ಚಿತ್ರ ನಿರ್ಮಿಸುತ್ತಿದ್ದಾರೆ. ಇವರ್ಯಾರಿಗೂ ತುಳುವಿನಲ್ಲಿ ನಟಿಸುವ ಅಗತ್ಯವೇನೂ ಇರಲಿಲ್ಲ. ಆದರೆ ತುಳು ಚಿತ್ರರಂಗ ಅಭಿವೃದ್ಧಿಯಾಗಲಿ, ತಮ್ಮ ಅಭಿಮಾನಿಗಳು ಚಿತ್ರ ನೋಡಿ ತುಳು ಸಿನಿಮಾ ರಂಗ ಇನ್ನಷ್ಟು ಉತ್ತುಂಗಕ್ಕೆ ಏರಲಿ ಅನ್ನುವ ಮಹದಾಸೆ ಇವರದ್ದು. ಇವರಿಗಿದ್ದಷ್ಟು ತುಳು ಪ್ರೇಮ ಕಾಂತಾರಾದ ನಟನಿಗೂ ಇರದಿರುವುದು ವಿಪರ್ಯಾಸ.

ರಿಷಬ್ ಶೆಟ್ಟಿ, ರಾಜ್ ಶೆಟ್ಟಿ, ರಕ್ಷಿತ್ ಶೆಟ್ಟಿ ಕನಿಷ್ಠ ಪಕ್ಷ ಒಂದಾದರೂ ತುಳು ಚಿತ್ರದಲ್ಲಿ ಅಭಿನಯಿಸಿದರೆ ತುಳು ಚಿತ್ರರಂಗದ ಅಭ್ಯುದಯಕ್ಕಾಗಿ ಕೊಡುಗೆ ನೀಡಿದಂತಾಗುತ್ತಿತ್ತು. ಕಾಂತಾರ ಚಿತ್ರವನ್ನು ಥಿಯೇಟರ್ ಗೆ ನುಗ್ಗಿ ಗೆಲ್ಲಿಸಿದ್ದು ತುಳುವರು. ಈ ಉಪಕಾರ ಸ್ಮರಣೆಯಾದರೂ ಬೇಕಿತ್ತು. ಆದರೆ ನಾವು ಮಾಸ್ ಸ್ಟಾರ್ ಗಳಾಗಿದ್ದೇವೆ, ತುಳುವಿನಲ್ಲಿ ನಟಿಸಿದ್ದರೆ ತಮ್ಮ ಇಮೇಜಿಗೆ ಧಕ್ಕೆಯಾಗಬಹುದು ಅನ್ನುವ ಅಹಂ ಇವರಿಗೆ ಕಾಡಿರಬೆಕು. ನಟಿಸದಿದ್ದರೂ ಓಕೆ, ಕನಿಷ್ಠ ಪಕ್ಷ ಒಂದು ಸಿನೆಮಾ ನಿರ್ಮಾಣ ಮಾಡಿದ್ದರೂ ಇವರಿಗೆ ಭೇಷ್ ಅನ್ನಿಸಬಹುದಿತ್ತು. ಗೋಲ್ಡನ್ ಸ್ಟಾರ್ ಗಣೇಶ್ ಗೆ ಕರಾವಳಿಯ ಯಾವುದೇ ಲೇನಾ ದೇನಾ ಇಲ್ಲ. ತನ್ನ ಪತ್ನಿ ಬ್ರಹ್ಮಾವರದ ಮೂಲದವರು ಅನ್ನುವ ಕಾರಣಕ್ಕೆ ತುಳುವಿನಲ್ಲಿ ಚಿತ್ರ ನಿರ್ಮಿಸುತ್ತಿದ್ದಾರೆ. ಇಂತಹ ಹೃದಯ ವೈಶಾಲ್ಯತೆ ಇಲ್ಲಿನ ನೆಲ, ಜಲ, ಅಭಿಮಾನಿ ವರ್ಗ ಹೊಂದಿರುವ ಇವರಿಗೆ ಇಲ್ಲದೇ ಹೋಯಿತ್ತಲ್ಲ ಅನ್ನುವುದೇ ತುಂಬಾ ಮರುಕಪಡಬೇಕಾದ ವಿಷಯ.
ಗೋಲ್ಡನ್ ಸ್ಟಾರ್ ಗಣೇಶ್ ಗಿರುವಷ್ಟು ಭಾಷಾ ಪ್ರೇಮ ಇವರಿಗೆ ಇಲ್ಲವಾಯಿತೇ..?
ಗೋಲ್ಡನ್ ಸ್ಟಾರ್ ಗಣೇಶ್ ತುಳುವಿನಲ್ಲಿ ‘ಪ್ರೊಡಕ್ಷನ್ ನಂಬರ್ ಒನ್ ‘ ಎಂಬ ತುಳು ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ತನ್ನ ಪತ್ನಿ ಬ್ರಹ್ಮಾವರದ ಮೂಲದವರು ಅನ್ನುವ ಏಕೈಕ ಕಾರಣಕ್ಕೆ ಇಲ್ಲಿನ ಭಾಷೆಯ ಬೆಳವಣಿಗೆಗೆ, ಇಲ್ಲಿನ ಇಂಡಸ್ಟ್ರಿ ಉಳಿಸಲು ತಮ್ಮ ಕಾಣಿಕೆ ನೀಡಿದ್ದಾರೆ. ಸುನಿಲ್ ಶೆಟ್ಟಿ ಇಲ್ಲಿಯವರೇ. ತಮ್ಮದೊಂದು ಕೊಡುಗೆ ತುಳುವಿಗೆ ಇರಲಿ ಎಂದು ಜೈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆದರೆ ಇಲ್ಲಿಯವರೇ ಆದಂತಹ ರಿಷಬ್ ಶೆಟ್ಟಿ, ರಾಜ್ ಬಿ ಶೆಟ್ಟಿ, ರಕ್ಷಿತ್ ಶೆಟ್ಟಿ ತುಳು ಚಿತ್ರರಂಗದತ್ತ ಮೂಸಿ ನೋಡದಿರುವುದು ದುರದೃಷ್ಟಕರ. ತಮ್ಮವರು ಎಂದು ತಲೆಯ ಮೇಲೆ ಹೊತ್ತು ಕೊಂಡು ನಡೆದದ್ದೇ ಹೆಚ್ಚಾಯಿತು ಕಾಣುತ್ತದೆ.
