ಸಿದ್ದರಾಮಯ್ಯ ಬಣದ ಮೇಲುಗೈ,ಡಿಕೆಶಿ ಆಪ್ತರಿಗೆ ಕೈಕೊಟ್ಟ ಹೈಕಮಾಂಡ್‌

ರಾಜ್ಯ

ಇಂದು ಬಿಡುಗಡೆಯಾಗಿರುವ ಎರಡನೇ ಪಟ್ಟಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರ ಬಹುತೇಕ ಆಪ್ತರಿಗೆ ಟಿಕೆಟ್‌ ಸಿಕ್ಕಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಕ್ಷೇತ್ರದಿಂದ ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರನ್ನು ಕಾಂಗ್ರೆಸ್‌ ಕಣಕ್ಕಿಳಿಸಿದೆ.ಕಿಮ್ಮನೆ ರತ್ನಾಕರ್‌ ಅವರು ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.ಅವರು ಸಿದ್ದರಾಮಯ್ಯನವರ ಆಪ್ತರೂ. ಸಿದ್ದರಾಮಯ್ಯರವರ ಶಿಷ್ಯರಾಗಿರುವ ಇಕ್ಬಾಲ್ ಅನ್ಸಾರಿ ಅವರಿಗೆ ಗಂಗಾವತಿ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. ಧಾರವಾಡದಿಂದ ವಿನಯ್ ಕುಲಕರ್ಣಿ ಕಣಕ್ಕಿಳಿದಿದ್ದಾರೆ. ಅವರನ್ನು ಬಸವರಾಜ ಬೊಮ್ಮಾಯಿ ವಿರುದ್ಧ ಶಿಗ್ಗಾವಿ ಕ್ಷೇತ್ರದಿಂದಲೂ ಕಣಕ್ಕಿಳಿಸುವ ಯೋಚನೆಯಲ್ಲಿ ಕಾಂಗ್ರೆಸ್ ಇದೆ ಎಂದು ಹೇಳಲಾಗುತ್ತಿದೆ.

ಧಾರವಾಡ ಜಿಲ್ಲೆಯ ಕಲಘಟಗಿ ಕ್ಷೇತ್ರದಿಂದ ಸಂತೋಷ್‌ ಲಾಡ್‌ ಅವರ ಹೆಸರು ಘೋಷಣೆಯಾಗಿದೆ. ಸಂತೋಷ್‌ ಲಾಡ್‌ ಸಿದ್ದರಾಮಯ್ಯನವರ ಆಪ್ತರು. ಅಲ್ಲಿ ನಾಗರಾಜ ಛಬ್ಬಿ ಅವರು ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದರು. ಅವರು ಡಿ ಕೆ ಶಿವಕುಮಾರ್‌ ಅವರ ಬೆಂಬಲಿಗರು.
ಗದಗ ಜಿಲ್ಲೆಯ ನರಗುಂದ ಕ್ಷೇತ್ರದಿಂದ ಮಾಜಿ ಸಚಿವ ಬಿ.ಆರ್‌ ಯಾವಗಲ್‌ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದೆ. ಡಾ ಸಂಗಮೇಶ್‌ ಕೊಳ್ಳಿಯವರ ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದರು. ಸಂಗಮೇಶ್ ಡಿಕೆಶಿ ಬೆಂಬಲಗರು. ಇನ್ನು ಬಾದಾಮಿಯಿಂದ ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿ ಪುತ್ರ ಭೀಮಸೇನ್ ಚಿಮ್ಮನಕಟ್ಟಿಗೆ ಟಿಕೆಟ್‌ ಸಿಕ್ಕಿದೆ.ಭೀಮಸೇನ್ ಅವರ ಬೆನ್ನಿಗೆ ಸಿದ್ದರಾಮಯ್ಯ ನಿಂತಿದ್ದರು.ಈ ಹಿನ್ನೆಲೆಯಲ್ಲಿ ನೋಡುವುದಾದರೆ, ಸಿದ್ದರಾಮಯ್ಯನವರ ಬಣವು ಮೇಲುಗೈ ಸಾಧಿಸಿದೆ. ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆಸಿದ್ದ ಡಿ.ಕೆ ಶಿವಕುಮಾರ್‌ ಆಪ್ತರಿಗೆ ಟಿಕೆಟ್‌ ಕೈತಪ್ಪಿರುವುದು ಅಸಮಾಧಾನಕ್ಕೆ ಕಾರಣವಾಗಬಹುದು ಎಂಬ ಅಭಿಪ್ರಾಯಗಳು ವ್ಯಕ್ತವಾಗಿದೆ.