ವಿದ್ಯುತ್ ಸರಬರಾಜು ನಿಗಮವು ಗೃಹ ಬಳಕೆದಾರರಿಗೆ ಪ್ರತಿ ಯೂನಿಟ್ಗೆ 91 ಪೈಸೆ ದರ ಹೆಚ್ಚಳ ಮಾಡಿದ್ದು, ಮೇ ತಿಂಗಳಿನಿಂದಲೇ ಹೊಸ ದರ ಜಾರಿಗೆ ಬರಲಿದೆ. ಈಗಾಗಲೇ ಏಪ್ರಿಲ್ ತಿಂಗಳಿನಿಂದ ಪ್ರತಿ ಯೂನಿಟ್ಗೆ 35 ಪೈಸೆ ಏರಿಕೆ ಮಾಡಲಾಗಿತ್ತು.ಪ್ರಸ್ತುತ ಮೇ ತಿಂಗಳಿನಿಂದ ‘ಟ್ರೂ ಅಪ್ ಚಾರ್ಜ್’ ಹೆಸರಿನಲ್ಲಿ ಹೆಚ್ಚುವರಿಯಾಗಿ 56 ಪೈಸೆ ದರ ವಿಧಿಸಲಾಗುತ್ತಿದೆ. ಒಟ್ಟಾರೆಯಾಗಿ ಗ್ರಾಹಕರು ಪ್ರತಿ ಯೂನಿಟ್ಗೆ 91 ಪೈಸೆ ಹೆಚ್ಚಿನ ಹಣ ಪಾವತಿಸಬೇಕಾಗುತ್ತದೆ.
ಗೃಹ ಬಳಕೆದಾರರಿಗಿಂತಲೂ ವಾಣಿಜ್ಯ ಮತ್ತು ಕೈಗಾರಿಕಾ ಬಳಕೆದಾರರಿಗೆ ಈ ಬೆಲೆ ಏರಿಕೆ ಮತ್ತಷ್ಟು ಆಘಾತಕಾರಿಯಾಗಿದೆ. ವಿವಿಧ ವರ್ಗದ ವಾಣಿಜ್ಯ ಗ್ರಾಹಕರಿಗೆ ಪ್ರತಿ ಯೂನಿಟ್ಗೆ ರೂ. 1.10 ರಿಂದ ಗರಿಷ್ಠ ರೂ. 2.81 ರವರೆಗೆ ದರ ಹೆಚ್ಚಳವಾಗುವ ಸಾಧ್ಯತೆಯಿದೆ. ಕೆಇಆರ್ಸಿ ಈಗಾಗಲೇ ಕೈಗಾರಿಕಾ ಮತ್ತು ವಾಣಿಜ್ಯ ಬಳಕೆಯ ವಿದ್ಯುತ್ ದರವನ್ನು ಪರಿಷ್ಕರಿಸಲು ಅನುಮತಿ ನೀಡಿದೆ. ಸರ್ಕಾರದ ‘ಗೃಹಜ್ಯೋತಿ’ ಯೋಜನೆಯಡಿ ಉಚಿತ ವಿದ್ಯುತ್ ಪಡೆಯುತ್ತಿರುವ ಗ್ರಾಹಕರಿಗೆ ಈ ದರ ಏರಿಕೆಯಿಂದ ಹೆಚ್ಚಿನ ತೊಂದರೆಯಾಗುವುದಿಲ್ಲ. 200 ಯೂನಿಟ್ಗಿಂತ ಕಡಿಮೆ ಬಳಕೆ ಮಾಡುವವರಿಗೆ ಯೋಜನೆಯ ಮಿತಿಯೊಳಗೆ ಉಚಿತ ವಿದ್ಯುತ್ ಲಭ್ಯವಿರಲಿದೆ. ಆದರೆ, ಮಿತಿ ಮೀರಿದ ಬಳಕೆಗೆ ಹೊಸ ದರ ಅನ್ವಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
