ಮಂಗಳೂರು: ರಾತ್ರಿ ಬೀಟ್ ಕರ್ತವ್ಯದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಪ್ರಕರಣ: ಆರೋಪಿಗಳ ಬಂಧನ.

ಕರಾವಳಿ

ಕೇರಳಕ್ಕೆ ಪರಾರಿಯಾಗಿದ್ದ ಆರೋಪಿ ಸಚಿನ್ ಮತ್ತು ಚಂದನ್, ಕಾಂಞಗಾಡ್ ನಲ್ಲಿ ಆರೋಪಿಗಳನ್ನು ಬಂಧಿಸಿದ ಸಿಸಿಬಿ ಪೊಲೀಸರು

ದಿನಾಂಕ 24-05-2026 ರಂದು ಬೆಳಗಿನ ಜಾವ 02:10 ವೇಳೆಗೆ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕೋಡಿಕಲ್ ನಾರಾಯಣ ಗುರು ಸಮುದಾಯ ಭವನ ರಸ್ತೆಯ ಎದುರು ಬೀಟ್ ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ಕೆಂಪು ಬಣ್ಣದ ಎಲೆಕ್ಟ್ರಿಕಲ್ ಸ್ಕೂಟರ್ ನಲ್ಲಿ ಬಂದ ಇಬ್ಬರು ಆರೋಪಿಗಳು ಏಕಾಏಕಿಯಾಗಿ ಸಿಮೆಂಟ್ ಶೀಟಿನ ತುಂಡಿನಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿಯ ತಲೆಗೆ ಹೊಡೆದು, ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದರು.

ಆರೋಪಿಗಳು ನಡೆಸಿದ ಹಲ್ಲೆಯ ಪರಿಣಾಮವಾಗಿ ಪೊಲೀಸ್ ಸಿಬ್ಬಂದಿಯ ತಲೆಗೆ ಗಾಯ ಉಂಟಾಗಿದ್ದು, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಕೊಲೆಯತ್ನ ನಡೆಸಿರುವ ಬಗ್ಗೆ ಮಂಗಳೂರು ಉರ್ವ ಪೊಲೀಸ್ ಠಾಣೆ ಅ.ಕ್ರ.ಸಂ: 57/2026 ಕಲಂ 121(1),109,132,3(5) ಬಿ.ಎನ್.ಎಸ್ ರಂತೆ ಪ್ರಕರಣ ದಾಖಲಾಗಿತ್ತು.

ಪೊಲೀಸ್ ಸಿಬ್ಬಂಧಿಯ ಮೇಲೆ ನಡೆಸಿರುವ ಹಲ್ಲೆ ಪ್ರಕರಣದ ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಗಳ ಜಾಡು ಹಿಡಿದು ಬೆನ್ನುಹತ್ತಿದ ಪೊಲೀಸರು ತನಿಖೆಯಲ್ಲಿ ದೊರಕಿರುವ ಸಾಕ್ಷ್ಯಾಧಾರ ಮತ್ತು ಮಾಹಿತಿಯ ಆಧಾರದಲ್ಲಿ ಕೃತ್ಯದಲ್ಲಿ ಭಾಗಿಯಾದ ಆರೋಪಿಗಳನ್ನು ಕೇರಳ ರಾಜ್ಯದ ಕಾಂಞಿಗಾಡ್ ಪ್ರದೇಶದಲ್ಲಿ ದಿನಾಂಕ 26-05-2026 ರಂದು ಮಂಗಳೂರು ಸಿಸಿಬಿ ಪೊಲೀಸರು ಪತ್ತೆಹಚ್ಚಿ, ವಶಕ್ಕೆ ಪಡೆದು, ಮುಂದಿನ ಕ್ರಮಕ್ಕಾಗಿ ಉರ್ವ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದು, ಅವರುಗಳನ್ನು ವಿಚಾರಣೆಗೆ ಒಳಪಡಿಸಿದ ಉರ್ವ ಪೊಲೀಸರು ಕೃತ್ಯಕ್ಕೆ ಉಪಯೋಗಿಸಿರುವ ಬೈಕ್ ನ್ನು ವಶಕ್ಕೆ ಪಡಕೊಂಡು ತನಿಖೆ ನಡೆಸುತ್ತಿದ್ದಾರೆ.

ಆರೋಪಿ ಸಚಿನ್ ಕೆ ಆರ್, ಹತ್ಯಡ್ಕ ಗ್ರಾಮ, ಅರಸಿನಮಕ್ಕಿ, ಕೊಕ್ಕಡ ಬೆಳ್ತಂಗಡಿ ತಾಲೂಕು. ಮತ್ತು ಆರೋಪಿ ಚಂದನ್, ಮಣ್ಣಗುಂಡಿ ಹೌಸ್, ನೆಲ್ಯಾಡಿ, ಪುತ್ತೂರು ತಾಲೂಕಿನ ನಿವಾಸಿಗಳಾಗಿದ್ದು, ಆರೋಪಿಗಳು ಮಂಗಳೂರಿನ ಅಶೋಕನಗರದ ಫಲ್ಗುಣಿ ನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಆರೋಪಿಗಳ ಪೈಕಿ ಸಚಿನ್ ಕೆ.ಆರ್ ಎಂಬಾತನು ಕುಂಟಿಕಾನದ PON PON Sweets ಪ್ಯಾಕ್ಟರಿಯಲ್ಲಿ ಚಾಲಕನಾಗಿ ದುಡಿಯುತ್ತಿದ್ದು, ಮತ್ತೊಬ್ಬ ಆರೋಪಿ ಚಂದನ್ ಕೂಳೂರಿನ ಅದ್ವೈತ್ ಕಿಯಾ ಶೋ ರೂಂ ನಲ್ಲಿ ಟೆಕ್ನಿಷಿಯನ್ ಕೆಲಸ ನಿರ್ವಹಿಸುತ್ತಿದ್ದ. ಮದ್ಯರಾತ್ರಿ 2-00 ಗಂಟೆಯ ವೇಳೆಗೆ ನಗರದಲ್ಲಿ ಸುತ್ತಾಡುತ್ತಿದ್ದ ಆರೋಪಿಗಳನ್ನು ಬೀಟ್ ಪೊಲೀಸರು ತಡೆದು ಪ್ರಶ್ನಿಸಿದ್ದಕ್ಕೆ ಸಿಟ್ಟುಗೊಂಡ ಆರೋಪಿಗಳು ಪೊಲೀಸರ ಮೇಲೆ ಸಿಮೆಂಟ್ ಸೀಟಿನ ತುಂಡಿನಿಂದ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದರು.