ಯಾವಾಗ ಏನು ನಡೆಯಬೇಕು ಎಂಬುದು ಅವರಿಗೂ ಗೊತ್ತು, ಸಮಯ ಬಂದಾಗ ಅವರೇ ಎಲ್ಲವನ್ನೂ ಸ್ಪಷ್ಟಪಡಿಸುತ್ತಾರೆ: ಡಿಕೆಶಿ
ಬೆಂಗಳೂರು: ನಾಯಕತ್ವ ಬದಲಾವಣೆ ವಿಚಾರ ಅಕ್ಷರಶಃ ಚದುರಂಗದಾಟದಂತೆ ಮಾರ್ಪಟ್ಟಿದೆ. ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ರವರು ನಾಯಕತ್ವ ಬದಲಾವಣೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರ ಅಂಗಳಕ್ಕೆ ಹೊಸದೊಂದು ಗೂಗ್ಲಿ ಎಸೆಯುವ ಮೂಲಕ, ಯಾವಾಗ ಏನು ನಡೆಯಬೇಕು ಎಂಬುದು ಸಿದ್ದರಾಮಯ್ಯ ಅವರಿಗೆ ಗೊತ್ತು, ಸಮಯ ಬಂದಾಗ ಅವರೇ ಎಲ್ಲವನ್ನೂ ಸ್ಪಷ್ಟಪಡಿಸುತ್ತಾರೆ ಎಂದು ಅಧಿಕಾರ ಹಸ್ತಾಂತರದ ಜವಾಬ್ದಾರಿಯನ್ನು ಚತುರತೆಯಿಂದ ಸಿಎಂ ಹೆಗಲಿಗೆ ಹಾಕಿದ್ದಾರೆ.
ಸಚಿವ ಹೆಚ್.ಸಿ. ಮಹದೇವಪ್ಪ ರವರ ನಾಯಿ ಬಾಲ ಎಂಬ ವಿವಾದಾತ್ಮಕ ಹೇಳಿಕೆಗೆ ಡಿ.ಕೆ.ಶಿವಕುಮಾರ್ ಅತ್ಯಂತ ನಯವಾಗಿಯೇ ತಿರುಗೇಟು ನೀಡಿ, ನೇರ ಜಗಳಕ್ಕೆ ಇಳಿಯದೆ, ನಾಯಕತ್ವದ ಬಗ್ಗೆ ನಾನೂ ಮತ್ತು ಸಿದ್ದರಾಮಯ್ಯ ಈಗಾಗಲೇ ಚರ್ಚಿಸಿದ್ದೇವೆ, ಮಲ್ಲಿಕಾರ್ಜುನ ಖರ್ಗೆ ಅವರಿಗೂ ಈ ಬಗ್ಗೆ ಸ್ಪಷ್ಟತೆ ಇದೆ. ಇದು ಇಬ್ಬರು ನಾಯಕರ ನಡುವಿನ ‘ಗುಟ್ಟು’ ವ್ಯವಹಾರವೇನಲ್ಲ, ಹೈಕಮಾಂಡ್ ಸಾಕ್ಷಿಯಾಗಿ ನಡೆದ ತೀರ್ಮಾನ ಎಂದು ಹೇಳುವ ಮೂಲಕ ಶಾಸಕರು ಮತ್ತು ಸಚಿವರಿಗೆ ಮೌನವಾಗಿರುವಂತೆ ಪರೋಕ್ಷ ಸಂದೇಶ ರವಾನಿಸಿದ್ದಾರೆ.
