ಉಳ್ಳಾಲ ತಾಲೂಕಿನ ದೇರಳಕಟ್ಟೆಯ ಕೆ ಎಸ್ ಹೆಗ್ಡೆ ಆಸ್ಪತ್ರೆಯ ಜಂಕ್ಷನ್ ನಲ್ಲಿ ಕಳೆದ ಹಲವಾರು ತಿಂಗಳಿನಿಂದ ಕೊಳಚೆ ನೀರು ಶೇಖರಣೆಗೊಂಡಿದ್ದು ಇದರಿಂದ ವಿಪರೀತ ದುರ್ವಾಸನೆ ಪರಿಸರದಾದ್ಯಂತ ಬೀರುತ್ತಿದ್ದು, ಇದರ ವಿರುದ್ಧ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿ ಭಾರತ ಕಮ್ಯುನಿಸ್ಟ್ ಪಕ್ಷ ( ಮಾರ್ಕ್ಸ್ವಾದಿ) ಉಳ್ಳಾಲ ವಲಯ ಸಮಿತಿಯು ಇಂದು(26-05-2026) ಉಳ್ಳಾಲ ತಾಲೂಕು ತಹಶೀಲ್ದಾರ್, ಕೋಟೆಕಾರ್ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳು, ಬೆಳ್ಮ ಗ್ರಾಮ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿಗಳು ಹಾಗೂ ನಾಟೆಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿಗಳಿಗೆ ಮನವಿಯನ್ನು ಅರ್ಪಿಸಿತು.

ದೇರಳಕಟ್ಟೆಯ ಕೆ ಎಸ್ ಹೆಗ್ಡೆ ಆಸ್ಪತ್ರೆಯ ಮುಂಭಾಗದ ರಸ್ತೆಯು ಬೆಳ್ಮ ಗ್ರಾಮ ಪಂಚಾಯತ್ ಹಾಗೂ ಕೋಟೆಕಾರ್ ಪಟ್ಟಣ ಪಂಚಾಯತ್ ನ ಮಧ್ಯದಲ್ಲಿ ಹಾದು ಹೋಗುತ್ತಿದೆ. ಬೆಳ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಈ ರಸ್ತೆಯ ಪಕ್ಕದಲ್ಲಿ ಲಾಡ್ಜ್ ಗಳು ಹಾಗೂ ವಾಣಿಜ್ಯ ಸಂಕೀರ್ಣಗಳಿದ್ದು ಅಲ್ಲಿನ ಡ್ರೈನೇಜ್ ನೀರು ಮಧ್ಯದಲ್ಲಿರುವ ಪ್ರಮುಖ ರಸ್ತೆಯ ಅಡಿಭಾಗದಲ್ಲಿ ಬಂದು ಕೆ ಎಸ್ ಹೆಗ್ಡೆ ಆಸ್ಪತ್ರೆಯಿರುವ ಕೋಟೆಕಾರ್ ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಹಾದು ಹೋಗುತ್ತಿದೆ. ಆದರೆ ಈ ಆಸ್ಪತ್ರೆಯ ಮುಖ್ಯದ್ವಾರದ ಬಳಿಯಲ್ಲೇ ಈ ಕೊಳಚೆ ನೀರನ್ನು ಮುಂದಕ್ಕೆ ಸಾಗದ ಹಾಗೆ ತಡೆಹಿಡಿಯಲಾಗಿದೆ. ಇದರಿಂದ ಆ ಪರಿಸರದಲ್ಲಿ ವಿಪರೀತ ದುರ್ನಾತ ಬೀರುತ್ತಿದ್ದು ಅಲ್ಲಿ ಒಂದು ಕ್ಷಣವೂ ಇರಲು ಸಾಧ್ಯವಿಲ್ಲ. ಇದರಿಂದಾಗಿ ಮಲೇರಿಯಾ ಡೆಂಗ್ಯೂನಂತಹ ಮಾರಕ ಕಾಯಿಲೆಗಳು ಹರಡುವ ಅಪಾಯವಿದೆ. ಹಾಗೂ ಅಲ್ಲೇ ಪಕ್ಕದಲ್ಲಿರುವ ಅಟೋರಿಕ್ಷಾ ನಿಲ್ದಾಣದಲ್ಲಿ 50 ಕ್ಕೂ ಮಿಕ್ಕಿ ಅಟೋರಿಕ್ಷಾ ಚಾಲಕರಿದ್ದು ದುಡಿಯಲು ಅಸಾಧ್ಯವಾಗಿದೆ. ಕಳೆದ ಹಲವಾರು ತಿಂಗಳಿನಿಂದ ಇರುವ ಈ ಸಮಸ್ಯೆಯ ಬಗ್ಗೆ ಸ್ಥಳೀಯರು ಸಂಬಂಧಪಟ್ಟವರಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಜನತೆಯ ಆರೋಗ್ಯದ ಪ್ರಶ್ನೆಯನ್ನು ಮುಂದಿಟ್ಟು ಹಾಗೂ ಒಳಚರಂಡಿ ವ್ಯವಸ್ಥೆಗೆ ಅಂತಿಮ ಕಾಯಕಲ್ಪ ನೀಡುವ ಸಲುವಾಗಿ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಮಧ್ಯೆಪ್ರವೇಶಿಸಿ ಸಮಸ್ಯೆಯನ್ನು ಇತ್ಯರ್ಥಪಡಿಸಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು CPIM ಉಳ್ಳಾಲ ವಲಯ ಸಮಿತಿಯು ಒತ್ತಾಯಿಸಿದೆ.

ನಿಯೋಗದಲ್ಲಿ CPIM ಉಳ್ಳಾಲ ವಲಯ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಜಿಲ್ಲೆಯ ಕಮ್ಯುನಿಸ್ಟ್ ಚಳುವಳಿಯ ಹಿರಿಯ ನೇತಾರರಾದ ಕೃಷ್ಣಪ್ಪ ಸಾಲ್ಯಾನ್, CPIM ಉಳ್ಳಾಲ ವಲಯ ನಾಯಕರಾದ ಜನಾರ್ಧನ ಕುತ್ತಾರ್, ಇಬ್ರಾಹಿಂ ಅಂಬ್ಲಮೊಗರು, ಸದಾಶಿವ ಕುತ್ತಾರ್, DYFI ಜಿಲ್ಲಾ ನಾಯಕರಾದ ರಜಾಕ್ ಮುಡಿಪು, CITU ನಾಯಕರಾದ ಜಗದೀಶ್ ರವರು ಹಾಜರಿದ್ದರು
