ದಾವಣಗೆರೆಯಲ್ಲಿ ಮುಕ್ತಾಯಗೊಂಡ ಉಪಚುನಾವಣೆಯಲ್ಲಿ ಸೀಟು ಹಂಚಿಕೆಯ ವಿಷಯದಲ್ಲಿ ಜಾತಿ-ಧರ್ಮದ ಬಗ್ಗೆ ಶುರುವಾದ ಗದ್ದಲ, ಗಲಾಟೆ ಇದೀಗ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಜ್ವಾಲೆಯಾಗಿ ಉರಿಯುತ್ತಿದೆ. ಆರಂಭದಲ್ಲಿ ಮುಸ್ಲಿಂ ನಾಯಕರೆಲ್ಲ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ಸಿಗಬೇಕೆಂದು ಹಠಕ್ಕೆ ಬಿದ್ದರೂ, ಸಮರ್ಥ್‌ಗೆ ಟಿಕೆಟ್ ನೀಡುತ್ತಿದ್ದಂತೆ ಜಮೀರ್ ಅಹ್ಮದ್, ನಾಸೀರ್ ಅಹ್ಮದ್ ಹಾಗೂ ಅಬ್ದುಲ್ ಜಬ್ಬರ್ ಹೊರತುಪಡಿಸಿ ಬಹುತೇಕ ಮುಸ್ಲಿಂ ನಾಯಕರು ಸಮರ್ಥ್ ಪರ ಪ್ರಚಾರಕ್ಕೆ ಇಳಿದಿದ್ದರು. ಕಾಂಗ್ರೆಸ್ ಮುಸ್ಲಿಂ ನಾಯಕರಲ್ಲಿ ‘ಅಸಮಾಧಾನ’ ಬಹುದೊಡ್ಡ ಪ್ರಮಾಣದಲ್ಲಿ ಸೃಷ್ಟಿಯಾಗಿತ್ತು ಎನ್ನುವುದು ಸತ್ಯ.
ದಾವಣಗೆರೆ ದಕ್ಷಿಣ ಕ್ಷೇತ್ರದ ವಿಷಯದಲ್ಲಿ ಶುರುವಾದ ಗೊಂದಲದ ನೆಪದಲ್ಲಿ ಕಾಂಗ್ರೆಸ್ ಮುಸ್ಲಿಂ ನಾಯಕರುಗಳ ನಡುವೆ ಕಿತ್ತಾಟ ಆರಂಭವಾಗಿದೆ. ಆದರೆ ಹಲವು ವರ್ಷಗಳಿಂದ ಕಾಂಗ್ರೆಸ್‌ನಲ್ಲಿ ಮುಸ್ಲಿಂ ನಾಯಕತ್ವವನ್ನು ಯಾರು ವಹಿಸಿಕೊಳ್ಳಬೇಕು ಎನ್ನುವ ವಿಷಯದಲ್ಲಿ ಈ ಕಿತ್ತಾಟ ಇದ್ದೇ ಇದೆ. ಕರ್ನಾಟಕ ಮಾತ್ರವಲ್ಲದೇ ಇಡೀ ದೇಶದಲ್ಲಿ ಕಾಂಗ್ರೆಸ್’ನೊಂದಿಗೆ ಈಗಲೂ ಗಟ್ಟಿಯಾಗಿ ನಿಂತಿರುವ ಸಮುದಾಯದ ಪೈಕಿ ಮುಸ್ಲಿಮರು ಮೊದಲ ಪಂಕ್ತಿಯಲ್ಲಿ ನಿಲ್ಲುತ್ತಾರೆ. ದೇಶದಲ್ಲಿ ದಿನದಿಂದ ದಿನಕ್ಕೆ ಕಾಂಗ್ರೆಸ್ ನಂಬಿಕೆ ಕಳೆದುಕೊಳ್ಳುತ್ತಿದ್ದರೂ, ಕರ್ನಾಟಕದಲ್ಲಿ ಮುಸ್ಲಿಮರು ಈಗಲೂ ಅನಿವಾರ್ಯತೆಗೆ ಸಿಲುಕಿ ಕಾಂಗ್ರೆಸ್‌ನೊಂದಿಗಿದ್ದಾರೆ. ಆದರೆ ಮುಸ್ಲಿಮರಿಂದ ಈ ಪ್ರಮಾಣದ ಬೆಂಬಲ ದೊರೆಯುತ್ತಿದ್ದರೂ ಟಿಕೆಟ್ ನೀಡುವ ವಿಚಾರ ಮಾತ್ರ ಟಿಕೆಟ್ ನೀಡುವ ವಿಷಯದಲ್ಲಿ ಈಗಲೂ ಬಹುದೊಡ್ಡ ಸಂಖ್ಯೆಯಲ್ಲಿಲ್ಲ. ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಯನ್ನು ಹೊರತುಪಡಿಸಿದರೆ ಮುಸ್ಲಿಮರು ಪ್ರಮುಖ ಪಾತ್ರ ವಹಿಸುತ್ತಾರೆ.

ಜಾತಿ ಗಣತಿಯ ಪ್ರಕಾರ ರಾಜ್ಯದಲ್ಲಿ ಸುಮಾರು ಒಂದರಿಂದ 1.10 ಕೋಟಿ ಮುಸ್ಲಿಂ ಮತದಾರರಿದ್ದಾರೆ. ರಾಜ್ಯದ 40ರಿಂದ 45 ಕ್ಷೇತ್ರಗಳಲ್ಲಿ ನಿರ್ಣಾಯಕ ಪಾತ್ರವನ್ನು ಮುಸ್ಲಿಂ ಮತದಾರರು ವಹಿಸುತ್ತಾರೆ. ಆದರೆ ಇತರೆ ರಾಜ್ಯಗಳನ್ನು ಮೀರಿ, ಕರ್ನಾಟಕದಲ್ಲಿ ಮುಸ್ಲಿಂ ಮತಗಳು ಬಹುದೊಡ್ಡ ಪ್ರಮಾಣದಲ್ಲಿ ಹರಿದು ಹಂಚಿ ಹೋಗಲು ಅವಕಾಶವಿಲ್ಲ. ಏಕೆಂದರೆ, ಬಿಜೆಪಿಯೊಂದಿಗೆ ಬಹು ಮುಸ್ಲಿಮರು ಕಾಣಿಸಿಕೊಳ್ಳುವುದಿಲ್ಲ. ಇನ್ನು ಈ ಹಿಂದೆ ಜೆಡಿಎಸ್ ಮುಸ್ಲಿಂ ಮತಗಳನ್ನು ಸೆಳೆಯುವ ಆತಂಕ ಕಾಂಗ್ರೆಸ್‌ಗಿತ್ತು. ಆದರೆ, ಬಿಜೆಪಿಯೊಂದಿಗೆ ಮೈತ್ರಿ ಮಾಡಿರುವ ಕಾರಣಕ್ಕೆ ಜೆಡಿಎಸ್ ಚಿಂತೆ ಕಾಂಗ್ರೆಸ್ ನಾಯಕರಿಗೆ ಇಲ್ಲವಾಗಿದೆ. ಓವೈಸಿ, ಎಸ್‌ಡಿಪಿಐಗೆ ರಾಜ್ಯ ರಾಜಕಾರಣದಲ್ಲಿ ಬಹುದೊಡ್ಡ ಅವಕಾಶ ಸದ್ಯದ ಮಟ್ಟಿಗಂತೂ ಇಲ್ಲವಾಗಿ ರುವುದರಿಂದ, ಮುಂದಿನ ಎರಡು ವಿಧಾನಸಭಾ ಚುನಾವಣೆವರೆಗಾದರೂ ಕಾಂಗ್ರೆಸ್‌ಗೆ ಮುಸ್ಲಿಂ ಮತ ವಿಭಜನೆಯ ಆತಂಕವಿಲ್ಲ.
ಇಷ್ಟೆಲ್ಲ ಅನುಕೂಲವಿದ್ದರೂ, ಕರ್ನಾಟಕ ಕಾಂಗ್ರೆಸ್‌ನಲ್ಲಿ ಈಗಲೂ ಮುಸ್ಲಿಂ ಸಮುದಾಯದ ನಾಯಕತ್ವದ ವಿಷಯದಲ್ಲಿ ಬಹುದೊಡ್ಡ ಶೂನ್ಯತೆ ಸೃಷ್ಟಿಯಾಗಿದೆ ಎಂದರೆ ಸುಳ್ಳಲ್ಲ. ಕಾಂಗ್ರೆಸ್‌ನಲ್ಲಿ ಮುಸ್ಲಿಂ ನಾಯಕರಿಗೇನು ಕೊರತೆ ಇಲ್ಲ. ಆದರೆ ರಾಜ್ಯಾದ್ಯಂತ ಇಡೀ ಸಮುದಾಯವನ್ನು ಮುನ್ನಡೆಸಿಕೊಂಡು ಹೋಗುವ ನಾಯಕ ಯಾರು ಎನ್ನುವ ಪ್ರಶ್ನೆ ಬಂದಾಗ ಸ್ಪಷ್ಟ ಉತ್ತರ ದೊರೆಯುತ್ತಿಲ್ಲ. ಈ ಹಿಂದೆ ಯು.ಟಿ.ಖಾದರ್ ಅವರನ್ನು ಮುನ್ನೆಲೆಗೆ ತರಲು ವಿಧಾನಸಭಾ ಪ್ರತಿಪಕ್ಷ ಉಪನಾಯಕರನ್ನಾಗಿ ಮಾಡಲಾಗಿತ್ತು. ಆದರೆ ಸಿಕ್ಕ ಅವಕಾಶವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿ ಕೊಳ್ಳುವಲ್ಲಿ ಅವರು ಎಡವಿದರೂ ಎಂದರೆ ತಪ್ಪಾಗಲಾರದು.

ತನ್ವೀರ್ ಸೇಠ್ ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಿ, ಸಂಘಟನೆಗೆ ಒತ್ತು ನೀಡುವ ಪ್ರಯತ್ನಕ್ಕೆ ಪಕ್ಷದ ಹೈಕಮಾಂಡ್ ಮುಂದಾಯಿತು. ಅವರು ಮೈಸೂರಿಗೆ ಮಾತ್ರ ಸೀಮಿತವಾದರು. ಈ ಎಲ್ಲದರ ನಡುವೆ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಜಮೀರ್ ಅಹ್ಮದ್ ಖಾನ್ ಮುಸ್ಲಿಂ ಸಮುದಾಯದ ನಾಯಕತ್ವ ಪಡೆಯಲು ಹಲವು ರೀತಿ ಪ್ರಯತ್ನ ಮಾಡಿ, ಕೊಂಚ ಮಟ್ಟಿಗೆ ಯಶಸ್ವಿಯೂ ಆಗಿದ್ದಾರೆ. ಆದರೀಗ ದಾವಣಗೆರೆ ದಕ್ಷಿಣ ಕ್ಷೇತ್ರದ ಬಂಡಾಯದ ಮೂಲಕ ಜಮೀರ್ ಅವರನ್ನು ಹಿಂದಿಕ್ಕಿ, ಸಮುದಾಯದ ನಾಯಕತ್ವವನ್ನು ಕ್ಲೇಮ್ ಮಾಡುವ, ಈ ಮೂಲಕ ಮುಂದಿನ ದಿನದಲ್ಲಿ ಸಚಿವ ಸಂಪುಟಕ್ಕೂ ‘ಸೇರ್ಪಡೆ’ಯಾಗುವ ಮುಂದಾಲೋಚನೆಯ ಫಲವೇ ರಿಜ್ವಾನ್ ಹಾಗೂ ಸಲೀಂ ಅಹ್ಮದ್ ಅವರ ದಾವಂತದ ಪರಾಕ್ರಮ.

ದಾವಣಗೆರೆ ರಾಜಕೀಯ ಮೇಲಾಟ ಮುಂದಿಟ್ಟುಕೊಂಡು, ಪಕ್ಷದಲ್ಲಿರುವ ಮುಸ್ಲಿಂ ಸಮುದಾಯದ ಎರಡನೇ ಹಂತದ ನಾಯಕರು ಈ ಸ್ಥಾನವನ್ನು ಅಲಂಕರಿಸಲು ಇನ್ನಿಲ್ಲದ ಭಗೀರಥ ಪ್ರಯತ್ನದ ಕಸರತ್ತು ಪ್ರಾರಂಭಿಸಿದ್ದಾರೆ. ಆ ಕಾರಣಕ್ಕಾಗಿಯೇ ಉಪಸಮರದಲ್ಲಿ ಕಾಂಗ್ರೆಸ್ ಗೆದ್ದರೆ ಸಮರ್ಥ್‌ಗಿಂತ ಹೆಚ್ಚಾಗಿ, ಸಲೀಂ, ರಿಜ್ವಾನ್ʼಗೆ ಲಾಭ ಎನ್ನಲಾಗುತ್ತಿದೆ. ಅದೇ ರೀತಿ ಒಂದು ವೇಳೆ ಕಾಂಗ್ರೆಸ್ ಸೋತರೆ, ಸಮುದಾಯದ ಮೇಲೆ ಇರುವ ಹಿಡಿತ ತೋರಿಸುವಲ್ಲಿ ಜಮೀರ್ ಖಾನ್ ಯಶಸ್ವಿಯಾದರು. ಸಮುದಾಯದ ಹಿಡಿತ ಸಾಧಿಸುವುದಕ್ಕೆ ಬಹಿರಂಗ ಅಖಾಡಕ್ಕೆ ಇಳಿದಿರುವ ನಾಯಕರಲ್ಲಿ ಯಾರು ಮೇಲುಗೈ ಸಾಧಿಸಲಿದ್ದಾರೆ ಎನ್ನುವುದಕ್ಕೆ ಕಾಲವೇ ಉತ್ತರಿಸಬೇಕಿದೆ.
