ವೈದ್ಯ ಡಾ..ಶರತ್ ಶೆಟ್ಟಿ ಅವರಿಂದ ಕ್ಲಿನಿಕ್ ವಿರುದ್ಧ ವಿಟ್ಲ ಠಾಣೆಯಲ್ಲಿ ದೂರು
ಅನಾರೋಗ್ಯ ಪೀಡಿತ ವೈದ್ಯರೊಬ್ಬರು ರಕ್ತ ಪರೀಕ್ಷೆ ಮಾಡಿಸಿದಾಗ ಪ್ಲೇಟ್ಲೆಟ್ ಸಂಖ್ಯೆ ತೀರಾ ಕೆಳಮಟ್ಟ ತಲುಪಿದ ಬಗ್ಗೆ ವಿಟ್ಲದ ರಕ್ಷಾ ಕ್ಲಿನಿಕ್ ಮತ್ತು ಲ್ಯಾಬೋರೇಟರಿ ನೀಡಿದ ಸುಳ್ಳು ವರದಿಯಲ್ಲಿ ಸಿಬ್ಬಂದಿ ಸಹಿ ಮಾಡದೇ ಏಮಾರಿಸಿದ ಬಗ್ಗೆ ವಿಟ್ಲ ಪೊಲೀಸ್ ಠಾಣೆಗೆ ವೈದ್ಯರು ದೂರು ನೀಡಿದ್ದಾರೆ.
ಇಲ್ಲಿನ ಪುತ್ತೂರು ರಸ್ತೆಯ ಚಂದಳಿಕೆ ಬಳಿಯಲ್ಲಿರುವ ರಕ್ಷಾ ಕ್ಲಿನಿಕ್ & ಲ್ಯಾಬೋರೇಟರಿಗೆ ಫೆ.15 ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಡಾ. ಶರತ್ ಬಂದಿದ್ದರು. ರಕ್ತದ ಮಾದರಿ ಪಡೆದ ರಕ್ಷಾ ಕ್ಲಿನಿಕ್ & ಲ್ಯಾಬೋರೇಟರಿ ಸಿಬ್ಬಂದಿಗಳು ಕೆಲ ಕ್ಷಣಗಳ ಬಳಿಕ ಡಾ. ಶರತ್ ಶೆಟ್ಟಿಯವರ ವಾಟ್ಸಾಪ್ ಗೆ ರಕ್ತ ಪರೀಕ್ಷೆಯ ವರದಿ ಕಳುಹಿಸಿದ್ದಾರೆ.
ವರದಿಯಲ್ಲಿ ರಕ್ತದಲ್ಲಿನ ಪ್ಲೇಟ್ಲೆಟ್ ಸಂಖ್ಯೆ ಕೇವಲ 18,000 ಎಂದು ದಾಖಲಾಗಿದೆ. ಸ್ವತಃ ವೈದ್ಯರಾಗಿದ್ದಾರೂ ಡಾ. ಶರತ್ ಅವರು ರಕ್ತ ಪರೀಕ್ಷಾ ವರದಿಯಿಂದ ಬೆಚ್ಚಿ ಬಿದ್ದಿದ್ದಾರೆ. ತಕ್ಷಣವೇ ವಿಟ್ಲದಲ್ಲಿರುವ ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿಗೆ ತೆರಳಿ ರಕ್ತ ಪರೀಕ್ಷೆ ಮಾಡಿಸಿದ್ದಾರೆ. ಅಲ್ಲಿನ ವರದಿಯಲ್ಲಿ ಪ್ಲೇಟ್ಲೆಟ್ ಸಂಖ್ಯೆ 1 ಲಕ್ಷದ 13 ಸಾವಿರ ಎಂದು ದಾಖಲಾಗಿದೆ.
ಮತ್ತೂ ಖಚಿತಪಡಿಸುವ ಸಲುವಾಗಿ ವಿ ಕೇರ್ ಲ್ಯಾಬೋರೇಟರಿಗೆ ತೆರಳಿದ ಡಾ. ಶರತ್ ಶೆಟ್ಟಿಯವರು ಅಲ್ಲೂ ಮಾದರಿ ರಕ್ತ ನೀಡಿ ಪರೀಕ್ಷೆ ನಡೆಸಿದ್ದಾರೆ. ಅಲ್ಲಿನ ವರದಿಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಪ್ಲೇಟ್ಲೆಟ್ ಇರುವುದು ಖಚಿತಗೊಂಡಿದೆ.

ವರದಿಗೆ ಸಹಿ ಹಾಕಲು ನಿರಾಕರಣೆ..
ಡಾ. ಶರತ್ ಶೆಟ್ಟಿಯವರು ಸ್ವತಃ ವೈದ್ಯರಾಗಿದ್ದ ಕಾರಣ ಆತಂಕಗೊಳ್ಳದೇ ಮೂರು ಕಡೆಗಳಲ್ಲಿ ರಕ್ತ ಪರೀಕ್ಷೆ ಮಾಡಿಸಿದ್ದಾರೆ. ಜನಸಾಮಾನ್ಯರಾಗಿದ್ಜರೆ ರಕ್ಷಾ ಕ್ಲಿನಿಕ್ ಮತ್ತು ಲ್ಯಾಬೋರೇಟರಿಯ ಕೇವಲ 18,000 ದ ವರದಿ ಕಂಡಾಕ್ಷಣ ಎದೆಯೊಡೆದು ಯಮಲೋಕ ಸೇರುತ್ತಿದ್ದರಲ್ಲವೇ.? ಸ್ವತಃ ಶರತ್ ಶೆಟ್ಟಿಯವರು ವೈದ್ಯರಾಗಿದ್ದ ಕಾರಣ ಕಾನೂನುಗಳ ಬಗ್ಗೆ ಅರಿವು ಉಳ್ಳವರಾಗಿದ್ದರು. ಅದಕ್ಕಾಗಿ ರಕ್ಷಾ ಲ್ಯಾಬೋರೇಟರಿ ನೀಡಿದ್ದ ಗೋಲ್ಮಾಲ್ ವರದಿಗೆ ಸಹಿ ಹಾಕುವಂತೆ ಮನವಿ ಮಾಡಿದ್ದಾರೆ. ಅಲ್ಲದೇ ಧನ್ವಂತರಿ ಲ್ಯಾಬ್ ಮತ್ತು ವಿ ಕೇರ್ ಲ್ಯಾಬ್ ವರದಿಗಳಲ್ಲಿ ಸಿಬ್ಬಂದಿಗಳು ಸಹಿ ಮಾಡಿದ್ದಾರೆ. ಆದರೆ ರಕ್ಷಾ ಕ್ಲಿನಿಕ್ ಲ್ಯಾಬೋರೇಟರಿ ಸಿಬ್ಬಂದಿಗಳು ನಾವು ಯಾವುದೇ ಕಾರಣಕ್ಕೂ ಸಹಿ ಮಾಡುವುದಿಲ್ಲ ಎಂದು ವೈದ್ಯರನ್ನೇ ಏಮಾರಿಸಲು ಯತ್ನಿಸಿದ್ದಾರೆ.
ರಕ್ಷಾ ಕ್ಲಿನಿಕ್ ಮತ್ತು ಲ್ಯಾಬೋರೇಟರಿಯ ಸಿಬ್ಬಂದಿಗಳ ಉದ್ಧಟತನ ಮತ್ತು ಉಡಾಫೆ ವರ್ತನೆಯಿಂದ ಬೇಸರಗೊಂಡ ವೈದ್ಯ ಡಾ. ಶರತ್ ಶೆಟ್ಟಿಯವರು ದೂರು ನೀಡುವ ಮೂಲಕ ಕಾನೂನು ಹೋರಾಟಕ್ಕಾಗಿ ವಿಟ್ಲ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಜಿಲ್ಲಾ ಆರೋಗ್ಯಾಧಿಕಾರಿ ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳಿಗೂ ಮಾಹಿತಿ ನೀಡಿದ್ದಾರೆ. ಒಟ್ಟಿನಲ್ಲಿ ಸ್ವತಃ ವೈದ್ಯರಿಗೇ ರಕ್ತಪರೀಕ್ಷೆ ವರದಿಯಲ್ಲಿ ರಾಮನ ಲೆಕ್ಕ, ಕೃಷ್ಣನ ಲೆಕ್ಕ ಬರೆಯಲು ಮುಂದಾದ ರಕ್ಷಾ ಕ್ಲಿನಿಕ್ ಲ್ಯಾಬೋರೇಟರಿಯ ಬೇಜವಾಬ್ದಾರಿ ವರ್ತನೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
