ರಾಜ್ಯ ಕಾಂಗ್ರೆಸ್ ನಲ್ಲಿ ಡಿಕೆಶಿ ಯದ್ದೇ ಪ್ರಾಬಲ್ಯ.! ಸಿದ್ದು ಆಪ್ತ ಮುಸ್ಲಿಂ ನಾಯಕರ ಖೇಲ್ ಖತಂ..!

ರಾಜ್ಯ

ಸ್ಪೀಕರ್ ಖಾದರ್ ಸೈಡ್ ಲೈನಿಗೆ ನಡೆಯುತ್ತಿದೆ ಭರ್ಜರಿ ತಯಾರಿ.! ಏನಿದು ಹೊಸ ಬೆಳವಣಿಗೆ.? ಇಲ್ಲಿದೆ ಡೀಟೈಲ್ಸ್

ದಾವಣಗೆರೆ ಉಪಚುನಾವಣೆ ರಾಜ್ಯ ಹಾಗೂ ದೇಶದಾದ್ಯಂತ ಭಾರೀ ಸುದ್ದಿ ಮಾಡಿದೆ. ಮುಸ್ಲಿಂ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ಮುಸ್ಲಿಮರನ್ನು ಕಡೆಗಣಿಸಿ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿರುವುದು ಒಂದು ಕಡೆಯಾದರೆ, ಕಾಂಗ್ರೆಸ್ ಅಭ್ಯರ್ಥಿ ಶಾಮನೂರು ಕುಟುಂಬದ ಕುಡಿಯನ್ನು ಮಣ್ಣು ಮುಕ್ಕಿಸಲು ಕಾಂಗ್ರೆಸ್ ಪಕ್ಷದಲ್ಲಿರುವ ಮುಸ್ಲಿಂ ನಾಯಕರ ಗುಂಪೊಂದು ಪ್ರಯತ್ನಿಸಿದ್ದು, ಅದಕ್ಕೆ ಪ್ರತಿಯಾಗಿ ಪಕ್ಷ ವಿರೋಧಿ ಚಟುವಟಿಕೆಯ ಕಾರಣವೊಡ್ಡಿ ಅಬ್ದುಲ್ ಜಬ್ಬಾರ್ ಹಾಗೂ ನಸೀರ್ ಅಹಮ್ಮದ್ ವಿರುದ್ಧ ಶಿಸ್ತು ಕ್ರಮ ಕೈಗೊಂಡಿರುವುದು, ಮುಸ್ಲಿಂ ಸಮುದಾಯದ ಪ್ರಬಲ ನಾಯಕ ಜಮೀರ್ ಅಹಮದ್ ವರ್ಚಸ್ಸು ಕುಂದಿಸುವ ಪ್ರಯತ್ನ ನಡೆದಿರುವುದು ಒಟ್ಟಾರೆ ದಾವಣಗೆರೆ ಬೈ ಎಲೆಕ್ಷನ್ ವಿದ್ಯಮಾನಗಳು ರಾಜ್ಯದ ಮುಸ್ಲಿಂ ಸಮುದಾಯ ಕಾಂಗ್ರೆಸ್ ವಿರುದ್ಧ ಸಿಡಿದೇಳುವಂತೆ ಮಾಡಿದೆ. ಸಿದ್ದರಾಮಯ್ಯ ಬಣದ ಮುಸ್ಲಿಂ ನಾಯಕರನ್ನು ಗುರಿಯಾಗಿಸಿ ಡಿಕೆಶಿ ಆಡಿದ ಖೇಲ್ ಯಶಸ್ವಿಯಾಗಿದ್ದು, ರಾಜ್ಯ ಕಾಂಗ್ರೆಸ್ ನಲ್ಲಿ ಡಿಕೆಶಿ ಪ್ರಾಬಲ್ಯ ಗಟ್ಟಿಯಾಗಿದೆ.

ಇದೇ ಹೊತ್ತಲ್ಲಿ ಮತ್ತೋರ್ವ ಮುಸ್ಲಿಂ ನಾಯಕನನ್ನು ಟಾರ್ಗೆಟ್ ಮಾಡಿ ಹುದ್ದೆಯಿಂದ ಕೆಳಗಿಳಿಸುವ ಮಾಸ್ಟರ್ ಪ್ಲ್ಯಾನ್ ಸಜ್ಜುಗೊಂಡಿದ್ದು, ಒಟ್ಟಾರೆ ರಾಜ್ಯ ರಾಜಕಾರಣದಲ್ಲಿ ನಡೆಯುವ ಬೆಳವಣಿಗೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಇದೀಗ ಸ್ಪೀಕರ್ ಯು ಟಿ ಖಾದರ್ ಕೆಲವೇ ದಿನಗಳಲ್ಲಿ ರಾಜೀನಾಮೆ ನೀಡಬೇಕಾದ ಪರಿಸ್ಥಿತಿ ಎದುರಾಗಬಹುದು, ಖಾದರ್ ಅವರಿಗೆ ಇದೇ ಕಡೆಯ ಅಧಿವೇಶನ ಆಗುವ ಸಾಧ್ಯತೆ ನಿಚ್ಚಳವಾಗಿದೆ ಎಂಬ ಮಾಹಿತಿಗಳು ಹೊರಬರುತ್ತಿದೆ. ಮುಂದಿನ ಅಧಿವೇಶನಕ್ಕೆ ಹೊಸ ಸ್ಪೀಕರ್ ಆಗುವ ಸಾಧ್ಯತೆ ಹೆಚ್ಚಳವಾಗಿದೆ ಎಂದು ಕಾಂಗ್ರೆಸ್ ಉನ್ನತ ಮೂಲಗಳಿಂದಲೇ ಮಾಹಿತಿ ಲಭ್ಯವಾಗಿದೆ.

ಖಾದರ್ ಗೇಟ್ ಪಾಸ್ ಗೆ ಕಾಂಗ್ರೆಸ್ ಮೂಲಗಳು ಬೇರೆಯದ್ದೇ ಕಾರಣಗಳನ್ನು ನೀಡುತ್ತಿದ್ದು, ಯು ಟಿ ಖಾದರ್ ಅವರಿಗೆ ಸಂಘಪರಿವಾರದೊಂದಿಗೆ ನಂಟಿದೆ, ಬಿಜೆಪಿ ಜೊತೆ ಮೃದು ಧೋರಣೆ ತಾಳುತ್ತಿದ್ದಾರೆ. ಇವರ ಅಡ್ಜೆಸ್ಟ್ ಮೆಂಟ್ ರಾಜಕಾರಣದ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಲು ಹಿನ್ನೆಡೆಯಾಗುತ್ತಿದೆ. ಖಾದರ್ ಒಬ್ಬರು ಗೆಲ್ಲಲು ಉಳಿದ ಜಿಲ್ಲೆಯ ಎಲ್ಲ ಅಸೆಂಬ್ಲಿ ಕ್ಷೇತ್ರವನ್ನು ಬಲಿಕೊಡಬೇಕಾಗಿದೆ. ಖಾದರ್ ಅವರನ್ನೇ ಸೈಡ್ ಲೈನಿಗೆ ತಂದಿಟ್ಟರೇ ಪಕ್ಷಕ್ಕೆ ಜಿಲ್ಲೆಯಲ್ಲಿ ಭವಿಷ್ಯವಿದೆ ಎಂಬ ಮಾಹಿತಿ ಎಐಸಿಸಿ ಗೂ ತಲುಪಿದೆ. ಇದು ಖಾದರ್ ರಿಗೆ ಮುಂದಿನ ದಿನಗಳಲ್ಲಿ ದೊಡ್ಡ ಸಂಕಷ್ಟಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಇನ್ನು ಅಧಿವೇಶನ ಸಮರ್ಥವಾಗಿ ನಡೆಸಲು ಸ್ಪೀಕರ್ ಖಾದರ್ ಅಸಮರ್ಥರಾಗಿದ್ದು, ಸ್ಪೀಕರ್ ಅವರ ಕೆಲವೊಂದು ನಡವಳಿಕೆಗಳು ಆಡಳಿತ ಪಕ್ಷಕ್ಕೆ ಮುಜುಗರ ತಂದಿಟ್ಟಿದೆ. ಅಧಿವೇಶನದಲ್ಲಿ ವಿರೋಧ ಪಕ್ಷಗಳು ಸಭಾತ್ಯಾಗ ಮಾಡುವುದು, ಬಾವಿಗಿಳಿದು ಪ್ರತಿಭಟಿಸುವುದು ಮಾಮೂಲಿ ಪ್ರಕ್ರಿಯೆ. ಆದರೆ ಸ್ಪೀಕರ್ ಅವರೇ ಸಭಾತ್ಯಾಗ ಮಾಡಿರುವ ಘಟನೆಗಳು ಈವರೆಗೂ ನಡೆದಿಲ್ಲ. ಆದರೆ ಖಾದರ್ ಅವರು ಅಂತಹ ಕೆಲಸ ಮಾಡಿರುವುದು ಕಾಂಗ್ರೆಸ್ ನಾಯಕರೊಳಗೆ ತೀವ್ರ ಚರ್ಚೆಗೆ ಕಾರಣವಾಗಿದೆ. ಅಧಿವೇಶನದಲ್ಲಿ ಪ್ರಬಲ ಹಿಂದುತ್ವ ನಾಯಕರಿಗೆ ಹೆಚ್ಚಿನ ಮಣೆ ಹಾಕುತ್ತಿದ್ದು ಇದು ಕಾಂಗ್ರೆಸ್ ನಾಯಕರನ್ನು ಕೆರಳಿಸಿದೆ. ಸಭಾತ್ಯಾಗದ ಜೊತೆಗೆ ಸರಕಾರವನ್ನೇ ತರಾಟೆಗೆ ತೆಗೆದುಕೊಂಡಿದ್ದು, ಕಾಂಗ್ರೆಸ್ಸಿಗರನ್ನು ಇನ್ನಷ್ಟು ಕೆರಳಿಸಿದೆ. ಇದು ಅವರ ಗಿಮಿಕ್ ನಡೆಯಾಗಿದ್ದು, ಪಕ್ಷದ ಇಮೇಜ್ ಗೆ ದೊಡ್ಡ ತೊಂದರೆಯಾಗಿದೆ ಅನ್ನುವ ಚರ್ಚೆಗಳು ಪಕ್ಷದೊಳಗೆ ನಡೆದಿದೆ. ಇನ್ನು ಯುಟಿ ಖಾದರ್ ದಕ್ಷಿಣ ಕನ್ನಡ ಜಿಲ್ಲೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಉಳಿದ ಜಿಲ್ಲೆಯ ಶಾಸಕರನ್ನು ನಿರ್ಲಕ್ಷ್ಯಿಸುತ್ತಿದ್ದಾರೆ ಅನ್ನುವ ಆರೋಪಗಳಿವೆ. ಕಾಂಗ್ರೆಸ್ ಪಕ್ಷದ ಶಾಸಕರೇ ಸಭಾಪತಿ ವಿರುದ್ಧ ಕಾಂಗ್ರೆಸ್ ಉನ್ನತ ನಾಯಕರಿಗೆ ದೂರು ಸಲ್ಲಿಸಿದ್ದಾರಂತೆ ಅನ್ನುವ ಮಾಹಿತಿಗಳು ಇವೆ.

ಕಳೆದ ಬಾರಿ ಸರಕಾರ ರಚನೆಯ ಸಂದರ್ಭ ಖಾದರ್ ಮಂತ್ರಿಗಿರಿಗಾಗಿ ಪ್ರಬಲ ಲಾಬಿ ನಡೆಸಿದ್ದರು. ಆದರೆ ಕಾಂಗ್ರೆಸ್ ಹೈಕಮಾಂಡ್ ಮಂತ್ರಿಗಿರಿ ನೀಡದೆ ಸ್ಪೀಕರ್ ಹುದ್ದೆ ನೀಡಿತ್ತು. ಮುಸ್ಲಿಂ ಸಮುದಾಯದ ನಾಯಕರೊಬ್ಬರಿಗೆ ಮೊದಲ ಬಾರಿಗೆ ಸ್ಪೀಕರ್ ಹುದ್ದೆ ನೀಡಿರುವುದಾಗಿ ಕಾಂಗ್ರೆಸ್ ಬಡಾಯಿ ಕೊಚ್ಚಿತ್ತು. ಆದರೆ ಇದೀಗ ಸ್ಪೀಕರ್ ಹುದ್ದೆಯಿಂದ ಕೆಳಗಿಳಿಸುವ ಭರ್ಜರಿ ತಯಾರಿ ನಡೆಯುತ್ತಿದೆ.