ಮಾಲ್ಡೀವ್ಸ್ ಸಮೀಪ ನಡೆದ ಸ್ಪೀಡ್ ಬೋಟ್ ಅಪಘಾತದಲ್ಲಿ ರೇಮಂಡ್ ಗ್ರೂಪ್ ಮಾಲೀಕ ಗೌತಮ್ ಸಿಂಘಾನಿಯಾ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಇಬ್ಬರು ಭಾರತೀಯರು ನಾಪತ್ತೆಯಾಗಿರುವ ಘಟನೆ ನಡೆದಿದೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ಮುಂದುವರಿದಿವೆ. ಶುಕ್ರವಾರ ಮುಂಜಾನೆ ಮಾಲ್ಡೀವ್ಸ್‌ನ ವಿ ಫೆಲಿಧೂ ಪ್ರದೇಶದ ಸಮೀಪ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಸ್ಪೀಡ್ ಬೋಟ್ ಏಕಾಏಕಿ ಮಗುಚಿ ಬಿದ್ದಿದೆ. ಈ ದುರಂತದಲ್ಲಿ ಒಟ್ಟು ಏಳು ಮಂದಿ ಪ್ರಯಾಣಿಕರು ಇದ್ದರು. ಅವರಲ್ಲಿ ರೇಮಂಡ್ ಗ್ರೂಪ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಗೌತಮ್ ಸಿಂಘಾನಿಯಾ ಕೂಡ ಸೇರಿದ್ದರು.
ಅಪಘಾತದ ನಂತರ ಗೌತಮ್ ಸಿಂಘಾನಿಯಾ ಅವರನ್ನು ತಕ್ಷಣ ರಕ್ಷಿಸಿ ಏರ್ ಲಿಫ್ಟ್ ಮಾಡಿ ವಿಮಾನದ ಮೂಲಕ ಮುಂಬೈಗೆ ಕರೆತರಲಾಗಿದ್ದು, ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದುರದೃಷ್ಟಕರ ಅಪಘಾತದಲ್ಲಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅವರ ಆರೋಗ್ಯ ಈಗ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಮಾಲ್ಡೀವ್ಸ್ ಅಧಿಕಾರಿಗಳ ಪ್ರಕಾರ, ಈ ಬೋಟ್‌ನಲ್ಲಿ ಯುನೈಟೆಡ್ ಕಿಂಗ್‌ಡಮ್ ಮತ್ತು ರಷ್ಯಾದ ಇಬ್ಬರು ಮಹಿಳೆಯರು ಹಾಗೂ ಐದು ಭಾರತೀಯ ಪುರುಷರು ಇದ್ದರು. ಅಪಘಾತದ ವೇಳೆ ರಷ್ಯಾದ ಮಹಿಳೆ ಸೇರಿದಂತೆ ನಾಲ್ವರು ಭಾರತೀಯರು ಸಮುದ್ರದಲ್ಲಿ ಕೊಚ್ಚಿ ಹೋಗಿದ್ದಾರೆ. ಇವರಲ್ಲಿ ಇಬ್ಬರು ಭಾರತೀಯರು ಇನ್ನೂ ನಾಪತ್ತೆಯಾಗಿದ್ದು, ಅವರಲ್ಲಿ ಭಾರತದ ದಂತಕಥೆ ರ‍್ಯಾಲಿ ಚಾಲಕ ಹರಿ ಸಿಂಗ್ ಮತ್ತು ಅವರೊಂದಿಗೆ ದೋಣಿಯಲ್ಲಿದ್ದ ಮತ್ತೊಬ್ಬ ಸ್ನೇಹಿತ ಇನ್ನೂ ನಾಪತ್ತೆಯಾಗಿದ್ದಾರೆ. ಅವರು ಸಮುದ್ರದಲ್ಲಿ ಕಳೆದು ಹೋಗಿ ಬಹಳ ಸಮಯವಾಗಿದ್ದು ಸಾವನ್ನಪ್ಪಿರಬಹುದು ಎಂದು ಸ್ಥಳೀಯ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ನಾಪತ್ತೆಯಾದವರಿಗಾಗಿ ಸಮುದ್ರ ಪ್ರದೇಶದಲ್ಲಿ ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಸ್ಥಳೀಯ ಪೊಲೀಸ್ ಮತ್ತು ರಕ್ಷಣಾ ತಂಡಗಳು ಶೋಧ ಕಾರ್ಯವನ್ನು ವಿಸ್ತರಿಸಿದ್ದು, ಅವರನ್ನು ಸುರಕ್ಷಿತವಾಗಿ ಪತ್ತೆಹಚ್ಚುವ ಪ್ರಯತ್ನ ಮುಂದುವರಿದಿದೆ. ಸಮುದ್ರದ ಅಲೆಗಳು ಅವರನ್ನು ಹುಡುಕುವುದು ಕಷ್ಟಕರವಾಗಿದೆ ಎಂದು ಮಾಲ್ಡೀವ್ಸ್ ರಾಷ್ಟ್ರೀಯ ರಕ್ಷಣಾ ಪಡೆ (MNDF) ಕೋಸ್ಟ್ ಗಾರ್ಡ್ ತಿಳಿಸಿದೆ.
