ಯುವ ಸಮೂಹದ ಭವಿಷ್ಯ, ಸಾಮಾಜಿಕ ಕಾಳಜಿ ಬೆಳೆಸುವುದರಲ್ಲಿ ಪುತ್ತೂರು ಕಮ್ಯೂನಿಟಿ ಸೆಂಟರ್ ಸೇವೆ ಅನನ್ಯ: ಜಿಲಾನಿ ಎಚ್. ಮೊಖಾಷಿ

ಕರಾವಳಿ

ಕಮ್ಯೂನಿಟಿ ಸೆಂಟರ್ ನ ಪದ್ದತಿ ಮತ್ತು ನೀತಿಗಳು ರಾಜ್ಯದ ಪ್ರತಿಯೊಂದು ಸಂಘ ಸಂಸ್ಥೆಗಳಿಗೂ ಮಾದರಿಯಾಗಿದೆ. ವಿಧ್ಯಾರ್ಥಿಗಳಿಗೆ ಶೈಕ್ಷಣೈಕ ಮಾರ್ಗದರ್ಶನ, ಪ್ರೋತ್ಸಾಹ ಮತ್ತು ಅವರನ್ನು ಸಮಾಜಮುಖಿ ಕೆಲಸದಲ್ಲಿ ತೊಡಗಿಸುವ ಸಂಸ್ಥೆಯ ಪ್ರಯತ್ನ ಶ್ಲಾಘನೀಯ ಎಂದು ಕರ್ನಾಟಕ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ನಿರ್ದೇಶಕರಾದ ಶ್ರೀ ಜಿಲಾನಿ H ಮೊಖಾಷಿ ಅವರು ಅಭಿಪ್ರಾಯ ಪಟ್ಟರು. ಇತ್ತಿಚೆಗೆ ಅವರು ಮಂಗಳೂರಿನಲ್ಲಿ ಇರುವ ಪುತ್ತೂರು ಕಮ್ಯೂನಿಟಿ ಸೆಂಟರ್ ನ ಕಚೇರಿಗೆ ಭೇಟಿ ನೀಡಿ ಸಂಸ್ಥೆಯ ಕಾರ್ಯಚಟುವಟಿಕೆ ಪರಿಶೀಲಿಸಿದರು.

ಪುತ್ತೂರು ಎಂಬ ತಾಲೂಕು ಮಟ್ಟದಲ್ಲಿ ಆರಂಭವಾದ ಸಂಸ್ಥೆ ಇಂದು ರಾಜ್ಯದಾದ್ಯಂತ ತನ್ನ ಶೈಕ್ಷಣಿಕ ಯೋಜನೆಗಳನ್ನು ವಿಸ್ತರಿಸಿ ಸಾವಿರಾರು ವಿದ್ಯಾರ್ಥಿಗಳ ಸಾಧನೆಗೆ ನೆರವಾಗಿರುವ ಅಂಕಿ ಅಂಶಗಳು ನೋಡಿ ಅಭಿಮಾನವಾಗಿದೆ. ವಿದ್ಯಾರ್ಥಿಗಳ ಆಸಕ್ತಿ ಮತ್ತು ಸಾಮರ್ಥ್ಯ ಗುರುತಿಸುವ ಮೌಲ್ಯಮಾಪನ, ಅನಂತರ ಒನ್ ಟು ಒನ್ ಕೌನ್ಸಿಲಿಂಗ್, ಸ್ಪರ್ಧಾತ್ಮಕ ಪರೀಕ್ಷೆಗೆ ಅವರಿಗೆ ಪ್ರೋತ್ಸಾಹ ಹಾಗೂ ವಿದ್ಯಾರ್ಥಿಗಳನ್ನು ಮಾನಿಟರಿಂಗ್ ಮಾಡುವ ನಿರಂತರ ಪ್ರಕ್ರಿಯೆ ವೈಜ್ಞಾನಿಕವಾಗಿದೆ ಎಂದು ಪ್ರಶಂಶಿಸಿದ ಜಿಲಾನಿಯವರು ವಿಶೇಷವಾಗಿ ವಿದ್ಯಾರ್ಥಿಗಳ ಮೂಲಕವೇ ಈ ಯೋಜನೆಯನ್ನು ಯಶಸ್ವಿಗೊಳಿಸುತ್ತಿರುವುದು ಇಷ್ಟವಾದ ವಿಷಯ ಎಂದರು.

ವಿದ್ಯಾರ್ಥಿ ವೇತನ ಪಡೆದ ವಿದ್ಯಾರ್ಥಿಗಳು ವೈದ್ಯರಾಗಿ, ಇಂಜಿನಿಯರ್, ಲಾಯರ್ ಅಥವಾ ಯಾವುದೇ ಕ್ಷೇತ್ರದಲ್ಲಿ ಇದ್ದರೂ ಅವರು ಮತ್ತೆ ಸೆಂಟರಿನ ಕೌನ್ಸಿಲಿಂಗ್, ಮೆಂಟರ್ಶಿಪ್ ನಲ್ಲಿ ಭಾಗವಹಿಸುವುದು ಮತ್ತು ಯೋಜನೆಗಳಲ್ಲಿ ತೊಡಗಿಸಿಕೊಂಡು ಇನ್ನಿತರ ವಿದ್ಯಾರ್ಥಿಗಳ ಅಭಿವೃದ್ಧಿಗೆ ಶ್ರಮಿಸುವುದು ಭವಿಷ್ಯದ ದೃಷ್ಠಿಯಲ್ಲಿ ಉತ್ತಮ ಬೆಳವಣಿಗೆ ಎಂದು ಮೆಚ್ಚುಗೆ ನುಡಿದ ಜಿಲಾನಿಯವರು ಸರಕಾರವು ವಿದ್ಯಾರ್ಥಿಗಳ ಭವಿಷ್ಯತ್ತಿಗಾಗಿ ನೂರಾರು ಕೋಟಿ ರುಪಾಯಿ ಇಟ್ಟಿದೆ. ಅದು ಈಗ ಸಮರ್ಪಕವಾಗಿ ಬಳಕೆಯು ಆಗುತ್ತಿದೆ. ಸರಕಾರವು ನಡೆಸುವ ಶೈಕ್ಷಣಿಕ ಪ್ರಗತಿ ಕಾರ್ಯದ ಜೊತೆ ಇಂತಹ ಸಂಘ ಸಂಸ್ಥೆಗಳು ದುಡಿಯುವುದನ್ನು ನಾನು ಸರಕಾರದ ಪರವಾಗಿ ಅಭಿನಂದಿಸುತ್ತೇನೆ ಎಂದರು.