ಸಂವಿದಾನ ಬದ್ಧ ರಾಜಕೀಯ ವ್ಯವಸ್ಥೆಯಲ್ಲಿ ಕುಟುಂಬ ರಾಜಕಾರಣವೆಂಬ ಕಳಂಕ

ರಾಷ್ಟ್ರೀಯ

ವಂಶಪಾರಂಪರ್ಯ ಜಾಗೀರು”ಗಳಂತಾಗಿರುವ ಕ್ಷೇತ್ರಗಳು ಮುಕ್ತವಾಗಿ, ಸಾಮಾನ್ಯ ನಾಗರಿಕನೂ ದೇಶದ ಉನ್ನತ ಪೀಠವನ್ನೇರಲು ಸಾಧ್ಯವಾಗಬೇಕು

✍️. ಇಸ್ಮಾಯಿಲ್ ಎಸ್. ನ್ಯಾಯವಾದಿಗಳು, ಮಂಗಳೂರು.

ಮೊದಲ ಪುಲಕೇಶಿ, ಎರಡನೇ ಪುಲಕೇಶಿ… ಒಂದನೇ ಕೃಷ್ಣದೇವರಾಜ, ಎರಡನೇ ಕೃಷ್ಣದೇವರಾಜ, ಮೂರನೇ …. ಹೀಗೆಯೇ ಈ ಪಟ್ಟಿ ಮುಂದುವರಿಯುತ್ತದೆ. ಇತಿಹಾಸದ ಪುಟಗಳನ್ನು ತಿರುವುತ್ತಾ ಸಾಗಿದಲ್ಲಿ ಇಂತಹ ಸಾವಿರಾರು ಉದಾಹರಣೆಗಳು ಸಿಗುತ್ತವೆ. ಜಗತ್ತಿನ ವಿವಿಧ ಭಾಗಗಳಲ್ಲಿ ಆಳಿದ ರಾಜ ವಂಶಗಳು ಹಾಗೂ ಸದ್ರಿ ರಾಜವಂಶಗಳಿಂದ ಬಂದಿರುವ ಹಿರಿ-ಕಿರಿಯ ರಾಜರುಗಳ ಬಹುದೊಡ್ಡ ಉದಾಹರಣೆಗಳಿವೆ. ಆದರೆ ಆಧುನಿಕ ಜನಗತ್ತಿನಲ್ಲಿ ರಾಜರುಗಳಿಗೆ ಅವಕಾಶವಿಲ್ಲ. ಜಗತ್ತಿನ ಬಹುತೇಕ ದೇಶಗಳಲ್ಲಿ ರಾಜಾಡಳಿತ ತಿರಸ್ಕಾರಗೊಂಡು ಪ್ರಪ್ರಭುತ್ವ ವ್ಯವಸ್ಥೆ ಜಾರಿಗೆ ಬಂದಿದೆ. ಅಂತಹ ಜಗತ್ತಿನ ದೇಶಗಳಲ್ಲಿ 15ನೇ ಆಗಸ್ಟ್ 1947 ರಂದು ಸ್ವತಂತ್ರಗೊಂಡು, 26ನೇ ಜನವರಿ 1950 ರಂದು ಸಂವಿಧಾನ ಜ್ಯಾರಿಗೆ ಬಂದಿರುವ ಭಾರತವು ಅತ್ಯಂತ ಪ್ರಮುಖವಾದುದು. ಇಲ್ಲಿನ ಪ್ರಜಾಪ್ರಭುತ್ವ ವ್ಯವಸ್ಥೆ ಇಡೀ ಜಗತ್ತಿಗೆ ಮಾದರಿಯಾಗಿದೆ. ಇಲ್ಲಿನ ಸಂವಿದಾನ ರಾಜಾಡಳಿತ ವ್ಯವಸ್ಥೆಯನ್ನು ಬುಡ ಸಮೇತ ಕಿತ್ತೊಗೊಗೆದು ಜನರಿಂದ, ಜನರಿಗಾಗಿ ಇರುವ ಜನರ ಆಡಳಿತ ವಿರುವ ಸಂವಿಧಾನದ ಪರಿಕಲ್ಪನೆ ಬಹಳ ಮಹೋನ್ನತವಾದದ್ದು, ಅದ್ವಿತೀಯವಾದದ್ದು. ಆದರೆ ಭಾರತ ಸ್ವತಂತ್ರಗೊಂಡು ವರ್ಷಗಳು ಎಂಬತ್ತು ಕಳೆದರೂ ದುರದೃಷ್ಟವಶಾತ್ ಅಂದಿನ ರಾಜಾಡಳಿತ ಇಂದಿಗೂ ಹಾಗೆಯೇ ಮುಂದುವರೆದಿರುವುದು ವಿಪರ್ಯಾಸವೆನ್ನದೆ ವಿಧಿಯಿಲ್ಲ.

ಪ್ರಾಚೀನ ಭಾರತೀಯ ಇತಿಹಾಸದ ಹಾದಿಗಳಲ್ಲಿ, ಅಧಿಕಾರ ಎಂಬುದು ಸಾಮಾನ್ಯ ಜನರಿಗೆ ದಕ್ಕುವ ವಸ್ತುವಾಗಿರಲಿಲ್ಲ. ಅದು ಪವಿತ್ರ ನದಿಗಳಂತೆ ರಕ್ತಸಂಬಂಧಗಳ ಮೂಲಕವೇ ಹರಿಯುತ್ತಿತ್ತು. ಬಾದಾಮಿ ಚಾಲುಕ್ಯರನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ. ಸುಮಾರು ಕ್ರಿ.ಶ. 543ರಲ್ಲಿ, ಮೊದಲನೇ ಪುಲಕೇಶಿ ಕೈಯಲ್ಲಿ ಕತ್ತಿ ಹಿಡಿದು ಎದ್ದು ನಿಂತು, ದಕ್ಷಿಣಾಪಥದ ವಿಶಾಲ ಪ್ರದೇಶಗಳನ್ನು ಆಳುವ ಪ್ರಬಲ ರಾಜವಂಶವನ್ನು ಸ್ಥಾಪಿಸಿದನು. ಆತನ ಮೊಮ್ಮಗ ಯಾರು? ಮತ್ಯಾರೂ ಅಲ್ಲ, ಸಾಕ್ಷಾತ್ ಎರಡನೇ ಪುಲಕೇಶಿ – ಹರ್ಷವರ್ಧನನನ್ನೇ ಸೋಲಿಸಿದ ಅಪ್ರತಿಮ ವೀರ, ಸಾಮ್ರಾಜ್ಯವನ್ನು ಉತ್ತುಂಗಕ್ಕೇರಿಸಿದ ಮಹಾನ್ ಚಕ್ರವರ್ತಿ. ಅವನ ಹೆಸರು ಇಂದಿಗೂ ಶಿಲಾಶಾಸನಗಳಲ್ಲಿ ಮತ್ತು ಗುಡಿ-ಗೋಪುರಗಳಲ್ಲಿ ಅಮರವಾಗಿದೆ.

ಮೊದಲ ಪುಲಕೇಶಿ, ಎರಡನೇ ಪುಲಕೇಶಿ… ಇದೇ ಮಾದರಿ ಚೋಳರು, ಪಲ್ಲವರು, ರಾಷ್ಟ್ರಕೂಟರು ಮತ್ತು ಅಸಂಖ್ಯಾತ ರಾಜಮನೆತನಗಳಲ್ಲಿ ಪುನರಾವರ್ತನೆಯಾಯಿತು. ತಂದೆಯಿಂದ ಮಗನಿಗೆ, ಮಾವನಿಂದ ಅಳಿಯನಿಗೆ ಅಧಿಕಾರ ಹಸ್ತಾಂತರವಾಗುತ್ತಿತ್ತು. ಅದು ಅಂದಿನ ರಾಜಪ್ರಭುತ್ವ; ಅದು ನಿರೀಕ್ಷಿತವೂ ಆಗಿತ್ತು. ಅಲ್ಲಿ “ಜನರಿಂದ ಆಳಲ್ಪಡುವ ಆಡಳಿತ” ಎಂಬ ನಾಟಕವಿರಲಿಲ್ಲ, ಹಾಗಾಗಿ ಅದನ್ನು ಯಾರೂ “ಅಣಕ” ಎಂದು ಕರೆಯಲಿಲ್ಲ.

ಆದರೆ, 1,500 ವರ್ಷಗಳ ನಂತರ ಇಂದು ಭಾರತ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ನಮ್ಮ ಸಂವಿಧಾನವು ಸಮಾನತೆ, ವಯಸ್ಕ ಮತದಾನದ ಹಕ್ಕು ಮತ್ತು ಅರ್ಹತೆಯ ಬಗ್ಗೆ ಮಾತನಾಡುತ್ತದೆ. ಆದರೂ, ಇಂದಿನ ರಾಜಕೀಯ ರಂಗಮಂದಿರವು ಹಳೆಯ ಕಾಲದಂತೆಯೇ ಭಾಸವಾಗುತ್ತಿದೆ – ಬದಲಾಗಿರುವುದು ಕೇವಲ ವೇಷಭೂಷಣಗಳು ಮಾತ್ರ. ರಾಜಮನೆತನದ ಉಡುಪುಗಳ ಬದಲಿಗೆ ಇಂದು ಬಿಳಿ ಖಾದಿ ಮತ್ತು ಕೇಸರಿ ಶಾಲುಗಳು ಬಂದಿವೆ. ಅದೇ ಕುಟುಂಬಗಳು ತಮ್ಮ ಕ್ಷೇತ್ರಗಳನ್ನು ‘ಜಾಗೀರು’ಗಳಂತೆ, ಪಕ್ಷಗಳನ್ನು ‘ಪ್ರೈವೇಟ್ ಲಿಮಿಟೆಡ್ ಕಂಪನಿ’ಗಳಂತೆ ಮತ್ತು ಮತದಾರರನ್ನು ಮುಂದಿನ ಪೀಳಿಗೆಗಾಗಿ ಸಿಂಹಾಸನವನ್ನು ಕಾಯ್ದಿರಿಸುವ ‘ನಿಷ್ಠಾವಂತ ಪ್ರಜೆ’ಗಳಂತೆ ನಡೆಸಿಕೊಳ್ಳುತ್ತಿವೆ.

ನೆಹರು-ಗಾಂಧಿ ಕುಟುಂಬ: ಮೂಲ “ಪ್ರಥಮ ಕುಟುಂಬ” ಮಾದರಿ

ಜವಾಹರಲಾಲ್ ನೆಹರು ಭಾರತದ ಮೊದಲ ಪ್ರಧಾನಿಯಾದರು. ಅವರ ನಂತರ ಅವರ ಮಗಳು ಇಂದಿರಾ ಗಾಂಧಿ ಅಧಿಕಾರ ಹಿಡಿದರು. ನಂತರ ಅವರ ಪುತ್ರರಾದ ಸಂಜಯ್ ಮತ್ತು ರಾಜೀವ್ ಅವರನ್ನು ರಾಜಕೀಯಕ್ಕೆ ತರಲಾಯಿತು. ರಾಜೀವ್ ಗಾಂಧಿಯವರ ನಂತರ ಸೋನಿಯಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಿ ದಶಕಗಳ ಕಾಲ ಅಧಿಕಾರ ಕೇಂದ್ರವಾಗಿದ್ದರು. ಇಂದು ರಾಹುಲ್ ಮತ್ತು ಪ್ರಿಯಾಂಕಾ ಅವರೇ ಪಕ್ಷದ ಪ್ರಮುಖ ಮುಖಗಳು. ಒಂದು ನಿಜವಾದ ಪ್ರಜಾಪ್ರಭುತ್ವದಲ್ಲಿ, ಒಂದೇ ಉಪನಾಮವು 75 ವರ್ಷಗಳ ಕಾಲ ರಾಷ್ಟ್ರೀಯ ರಾಜಕೀಯವನ್ನು ಆಳಲು ಸಾಧ್ಯವೇ?

ಕರ್ನಾಟಕದ ರಾಜಕೀಯ ‘ಪ್ರಯೋಗಾಲಯ’ಗಳು

ನಮ್ಮ ರಾಜ್ಯ ಕರ್ನಾಟಕವನ್ನು ಗಮನಿಸಿದರೆ, ಈ ವಂಶಪಾರಂಪರ್ಯ ಮಾದರಿಯು ಬಹಳ ನಿಖರವಾಗಿ ಕಂಡುಬರುತ್ತದೆ. ದೇವೇಗೌಡ ಹಾಗೂ ಪಟಾಲಂ ನಮ್ಮ ರಾಜ್ಯವನ್ನು ತಮ್ಮ ಸ್ವಂತದ ಸ್ವತ್ತಿನಂತೆ ನೋಡುತ್ತಾ ಬಂದಿದೆ. ದೇವೇಗೌಡರ ಬಳಿಕ ಕುಮಾರ ಸ್ವಾಮೀ, ರೆವೆಣ್ಣ, ಕುಮಾರ ಸ್ವಾಮಿಯ ಮಗ, ರೇವಣ್ಣರ ಮಗ, ದೇವೇಗುಡಾರ ಸೊಸೆಯಂದಿರು, ಸಾಲದೆಂಬಂತೆ ಬಿ.ಎಸ್. ಯಡಿಯೂರಪ್ಪ ಯಡಿಯೂರಪ್ಪರ ಮಕ್ಕಳು, ಯಡಿಯೂರಪ್ಪ ಪೋಷಿಸುವ ಶೋಭಾ ಇವರೆಲ್ಲಾ ನಮ್ಮ ರಾಜ್ಯದ ರಾಜಕೀಯದಲ್ಲಿ ಭದ್ರವಾಗಿ ನೆಲೆಸಿದ್ದಾರೆ. ಸಾಮಾನ್ಯ ರೈತ ಕುಟುಂಬದಿಂದ ಬಂದ ಹೆಚ್.ಡಿ. ದೇವೇಗೌಡರು ಭಾರತದ ಪ್ರಧಾನಿಯಾದರು. ಅವರ ಪುತ್ರ ಹೆಚ್.ಡಿ. ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿಯಾದರು. ಮತ್ತೊಬ್ಬ ಪುತ್ರ ಹೆಚ್.ಡಿ. ರೇವಣ್ಣ ದೀರ್ಘಕಾಲದ ಸಚಿವರು. ಕುಮಾರಸ್ವಾಮಿಯವರ ಪತ್ನಿ ಅನಿತಾ ಕುಮಾರಸ್ವಾಮಿ ಮಾಜಿ ಶಾಸಕಿ. ಈಗ ಈ ಪ್ರಭಾವ ಮೊಮ್ಮಕ್ಕಳಿಗೂ ಹರಿದಿದೆ. ಹಳೆ ಮೈಸೂರು ಭಾಗದ ರಾಜಕೀಯವು ಒಂದು ಕುಟುಂಬದ ಉದ್ಯಮದಂತಾಗಿದೆ. ಇತ್ತ ಬಿಜೆಪಿಯಲ್ಲಿ ಯಡಿಯೂರಪ್ಪ ಎರಡು ಬಾರಿ ಮುಖ್ಯಮಂತ್ರಿಯಾದರೆ ಅವರ ಮಕ್ಕಳ ಪೈಕಿ ಬಿ.ವೈ. ರಾಘವೇಂದ್ರ ಸಂಸದರಾಗಿದ್ದರೆ, ಬಿ.ವೈ. ವಿಜಯೇಂದ್ರ ಅವರು ಶಾಸಕರಾಗಿ ಮತ್ತು ಪಕ್ಷದ ರಾಜ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಯಡಿಯೂರಪ್ಪರ ಪೋಷಣೆಯಲ್ಲಿ ಶೋಭಾ ಕೇಂದ್ರದ ಮಂತ್ರಿಯಾಗಿದ್ದರೆ. ತಂದೆ ಕಟ್ಟಿದ ಮತಬ್ಯಾಂಕ್ ಮತ್ತು ಪಕ್ಷದ ಯಂತ್ರಾಂಗವನ್ನು ಪುತ್ರರು ಪರಂಪರೆಯಾಗಿ ಪಡೆದಿದ್ದಾರೆ. ದಾವಣಗೆರೆಯ ಶಾಮನೂರು-ಮಲ್ಲಿಕಾರ್ಜುನ ಕುಟುಂಬ (ಕಾಂಗ್ರೆಸ್): ಶಾಮನೂರು ಶಿವಶಂಕರಪ್ಪ ಅವರು ಐದು ದಶಕಗಳ ಕಾಲ ಕಾಂಗ್ರೆಸ್‌ನ ದಿಗ್ಗಜರಾಗಿದ್ದರು. 2025ರ ಡಿಸೆಂಬರ್‌ನಲ್ಲಿ ಅವರು ನಿಧನರಾಗುವವರೆಗೂ ದಾವಣಗೆರೆ ದಕ್ಷಿಣದ ಶಾಸಕರಾಗಿದ್ದರು. ಅವರ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ ಅವರು ಪ್ರಸ್ತುತ ಗಣಿ ಮತ್ತು ಭೂವಿಜ್ಞಾನ ಸಚಿವರು. ಅವರ ಸೊಸೆ ಪ್ರಭಾ ಮಲ್ಲಿಕಾರ್ಜುನ ಅವರು ದಾವಣಗೆರೆಯ ಸಂಸದರು. ಒಂದು ಕುಟುಂಬ, ಮೂರು ಪ್ರಮುಖ ಚುನಾಯಿತ ಹುದ್ದೆಗಳು! ಇದು ಪ್ರಜಾಪ್ರಭುತ್ವದಲ್ಲಿ “ಮೊದಲು ಶಾಮನೂರು, ನಂತರ ಮಲ್ಲಿಕಾರ್ಜುನ” ಎಂಬ ರಾಜಪ್ರಭುತ್ವದ ಶೈಲಿಯ ರಾಜಕೀಯಕ್ಕೆ ಉದಾಹರಣೆ. ಈಗ ಶಾಮನೂರು ಶಿವಶಂಕರಪ್ಪ ನಿಧರಾಗಿ ತೆರವಾದ ಸ್ಥಾನವನ್ನು ತುಂಬಲು ಅವರ ಮೊಮ್ಮಗ ನಾಲಾಯಕ್ ಸಮರ್ಥರನ್ನು (ಅಸಮರ್ಥರಾಗಿದ್ದೂ ಸಮರ್ಥನೆಂಬಂತೆ ಬಿಂಬಿಸಿ) ಮುನ್ನೆಲೆಗೆ ತರಲಾಗಿದೆ.

ಇದು ಪ್ರಜಾಪ್ರಭುತ್ವದ ಅಣಕವೇಕೆ.?

ಪ್ರಾಚೀನ ಭಾರತದಲ್ಲಿ ರಾಜರು ಸಿಂಹಾಸನವು ಎಲ್ಲರಿಗೂ ಮುಕ್ತವಾಗಿದೆ ಎಂದು ಎಂದಿಗೂ ಸುಳ್ಳು ಹೇಳುತ್ತಿರಲಿಲ್ಲ. ಅಲ್ಲಿ “ನಾವು ಭಾರತದ ಜನರು” ಎಂಬ ಭರವಸೆ ನೀಡುವ ಸಂವಿಧಾನವಿರಲಿಲ್ಲ. ಆದರೆ ಇಂದು, ಪ್ರತಿ ಚುನಾವಣಾ ಭಾಷಣವು “ಪ್ರಜಾಪ್ರಭುತ್ವವು ಶ್ರೇಷ್ಠ ಕೊಡುಗೆ” ಎಂಬ ವಾಕ್ಯದಿಂದ ಆರಂಭವಾಗುತ್ತದೆ. ಆದರೆ ಅದೇ ನಾಯಕರು ತಮ್ಮ ಮಕ್ಕಳಿಗೆ ಮೈಕ್ರೊಫೋನ್, ಭದ್ರತೆ, ಪಕ್ಷದ ನಿಧಿ ಮತ್ತು ಸುರಕ್ಷಿತ ಕ್ಷೇತ್ರಗಳನ್ನು ಪರಂಪರೆಯಾಗಿ ನೀಡುತ್ತಿದ್ದಾರೆ. ಅರ್ಹತೆ, ಅನುಭವ ಅಥವಾ ತಳಮಟ್ಟದ ಹೋರಾಟಕ್ಕಿಂತ ಇಲ್ಲಿ ‘ರಕ್ತಸಂಬಂಧ’ವೇ ಪ್ರಾಥಮಿಕ ಅರ್ಹತೆಯಾಗಿದೆ. ಸಾಮಾನ್ಯ ಕಾರ್ಯಕರ್ತರು ದಶಕಗಳ ಕಾಲ ಬೆವರು ಸುರಿಸಿದರೂ, ನಾಯಕನ ಮಗನಿಗೆ 25 ವರ್ಷ ತುಂಬಿದ ಕೂಡಲೇ ಅವರಿಗೆ ಟಿಕೆಟ್ ಮೀಸಲಿಡಲಾಗುತ್ತದೆ.

ಚಾಲುಕ್ಯರು ಕನಿಷ್ಠ ಭವ್ಯವಾದ ದೇವಾಲಯಗಳನ್ನು ಮತ್ತು ಕೆರೆಗಳನ್ನು ಪರಂಪರೆಯಾಗಿ ಬಿಟ್ಟು ಹೋದರು. ಆದರೆ ಇಂದಿನ ರಾಜವಂಶಸ್ಥರು ಸಾರ್ವಜನಿಕ ಆಸ್ತಿ ಪಾಸ್ತಿಗಳನ್ನು, ದೇಶದ ಹಾಗೂ ರಾಜ್ಯದ ಖಜಾನೆಗಳನ್ನು ಲೂಟಿ ಮಾಡುತ್ತಾ ತಮಗೂ ತಮ್ಮ ಮಕ್ಕಳ್ಳಿಗೂ, ಮೊಮ್ಮಕ್ಕಳಿಗೂ, ಮರಿ ಮೊಮ್ಮಕ್ಕಳಿಗೂ ಕೂಡಿಹಾಕುತ್ತಾ ಹೆಚ್ಚಾಗಿ ಕುಟುಂಬದ ಹಿಡಿತದ ಕ್ಷೇತ್ರಗಳು ಮತ್ತು ಸ್ವಜನಪಕ್ಷಪಾತದ ಆರೋಪಗಳನ್ನು ಮಾತ್ರ ಬಿಟ್ಟು ಹೋಗುತ್ತಿದ್ದಾರೆ.

ಎಲ್ಲಿಯವರೆಗೆ ಮತದಾರರು ಈ ‘ಉಪನಾಮ’ದ ಆಟವನ್ನು ತಿರಸ್ಕರಿಸುವುದಿಲ್ಲವೋ ಮತ್ತು ರಾಜಕೀಯ ಪಕ್ಷಗಳು ಆಂತರಿಕವಾಗಿ ಪ್ರಜಾಪ್ರಭುತ್ವವನ್ನು ಅಳವಡಿಸಿಕೊಳ್ಳುವುದಿಲ್ಲವೋ, ಅಲ್ಲಿಯವರೆಗೆ “ಮೊದಲ ಪುಲಕೇಶಿ, ಎರಡನೇ ಪುಲಕೇಶಿ” ಸರಣಿ ಮುಂದುವರಿಯುತ್ತಲೇ ಇರುತ್ತದೆ – ಕೇವಲ ತ್ರಿವರ್ಣ ಧ್ವಜ ಮತ್ತು “ಜೈ ಹಿಂದ್” ಎಂಬ ಘೋಷಣೆಗಳ ಅಡಿಯಲ್ಲಿ. ವೇಷಭೂಷಣಗಳು ಬದಲಾಗಿವೆ, ಆದರೆ ಚಿತ್ರಕಥೆ ಹಳೆಯದೇ. ಭಾರತೀಯ ಪ್ರಜಾಪ್ರಭುತ್ವದ ದೊಡ್ಡ ದುರಂತವೇ ಇದು.

ಪ್ರಜಾಪ್ರಭುತ್ವದ ಅಣಕವನ್ನು ತಡೆಯಲು ಸಾಧ್ಯವಿರುವ ಸುಧಾರಣೆಗಳು

ಈ “ಆಧುನಿಕ ರಾಜಪ್ರಭುತ್ವ”ವನ್ನು ಹೋಗಲಾಡಿಸಿ, ಸಾಮಾನ್ಯ ನಾಗರಿಕರಿಗೂ ಸಮಾನ ಅವಕಾಶ ಸಿಗಬೇಕಾದರೆ ಈ ಕೆಳಗಿನ ಬದಲಾವಣೆಗಳು ಅತ್ಯಗತ್ಯ:

ರಾಜಕೀಯ ಪಕ್ಷಗಳ ಆಂತರಿಕ ಪ್ರಜಾಪ್ರಭುತ್ವ (Internal Democracy)

ಪ್ರಸ್ತುತ, ಭಾರತದ ಬಹುತೇಕ ಪಕ್ಷಗಳಲ್ಲಿ ಹೈಕಮಾಂಡ್ ಅಥವಾ ಕುಟುಂಬದ ಮುಖ್ಯಸ್ಥರು ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ. ಬದಲಾಗಿ, ಅಮೆರಿಕದ ‘ಪ್ರೈಮರಿಸ್’ (Primaries) ಮಾದರಿಯಲ್ಲಿ ಪಕ್ಷದ ಕಾರ್ಯಕರ್ತರೇ ತಮ್ಮ ಅಭ್ಯರ್ಥಿಯನ್ನು ಮತದಾನದ ಮೂಲಕ ಆರಿಸುವಂತಾಗಬೇಕು. ಆಗ ಮಾತ್ರ ಅರ್ಹ ಕಾರ್ಯಕರ್ತರಿಗೆ ಮನ್ನಣೆ ಸಿಗುತ್ತದೆ.

ಚುನಾವಣಾ ವೆಚ್ಚದ ಮಿತಿ ಮತ್ತು ಪಾರದರ್ಶಕತೆ

ರಾಜವಂಶಗಳು ದಶಕಗಳಿಂದ ಕೂಡಿಟ್ಟ ಅಪಾರ ಸಂಪತ್ತನ್ನು ಚುನಾವಣೆಯಲ್ಲಿ ಸುರಿಯುತ್ತವೆ. ಸಾಮಾನ್ಯ ಅಭ್ಯರ್ಥಿಗೆ ಈ ಹಣದ ಬಲವನ್ನು ಎದುರಿಸುವುದು ಅಸಾಧ್ಯ. ಚುನಾವಣಾ ಬಾಂಡ್‌ಗಳ ಪಾರದರ್ಶಕತೆ ಮತ್ತು ಅಭ್ಯರ್ಥಿಯ ವೈಯಕ್ತಿಕ ವೆಚ್ಚದ ಮೇಲೆ ಕಟ್ಟುನಿಟ್ಟಾದ ನಿಗಾ ಇಟ್ಟರೆ, ಸಮಾನ ಸ್ಪರ್ಧಾಕಣ (Level Playing Field) ನಿರ್ಮಾಣವಾಗುತ್ತದೆ.

ಮತದಾರರ ಜಾಗೃತಿ: “Surname” ಬದಲಿಗೆ “Service” ನೋಡಿ

ಅಂತಿಮವಾಗಿ ಅಧಿಕಾರ ನೀಡುವುದು ಮತದಾರರು. ಒಬ್ಬ ಅಭ್ಯರ್ಥಿ ಯಾರ ಮಗ ಅಥವಾ ಮೊಮ್ಮಗ ಎನ್ನುವುದಕ್ಕಿಂತ, ಅವರ ಸ್ವಂತ ಸಾಧನೆ ಏನು? ಸಮಾಜಕ್ಕೆ ಅವರ ಕೊಡುಗೆ ಏನು? ಎಂಬ ಆಧಾರದ ಮೇಲೆ ಮತ ಚಲಾಯಿಸುವ ಪ್ರವೃತ್ತಿ ಬೆಳೆಯಬೇಕು.

ವಂಶಪಾರಂಪರ್ಯ ವಿರೋಧಿ ಕಾನೂನು?

ಕೆಲವು ತಜ್ಞರು ಸೂಚಿಸುವಂತೆ, ಒಂದೇ ಕುಟುಂಬದ ಒಬ್ಬರಿಗಿಂತ ಹೆಚ್ಚು ಸದಸ್ಯರು ಒಂದೇ ಚುನಾವಣೆಯಲ್ಲಿ ಅಥವಾ ಒಂದೇ ಅವಧಿಯಲ್ಲಿ ಸ್ಪರ್ಧಿಸದಂತೆ ಕಾನೂನು ತರಬಹುದು. ಆದರೆ ಇದು ಸಂವಿಧಾನದ “ಸಮಾನ ಅವಕಾಶ”ದ ಹಕ್ಕಿಗೆ ಧಕ್ಕೆ ತರುತ್ತದೆ ಎಂಬ ವಾದವೂ ಇದೆ. “ಪ್ರಜಾಪ್ರಭುತ್ವವು ಕೇವಲ ಮತದಾನದ ಹಕ್ಕಲ್ಲ, ಅದು ಸಾಮಾನ್ಯ ಮನುಷ್ಯನೂ ಸಹ ತನ್ನ ಸಾಮರ್ಥ್ಯದ ಮೇಲೆ ದೇಶದ ಅತ್ಯುನ್ನತ ಸ್ಥಾನಕ್ಕೇರಬಲ್ಲ ವ್ಯವಸ್ಥೆ.” ವಂಶಪಾರಂಪರ್ಯ ರಾಜಕಾರಣವು ಈ ಮೂಲ ಆಶಯಕ್ಕೇ ಕೊಡಲಿ ಪೆಟ್ಟು ನೀಡುತ್ತಿದೆ. ಇಂದಿನ “ಪುಲಕೇಶಿಗಳು” ಕಿರೀಟದ ಬದಲು ಟಿಕೆಟ್ ಪಡೆಯುತ್ತಿದ್ದಾರೆ ಅಷ್ಟೆ.

ವಂಶಪಾರಂಪರ್ಯದ ವಿರುದ್ಧ ಈಜಿದ ‘ಸ್ವಯಂ-ನಿರ್ಮಿತ’ (Self-made) ನಾಯಕರು

ರಾಜವಂಶಗಳ ಅಬ್ಬರದ ನಡುವೆಯೂ, ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದೆ ಸಾಮಾನ್ಯ ಕುಟುಂಬಗಳಿಂದ ಬಂದು ದೇಶದ ಅತ್ಯುನ್ನತ ಸ್ಥಾನಕ್ಕೇರಿದ ಕೆಲವು ಉದಾಹರಣೆಗಳು ನಮ್ಮ ಮುಂದಿವೆ. ಇವರು “ಮೊದಲ ಪುಲಕೇಶಿ, ಎರಡನೇ ಪುಲಕೇಶಿ” ಮಾದರಿಯನ್ನು ಮುರಿದವರು: ಲಾಲ್ ಬಹದ್ದೂರ್ ಶಾಸ್ತ್ರಿ: ಅತ್ಯಂತ ಸಾಮಾನ್ಯ ಕುಟುಂಬದಿಂದ ಬಂದು, ‘ಜೈ ಜವಾನ್ ಜೈ ಕಿಸಾನ್’ ಎಂಬ ಘೋಷಣೆಯೊಂದಿಗೆ ದೇಶವನ್ನು ಮುನ್ನಡೆಸಿದವರು. ಎ.ಪಿ.ಜೆ. ಅಬ್ದುಲ್ ಕಲಾಂ: ರಾಮೇಶ್ವರಂನ ದೋಣಿ ನಡೆಸುವವರ ಮಗನಾಗಿ ಹುಟ್ಟಿ, ವಿಜ್ಞಾನಿಯಾಗಿ ಬೆಳೆದು ಭಾರತದ ‘ಮಿಸೈಲ್ ಮ್ಯಾನ್’ ಮತ್ತು ರಾಷ್ಟ್ರಪತಿಯಾದವರು. ನರೇಂದ್ರ ಮೋದಿ: ರೈಲ್ವೆ ನಿಲ್ದಾಣದಲ್ಲಿ ಚಹಾ ಮಾರುತ್ತಿದ್ದ ಸಾಮಾನ್ಯ ಹಿನ್ನೆಲೆಯಿಂದ ಬಂದು, ಇಂದು ಸತತ ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿರುವುದು ವಂಶಪಾರಂಪರ್ಯ ರಾಜಕಾರಣಕ್ಕೆ ದೊಡ್ಡ ಸವಾಲಾಗಿದೆ. ಸಿದ್ದರಾಮಯ್ಯ: ಹಳ್ಳಿಯ ರೈತ ಕುಟುಂಬದಿಂದ ಬಂದು, ವಕೀಲರಾಗಿ, ನಂತರ ತಳಮಟ್ಟದ ಹೋರಾಟಗಳ ಮೂಲಕ ರಾಜ್ಯದ ಮುಖ್ಯಮಂತ್ರಿಯಾದವರು. ಇವರ ರಾಜಕೀಯ ಏಳಿಗೆಯಲ್ಲಿ ಯಾವುದೇ “ಕುಟುಂಬದ ಪರಂಪರೆ” ಇರಲಿಲ್ಲ. ಆದರೆ ಅದೇ ಸಿದ್ದರಾಮಯ್ಯ ಇಂದು ತನ್ನ ಎರಡನೇ ಮಗ ಹಾಗೂ ಅವರು ತೀರಿಕೊಂಡ ನಂತರ ಮೊದಲ ಮಗನನ್ನು ರಾಜಕೀಯಕ್ಕೆ ಎಳೆದು ತಂದು ನಗೆಪಾಟಲಿಗೀಡಾಗುತ್ತಿದ್ದರೆ.

ವಂಶಪಾರಂಪರ್ಯ ರಾಜಕಾರಣದ ದುಷ್ಪರಿಣಾಮಗಳು

ಈ ವ್ಯವಸ್ಥೆಯು ಕೇವಲ ಒಂದು ಕುಟುಂಬಕ್ಕೆ ಲಾಭ ಮಾಡಿಕೊಡುವುದಲ್ಲದೆ, ದೇಶದ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಸಡಿಲಗೊಳಿಸುತ್ತದೆ:

ಅರ್ಹತೆಯ ಕೊಲೆ (Death of Merit): ಸಮರ್ಥ ಮತ್ತು ಪ್ರತಿಭಾವಂತ ಯುವಕರು ರಾಜಕೀಯಕ್ಕೆ ಬರಲು ಹಿಂಜರಿಯುತ್ತಾರೆ. ಅವರಿಗೆ “ನಮ್ಮ ತಂದೆ ದೊಡ್ಡ ನಾಯಕರಲ್ಲದಿದ್ದರೆ ಇಲ್ಲಿ ಸ್ಥಾನವಿಲ್ಲ” ಎಂಬ ಭಾವನೆ ಮೂಡುತ್ತದೆ.

ಪಕ್ಷಗಳ ಖಾಸಗೀಕರಣ: ರಾಜಕೀಯ ಪಕ್ಷಗಳು ಸಾರ್ವಜನಿಕ ಆಸ್ತಿಯಾಗುವ ಬದಲು ಒಂದು ಕುಟುಂಬದ ‘ಟ್ರಸ್ಟ್’ಗಳಂತಾಗುತ್ತವೆ. ಟಿಕೆಟ್ ವಿತರಣೆ ಮತ್ತು ನಿಧಿಯ ಬಳಕೆ ಕೇವಲ ಕುಟುಂಬದ ಹಿತಾಸಕ್ತಿಗನುಗುಣವಾಗಿ ನಡೆಯುತ್ತದೆ.

ಉತ್ತರ ಹೊಣೆಗಾರಿಕೆಯ ಕೊರತೆ: ವಂಶಪಾರಂಪರ್ಯ ನಾಯಕರು ತಾವು ಗೆಲ್ಲುವುದು ತಮ್ಮ “ಸೇವೆ”ಯಿಂದಲ್ಲ, ಬದಲಿಗೆ ತಮ್ಮ “ಹೆಸರಿ”ನಿಂದ ಎಂಬ ಅಹಂಕಾರಕ್ಕೆ ಒಳಗಾಗುತ್ತಾರೆ. ಇದು ಭ್ರಷ್ಟಾಚಾರಕ್ಕೆ ಎಡೆಮಾಡಿಕೊಡುತ್ತದೆ.

ನಾವು ಏನು ಮಾಡಬಹುದು?

ಪ್ರಜಾಪ್ರಭುತ್ವ ಎಂಬುದು ಕೇವಲ ಮತ ಹಾಕುವುದಲ್ಲ, ಅದು ಪ್ರತಿಭೆ ಮತ್ತು ಶ್ರಮಕ್ಕೆ ಸಿಗುವ ಗೌರವ. ಈ “ಆಧುನಿಕ ರಾಜವಂಶ”ಗಳನ್ನು ಅಂತ್ಯಗೊಳಿಸಲು ನಾಗರಿಕರಾದ ನಾವು: ಅಭ್ಯರ್ಥಿಯ ಅರ್ಹತೆ ಮತ್ತು ಅವರ ಕಳೆದ 5 ವರ್ಷಗಳ ಕೆಲಸವನ್ನು ಮಾತ್ರ ಮಾನದಂಡವಾಗಿ ಇಟ್ಟುಕೊಳ್ಳಬೇಕು. “ಅಪ್ಪನ ನಂತರ ಮಗ” ಎಂಬ ಸಂಸ್ಕೃತಿಯನ್ನು ಪ್ರಶ್ನಿಸಬೇಕು. ರಾಜಕೀಯದಲ್ಲಿ ಯುವಜನರ ಮತ್ತು ಸಾಮಾನ್ಯ ಜನರ ಭಾಗವಹಿಸುವಿಕೆಯನ್ನು ಬೆಂಬಲಿಸಬೇಕು.

ಕೊನೆಯ ಮಾತು: ರಾಜಪ್ರಭುತ್ವದಲ್ಲಿ ರಾಜನ ಹೊಟ್ಟೆಯಲ್ಲಿ ರಾಜ ಹುಟ್ಟುತ್ತಿದ್ದನು. ಆದರೆ ಪ್ರಜಾಪ್ರಭುತ್ವದಲ್ಲಿ ಮತಪೆಟ್ಟಿಗೆಯಿಂದ ನಾಯಕ ಹುಟ್ಟಬೇಕು. ಆ ಮತಪೆಟ್ಟಿಗೆಯು ಮತ್ತೆ “ರಾಜವಂಶ”ವನ್ನೇ ಸೃಷ್ಟಿಸಿದರೆ, ಅದು ನಮ್ಮ ಸಂವಿಧಾನಕ್ಕೆ ಮಾಡುವ ದ್ರೋಹ. ಪ್ರಾಚೀನ ಕಾಲದ ಮೊದಲ ಪುಲಕೇಶಿ ಮತ್ತು ಎರಡನೇ ಪುಲಕೇಶಿಯಂತಹ ರಾಜವಂಶಗಳ ಸರಣಿಯು ಇಂದು ಆಧುನಿಕ ಪ್ರಜಾಪ್ರಭುತ್ವದಲ್ಲಿ ವೇಷ ಬದಲಿಸಿ ಮುಂದುವರಿಯುತ್ತಿರುವುದು ಒಂದು ದೊಡ್ಡ ವಿಪರ್ಯಾಸ. ದೇಶದ ಅತಿದೊಡ್ಡ ‘ಸೆಲೆಬ್ರಿಟಿ’ ರಾಜಕೀಯ ಕುಟುಂಬಗಳಿಂದ ಹಿಡಿದು ಕರ್ನಾಟಕದ ಯಡಿಯೂರಪ್ಪ, ದೇವೇಗೌಡ ಅಥವಾ ದಾವಣಗೆರೆಯ ಶಾಮನೂರು ಶಿವಶಂಕರಪ್ಪನವರ ಕುಟುಂಬಗಳವರೆಗೆ ಅಧಿಕಾರವು ಕೇವಲ ರಕ್ತಸಂಬಂಧದ ಆಧಾರದ ಮೇಲೆ ಹಸ್ತಾಂತರವಾಗುತ್ತಿದೆ, ಇದು ಪ್ರಜಾಪ್ರಭುತ್ವದ ಅಸಲಿ ಆಶಯವನ್ನೇ ಅಣಕ ಮಾಡುತ್ತಿದೆ. ಒಬ್ಬ ಸಾಮಾನ್ಯ ಸರ್ಕಾರಿ ನೌಕರ ಅಥವಾ IAS ಅಧಿಕಾರಿಯಾಗಲು ಕಠಿಣ ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಶೈಕ್ಷಣಿಕ ಅರ್ಹತೆ ಅನಿವಾರ್ಯವಾಗಿರುವಾಗ, ದೇಶವನ್ನು ಆಳುವ MLA, MP, ಮತ್ತು ಮಂತ್ರಿಗಳಿಗೆ ಯಾವುದೇ ಕನಿಷ್ಠ ಶೈಕ್ಷಣಿಕ ಮಾನದಂಡವಿಲ್ಲದಿರುವುದು ಆಡಳಿತದ ಗುಣಮಟ್ಟವನ್ನು ಕುಂದಿಸುತ್ತಿದೆ. ಆದ್ದರಿಂದ, ಕೇವಲ “ರಾಜನ ಮಗ ರಾಜನಾಗುವ” ಸಂಸ್ಕೃತಿಗೆ ತಡೆ ಹಾಕಿ, ರಾಜಕೀಯದಲ್ಲೂ ಅರ್ಹತೆ ಮತ್ತು ಜ್ಞಾನಕ್ಕೆ ಪ್ರಾಮುಖ್ಯತೆ ನೀಡುವಂತಹ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳು ಹಾಗೂ ಕನಿಷ್ಠ ಶೈಕ್ಷಣಿಕ ಅರ್ಹತೆಗಳನ್ನು ಕಡ್ಡಾಯಗೊಳಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಆಗ ಮಾತ್ರ “ವಂಶಪಾರಂಪರ್ಯ ಜಾಗೀರು”ಗಳಂತಾಗಿರುವ ಕ್ಷೇತ್ರಗಳು ಮುಕ್ತವಾಗಿ, ಸಾಮಾನ್ಯ ನಾಗರಿಕನೂ ದೇಶದ ಉನ್ನತ ಪೀಠವನ್ನೇರಲು ಸಾಧ್ಯವಾಗುತ್ತದೆ.