ದೆಹಲಿ ಟು ಬೆಂಗಳೂರು ವಿಮಾನದ ಮೂಲಕ ಬಂದು, ಮೊಬೈಲ್‌ ಕಳ್ಳತನ: ಐಷಾರಾಮಿ ಕಳ್ಳರ ಬಂಧನ

ರಾಜ್ಯ

ಐಷಾರಾಮಿ ಕಳ್ಳರು. ವಿಮಾನದ ಮೂಲಕ ಬೆಂಗಳೂರು ನಗರಕ್ಕೆ ಬಂದು, ಮೊಬೈಲ್‌ ಕಳ್ಳತನ ಮಾಡಿಕೊಂಡು ಹೋಗುತ್ತಿದ್ದ ಪ್ರಕರಣವೊಂದನ್ನು ಬೆಂಗಳೂರು ಪೊಲೀಸರ ಕಾರ್ಯಾಚರಣೆಯಲ್ಲಿ ಪತ್ತೆಯಾಗಿದೆ. ದೆಹಲಿ ಮೂಲದ ಜಯಚಂದ ಮತ್ತು ತರುಣ್ ಎಂಬವರನ್ನು ವೈಟ್‌ಫೀಲ್ಡ್ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಇಬ್ಬರೂ ದೆಹಲಿಯಲ್ಲಿ ಕಾರು ಚಾಲಕರು.

ಬಂಧಿತ ಆರೋಪಿಗಳಿಂದ ವಿವಿಧ ಕಂಪನಿಯ 14 ಮೊಬೈಲ್‌ ಫೋನ್‌ ಜಪ್ತಿ ಮಾಡಲಾಗಿದೆ. ಮೊಬೈಲ್​​ ಕಳವು ಮಾಡಲೆಂದೇ ದೆಹಲಿಯಿಂದ ವಿಮಾನದಲ್ಲೇ ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು, ಅಲ್ಲಿಂದ ಕ್ಯಾಬ್‌ ಪಡೆದುಕೊಂಡು ಬೆಂಗಳೂರು ನಗರದಲ್ಲಿ ಸುತ್ತಾಟ ನಡೆಸಿ, ಐ-ಫೋನ್‌ ಹೊಂದಿರುವ ವ್ಯಕ್ತಿಗಳನ್ನು ಟಾರ್ಗೆಟ್ ಮಾಡಿ, ಐ-ಫೋನ್‌ ಮಾತ್ರ ಕಳ್ಳತನ ಮಾಡುತ್ತಿದ್ದರು. ಸಣ್ಣಪುಟ್ಟ ಮೊಬೈಲ್‌ ಮುಟ್ಟುತ್ತಿರಲಿಲ್ಲ. ಶ್ರೀಮಂತರು ನಡೆಸುವ ಪಾರ್ಟಿಗಳನ್ನು ಗುರುತಿಸಿ, ಅಲ್ಲಿಗೆ ತೆರಳುತ್ತಿದ್ದರು. ಅಲ್ಲಿ ದುಬಾರಿ ಬೆಲೆಯ ಫೋನ್‌ ಕಳ್ಳತನ ಮಾಡುತ್ತಿದ್ದರು.

ಐಷಾರಾಮಿ ಬಸ್​​ಗಳಲ್ಲೂ ಪ್ರಯಾಣಿಕರ ಸೋಗಿನಲ್ಲಿ ಹೋಗಿ ಮೊಬೈಲ್‌ ಕಳ್ಳತನ ಮಾಡುತ್ತಿದ್ದರು. ಪ್ರಯಾಣಿಕರ ಗಮನವನ್ನು ಬೇರೆಡೆಗೆ ಸೆಳೆದು ಕೃತ್ಯ ಎಸಗುತ್ತಿದ್ದರು. ದೇವನಹಳ್ಳಿಯ ಸುತ್ತಮುತ್ತ ನಡೆಯುವ ಸಂಗೀತ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಆರೋಪಿಗಳು, 14 ಮೊಬೈಲ್​​ಗಳನ್ನು ಕದ್ದಿದ್ದರು. ಚನ್ನರಾಯಪಟ್ಟಣದಲ್ಲಿಯೂ ಆರೋಪಿಗಳು ಮೊಬೈಲ್ ಕಳವು ಮಾಡಿದ್ದು, ಅಲ್ಲಿಂದ ವೈಟ್​​ಫೀಲ್ಡ್ ಕಡೆಗೆ ಬರುವಾಗ ಮತ್ತೊಂದು ಐ-ಫೋನ್ ಕಳವು ಮಾಡಿದ್ದರು. ಕದ್ದ ಮೊಬೈಲ್‌ಗಳನ್ನು ಲಾಡ್ಜ್‌ನಲ್ಲಿ ಬಚ್ಚಿಡುತ್ತಿದ್ದರು. ಲಾಡ್ಜ್‌ ಮೇಲೆ ದಾಳಿ ನಡೆಸಿದಾಗ ಮೊಬೈಲ್‌ ಕಳ್ಳತನ ರಹಸ್ಯ ಬಯಲಾಗಿದೆ. ಬಂಧಿತರಿಂದ ₹10 ಲಕ್ಷ ಮೌಲ್ಯದ 14 ಮೊಬೈಲ್​​ಗಳನ್ನು ವಶಕ್ಕೆ ಪಡೆಯಲಾಗಿದೆ.