ಬೆಳ್ತಂಗಡಿ: ಸುಲ್ಕೇರಿ ಗ್ರಾಮದ ಅಟ್ರಿಂಜೆ ಕೊರಗ ಕಾಲೋನಿಗೆ ಕೇಂದ್ರ ಸರಕಾರದ ವಿಶೇಷ ಅನುದಾನದಲ್ಲಿ ಪಿ.ಎಂ.ಜನ್ ಮನ್ ಯೋಜನೆಯಡಿ ರಸ್ತೆ ಮತ್ತು ಸೇತುವೆ ನಿರ್ಮಾಣಕ್ಕಾಗಿ ಮಂಜೂರಾದ ಒಂಬತ್ತು ಕೋಟಿ ರೂ. ಹಣವನ್ನು ಬೇರೆ ಕಡೆ ಕೊಟ್ಟಿದ್ದೀರಿ. ಅಟ್ರಿಂಜೆ ಕೊರಗ ಕಾಲೋನಿ ಸೇತುವೆಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದೀರಿ. ಆದರೆ ಇನ್ನೂ ಕೂಡ ಅನುದಾನ ಬಿಡುಗಡೆ ಆಗಿಲ್ಲ. ಈ ಬಾರಿ ಮಳೆಗಾಲದಲ್ಲಿ ಈ ಸೇತುವೆಯಲ್ಲಿ ಹೇಗೆ ಹೋಗುವುದು? ಇದಕ್ಕೆ ಏನಾದರೂ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಿತರಕ್ಷಣಾ ಸಭೆಯಲ್ಲಿ ದಲಿತ ಮುಖಂಡರು ಆಗ್ರಹಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಿತರಕ್ಷಣಾ ಸಭೆಯು ತಹಶೀಲ್ದಾರ್ ಪೃಥ್ವಿ ಸಾನಿಕಂ ಅಧ್ಯಕ್ಷತೆಯಲ್ಲಿ ಏಪ್ರಿಲ್ 1 ರಂದು ಬೆಳ್ತಂಗಡಿ ಆಡಳಿತ ಸೌಧದಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ಶೇಖರ್ ಲಾಯಿಲರವರು ಮಾತನಾಡಿ, ಸುಲ್ಕೇರಿ ಗ್ರಾಮದ ಅಟ್ರಿಂಜೆ ಕೊರಗ ಕಾಲೋನಿಗೆ ಕೇಂದ್ರ ಸರಕಾರದ ವಿಶೇಷ ಅನುದಾನದಲ್ಲಿ ಪಿ.ಎಂ.ಜನ್ ಮನ್ ಯೋಜನೆಯಡಿ ರಸ್ತೆ ಮತ್ತು ಸೇತುವೆ ನಿರ್ಮಾಣಕ್ಕಾಗಿ ಮಂಜೂರಾದ 9 ಕೋಟಿ ಹಣವನ್ನು ಬೇರೆ ಕಡೆಯಲ್ಲಿ ಸೇತುವೆ ನಿರ್ಮಾಣ ಮಾಡಿದ್ದಾರೆ. ಅಲ್ಲಿ ಒಂದೇ ಒಂದು ಕೊರಗ ಸಮುದಾಯದ ಜನರಿಲ್ಲ. ಹಣವನ್ನು ದುರುಪಯೋಗ ಮಾಡಿದ ಅಧಿಕಾರಿಗಳ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಿಸಬೇಕು ಎಂದು ಒತ್ತಾಯಿಸಿದರು.

ಅಟ್ರಿಂಜೆಯ ಸವಿತಾ ಕೊರಗ ಮಾತನಾಡಿ, ಸುಲ್ಕೇರಿ ಗ್ರಾಮದ ಅಟ್ರಿಂಜೆ ಕೊರಗ ಕಾಲೋನಿಗೆ ರಸ್ತೆ ಮತ್ತು ಸೇತುವೆ ನಿರ್ಮಾಣ ಮಾಡಬೇಕು ಎಂದು 15 ವರ್ಷದಿಂದ ಕೇಳುತ್ತಿದ್ದೇವೆ. ಯಾವಾಗ ನಿರ್ಮಾಣ ಮಾಡುತ್ತೀರಿ? ತಾಲೂಕು ಪಂಚಾಯತ್ಗೆ ನಿದ್ದೆ ಬಿಡುತ್ತಿಲ್ವ? ತಕ್ಷಣ ಅಲ್ಲಿ ಸೇತುವೆ ನಿರ್ಮಾಣ ಮಾಡಬೇಕು ಎಂದು ಹೇಳಿದರು.
ಮಾಜಿ ಜಿ.ಪಂ ಸದಸ್ಯ ಶೇಖರ್ ಕುಕ್ಕೇಡಿ ಮಾತನಾಡಿ, ಕಾರ್ಮಿಕ ಇಲಾಖೆ ಬೆಳ್ತಂಗಡಿಯಲ್ಲಿ ಇದೆಯಾ? ಕಾರ್ಮಿಕರು ಇಲಾಖೆಯ ಅಧಿಕಾರಿಗಳು ಎಲ್ಲಿ ಇದ್ದಾರೆ? ತಾಲೂಕಿನಲ್ಲಿ ಹೆಚ್ಚು ಕಾರ್ಮಿಕರಿದ್ದಾರೆ. ಅವರಿಗೆ ಸರಿಯಾದ ಮಾಹಿತಿ ನೀಡಬೇಕು. ಅಲ್ಲದೆ ಕಾರ್ಮಿಕ ಇಲಾಖೆ ಖಾಸಗಿ ಕಟ್ಟಡದಲ್ಲಿ ಇದೆ. ಅದನ್ನು ತಾಲೂಕು ಪಂಚಾಯತ್ಗೆ ಸ್ಥಳಾಂತರಿಸಬೇಕು. ಕಾರ್ಮಿಕ ಇಲಾಖೆಯಲ್ಲಿ ಯಾವುದೆ ಸವಲತ್ತುಗಳು ಸಿಗುತ್ತದೆ ಎಂಬ ಬಗ್ಗೆ ಜನರಿಗೆ ತಿಳಿಸಬೇಕು. ಪಂಚಾಯತ್ ಮಟ್ಟದಲ್ಲಿ ಕಾರ್ಮಿಕರಿಗೆ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು. ಕಾರ್ಮಿಕ ಇಲಾಖೆಯನ್ನು ಸ್ಥಳಾಂತರಿಸುವ ಬಗ್ಗೆ ತಾಲೂಕು ಪಂಚಾಯತ್ ಇಓ ಜೊತೆ ಮಾತನಾಡುತ್ತೇನೆ ಎಂದು ತಹಶೀಲ್ದಾರ್ ಹೇಳಿದರು.
ಬೆಳ್ತಂಗಡಿ ತಾಲೂಕು ಭವನಕ್ಕೆ ರೂ. 3 ಕೋಟಿ ಅನುದಾನ ಬಿಡುಗಡೆಯಾಗಿದೆ. ಅದಕ್ಕೆ ಬೆಳ್ತಂಗಡಿ ಕ್ರೀಡಾಂಗಣದ 2.40 ಎಕರೆ ಜಾಗವನ್ನು ಮೀಸಲಿಡಲಾಗಿದೆ. ಇನ್ನೂ ಉಳಿದ ಜಾಗಕ್ಕೆ ಕಾಂಪೌಂಡ್ ನಿರ್ಮಾಣ ಮಾಡಿದ್ದು ಯಾಕೆ? ಅಲ್ಲಿ ಕಾಂಪೌಂಡ್ ನಿರ್ಮಾಣ ಮಾಡುವ ಅವಶ್ಯಕತೆ ಏನಿದೆ? ಅದನ್ನು ತಕ್ಷಣ ತೆರವುಗೊಳಿಸಬೇಕು ಮತ್ತು ಉಳಿದ ಜಮೀನನ್ನು ಅಂಬೇಡ್ಕರ್ ಭವನಕ್ಕೆ ಮೀಸಲಿಡಿ ಎಂದು ವಸಂತ್ ಬಿ.ಕೆ ಒತ್ತಾಯಿಸಿದರು.
ಶೇಖರ್ ಲಾಯಿಲ ಮಾತನಾಡಿ ಅಂಬೇಡ್ಕರ್ ಭವನಕ್ಕೆ ಮೂರು ಕೋಟಿ ಅನುದಾನ ಬಿಡುಗಡೆ ಆಗಿದೆ. ಅದರ ಮೂರು ಸಭೆ ಪ್ರವಾಸಿ ಮಂದಿರದಲ್ಲಿ ಶಾಸಕರ ನೇತೃತ್ವದಲ್ಲಿ ಆಗಿದೆ. ಅದಕ್ಕೆ ಕೆಲ ದಲಿತ ಮುಖಂಡರನ್ನು ಮಾತ್ರ ಕರೆದಿದ್ದಾರೆ. ನಮ್ಮನ್ನು ಯಾಕೆ ಕರೆಯಲಿಲ್ಲ. ಶಾಸಕರು ಬೇಕಾ ಬಿಟ್ಟಿ ಸಭೆ ಮಾಡಲು ಅವಕಾಶ ಇದೆಯಾ? ಎಂ.ಎಲ್.ಎ ಮನೆಯ ಹಣದಿಂದ ಅಂಬೇಡ್ಕರ್ ಭವನ ಕಟ್ಟುವುದು ಅಲ್ವಲ್ಲ.? ಅವರಿಗೆ ಬೇಕಾದ ವ್ಯಕ್ತಿಗಳನ್ನು ಇಟ್ಟುಕೊಂಡು ಸಭೆ ಮಾಡುವುದು ಯಾಕೆ ಎಂದು ಶೇಖರ್ ಲಾಯಿಲ ಹೇಳಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು ಇದು ಶಾಸಕರು ನಡೆಸಿದ ಸಭೆ, ಈ ಬಗ್ಗೆ ನಮ್ಮ ಗಮನಕ್ಕೆ ಬಂದಿಲ್ಲ ಎಂದು ಹೇಳಿದರು.
ಗ್ರಾಮ ಪಂಚಾಯತ್ ಗಳಲ್ಲಿ ಸ್ವಚ್ಛತಾ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರಿಗೆ ಕಾರ್ಮಿಕ ಕಾಯ್ದೆಯನ್ನು ಉಲ್ಲಂಘಿಸಿ ವೇತನ ನೀಡಲಾಗುತ್ತಿದೆ. ಕಾರ್ಮಿಕರನ್ನು ಖಾಯಂ ಮಾಡಬೇಕಾದ ಗ್ರಾ.ಪಂಗಳು ಸಂಜೀವಿನಿ ಒಕ್ಕೂಟದ ಮೂಲಕ ಸ್ವಚ್ಛತಾ ಕೆಲಸ ಮಾಡಿಸಲಾಗುತ್ತಿದೆ. ವಾರಕ್ಕೆ ಒಂದೆರಡು ಕೆಲಸ ನೀಡುವ ಗ್ರಾ.ಪಂಗಳು ಇತರ ದಿನಗಳಲ್ಲಿ ಉದ್ಯೋಗ ನೀಡದೆ ವಂಚಿಸುತ್ತಿದೆ ಎಂದು ಆರೋಪಿಸಿದ ಶೇಖರ್ ಲಾಯಿಲ ಗ್ರಾಮ ಪಂಚಾಯತ್ ಪೌರ ಕಾರ್ಮಿಕರನ್ನು ತಕ್ಷಣ ಖಾಯಂಗೊಳಿಸಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ತಹಶೀಲ್ದಾರ್ ಪೃಥ್ವಿ ಸಾನಿಕಂ, ಇಓ ಭವಾನಿ ಶಂಕರ್ , ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಧನಂಜಯ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತಿರಿದ್ದರು.
