ಉಕ್ಕಿನ ಮಹಿಳೆ ಕುಳಾಯಿ ಶ್ರೀಘ್ರದಲ್ಲಿ ಬಿಜೆಪಿಗೆ.?

ಕರಾವಳಿ

BIG POLITICAL NEWS

ಪ್ರತಿಭಾ ಕುಳಾಯಿಯನ್ನು ಸೆಳೆಯಲು ರಣತಂತ್ರ ರೂಪಿಸಿದ ಬಿಜೆಪಿ

ದಕ್ಷಿಣ ಕನ್ನಡ ಜಿಲ್ಲಾ ರಾಜಕಾರಣದಲ್ಲಿ ಸ್ಪೋಟಕ ಸುದ್ದಿಯೊಂದು ಹೊರಬಿದ್ದಿದೆ. ಕಾಂಗ್ರೆಸ್ ಪಕ್ಷದ ಗಟ್ಟಿಗಿತ್ತಿ, ಉಕ್ಕಿನ ಮಹಿಳೆ ಎಂದೇ ಕರೆಸಿಕೊಂಡಿರುವ ಮಾಜಿ ಕಾರ್ಪೋರೇಟರ್ ಪ್ರತಿಭಾ ಕುಳಾಯಿ ಕಾಂಗ್ರೆಸ್ ಗೆ ಗುಡ್ ಬೈ ಹೇಳಿ ಬಿಜೆಪಿ ಸೇರುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದ್ದು, ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಹೊಡೆತ ಬೀಳುವ ಎಲ್ಲಾ ಸಂಗತಿಗಳು ಗೋಚರಿಸುತ್ತಿದೆ.

ಪ್ರತಿಭಾ ಕುಳಾಯಿ ಕಾಂಗ್ರೆಸ್ ಪಕ್ಷದ ನಿಷ್ಠಾವಂತೆ ನಾಯಕಿ. ಸಂಘಪರಿವಾರವನ್ನು ಎದುರು ಹಾಕಿಕೊಂಡು ರಾಜಕೀಯ ರಂಗಕ್ಕೆ ಧುಮುಕಿದ ಗಟ್ಟಿಗಿತ್ತಿ ಮಹಿಳೆ. ಬಿಜೆಪಿಯ ಟಾಂಗ್ ಗಳಿಗೆ ಪ್ರತ್ಯುತ್ತರ ಕೊಟ್ಟು ಬೆಳೆದು ಬಂದಾಕೆ. ಮಹಿಳೆಗೆ ವಿಧಾನಸಭಾ ಸಭಾ ಟಿಕೆಟ್ ನೀಡಲ್ಪಟ್ಟರೆ ಪ್ರತಿಭಾ ಕುಳಾಯಿ ಕೂಡ ಆಕಾಂಕ್ಷಿಯೇ. ಆ ಮಟ್ಟಿಗೆ ವೈಯಕ್ತಿಕ ವರ್ಚಸ್ಸಿನ ಮೂಲಕ ಬೆಳೆದು ಬಂದಾಕೆ. ಕಳೆದ ಬಾರಿ ವಿಧಾನಸಭಾ ಚುನಾವಣೆಯ ಟಿಕೆಟ್ ಗಾಗಿ ಮಂಗಳೂರು ಉತ್ತರ, ಮೂಡಬಿದ್ರೆ ಕ್ಷೇತ್ರದಲ್ಲಿ ಅರ್ಜಿ ಸಲ್ಲಿಸಿ ಗಮನ ಸೆಳೆದಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಪಕ್ಷದಿಂದ ಅಂತರ ಕಾಯ್ದುಕೊಂಡು ಬರುತ್ತಿದ್ದು, ಕಾಂಗ್ರೆಸ್ ಗೆ ರಾಜೀನಾಮೆ ನೀಡುತ್ತರಾ ಅನ್ನುವ ಮಾತುಗಳು ಆಪ್ತ ವಲಯಗಳಲ್ಲಿ ಕೇಳಿ ಬಂದಿತ್ತು.

ಆದರೆ ಇದೀಗ ಹೊರಬಿದ್ದಿರುವ ಸ್ಪೋಟಕ ಮಾಹಿತಿ ಪ್ರಕಾರ ಕುಳಾಯಿ ಕಾಂಗ್ರೆಸ್ ತೊರೆಯಲಿದ್ದಾರೆ ಅನ್ನುವ ಮಾತುಗಳು ಕೇಳಿ ಬರತೊಡಗಿದೆ. ಕ್ಷೇತ್ರದಲ್ಲಿ ನಾಯಕರ ಮಧ್ಯೆ ವೈಮನಸ್ಸಿನಿಂದಾಗಿ ಏಕಾಂಗಿಯಾಗಿದ್ದಾರೆ ಅನ್ನುವ ಮಾತುಗಳು ಬಲ್ಲ ಮೂಲಗಳಿಂದ ಕೇಳಿ ಬರುತ್ತಿದೆ. ಕಳೆದ ನಾಲ್ಕು ತಿಂಗಳುಗಳಿಂದ ಪಕ್ಷದ ಚಟುವಟಿಕೆಗಳಿಂದ ದೂರವುಳಿಯುವ ಮೂಲಕ ಕಾಂಗ್ರೆಸ್ ಗೆ ಗುಡ್ ಬೈ ಹೇಳಲಿದ್ದಾರೆ ಅನ್ನುವ ಹರಿದಾಡುತ್ತಿರುವ ಮಾತಿಗೆ ಪುಷ್ಟಿ ನೀಡಿದೆ. ಇತ್ತೀಚೆಗೆ ಮಂಗಳೂರಿಗೆ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಮ್ಮ ಆಪ್ತವಲಯದೊಂದಿಗೆ ಮಂಗಳೂರಿನ ಪ್ರತಿಷ್ಠಿತ ಐಸ್ ಕ್ರೀಮ್ ಮಾಲ್ ಒಂದರ ಐಸ್ ಕ್ರೀಮ್ ಸವಿಯಲು ಹೋಗಿದ್ದರು. ಅ ಟೀಮಿನಲ್ಲಿ ಕುಳಾಯಿಯವರು ಕಾಣಸಿಗುವ ಮೂಲಕ ದೊಡ್ಡ ಸಂಚಲನವನ್ನೇ ಸೃಷ್ಠಿಸಿದ್ದರು. ಪ್ರಮುಖ ನಿಗಮ ಮಂಡಳಿ ಹುದ್ದೆ ಪಡೆಯಲು ಶತ ಪ್ರಯತ್ನ ನಡೆಸುತ್ತಿದ್ದ ಕುಳಾಯಿ ಡಿಕೆಶಿ ಜೊತೆ ಅತ್ಯಂತ ಹತ್ತಿರದಲ್ಲಿ ಕಂಡುಬಂದಿದ್ದು ನಿಗಮ ಮಂಡಳಿ ಪಕ್ಕಾ ಎಂದೇ ಹೇಳಲಾಗಿತ್ತು. ಇದು ಕೆಲವರ ಕಣ್ಣು ಕುಕ್ಕಿ ಡಿಕೆಸಿಗೆ ಮಸಲತ್ತು ನಡೆಸಿದರಂತೆ. ಆದರೆ ತದ ನಂತರ ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷರ ಭೇಟಿ ಮಾಡಲು ತೆರಳಿದ ಕುಳಾಯಿಗೆ ಶಾಕ್ ಕಾದಿತ್ತು. ಯಾರೋ ಕುಳಾಯಿ ಬಗ್ಗೆ ಅವರ ಬೂತ್ ನಲ್ಲಿ ಕೇವಲ 46 ಮತ ಲೀಡ್ ಪಡೆದದ್ದು ಎಂದು ಊದಿದ್ದರಂತೆ.! ಇದನ್ನು ಡಿಕೆಸಿ ನೇರವಾಗಿ ಇವರಲ್ಲಿ ವಿಚಾರಿಸಿದರಂತೆ. ಇದರಿಂದ ಕುಳಾಯಿ ತೀವ್ರ ಮುಜುಗರಕ್ಕೊಳಗಾಗಿದ್ದು ಅಂದಿನಿಂದ ಪಕ್ಷದ ಚಟುವಟಿಕೆಗಳಿಂದ ದೂರ ಸರಿದಿದ್ದಾರೆ. ಕುಳಾಯಿ ಬಿಲ್ಲವ ಸಮುದಾಯದವರಾಗಿದ್ದು, ಜಿಲ್ಲೆಯಲ್ಲಿ ಬಹುತೇಕ ಬಿಲ್ಲವ ಸಮಾಜ ಬಿಜೆಪಿ ಪರವಾಲಿದ್ದು, ಕಾಂಗ್ರೆಸ್ ನಲ್ಲಿ ಬೆರಳೆಣಿಕೆಯ ನಾಯಕರಷ್ಟೇ ಉಳಿದಿದ್ದಾರೆ. ಇದೀಗ ಇರುವ ನಾಯಕರನ್ನು ಕಳೆದುಕೊಂಡರೆ ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಡ್ಯಾಮೇಜ್ ಆಗುವ ಸಾಧ್ಯತೆಯೇ ಹೆಚ್ಚು.

ಕುಳಾಯಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಲಿದ್ದಾರೆ ಅನ್ನುವ ಸುದ್ದಿ ಬಹುತೇಕ ನಾಯಕರಿಗೆ ಆರಿವಾದೊಡನೆ ಕಾಂಗ್ರೆಸ್ ಪಕ್ಷದ ಜಿಲ್ಲೆಯ ಮಾಜಿ ಮಂತ್ರಿಯೊಬ್ಬರು ಕುಳಾಯಿ ಯವರನ್ನು ಸಂಪರ್ಕಿಸಿ ಪಕ್ಷದಲ್ಲೇ ಇರುವಂತೆ ಕೇಳಿಕೊಂಡಿದ್ದಾರೆ. ಆದರೆ ಸಕಾರಾತ್ಮಕ ಪ್ರತಿಕ್ರಿಯೆ ಸಿಗಲಿಲ್ಲ. ಜಿಲ್ಲೆಯ ಪ್ರಭಾವಿ ನಾಯಕರೊಬ್ಬರು ಬಿಜೆಪಿ ತೊರೆಯದಂತೆ ಕುಳಾಯಿ ಜೊತೆ ಮಾತುಕತೆ ನಡೆಸಿದಾಗ ಪಕ್ಷದಲ್ಲಿ ನಿಮ್ಮನ್ನೇ ಕಡೆಗಣಿಸುತ್ತಿದ್ದಾರೆ. ನಿಮಗೆ ಸ್ಟ್ಯಾಂಡ್ ಇಲ್ಲ ಎಂದು ಖಂಡಾತುಂಡವಾಗಿ ಹೇಳಿದ್ದಾಳೆ.

ಇತ್ತ ಬಿಜೆಪಿ ತನ್ನ ಕಾರ್ಯಾಚರಣೆಯನ್ನು ಮುಂದುವರಿಸಿದ್ದು ಬಿಜೆಪಿಯ ಉನ್ನತ ಮಟ್ಟದ ನಾಯಕರು ಎರಡು ಸುತ್ತಿನ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಇನ್ನು ಶೀಘ್ರವೇ ರಾಜ್ಯಾಧ್ಯಕ್ಷರ ಹಾಗೂ ಪ್ರಮುಖ ನಾಯಕರ ಜೊತೆ ಕುಳಾಯಿ ಮೂರನೇ ಸುತ್ತಿನ ಮಾತುಕತೆ ನಡೆಯಲಿದ್ದು, ಬಿಜೆಪಿ ಪಕ್ಷದಲ್ಲಿ ರಾಜ್ಯ ಮಟ್ಟದ ಪ್ರಮುಖ ಹುದ್ದೆ ನೀಡುವ ಭರವಸೆ ನೀಡಿರುವುದಾಗಿ ತಿಳಿದು ಬಂದಿದೆ. ಕಾಂಗ್ರೆಸ್ಸಿನ ಪ್ರಮುಖ ನಾಯಕರನ್ನು ಗಾಳ ಹಾಕಿ ಸೆಳೆಯುವುದರಲ್ಲಿ ನಿಸ್ಸೀಮರಾಗಿರುವ ಬಿಜೆಪಿ ಪ್ರತಿಭಾ ಕುಳಾಯಿ ಸೆಳೆಯಲು ನಾನಾ ಕಸರತ್ತು ನಡೆಸುತ್ತಿದೆ. ಕಾಂಗ್ರೆಸ್ಸಿನಲ್ಲಿ ನಿರರ್ಗಳವಾಗಿ ನೇರಾನೇರ ಭಾಷಣ ಮಾಡುವವರ ಸಂಖ್ಯೆಯೇ ಬೆರಳೆಣಿಕೆಯಷ್ಟೇ ಇರುವುದು. ಅಂತಹ ನಾಯಕರನ್ನೇ ಬುಟ್ಟಿಗೆ ಹಾಕುವಲ್ಲಿ ಬಿಜೆಪಿಗರು ನಿಸ್ಸೀಮರು. ಈ ಹಿಂದೆ ಹರಿಕೃಷ್ಣ ಬಂಟ್ವಾಳ್ ರನ್ನು ಸೆಳೆದಿದ್ದ ಬಿಜೆಪಿ ಇದೀಗ ಪ್ರತಿಭಾ ಕುಳಾಯಿ ಸೆಳೆಯಲು ರಣತಂತ್ರ ರೂಪಿಸಿದೆ.

ಇತ್ತ ಪ್ರತಿಭಾ ಕುಳಾಯಿ ತಾನು ಜೀವನಪರ್ಯಂತ ಬಿಜೆಪಿ ಜೊತೆ ಸೈದ್ಧಾಂತಿಕವಾಗಿ ಹೋರಾಡಿದ್ದು, ಇದೀಗ ಆ ಪಕ್ಷಕ್ಕೆ ಸೇರ್ಪಡೆಯಾಗಲು ಮನಸ್ಸು ಒಪ್ಪುತ್ತಿಲ್ಲ, ಬೇರೆ ವಿಧಿಯಿಲ್ಲದೆ ಸೇರುವುದು ಅನಿವಾರ್ಯವಾಗಿದೆ ಎಂದು ಆಪ್ತ ವಲಯದಲ್ಲಿ ಹೇಳಿಕೊಂಡಿದ್ದಾರಂತೆ.

ಕಾಂಗ್ರೆಸ್ ಪಕ್ಷ ಇನ್ನಾದರೂ ಇಂತಹ ನಾಯಕರು ಪಕ್ಷ ಬಿಟ್ಟು ತೆರಳದಂತೆ ಮನವೊಲಿಸುವ ಪ್ರಯತ್ನ ಮಾಡಬೇಕಾಗಿದೆ ಎಂದು ಕಾರ್ಯಕರ್ತರೆಡೆಯಲ್ಲಿ ಮಾತುಗಳು ಕೇಳಿ ಬರುತ್ತಿದೆ.