ಇನ್ಸ್ ಪೆಕ್ಟರ್ ಸಂದೇಶ್ ವಿರುದ್ಧ ಮಾಡಿರುವ ಲೈಂಗಿಕ ಕಿರುಕುಳ ಆರೋಪ ನಿರಾಧಾರ; ಲಂಚ, ದುಷ್ಕೃತ್ಯದ ಬಗ್ಗೆ ಸುಳ್ಳಾರೋಪ; ಇಲಾಖೆ ತನಿಖೆಯಿಂದ ಸಾಬೀತು

ಕರಾವಳಿ

ಫೋನ್ ಸಂಭಾಷಣೆಯಲ್ಲಿ ಅಸಭ್ಯ ವರ್ತನೆ: ಮೂಡುಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ ಸಸ್ಪೆಂಡ್

ಭಾರೀ ಚರ್ಚೆಗೆ ಕಾರಣವಾಗಿದ್ದ ಮೂಡಬಿದ್ರೆ ಇನ್ಸ್ ಪೆಕ್ಟರ್ ಸಂದೇಶ್ ಬಿ.ಜಿ . ಅವರು ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿರುವುದನ್ನು ಆಡಿಯೋ ಮತ್ತು ವಿಡಿಯೋಗಳು ದೃಢಪಡಿಸುವುದರಿಂದ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಇನ್ ಸ್ಪೆಕ್ಟರ್ ವಿರುದ್ಧ ಮಾಡಿರುವ ಲೈಂಗಿಕ ಕಿರುಕುಳ ಆರೋಪದ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಉತ್ತರ ಉಪವಿಭಾಗ (ಪಣಂಬೂರು)ದ ಎಸಿಪಿಗೆ ಸೂಚಿಸಿದ್ದರು.

ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ಅವರು ನೀಡಿರುವ ತನಿಖಾ ವರದಿಯನ್ನು ಆಧರಿಸಿ ಇನ್ಸ್‌ಪೆಕ್ಟರ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಮೂಡುಬಿದಿರೆ ಪೊಲೀಸ್ ಇನ್‌ಸ್ಪೆಕ್ಟರ್ ಸಂದೇಶ್ ಬಿ.ಜಿ. ವಿರುದ್ಧ ತನ್ನ ಸಹೋದರಿ ಸುಮತಿ ನಾಯ್ಕ್ ಮಾಡಿದ ಆರೋಪಗಳೆಲ್ಲ ಸುಳ್ಳು ಎಂದು ಮೂಡುಬಿದಿರೆ ನಿವಾಸಿ ಪ್ರಫುಲ್ಲಾ ನಾಯ್ಕ್ ಎಂಬವರು ದೂರು ನೀಡಿದ್ದಾರೆ ಮತ್ತು ಮಾಧ್ಯಮ ಹೇಳಿಕೆಯನ್ನು ನೀಡಿರುವುದಾಗಿ ಎಸಿಪಿ ನೀಡಿರುವ ವರದಿಯಲ್ಲಿ ತಿಳಿಸಿದ್ದಾರೆ.

ಸುಮತಿ ಮತ್ತು ಪ್ರಫುಲ್ಲಾ ನಾಯ್ಕ್ ನಡುವೆ ಕೌಟುಂಬಿಕ ಕಲಹಗಳಿದ್ದು, ಸುಮತಿ ಮತ್ತು ಅವರ ಸಹೋದರಿಯ ವಿರುದ್ಧ ತಲಾ ಎರಡು ಪ್ರಕರಣಗಳು ದಾಖಲಾಗಿವೆ. ಇನ್ಸ್‌ಪೆಕ್ಟರ್ ವಿರುದ್ಧ ದಾಖಲಾದ ಪ್ರಕರಣವೂ ಸೇರಿದಂತೆ ತನಿಖೆಯಲ್ಲಿರುವ ಒಂದು ಪ್ರಕರಣವನ್ನು ಹೊರತುಪಡಿಸಿ, ಉಳಿದೆಲ್ಲವಕ್ಕೂ ಉಚ್ಚ ನ್ಯಾಯಾಲಯವು ತಡೆಯಾಜ್ಞೆ ನೀಡಿದ್ದು, ನ್ಯಾಯಾಲಯದಲ್ಲಿ ತೀರ್ಮಾನವಾಗಬೇಕಿದೆ.

ಇನ್ಸ್‌ಪೆಕ್ಟರ್ ವಿರುದ್ಧ ಮಾಧ್ಯಮ ಹೇಳಿಕೆ ನೀಡಿದ ಎರಡನೇ ಮಹಿಳೆ ಅವಿತಾ ಮಿನೇಜಸ್ ಇವರ ಪತಿಯ ವಿರುದ್ಧ ನಾಲ್ಕು ಪ್ರಕರಣಗಳು ದಾಖಲಾಗಿವೆ (ಒಂದರಲ್ಲಿ ಖುಲಾಸೆಗೊಂಡಿದ್ದಾರೆ). ಬಡ ವ್ಯಕ್ತಿಯೊಬ್ಬರ ಮೂತ್ರಪಿಂಡ ಚಿಕಿತ್ಸೆಗಾಗಿ ಸಂಗ್ರಹಿಸಿದ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪ ಅವರ ಮೇಲೆ ಇದೆ. ಸಾಕ್ಷ್ಯಗಳನ್ನು ಸಂಗ್ರಹಿಸಿದ ನಂತರ ಅವರ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ. ಯಾವುದೇ ಕಿರುಕುಳದ ಪುರಾವೆಗಳಿಲ್ಲ. ಇನ್ಸ್‌ಪೆಕ್ಟರ್‌ನ ಲಂಚ ಮತ್ತು ದುಷ್ಕೃತ್ಯದ ಬಗ್ಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಯಿತು. ಇದಕ್ಕೆ ಯಾವುದೇ ಪುರಾವೆಗಳಿಲ್ಲ. ಅಲ್ಲದೆ, ಆ ಸಮಯದಲ್ಲಿ ಇಬ್ಬರು ಮಾಧ್ಯಮ ಪ್ರತಿನಿಧಿಗಳು ಮತ್ತು ವಕೀಲರು ಸ್ಥಳದಲ್ಲಿದ್ದರು. ಅವರು ಅಂತಹ ಯಾವುದೇ ಲಂಚದ ಬೇಡಿಕೆ ಅಥವಾ ಕಿರುಕುಳವನ್ನು ನಿರಾಕರಿಸಿದ್ದಾರೆ.

ಲಭ್ಯವಿರುವ ವಿಡಿಯೋ ಮತ್ತು ಆಡಿಯೋದಲ್ಲಿ, ಇನ್ಸ್‌ಪೆಕ್ಟರ್ ಅನುಮಾನಾಸ್ಪದವಾಗಿ ವರ್ತಿಸುತ್ತಿರುವುದು ಮತ್ತು ಮಹಿಳೆಯೊಂದಿಗೆ ಫೋನ್‌ನಲ್ಲಿ ತುಂಬಾ ಅಸಭ್ಯವಾಗಿ ಮಾತನಾಡುತ್ತಿರುವುದು ಕಂಡುಬಂದಿದೆ.

ಆಡಿಯೋ ಮತ್ತು ವಿಡಿಯೋದಲ್ಲಿರುವ ಇಬ್ಬರೂ ಮಹಿಳೆಯರು ದೂರು ದಾಖಲಿಸಲು ನಿರಾಕರಿಸಿದ್ದಾರೆ. ಮುಂದಿನ ಕೆಲವು ದಿನಗಳಲ್ಲಿ ಅವರು ಹೇಳಿಕೆ ನೀಡಬಹುದು ಎಂದು ಅವರಿಗೆ ತಿಳಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.