ಖ್ಯಾತ ನಾಟಕ ಕಲಾವಿದರೂ, ಪಕ್ಕಲಡ್ಕ ಯುವಕ ಮಂಡಲದ ಸಕ್ರೀಯ ಸದಸ್ಯರಾಗಿದ್ದ ಪ್ರಸ್ತುತ ಅಸೈಗೋಳಿಯಲ್ಲಿ ವಾಸವಾಗಿರುವ ಸಂಗಾತಿ ಕೆ ರಾಘವ ಬಂಗೇರ (78)ರವರು ವಯೋಸಹಜ ಕಾಯಿಲೆಯಿಂದಾಗಿ ಇಂದು ಅಸೈಗೋಳಿಯಲ್ಲಿರುವ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದರು.
ಬಜಾಲ್ ಪಕ್ಕಲಡ್ಕದ ಪರಿಸರದಲ್ಲಿ ಹುಟ್ಟಿ ಬೆಳೆದ ರಾಘವರವರು ಎಳೆಯ ಪ್ರಾಯದಲ್ಲೇ ಎಡಪಂಥೀಯ ವಿಚಾರಧಾರೆಯಿಂದ ಆಕರ್ಷಿತರಾಗಿ ಆ ಮೂಲಕ ಪಕ್ಕಲಡ್ಕ ಯುವಕ ಮಂಡಲದಲ್ಲಿ ಸಕ್ರೀಯ ಸದಸ್ಯರಾಗಿದ್ದರು. ಸಾಂಸ್ಕೃತಿಕ ಚಟುವಟಿಕೆಯ ಕೇಂದ್ರವಾದ ಈ ಯುವಕ ಮಂಡಲದಲ್ಲಿ ತನ್ನಲ್ಲಿರುವ ಪ್ರತಿಭೆಯನ್ನು ಬೆಳೆಸಲು ಸಂಪೂರ್ಣವಾಗಿ ತೊಡಗಿಸಿಕೊಂಡ ರಾಘವರವರು ವಾರ್ಷಿಕೋತ್ಸವದ ಸಂದರ್ಭದಲ್ಲಿ ಅದೆಷ್ಟೋ ಸಾಮಾಜಿಕ ನಾಟಕಗಳನ್ನು ನಿರ್ದೇಶಿಸಿ ಅದರಲ್ಲೂ ಪ್ರಮುಖ ಪಾತ್ರವನ್ನು ನಿರ್ವಹಿಸಿ ಕಲಾಭಿಮಾನಿಗಳ ಹ್ರದಯ ಗೆದ್ದವರು. ಮಾತ್ರವಲ್ಲ ಆ ನಾಟಕಗಳಲ್ಲಿ ಅನೇಕ ಹಾಡುಗಳನ್ನು ರಚಿಸಿ ಎಲ್ಲರ ಬಾಯಲ್ಲಿ ಆ ಹಾಡುಗಳು ಗುಣಿಗುಣಿಸುವಂತೆ ಮಾಡಿದ ನಿಜವಾದ ಕಲಾವಿದ ರಾಘವರವರು.
ಬಳಿಕ ಜಪ್ಪಿನಮೊಗರು ಪ್ರದೇಶದಲ್ಲೂ ವಾಸವಾಗಿದ್ದ ರಾಘವರವರು ಪ್ರಸ್ತುತ ಅಸೈಗೋಳಿಯಲ್ಲಿ ಕಳೆದ 40 ವರ್ಷಗಳಿಂದ ವಾಸವಾಗಿದ್ದಾರೆ. ಅಲ್ಲಿಯೂ ತಮ್ಮ ಸಾಂಸ್ಕೃತಿಕ ಛಾಪನ್ನು ಮೂಡಿಸಿದ ರಾಘವರವರು ಸ್ಥಳೀಯ ಅನೇಕ ಸಂಘಸಂಸ್ಥೆಗಳಲ್ಲಿ ಮಾರ್ಗದರ್ಶಕರಾಗಿ ಹೊರಹೊಮ್ಮಿದ್ದಾರೆ. ಪರಿಸರ ಪರಿಸ್ಥಿತಿ ಬದಲಾದರೂ ತಮ್ಮಲ್ಲಿದ್ದ ಎಡಪಂಥೀಯ ಚಿಂತನೆಗೆ ಯಾವತ್ತೂ ಚ್ಯುತಿ ಬಾರದ ರೀತಿಯಲ್ಲಿ ತಮ್ಮ ಕೊನೆಯ ಉಸಿರು ಇರುವವರೆಗೂ ಕಾಪಾಡಿಕೊಂಡು ಬಂದಿರುವ ರಾಘವ ಬಂಗೇರರವರ ನಿಧನ ಎಡಪಂಥೀಯ ಚಳುವಳಿಗೆ ಹಾಗೂ ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ರಾಘವ ಬಂಗೇರರವರು ಪತ್ನಿ, ಮೂವರು ಮಕ್ಕಳು, ಸೊಸೆಯಂದಿರು, ಅಳಿಯಂದಿರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
