ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ಪ್ರಕರಣಗಳ ಪೊಲೀಸ್ ಠಾಣೆಯಾಗಿರುವ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ದ.ಕ ಇಲ್ಲಿಗೆ ಅಗತ್ಯ ಸಿಬ್ಬಂದಿಗಳನ್ನು ನೇಮಕ ಮಾಡುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ರವರಿಗೆ ಜಿಲ್ಲಾ ಕೆಡಿಪಿ ಸದಸ್ಯ, ನ್ಯಾಯವಾದಿ ಸಂತೋಷ್ ಕುಮಾರ್ ಮಂಗಳೂರಿನಲ್ಲಿ ದಿನಾಂಕ 18-04-26 ರಂದು ಭೇಟಿಯಾಗಿ ಮನವಿ ಸಲ್ಲಿಸಿದರು.
ದ.ಕ ಜಿಲ್ಲೆಯ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಮಂಗಳೂರು ಇದರ ವ್ಯಾಪ್ತಿಗೆ ಜಿಲ್ಲೆಯ 42 ಪೊಲೀಸ್ ಠಾಣೆಗಳು ಒಳಪಡುತ್ತಿದ್ದು , ಘೋಷಣೆಯಾಗಿರುವ ಇನ್ನೂ ಎರಡು ಹೊಸ ಪೊಲೀಸ್ ಠಾಣೆಯಲ್ಲಿ ಹೊಸದಾಗಿ ಸ್ಥಾಪನೆಯಾದರೆ ಒಟ್ಟು 44 ಪೊಲೀಸ್ ಠಾಣೆಗಳು ಇದರ ವ್ಯಾಪ್ತಿಗೆ ಒಳಪಡುತ್ತದೆ. ಇದನ್ನು ಈಗಾಗಲೇ ರಾಜ್ಯ ಸರ್ಕಾರ ಪ.ಜಾತಿ/ ಪಂಗಡಗಳ ದೌರ್ಜನ್ಯ ತಡೆ ಪೊಲೀಸ್ ಠಾಣೆಯಾಗಿ ಪರಿವರ್ತನೆಗೊಳಿಸಿದೆ. ಪ.ಜಾತಿ/ ಪಂಗಡಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ಪ್ರಕರಣಗಳ ದಾಖಲು ಸೇರಿದಂತೆ ತನಿಖೆ, ಬಂಧನ ಸೇರಿದಂತೆ ಅಂತಿಮ ವರದಿಯ ತನಕದ ಎಲ್ಲಾ ಕೆಲಸವನ್ನು ಮಾಡಬೇಕಾಗಿದೆ.
ಸದ್ಯ ಜಿಲ್ಲಾ ವ್ಯಾಪ್ತಿಯನ್ನು ಹೊಂದಿರುವ ಮಂಗಳೂರಿನಲ್ಲಿ ಕಾರ್ಯಚರಿಸುತ್ತಿರುವ ಈ ಪೊಲೀಸ್ ಠಾಣೆಯಲ್ಲಿ ತೀವ್ರ ಸಿಬ್ಬಂದಿಗಳ ಕೊರತೆಯಿದೆ. ಪ್ರಸ್ತುತ ಇಲ್ಲಿ ಓರ್ವ ಪೊಲೀಸ್ ವರಿಷ್ಠಾಧಿಕಾರಿ, ಓರ್ವ ಪೊಲೀಸ್ ಇನ್ಸ್‌ಪೆಕ್ಟರ್, ಓರ್ವ ಸಬ್ ಇನ್ಸ್‌ಪೆಕ್ಟರ್, 3 ಹೆಡ್ ಕಾನ್ಸ್‌ಟೇಬಲ್, 6 ಕಾನ್ಸ್‌ಟೇಬಲ್ ಮಾತ್ರ ಇರುವುದಾಗಿದೆ. ಇದರಿಂದಾಗಿ ಇಲ್ಲಿ ದಾಖಲಾಗುವ ಪ್ರಕರಣಗಳ ತನಿಖೆಯಲ್ಲಿ ವಿಳಂಬ ಹಾಗೂ ನ್ಯಾಯದ ವಿಳಂಬ ಆಗುತ್ತಿದೆ. ಇಲ್ಲಿಗೆ ಅಗತ್ಯವಿರುವ ಡಿವೈಎಸ್ಪಿ ಹುದ್ದೆಯೂ ಖಾಲಿಯಾಗಿದೆ ಎಂದು ಸಮಸ್ಯೆಯ ಗಂಭೀರತೆಯನ್ನು ಸರ್ಕಾರದ ಪರವಾಗಿ ಸಚಿವರ ಗಮನ ಸೆಳೆದಿದ್ದಾರೆ. ಸಮಸ್ಯೆಯ ಗಂಭೀರತೆಯನ್ನು ಅರಿತ ಸಚಿವರು ಈ ಕುರಿತು ಗೃಹ ಸಚಿವ, ಸಮಾಜ ಕಲ್ಯಾಣ ಸಚಿವರ ಜೊತೆಗೆ ಮಾತುಕತೆ ನಡೆಸಿ ಸೂಕ್ತ ಸಿಬ್ಬಂದಿಗಳನ್ನು ನೇಮಕ ಮಾಡುವ ಬಗ್ಗೆ ಭರವಸೆ ನೀಡಿದ್ದಾರೆ.
