ಮಂಗಳೂರು ನಗರದ ಸೂಟರ್ ಪೇಟೆಗೆ ತೆರಳುತ್ತಿದ್ದ ಮಹಿಳೆಯೊಬ್ಬರು ಎಕ್ಕೂರು ಬಸ್ ನಿಲ್ದಾಣದಿಂದ ಇಳಿದು ಸೂಟರ್ ಪೇಟೆ ಗ್ರಾಮಲೆಕ್ಕಾಧಿಕಾರಿಗಳ ಕಚೇರಿ ಸಮೀಪ ನಡೆದುಕೊಂಡು ಹೋಗುತ್ತಿದ್ದಾಗ, ಇಬ್ಬರು ಅಪರಿಚಿತರು ದ್ವಿಚಕ್ರ ವಾಹನದಲ್ಲಿ ಬಂದು ವಿಳಾಸ ಕೇಳುವ ನೆಪದಲ್ಲಿ ಏಕಾಏಕಿ ಮಹಿಳೆಯ ಕುತ್ತಿಗೆಯಲ್ಲಿದ್ದ ಸುಮಾರು 12 ಗ್ರಾಂ ತೂಕದ ಚಿನ್ನದ ಸರವನ್ನು ಕಸಿದುಕೊಂಡು ಮೋಟಾರ್ ಸೈಕಲಿನಲ್ಲಿ ಪರಾರಿಯಾಗಿದ್ದರು. ಈ ಬಗ್ಗೆ ನೊಂದ ಮಹಿಳೆ ದಿನಾಂಕ 14-06-2026 ರಂದು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಮಹಿಳೆ ನೀಡಿದ ದೂರಿನಂತೆ ಪೊಲೀಸರು ಅ.ಕ್ರ.ಸಂ: 124/2026 ರಂತೆ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದರು.
ದಿನಾಂಕ 26-06-2026 ರಂದು ಬೆಳಿಗ್ಗೆ ಮಂಗಳೂರು ನಗರದ ಪಾಂಡೇಶ್ವರದ ರೋಸಾರಿಯೋ ಶಾಲೆ ಸಮೀಪ ಮೂವರು ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದು, ತೀವ್ರ ವಿಚಾರಣೆಗೊಳಪಡಿಸಿದಾಗ, ಮೂವರು ಆರೋಪಿಗಳು ಸೇರಿಕೊಂಡು ಸರಕಳ್ಳತನ ಮಾಡಿಕೊಂಡಿರುವ ಬಗ್ಗೆ ಒಪ್ಪಿಕೊಂಡಿರುತ್ತಾರೆ.
ಆರೋಪಿಗಳಾದ ಬಾಗಲಕೋಟೆ ನಿವಾಸಿ ಅಲ್ತಾಫ್ ಹುಸೈನ್, ಮೊಹಮ್ಮದ್ ಸಾಹಿಲ್ @ ಸಿದ್ದೀಖಿ ಉತ್ತರ ಪ್ರದೇಶ ಹಾಗೂ ರವಿ ಬೌರಾ ಉತ್ತರ ಪ್ರದೇಶದ ನಿವಾಸಿ ಎಂಬವರನ್ನು ಠಾಣೆಗೆ ಕರೆದುಕೊಂಡು ಬರುತ್ತಿದ್ದ ವೇಳೆ, ಆರೋಪಿ ಅಲ್ತಾಫ್ ಹುಸೈನ್ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ, ಅವರನ್ನು ತಳ್ಳಿ ಹಾಕಿ ಪರಾರಿಯಾಗಿರುತ್ತಾನೆ. ಈ ಘಟನೆಯಲ್ಲಿ ಪೊಲೀಸ್ ಸಿಬ್ಬಂದಿಯಾದ ವಿನಾಯಕರವರಿಗೆ ಸಣ್ಣ ಪ್ರಮಾಣದ ಗಾಯಗಳಾಗಿದ್ದು, ಈ ಬಗ್ಗೆ ಪ್ರತ್ಯೇಕ ಪ್ರಕರಣವನ್ನು ದಾಖಲಿಸಿ, ಆರೋಪಿ ಅಲ್ತಾಫ್ ಹುಸೈನ್ ಎಂಬಾತನನ್ನು ಪತ್ತೆ ಹಚ್ಚಲು ವಿಶೇಷ ತಂಡವನ್ನು ರಚಿಸಿ, ಆತನ ಶೋಧ ಕಾರ್ಯ ಮುಂದುವರಿದಿದೆ.
ಪ್ರಕರಣದ ಆರೋಪಿಗಳಾದ ರವಿ ಬೌರಾ ಹಾಗೂ ಮೊಹಮ್ಮದ್ ಸಾಹಿಲ್ @ ಸಿದ್ದೀಖಿ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಇಬ್ಬರು ಆರೋಪಿಗಳಿಗೆ 10 ದಿನಗಳ ಕಾಲ ಪೊಲೀಸ್ ಕಸ್ಟಡಿ ನೀಡಿರುತ್ತದೆ.
ಪ್ರಕರಣದ ಪತ್ತೆ ಕಾರ್ಯದಲ್ಲಿ ಮಂಗಳೂರು ಕೇಂದ್ರ ಉಪವಿಭಾಗದ ಎಸಿಪಿ ರವರ ನೇತ್ರತ್ವದಲ್ಲಿ, ಮಂಗಳೂರು ದಕ್ಷಿಣ ಪೊಲೀಸರು ಪ್ರಕರಣವನ್ನು ತ್ವರಿತವಾಗಿ ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
