ಗೊಂದಲದ ಗೂಡಾದ ಬೆಳ್ತಂಗಡಿ ಅಂಬೇಡ್ಕರ್ ಜಯಂತಿ: ದಿನಕ್ಕೊಬ್ಬ ಮುಖ್ಯ ಭಾಷಣಕಾರರ ಬದಲಾವಣೆ

ರಾಷ್ಟ್ರೀಯ

ಪ್ರತಿವರ್ಷದಂತೆ ನಡೆಯುವ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್ ಅಂಬೇಡ್ಕರ್ ಜಯಂತಿ ಈ ವರ್ಷ ಗೊಂದಲದ ಗೂಡಾಗಿ ಪರಿಣಮಿಸಿದೆ. ದಿನಕ್ಕೊಬ್ಬರಂತೆ ಮುಖ್ಯ ಭಾಷಣಕಾರರು ಬದಲಾವಣೆಗೊಂಡು ಇದೀಗ ಕೊನೆಗಳಿಗೆಯಲ್ಲಿಯೂ ಬದಲಾವಣೆಯಾದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಅಂಬೇಡ್ಕರ್ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲು ಇತ್ತೀಚೆಗೆ ದಲಿತ ನಾಯಕರ ಸಭೆ ಬೆಳ್ತಂಗಡಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ದಲಿತ ನಾಯಕರು ಸರ್ವಾನುಮತದಿಂದ ಹಿರಿಯ ತುಳು ಸಾಹಿತಿ ಆತ್ರಾಡಿ ಅಮೃತ ಶೆಟ್ಟಿಯವರ ಹೆಸರನ್ನು ಸೂಚಿಸಿದರು. ಆದರೆ ತಾಲೂಕು ಆಡಳಿತ ಮದ್ರಿಸಿದ ಆಮಂತ್ರಣ ಪತ್ರಿಕೆಯಲ್ಲಿ ಅಮೃತ ಶೆಟ್ಟಿಯವರನ್ನು ಯಾವುದೇ ಕಾರಣ ನೀಡದೆ ಬದಲಾಯಿಸಿ ಸುನೀಲ್ ಪಂಡಿತ್ ಎಂಬವರ ಹೆಸರನ್ನು ಹಾಕಲಾಗಿತ್ತು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ದಲಿತ ನಾಯಕರು ಸಂಘಪರಿವಾರದ ಪಂಡಿತರಾಗಿರುವ ಸುನೀಲ್ ಪಂಡಿತ್ ಅವರನ್ನು ಮುಖ್ಯ ಭಾಷಣಕಾರರಾಗಿ ಬದಲಾಯಿಸದಿದ್ದರೆ ಕಾರ್ಯಕ್ರಮ ಬಹಿಷ್ಕಾರ ಹಾಕಿ ಪ್ರತ್ಯೇಕ ಅಂಬೇಡ್ಕರ್ ಜಯಂತಿ ಆಚರಣೆ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಇದಾದ ಬಳಿಕ ಕೊಕ್ಕಡ ಹೋಬಳಿ ಕಂದಾಯ ನಿರೀಕ್ಷಕ ಪಾವಡೆಪ್ಪ ದೊಡಮನಿ ಅವರನ್ನು ಆಯ್ಕೆ ಮಾಡಿ ಆಮಂತ್ರಣ ಪತ್ರ ಮುದ್ರಿಸಲಾಗಿ, ಹಂಚಲಾಗಿತ್ತು . ಆದರೆ ಕೊನೆಗಳಿಗೆಯಲ್ಲಿ ಮತ್ತೆ ಮುಖ್ಯ ಭಾಷಣಕಾರರ ಬದಲಾವಣೆಯಾಗಿದ್ದು, ಪಾವಡೆಪ್ಪ ದೊಡಮನಿ ಬದಲಾಗಿ ಬ್ಯಾಂಕ್ ಆಫ್ ಬರೋಡದ ಪ್ರಬಂಧಕ ಶಿವಪ್ರಸಾದ್ ಮುಖ್ಯ ಭಾಷಣಕಾರರು ಎಂದು ತಾಲೂಕು ಆಡಳಿತ ತಿಳಿಸಿದೆ‌. ಒಟ್ಟಾರೆಯಾಗಿ ಸಂವಿಧಾನ ಶಿಲ್ಪಿ ಡಾ‌.ಬಿ.ಆರ್ ಅಂಬೇಡ್ಕರ್ ಜಯಂತಿ ಗೊಂದಲಗಳ ಮಧ್ಯೆ ನಾಳೆ ನಡೆಯಲಿದೆ.